ಉಡುಪಿ: ಮಾ.28ರಂದು ಯಕ್ಷಶಿಕ್ಷಣ ಸನಿವಾಸ ಶಿಬಿರದ ಸಮಾರೋಪ

ಉಡುಪಿ: ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಉಡುಪಿಯ ಯಕ್ಷಶಿಕ್ಷಣ ಟ್ರಸ್ಟ್ ವತಿಯಿಂದ ಕಳೆದೊಂದು ವಾರದಿಂದ ನಡೆಯುತ್ತಿರುವ ಯಕ್ಷಶಿಕ್ಷಣ ಸನಿವಾಸ ಶಿಬಿರ- 2025ರ ಸಮಾರೋಪ ಸಮಾರಂಭ ಮಾ.28ರಂದು ನಡೆಯಲಿದೆ.
ಉಡುಪಿ ಶಾಸಕ ಯಶ್‌ಪಾಲ್ ಸುವರ್ಣರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕೋಟದ ಉದ್ಯಮಿ ಆನಂದ ಸಿ.ಕುಂದರ್ ಪ್ರಮಾಣಪತ್ರ ವಿತರಿಸಲಿದ್ದಾರೆ. ವಿದ್ಯಾಂಗ ಉಪನಿರ್ದೇಶಕ ಗಣಪತಿ ಕೆ. ಶುಭಾಶಂಸನೆಗೈಯಲಿದ್ದಾರೆ. ಪಣಂಬೂರು ವಾಸುದೇವ ಐತಾಳ್, ಎಸ್. ವಿ.ಆಚಾರ್ಯ, ಯು.ವಿಶ್ವನಾಥ ಶೆಣೈ, ಪೂರ್ಣಿಮಾ, ಡಾ. ಜಗದೀಶ ಶೆಟ್ಟಿ, ಜಯ ಸಿ. ಕೋಟ್ಯಾನ್, ಸುಧೀರ್ ಕುಮಾರ್ ಶೆಟ್ಟಿ, ಅಲೆವೂರು ಹರಿಕೃಷ್ಣ ಭಟ್, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಡಾ. ಪ್ರಶಾಂತ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ, ಶ್ರೀನಿವಾಸ ರಾವ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಗುರು ಬನ್ನಂಜೆ ಸಂಜೀವ ಸುವರ್ಣರ ನಿರ್ದೇಶನದಲ್ಲಿ ನಾಳೆ ಅಪರಾಹ್ನ 3:00 ರಿಂದ 4:00 ಗಂಟೆಯವರೆಗೆ ಶಿಬಿರಾರ್ಥಿ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರಾತ್ಯಕ್ಷಿಕೆ ಹಾಗೂ 4:00ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಯಕ್ಷಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.
ಯಕ್ಷಗಾನದಲ್ಲಿ ತರಬೇತಿ: ಕಳೆದ ಒಂದು ವಾರದಿಂದ ನಡೆದಿರುವ ಶಿಬಿರದಲ್ಲಿ ಹೆಣ್ಣು ಮಕ್ಕಳೂ ಸೇರಿದಂತೆ 60 ಮಂದಿ ವಿದ್ಯಾರ್ಥಿಗಳು ಯಕ್ಷಗಾನದ ವಿವಿಧ ಪ್ರಕಾರಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಪ್ರತಿದಿನ ಬೆಳಗ್ಗೆ 6:30ರಿಂದ ತರಬೇತಿ ಪ್ರಾರಂಭಗೊಳ್ಳುತಿದ್ದು ಗುರು ಬನ್ನಂಜೆ ಸಂಜೀವ ಸುವರ್ಣರ ನಿರ್ದೇಶನದಲ್ಲಿ ವಿವಿಧ ತಾಳ, ಕುಣಿತದ ತರಬೇತಿ ನಡೆದಿದೆ.
ಮಿಥುನ್ ಬ್ರಹ್ಮಾವರ ಮಾರ್ಗದರ್ಶನದಲ್ಲಿ ಮುಖವರ್ಣಿಕೆ, ಮೇಕಪ್ ತರಬೇತಿ ನೀಡಿದರು. ಡಾ.ಪೃಥ್ವಿರಾಜ್ ಕವತ್ತಾರ್ ಯಕ್ಷಗಾನದಲ್ಲಿ ಮಾತುಗಾರಿಕೆಯ ಸೂಕ್ಷ್ಮತೆಯನ್ನು ತಿಳಿಸಿಕೊಡುತಿದ್ದಾರೆ. ತರಬೇತಿ ಪ್ರತಿದಿನ ಬೆಳಗ್ಗೆ 6ರಿಂದ ರಾತ್ರಿ 10ಗಂಟೆಯವರೆಗೆ ನಡೆಯುತ್ತಿದೆ.
ಯೋಗ, ಜಂಪೆತಾಳ ಮತ್ತು ರೂಪಕ, ತಾಳದ ಕುಣಿತ ಮುಖವರ್ಣಿಕೆ, ಹೆಜ್ಜೆಗಾರಿಕೆ, ಹಾಡುಗಾರಿಕೆ ಹಾಗೂ ಸಂಭಾಷಣೆ ಮತ್ತು ಮಾತುಗಾರಿಕೆಯ ಸೂಕ್ಷ್ಮತೆಗಳನ್ನು ಶಿಬಿರಾರ್ಥಿ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಗುತ್ತದೆ.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಜಿಪಂ ಸಿಇಓ ಪ್ರತೀಕ್ ಬಾಯಲ್, ಸೋದೆ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ಪೂರ್ಣಿಮಾ, ಯಕ್ಷ ಗುರುಗಳಾದ ಬಿ.ಕೇಶವರಾವ್, ಗಣೇಶ ಉಪ್ಪುಂದ, ನಾಗೇಂದ್ರ ಗಾಣಿಗ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಸೇರಿದಂತೆ ಅನೇಕ ಗಣ್ಯರು ಶಿಬಿರಕ್ಕೆ ಭೇಟಿ ನೀಡಿ ಶಿಬಿರಾರ್ಥಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.


