ಭಟ್ಕಳ: ಜು.16ರಂದು “ರಾಬಿತಾ ಎಜ್ಯುಕೇಶನಲ್ ಎಕ್ಸಲೆನ್ಸ್ ಅವಾರ್ಡ” ಸಮಾರಂಭ

Update: 2024-07-15 13:16 GMT

ಭಟ್ಕಳ: ಅನಿವಾಸಿ ಭಾರತೀಯರ “ರಾಬಿತಾ ಸೂಸೈಟಿಯಿಂದ ವರ್ಷಂಪ್ರತಿ ನಡೆಯುವ ರಾಬಿತಾ ಶೈಕ್ಷಣಿಕ ಪ್ರಶಸ್ತಿ ಪ್ರದಾನ ಸಮಾರಂಭವು ಜು.16 ರಂದು ಬೆಳಗ್ಗೆ 10ಗಂಟೆಗೆ ಅಂಜುಮನ್ ಆಬಾದ್ ಮೈದಾನದಲ್ಲಿ ಜರುಗಲಿದೆ ಎಂದು ರಾಬಿತಾ ಸೂಸೈಟಿಯ ಪ್ರಧಾನ ಕಾರ್ಯದರ್ಶಿ ಡಾ.ಅತಿಕುರ‍್ರಹ್ಮಾನ್ ಮುನಿರಿ ಹೇಳಿದರು.

ಅವರು ಸೋಮವಾರ ಮದ್ಯಾನ್ ರಾಬಿತಾ ಸೂಸೈಟಿಯ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದ ಮಾಹಿತಿ ನೀಡಿ ಮಾತನಾಡಿದರು.

ರಾಬಿತಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅಖಿಲಾ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಇದರ ಮಾಜಿ ವಕ್ತಾರ ಹಝರತ್ ಮೌಲಾನ ಖಲೀಲುರ‍್ರಹ್ಮಾನ್ ಸಜ್ಜಾದ್ ನೋಮಾನಿ ಹಾಗೂ ಉ.ಕ ಜಿಲ್ಲಾ ಉಸ್ತುವಾರಿ ಹಾಗೂ ಮೀನುಗಾರಿಕೆ, ಬಂದರು ಸಚಿವ ಮಾಂಕಾಳ್ ವೈದ್ಯ ಭಾಗಹಿಸುತ್ತಿದ್ದಾರೆ. ರಾಬಿತಾ ಸೂಸೈಟಿಯ ಅಧ್ಯಕ್ಷ ಉಮರ್ ಫಾರೂಖ್ ಮುಸ್ಬಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಬೆ.10 ರಿಂದ ಮಧ್ಯಾಹ್ನ 1 ಹಾಗೂ ಸಂಜೆ 4.30ರಿಂದ 7 ಗಂಟೆ ವರೆಗೆ ಎರಡು ಹಂತಗಳಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಭಟ್ಕಳದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಪ್ರತಿಭೆಗಳನ್ನು ಪೋಷಿಸುವ ಕಾರ್ಯ ರಾಬಿತಾ ಸೂಸೈಟಿ ಯಿಂದ ಕಳೆದ 35 ವರ್ಷಗಳಿಂದ ನಿರಂತರವಾಗಿ ನಡೆಯುತ್ತ ಬಂದಿದೆ. ವರ್ಷ ವರ್ಷವೂ ವಿದ್ಯಾರ್ಥಿಗಳ ಅಂಕಗಳಿಕೆಯಲ್ಲಿ ಏರಿಕೆಯಾಗುತ್ತಿರುವುದು ನಮ್ಮ ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಎತ್ತಿತೋರಿಸುತ್ತಿದೆ. ಆರಂಭದಲ್ಲಿ ಕೇವಲ ಶೇ.60, 70 ಅಂಕ ಗಳಿಸಿದ ವಿದ್ಯಾರ್ಥಿಗಳಲ್ಲಿ ಸ್ಪರ್ಧೆ ಏರ್ಪಡುತ್ತಿತ್ತು. ಈಗ ಶೇ.೯೫ಕ್ಕೂ ಮೇಲ್ಪಟ್ಟು ಅಂಕಗಳನ್ನು ಗಳಿಸುತ್ತಿದ್ದಾರೆ. ಅಂಕ ಗಳಿಕೆಯಲ್ಲಿ ಯಾರೂ ಕೂಡ ಹಿಂದೆ ಬಿದ್ದಿಲ್ಲ ಎಂದರು.

