ಕೌಶಲ್ಯಾಭಿವೃದ್ಧಿಗೆ ರಂಗಭೂಮಿ ಸಹಕಾರಿ: ಬಿ.ಪದ್ಮನಾಭ ಗೌಡ

Update: 2025-03-27 20:59 IST
ಕೌಶಲ್ಯಾಭಿವೃದ್ಧಿಗೆ ರಂಗಭೂಮಿ ಸಹಕಾರಿ: ಬಿ.ಪದ್ಮನಾಭ ಗೌಡ
  • whatsapp icon

ಕಾರ್ಕಳ: ಯುವ ಪೀಳಿಗೆ ಕೇವಲ ಶೈಕ್ಷಣಿಕವಾಗಿ ಮಾತ್ರವಲ್ಲದೇ ರಂಗಭೂಮಿ ಸೇರಿದಂತೆ ಇನ್ನಿತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಕೌಶಲ್ಯಾಭಿವೃದ್ಧಿ ಹೊಂದಿ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಿದೆ ಎಂದು ಕಾರ್ಕಳದ ಶ್ರೀಭುವನೇಂದ್ರ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಬಿ.ಪದ್ಮನಾಭ ಗೌಡ ಹೇಳಿದ್ದಾರೆ.

ಗುರುವಾರ ಕಾರ್ಕಳದ ಕೋಟಿ ಚೆನ್ನಯ್ಯ ಥೀಂ ಪಾರ್ಕ್ ಆವರಣದಲ್ಲಿ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಹಾಗೂ ಯಕ್ಷ ರಂಗಾಯಣ ಕಾರ್ಕಳ ಇವರ ವತಿಯಿಂದ ವಿಶ್ವ ರಂಗಭೂಮಿ ದಿನಾಚರಣೆಯ ಪ್ರಯುಕ್ತ ಯಕ್ಷ ರಂಗಾಯಣದ ರೆಪರ್ಟರಿ ಕಲಾವಿದರು ಪ್ರಸ್ತುತ ಪಡಿಸುವ ಕುಮಾರ ವ್ಯಾಸ ಭಾರತದ ‘ವಿರಾಟ ಪರ್ವ’ದಿಂದ ಆಯ್ದ ವಿಭಾಗದ ವಾಚಿಕೆ ವಿನ್ಯಾಸ ‘ಆರೊಡನೆ ಕಾದುವೆನು’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ದೇಶದ ಸಂಸ್ಕೃತಿ ಹಾಗೂ ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಹಿರಿಯರ ಕರ್ತವ್ಯವಾಗಿದೆ. ಭಕ್ತಿಯ ಕುರಿತು ಅರಿಯುವಲ್ಲಿ ಕುಮಾರವ್ಯಾಸನ ಪದ್ಯಗಳು ಹೆಚ್ಚು ಮೌಲ್ಯಯುತವಾಗಿದ್ದು, ಭಕ್ತಿಯ ಪರಂಪರೆಯಲ್ಲಿ ಮುಂದುವರಿದ ಆತನ ಪದ್ಯಗಳನ್ನು ಪ್ರತಿಯೊಬ್ಬರು ಓದುವ ಮೂಲಕ ನಮ್ಮ ಸಂಸ್ಕೃತಿಯನ್ನು ಹಾಗೂ ಸಂಪ್ರದಾಯವನ್ನು ಮುಂದುವರಿಸುವ ಕಾರ್ಯದಲ್ಲಿ ತೊಡಗಬೇಕು ಎಂದರು.

ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಮಾತನಾಡಿ, ನಾಟಕಗಳಲ್ಲಿ ಭಾಗವಹಿಸುವಿಕೆ ಭಾವನೆಗಳನ್ನು ಜಾಗೃತ ಗೊಳಿಸುವುದಲ್ಲದೇ ಜೀವನದಲ್ಲಿ ಉತ್ಸುಕತೆ ಹೆಚ್ಚಲು ಸಹಕಾರಿಯಾಗುತ್ತದೆ. ಸಾಮರಸ್ಯ ಹಾಗೂ ಸೌಹಾರ್ದತೆಯ ವೃದ್ಧಿಯಲ್ಲೂ ರಂಗಭೂಮಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಕಾರ್ಕಳ ಯಕ್ಷ ರಂಗಾಯಣ ರೆಪರ್ಟರಿ ಕಲಾವಿದರು ೨೦೨೫ರ ಯಕ್ಷ ರಂಗಭೂಮಿ ದಿನಾಚರಣೆಯ ಸಂದೇಶವನ್ನು ವಾಚಿಸಿ ತದನಂತರ ಕುಮಾರವ್ಯಾಸ ಭಾರತದ ವಿರಾಟ ಪರ್ವದಿಂದ ಆರೊಡನೆ ಕಾದುವೆನು ವಾಚಿಕೆ ವಿನ್ಯಾಸವನ್ನು ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಕಾರ್ಕಳ ಯಕ್ಷ ರಂಗಾಯಣದ ವಿಶೇಷ ಕರ್ತವ್ಯ ಅಧಿಕಾರಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರೆ, ಚಂದ್ರಕಾಂತ ಬಜೆಗೋಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.




 


Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News