ಭಟ್ಕಳ: ವಿದ್ಯಾರ್ಥಿನಿಯರು ಶಿಕ್ಷಣದ ಮೂಲಕ ಆರ್ಥಿಕ ಸ್ವಾತಂತ್ರ್ಯ ಗಳಿಸಿಕೊಳ್ಳುವಂತೆ ಡಿಸಿ ಲಕ್ಷ್ಮೀಪ್ರಿಯಾ ಕರೆ

Update: 2024-08-19 12:25 GMT

ಭಟ್ಕಳ: ಮಹಿಳಾ ಶಿಕ್ಷಣವು ಭವಿಷ್ಯದ ಪೀಳಿಗೆಯ ಮೇಲೆ ಆಳವಾದ ಪರಿಣಾಮ ಬೀರುತ್ತಿದ್ದು ಉನ್ನತ ಶಿಕ್ಷಣ ಪಡೆಯು ವುದರ ಮೂಲಕ ವಿದ್ಯಾರ್ಥಿನಿಯರು ಆರ್ಥಿಕ ಸ್ವಾತಂತ್ರ್ಯ ಗಳಿಸಿಕೊಳ್ಳುವಂತೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರೀಯಾ ಕರೆ ನೀಡಿದರು.

ಅವರು ಇತ್ತಿಚೆಗೆ ಭಟ್ಕಳ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ಮಹಿಳಾ ಪದವಿ ಮಹಾ ವಿದ್ಯಾಲಯದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ರಾಜ್ಯ ಸರ್ಕಾರ ಮಹಿಳೆಯರಿಗಾಗಿ ಕೊಡುತ್ತಿರುವ ರೂ.2000 ಮನೆ ಖರ್ಚಿಗೆ ಬಳಕೆ ಮಾಡದೆ ತಮ್ಮ ಸ್ವವಲಂಬನೆ ಮಾಡಿ ಕೊಳ್ಳಬೇಕು, ಮಹಿಳೆಯರ ಸಬಲಿಕರಣಕ್ಕಾಗಿ ಸರ್ಕಾರದ ಹಲವು ಯೋಜನೆಗಳನ್ನು ರೂಪಿಸುತ್ತಿದೆ ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ತಮ್ಮ ಅಧಿಕಾರಾವಧಿ ಪ್ರಾರಂಭವಾದಾಗಿನಿಂದ ಭೂಕುಸಿತ ಮತ್ತು ಪ್ರವಾಹದಂತಹ ವಿವಿಧ ಬಿಕ್ಕಟ್ಟುಗಳನ್ನು ನಿಭಾಯಿಸಿದ ಅನುಭವಗಳನ್ನು ವಿವರಿಸಿದ ಅವರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸಾಧನೆಗಳನ್ನು ಗುರುತಿಸಿದ್ದಕ್ಕಾಗಿ ಕಾಲೇಜು ಆಡಳಿತ ಮಂಡಳಿಯ ಕಾರ್ಯವನ್ನು ಶ್ಲಾಘಿಸಿದರು. ವಿದ್ಯಾರ್ಥಿಗಳು ದೊಡ್ಡ ಕನಸುಗಳನ್ನು ಕಾಣಲು, ಉನ್ನತ ಗುರಿಗಳನ್ನು ಹೊಂದಲು ಮತ್ತು ಅವುಗಳನ್ನು ಸಾಧಿಸಲು ಶ್ರದ್ಧೆಯಿಂದ ಕೆಲಸ ಮಾಡುಂತೆ ಕಿವಿ ಮಾತು ಹೇಳಿದರು.

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯದ ರ್ಯಾಂಕ್ ಗಳಿಸಿದವರನ್ನು, ಕ್ಲಾಸ್ ಟಾಪರ್ಸ್ ಗಳನ್ನು, ಶೇ.100 ಅಂಕಗಳಿಸಿದ ವಿದ್ಯಾರ್ಥಿನಿಯರನ್ನು ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.

ಉಪನ್ಯಾಸಕಿ ರುಕ್ಸಾರ್ ಅಂಜುಮ್ ಸ್ವಾಗತಿಸಿ, ಉಪನ್ಯಾಸಕಿ ಆಯೇಶಾ ಸಮ್ರೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ಶೈದಾ ಇಕ್ಕೇರಿ ವಾರ್ಷಿಕ ವರದಿಯನ್ನು ಮಂಡಿಸಿ, ತಬಸ್ಸುಮ್ ಶೇಖ್ ವಂದಿಸಿದರು. ವೇದಿಕೆ ಕಾರ್ಯಕ್ರಮ ವನ್ನು ಐನಾ ಸಫ್ವಾ ಮತ್ತು ಹನಿಯಾ ಕೌಸರ್ ನಿರ್ವಹಿಸಿದರೆ, ಸಾಂಸ್ಕೃತಿಕ ವಿಭಾಗವನ್ನು ರಾಹತ್ ಮತ್ತು ಸುವಾದ್ ಮುನ್ನಡೆಸಿದರು.

ಸೀಮಾ ಕಾಸಿಮಜಿ ಅಧ್ಯಕ್ಷತೆ ವಹಿಸಿದ್ದರು, ಅಂಜುಮನ್ ಪದವಿ ಕಾಲೇಜಿನ ಪ್ರಾಂಶುಪಾಲೆ ರೈಸಾ ಶೇಖ್, ಅಂಜುಮನ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ. ಫರ್ಜಾನಾ ಮೊಹತೆಶಮ್, ಸಾದಿಕಾ ಕಾಜಿಯಾ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅಂಜುಮನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮುಹಮ್ಮದ್ ಯೂನೂಸ್ ಕಾಜಿಯಾ, ಪ್ರಧಾನ ಕಾರ್ಯದರ್ಶಿ ಇಸ್ಹಾಕ್ ಶಾಬಂದ್ರಿ, ಡಾ.ಸಲೀಂ ಎಸ್.ಎಂ, ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು ಜಿಲ್ಲಾಧಿಕಾರಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡರು.



 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News