ಉತ್ತಮ ಶಿಕ್ಷಣ ಪಡೆದು ವಿದ್ಯಾರ್ಥಿಗಳು ಸಾಧನೆ ಮಾಡಬೇಕು ಎಂಬುದು ನಮ್ಮ ಆಶಯ. ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿರುವ ಶಿಕ್ಷಣ ಸಂಸ್ಥೆಗಳ ಸ್ಥಿತಿಗತಿಯೂ ಸುಧಾರಣೆಯಾಗಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಜೊತೆ ಜೊತೆ ಉತ್ತಮ ಶಿಕ್ಷಣ ಸಂಸ್ಥೆಗಳು ಹಾಗೂ ಉತ್ತಮ ಶಿಕ್ಷಕರನ್ನು ಗುರುತಿಸಿ ಅವರಿಗೂ ಕೂಡ ಎಕ್ಸಲೆನ್ಸ್ ಅವಾರ್ಡ್ ನೀಡಲಾಗು ತ್ತಿದೆ. ಈ ವರ್ಷ ಉ.ಕ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳನ್ನು ಸಮಾರಂಭದಲ್ಲಿ ಗೌರವಿಸಿ ಪುರಸ್ಕರಿಸಲಾಗುವುದು ಎಂದ ಮುನಿರಿ, ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ವಾಹನದ ವ್ಯವಸ್ಥೆಯನ್ನು ಮಾಡಲಾಗಿದೆ. ಎಲ್ಲರೂ ಕಾರ್ಯಕ್ರಮದಲ್ಲಿ ಭಾಗಹಿಸಬೇಕೆಂದು ಮನವಿ ಮಾಡಿಕೊಂಡರು.

ರಬಿತಾ ಸೊಸೈಟಿ ಅಧ್ಯಕ್ಷ ಉಮರ್ ಫಾರೂಕ್ ಮುಸ್ಬಾ, ಕಾರ್ಯದರ್ಶಿ ಜೈಲಾನಿ ಮೊಹ್ತಿಶಮ್, ಖಜಾಂಚಿ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭದ ಸಂಚಾಲಕ ಯಾಸಿರ್ ಕಾಸಿಮ್ಜಿ, ಲೆಕ್ಕಪರಿಶೋಧಕ ತಾಹಾ ಮುಅಲ್ಲಿಮ್ ಮಾತನಾಡಿದರು.

ಪತ್ರಿಕಾ ಗೋಷ್ಟಿಯಲ್ಲಿ ಸೂಸೈಟಿಯ ಸದಸ್ಯರಾದ ಶಹರಿಯಾರ್ ಖತೀಬ್, ಮುಯಿಜ್ ಮುಅಲ್ಲಿಮ್, ಕಮರ್ ಸಾದಾ, ಅಬ್ದುಸ್ಸಲಾಂ ದಾಮುದಿ. ಅಫ್ತಾಬ್ ಎಂ.ಜೆ. ಅಬ್ದುಲ್ ಮಜೀದ್ ಎಸ್ ಎಂ, ಅಫ್ಜಲ್ ಎಸ್ ಎಂ, ಶಮ್ದುದ್ದೀನ್ ಝೀಯಾ ದಾಮದಾ ಕಲ್ಲಾಗರ್, ಉಸ್ಮಾನ್ ಎಸ್.ಜೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News