ಭಟ್ಕಳ: ಇಸ್ರೇಲ್ ನಡೆಸುತ್ತಿರುವ ನರಮೇಧ ಕೊನೆಗೊಳಿಸಲು ಆಗ್ರಹಿಸಿ ಧರಣಿ

Update: 2023-11-17 16:53 GMT

ಭಟ್ಕಳ: ಕಳೆದ ಒಂದು ತಿಂಗಳಿನಿಂದ ಇಸ್ರೇಲ್ ಸೈನಿಕರು ಅಮಾಯಕ ಫೆಲೆಸ್ತೀನ್ ಮಹಿಳೆಯರ ಮತ್ತು ಮಕ್ಕಳ ನರಮೇಧಕ್ಕಿಳಿದಿದ್ದು, ಇಸ್ರೇಲ್ ನಡೆಸುತ್ತಿರುವ ಯುದ್ಧವನ್ನು ನಿಲ್ಲಿಸುವಂತೆ ಭಾರತ ಸರಕಾರ ಒತ್ತಡ ಹೇರಬೇಕೆಂದು ಆಗ್ರಹಿಸಿ ಶುಕ್ರವಾರ ಭಟ್ಕಳದಲ್ಲಿ ಧರಣಿ ನಡೆಯಿತು.

ಇಲ್ಲಿನ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ನೇತೃತ್ವದಲ್ಲಿ ತಾಲೂಕಾಡಳಿತ ಸೌಧದ ಮುಂದೆ ಸೇರಿದ ಸಾವಿರಾರು ಜನರು ಇಸ್ರೇಲ್ ನಡೆಸುತ್ತಿರುವ ನರಮೇಧದ ವಿರುದ್ಧ ಪ್ಲೇಕಾರ್ಡ್ ಪ್ರದರ್ಶಿಸಿ ಧರಣಿ ನಡೆಸಿದರು.

ಈ ಸಂದರ್ಭದಲ್ಲಿ ತಂಝೀಮ್ ಸಂಸ್ಥೆಯ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಸಹಾಯಕ ಆಯುಕ್ತೆ ಡಾ. ನಯನಾರಿಗೆ ಮನವಿ ಪತ್ರ ಸಲ್ಲಿಸಿದರು.

ಫೆಲೆಸ್ತೀನಿಯರ ಸ್ವಯಂ-ನಿರ್ಣಯದ ಹಕ್ಕನ್ನು ಭದ್ರಪಡಿಸುವ ಯುಎನ್ ಜನರಲ್ ಅಸೆಂಬ್ಲಿ ನಿರ್ಣಯಗಳ ಪರವಾಗಿ ಭಾರತವು ಸತತವಾಗಿ ಬೆಂಬಲಿಸುತ್ತದೆ, ಸಹ-ಪ್ರಾಯೋಜಿಸುತ್ತದೆ ಮತ್ತು ಮತ ಹಾಕಿದೆ. ಭದ್ರತಾ ಮಂಡಳಿಯ ಸದಸ್ಯರಾಗಿ, ಫೆಲೆಸ್ತೀನಿಯನ್ ಭೂಮಿಯಲ್ಲಿ ನಡೆಯುತ್ತಿರುವ ನರಮೇಧಕ್ಕೆ ತಕ್ಷಣದ ಕದನ ವಿರಾಮಕ್ಕಾಗಿ ಭಾರತವು ಪ್ರಮುಖ ಪಾತ್ರವನ್ನು ವಹಿಸುವ ಅಗತ್ಯವಿದೆ ಮತ್ತು ಸುರಕ್ಷಿತ ಮತ್ತು ಅಂತರ್‌ರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಗಡಿಗಳಲ್ಲಿ ಸಾರ್ವಭೌಮ, ಸ್ವತಂತ್ರ, ಕಾರ್ಯಸಾಧ್ಯ ಮತ್ತು ಏಕೀಕೃತ ಫೆಲೆಸ್ತೀನ್ ರಾಜ್ಯಕ್ಕೆ ಕಾರಣವಾಗುವ ಮಾತುಕತೆಗಳನ್ನು ಪ್ರಾರಂಭಿಸಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ತಂಝೀಮ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಕೀಬ್ ಎಂ.ಜೆ., ರಾಜಕೀಯ ಸಮಿತಿ ಸಂಚಾಲಕ ಸೈಯ್ಯದ್ ಇಮ್ರಾನ್ ಲಂಕಾ, ಮುಸ್ಲಿಮ್ ಯುತ್ ಫೆಡರೇಶನ್ ಅಧ್ಯಕ್ಷ ಅಝೀಝುರ್ರುಹ್ಮಾನ್ ನದ್ವಿ ರುಕ್ನುದ್ದೀನ್, ಜಮಾಆತುಲ್ ಮುಸ್ಲಿಮೀನ್ ಪ್ರಧಾನ ಕಾಝಿ ಮೌಲಾನ ಅಬ್ದುಲ್ ರಬ್ ನದ್ವಿ ಮುಂತಾದವರು ಇದ್ದರು.

 

 

ಇದು ಅನ್ಯಾಯಕ್ಕೊಳಗಾದವರ ಪರ ಧರಣಿ: ಮೌಲಾನಾ ಇಲ್ಯಾಸ್ ನದ್ವಿ

ಭಟ್ಕಳದಲ್ಲಿ ಶುಕ್ರವಾರ ನಡೆದಿರುವುದು ಮುಸ್ಲಿಮರ ಧರಣಿಯಲ್ಲ, ಬದಲಾಗಿ ಅನ್ಯಾಯಕ್ಕೊಳಗಾದವರ ಪರವಾಗಿ ಭಟ್ಕಳದ ಶಾಂತಿಪ್ರಿಯ ಹಿಂದು-ಮುಸ್ಲಿಮ್, ಕ್ರೈಸ್ತರು ಮಾಡಿದ ಧರಣಿಯಾಗಿದೆ ಎಂದು ಮೌಲಾನಾ ಅಲಿಮಿಯಾ ಅಕಾಡಮಿಯ ಪ್ರಧಾನ ಕಾರ್ಯದರ್ಶಿ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಸದಸ್ಯ ಮೌಲಾನಾ ಮುಹಮ್ಮದ್ ಇಲ್ಯಾಸ್ ನದ್ವಿ ಹೇಳಿದ್ದಾರೆ.

ಇಸ್ರೇಲ್ ಸೈನಿಕರು ಅಮಾಯಕ ಫೆಲೆಸ್ತೀನಿಯರ ವಿರುದ್ಧ ನಡೆಸುತ್ತಿರುವ ನರಮೇಧವನ್ನು ಖಂಡಿಸಿ ತಂಝೀಮ್ ನೇತೃತ್ವದಲ್ಲಿ ಆಯೋಜಿಸಿದ್ದ ಬೃಹತ್ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಭಾರತವು ಯಾವಾಗಲೂ ಫೆಲೆಸ್ತೀನಿ ನಾಗರಿಕರ ಪರವಾಗಿದೆ. ಭಾರತ ಸರಕಾರವು ಫೆಲೆಸ್ತೀನಿಯರಿಗೆ ನೀಡುತ್ತಿರುವ ಪರಿಹಾರವನ್ನು ಇನ್ನಷ್ಟು ಹೆಚ್ಚಿಸಬೇಕು ಎಂದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News