ಮಕ್ಕಳಿಗೆ ಸಕಾಲದಲ್ಲಿ ಲಸಿಕೆ ಕೊಡಿಸಿ: ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ
ಉಡುಪಿ, ಆ.4: ಹೆತ್ತವರು ತಮ್ಮ ಮಕ್ಕಳನ್ನು ಹಲವು ವಿಧದ ರೋಗಗಳಿಂದ ರಕ್ಷಿಸಲು ನಿಗದಿತ ಅವಧಿಯೊಳಗೆ ಅಗತ್ಯ ಲಸಿಕೆಗಳನ್ನು ಕೊಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಹೇಳಿದ್ದಾರೆ.
ಶುಕ್ರವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ‘ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಲಸಿಕಾ ಕಾರ್ಯಕ್ರಮ’ದ ಕುರಿತು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತಿದ್ದರು.
ಗರ್ಭಿಣಿಯರು ಮತ್ತು ಮಕ್ಕಳಿಗೆ ಆರೋಗ್ಯ ಇಲಾಖೆಯ ಮಾರ್ಗಸೂಚಿ ಯಂತೆ ನಿಯಮಿತವಾಗಿ ಅಗತ್ಯ ಲಸಿಕೆಗಳನ್ನು ನೀಡುವುದರಿಂದ ತಾಯಿ ಮತ್ತು ಶಿಶು ಮರಣವನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಸಾಧ್ಯವಿದೆ. ಸಾರ್ವತ್ರಿಕ ಲಸಿಕಾ ಕಾರ್ಯಕ್ರಮಗಳ ಬಗ್ಗೆ ಸಮೀಪದ ಆರೋಗ್ಯ ಕೇಂದ್ರ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮಾಹಿತಿ ಪಡೆದು ನಿಗದಿತ ದಿನದಂದು ಲಸಿಕೆ ಪಡೆಯುವಂತೆ ಅವರು ತಿಳಿಸಿದರು.
ಜಿಲ್ಲೆಯಲ್ಲಿ ಲಸಿಕೆ ವಂಚಿತ ಗರ್ಭಿಣಿಯರು ಮತ್ತು 0-5 ವರ್ಷದೊಳಗಿನ ಮಕ್ಕಳಿಗೆ ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಲಸಿಕಾ ಕಾರ್ಯಕ್ರಮವನ್ನು ಆ.7ರ ಸೋಮವಾರದಿಂದ ಪ್ರಾರಂಭಿಸಿ ಮೂರು ಹಂತದಲ್ಲಿ ಅನುಷ್ಠಾನಗೊಳಿಸಲಾ ಗುವುದು. ಆಗಸ್ಟ್ 7ರಿಂದ 12 ಮೊದಲನೇ ಸುತ್ತು, ಸೆಪ್ಟಂಬರ್ 11ರಿಂದ 16ರವರೆಗೆ 2 ನೇ ಸುತ್ತು ಹಾಗೂ ಅಕ್ಟೋಬರ್ 9ರಿಂದ 14ರವರೆಗೆ ಮೂರನೇ ಸುತ್ತುಗಳಲ್ಲಿ ಮೂರು ಬಾರಿ ಲಸಿಕೆಯನ್ನು ನೀಡಲಾಗುವುದು ಎಂದರು.
ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ವೇಳಾಪಟ್ಟಿಯಂತೆ ವಯಸ್ಸಿಗನು ಗುಣವಾಗಿ ಲಸಿಕೆ ಪಡೆಯಲು ಅರ್ಹರಾದ ಮತ್ತು ಲಸಿಕೆ ವಂಚಿತರಾದ ಗರ್ಭಿಣಿ ಮತ್ತು ಮಕ್ಕಳಿಗೆ ಲಸಿಕಾ ಶಿಬಿರ ಆಯೋಜಿಸಿ ಲಸಿಕೆ ನೀಡಲಾಗುವುದು. ಇದರಿಂದ ದಡಾರ-ರುಬೆಲ್ಲಾ (ಎಂ.ಆರ್.) ರೋಗ ನಿರೋಧಕ ಶಕ್ತಿಯನ್ನು ಪರಿಣಾಮಕಾರಿಯಾಗಿ ಹೆಚ್ಚಿಸಲು ಸಾಧ್ಯವಾಗಲಿದೆ ಎಂದರು.
ಜಿಲ್ಲೆಯಲ್ಲಿ ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಲಸಿಕಾ ಕಾರ್ಯಕ್ರಮದಲ್ಲಿ ಜಿಲ್ಲೆಯ 708 ಗರ್ಭಿಣಿಯರು ಮತ್ತು 0-2 ವರ್ಷದೊಳಗಿನ ಲಸಿಕೆಗೆ ಅರ್ಹರಾದ 3188 ಮಕ್ಕಳಿಗೆ ಹಾಗೂ 2-5 ವರ್ಷದೊಳಗಿನ ಲಸಿಕೆ ವಂಚಿತ 16 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಿದ್ದು, ಇದಕ್ಕಾಗಿ ಜಿಲ್ಲೆಯಲ್ಲಿ ಒಟ್ಟು 294 ಲಸಿಕಾ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದರು.
ಶಿಬಿರ ನಡೆಯುವ ದಿನಾಂಕ ಮತ್ತು ಸ್ಥಳಗಳ ಬಗ್ಗೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪೋಷಕರಿಗೆ ಮಾಹಿತಿ ನೀಡಲಿದ್ದು, ಅವರು ಲಸಿಕಾ ಶಿಬಿರಗಳಿಗೆ ಮಕ್ಕಳನ್ನು ಕರೆತಂದು ಲಸಿಕೆ ಪಡೆಯಬಹುದು. ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನಗರಸಭೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸೇರಿದಂತೆ ವಿವಿಧ ಇಲಾಖೆಗಳ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಕಾರದಿಂದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಗುವುದು ಎಂದು ಡಾ.ವಿದ್ಯಾಕುಮಾರಿ ತಿಳಿಸಿದರು.
7ರಂದು ಉದ್ಘಾಟನೆ: ಪರಿಣಾಮಕಾರಿ ಮಿಷನ್ ಇಂದ್ರ ಧನುಷ್ 5.0 ಲಸಿಕಾ ಕಾರ್ಯಕ್ರಮದ ಉದ್ಘಾಟನೆಯು ಆಗಸ್ಟ್ 7 ರಂದು ಬೆಳಗ್ಗೆ 9 ಗಂಟೆಗೆ ಉಡುಪಿಯ ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆಯಲಿದೆ ಎಂದರು. ಇದೇ ಸಂದರ್ಭದಲ್ಲಿ ಪರಿಣಾಮಕಾರಿ ಮಿಷನ್ ಇಂದ್ರ ಧನುಷ್ 5.0 ಲಸಿಕಾ ಕಾರ್ಯಕ್ರಮದ ಭಿತ್ತಿಪತ್ರವನ್ನು ಜಿಲ್ಲಾಧಿಕಾರಿ ಬಿಡುಗಡೆಗೊಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ, ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ. ಎಂ.ಜಿ.ರಾಮ ಮತ್ತಿತರರು ಉಪಸ್ಥಿತರಿದ್ದರು.