ಅನಂತ್ ಕುಮಾರ್ ಹೆಗಡೆಯವರೇ ನೀವು ಚುನಾವಣೆಯಿಂದ ಹಿಂದೆ ಸರಿಯಿರಿ: ವಿ.ಎಸ್. ಶ್ಯಾಮಸುಂದರ್
ಭಟ್ಕಳ: ಸಂಸದ ಅನಂತ್ ಕುಮಾರ್ ಹೆಗಡೆ ಐದು ವರ್ಷ ಮಲಗಿಕೊಂಡಿದ್ದು, ಈಗ ಎಚ್ಚರವಾಗಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಓಡಾಡಲು ಆರಂಭಿಸಿದ್ದಾರೆ. ನೀವು ಚುನಾವಣೆಯಿಂದ ಹಿಂದೆ ಸರಿಯಿರಿ ಎಂದು ಕರ್ನಾಟಕ ಕ್ಷತ್ರಿಯ ಮರಾಠ ಮಹಾ ಒಕ್ಕೂಟದ ಅಧ್ಯಕ್ಷ, ಬಿಜೆಪಿ ಮುಖಂಡ ವಿ.ಎಸ್.ಶ್ಯಾಮಸುಂದರ ಗಾಯಕ್‍ವಾಡ್ ಆಗ್ರಹಿಸಿದ್ದಾರೆ.
ಅವರು ರಾಯಲ್ ಓಕ್ ಹೊಟೆಲ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮರಾಠ, ನಾಯ್ಕ, ಮೀನುಗಾರ ಸೇರಿದಂತೆ ಹಿಂದುಳಿದ ವರ್ಗಕ್ಕೆ ಸೇರಿದ ಮತದಾರರ ಸಂಖ್ಯೆ ದೊಡ್ಡದಿದ್ದು, ಈ ಬಾರಿ ಬಿಜೆಪಿ ಟಿಕೇಟ್ ಅನ್ನು ಹಿಂದುಳಿದ ವರ್ಗಕ್ಕೆ ನೀಡಬೇಕು ಎಂದು ಆಗ್ರಹಿಸಿದ ಅವರು, ಕಳೆದ 7 ಚುನಾವಣೆಯಲ್ಲಿಯೂ ಮರಾಠ ಸಮುದಾಯ ಅನಂತ್ ಕುಮಾರ್ ಹೆಗಡೆಯವರನ್ನು ಬೆಂಬಲಿಸುತ್ತ ಬಂದಿದೆ. ನಾನು ಕಳೆದ 30 ವರ್ಷಗಳಿಂದ ಬಿಜೆಪಿ ಬೆಳವಣಿಗೆಗಾಗಿ ಕೆಲಸ ಮಾಡುತ್ತ ಬಂದಿದ್ದೇನೆ. ರಾಜ್ಯ ಕೊಳಚೆ ಪ್ರದೇಶದ ಅಭಿವೃದ್ಧಿಗಾಗಿ ದುಡಿದ್ದೇನೆ. ಛತ್ರಪತಿ ಶಿವಾಜಿ ತಂದೆಯವರ ಸಮಾಧಿ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಲು ಮರಾಠ ಸಮುದಾಯ ಬೆಂಬಲಿಸಿದೆ. 4 ಎಂ ಎಲ್ ಎ ಗಳನ್ನು ಹೊಂದಿದ್ದ ಬಿಜೆಪಿ 36 ಆಗಿ, ನಂತರ 110 ಆಗಲು ಮರಾಠ ಸಮಾಜದ ಬೆಂಬಲವೂ ಕಾರಣವಾಗಿದೆ. ಈ ಬಾರಿ ಅನಂತ್ ಕುಮಾರ್ ಹೆಗಡೆಯವರೇ ಚುನಾವಣೆಯಿಂದ ಹಿಂದೆ ಸರಿದು ನನಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಒಂದೇ ಒಂದು ಸ್ಥಾನವನ್ನೂ ಹಿಂದುಳಿದ ವರ್ಗಕ್ಕೆ ನೀಡಿರಲಿಲ್ಲ. ಈ ಬಾರಿ ಅಂತಹ ಕೆಲಸ ಮಾಡಬಾರದು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದಲ್ಲಿ ಸಾಕಷ್ಟು ಕೆಲಸವನ್ನು ಮಾಡಿ ದ್ದಾರೆ. ಆದರೆ ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಸರಕಾರವಿದ್ದು, ಗೆಲುವಿಗಾಗಿ ಹೋರಾಟ ನಡೆಸಲೇ ಬೇಕಾಗುತ್ತದೆ. ಬೆಳಗಾವಿ, ಚಿಕ್ಕೋಡಿ, ಉತ್ತರಕನ್ನಡ, ಧಾರವಾಡ, ಬೀದರ ಜಿಲ್ಲೆಗಳಲ್ಲಿ ಮರಾಠ ಸಮುದಾಯದ ಪ್ರಾಬಲ್ಯ ಇದೆ. ಅಲ್ಲದೇ ಮರಾಠ ಸಮುದಾಯಕ್ಕೆ ಟಿಕೆಟ್ ನೀಡುವುದರಿಂದ ಇತರೇ 7 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿಗೆ ಅನುಕೂಲವಾಗಲಿದೆ ಎಂದರು.
ಈ ಸಂದರ್ಭ ಮಾತನಾಡಿದ, ಮುಂಡಗೋಡ ಸಾಲಗಾಂವ ಗೌರಮ್ಮಾಜಿ ಮಠದ ಶ್ರೀ ವಿರೂಪಾಕ್ಷ ಸ್ವಾಮೀಜಿ, ಶ್ರೀರಾಮ ಎಲ್ಲರ ಮನಸ್ಸು, ಹೃದಯದಲ್ಲಿ ನೆಲೆಸಿದ್ದಾನೆ. ರಾಮರಥವನ್ನು ಪ್ರತಿ ತಾಲೂಕಿಗೆ ಕೊಂಡೊಯ್ಯುತ್ತಿರುವ ಶ್ಯಾಮಸುಂದರ ಗಾಯಕ್‍ವಾಡ್ ಅವರಿಗೆ ಬಿಜೆಪಿ ಶಕ್ತಿ ನೀಡಬೇಕು, ಛತ್ರಪತಿ ಶಿವಾಜಿಯನ್ನು ಎಲ್ಲರೂ ಗೌರವಿಸುತ್ತಾರೆ. ಅವರ ಕ್ಷತ್ರಿಕ ಸಮಾಜಕ್ಕೆ ಅಧಿಕಾರ ನೀಡಬೇಕು ಎಂದರು.