ಭಟ್ಕಳ: ವಕ್ಫ್ ತಿದ್ದುಪಡೆ ಮಸೂದೆಗೆ ಅನಿವಾಸಿ ಭಾರತೀಯರ ವಿರೋಧ
ಭಟ್ಕಳ: ಸರ್ಕಾರದ ಪರಿಗಣನೆಯಲ್ಲಿರುವ ವಕ್ಫ್ (ತಿದ್ದುಪಡಿ) ಮಸೂದೆ 2024 ಅನ್ನು ದೇಶಾದ್ಯಂತ ಮುಸ್ಲಿಮರು ವಿರೋಧಿಸುತ್ತಿದ್ದು ಉದ್ದೇಶಿತ ತಿದ್ದುಪಡಿಗಳು ಅಸಂವಿಧಾನಿಕ ಮತ್ತು ಪ್ರಜಾಪ್ರಭುತ್ವ ವಿರೋಧಿಯಾಗಿದ್ದು ಭಟ್ಕಳದ ಅನಿವಾಸಿ ಭಾರತೀಯರ ಸಂಸ್ಥೆಯಾಗಿರುವ ರಾಬಿತಾ ಸೊಸೈಟಿ ಇದನ್ನು ತೀವ್ರವಾಗಿ ವಿರೋಧಿಸಿದ್ದು, ಇದು ಭಾರತದ ಸಂವಿಧಾನದಲ್ಲಿ ನೀಡಲಾದ ಧಾರ್ಮಿಕ ಸ್ವಾತಂತ್ರ್ಯದ ಖಾತರಿಯ ಉಲ್ಲಂಘನೆ ಎಂದು ಹೇಳಿದೆ.
ಈ ಕುರಿತಂತೆ ಭಟ್ಕಳದ ನವಾಯತ್ ಕಾಲನಿಯಲ್ಲಿರುವ ರಾಬಿತಾ ಸೂಸೈಟಿ ಕಾರ್ಯಲಯದಲ್ಲಿ ಪತ್ರಿಕಾಗೋಷ್ಟಿಯನ್ನು ನಡೆಸಿದ ಪ್ರಧಾನ ಕಾರ್ಯದರ್ಶಿ ಡಾ.ಅತಿಕುರ‍್ರಹ್ಮಾನ್ ಮುನಿರಿ, ವಕ್ಫ್ ಆಸ್ತಿಗಳು ಸಮುದಾಯದ ಸ್ವತ್ತಾಗಿದ್ದು ಯಾವುದೇ ಸರ್ಕಾರ ಅಥವಾ ಆಡಳಿತ ಇದನ್ನು ನಿಯಂತ್ರಿಸಲು ಅಥವಾ ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ವಕ್ಫ್ ಆಸ್ತಿಗಳ ನಿರ್ವಹಣೆ ಮತ್ತು ನಿಯಂತ್ರಣವು ವಕ್ಫ್ ಮಂಡಳಿಯಲ್ಲಿ ಉಳಿಯಬೇಕು ಮತ್ತು ವಕ್ಫ್ ಪಾವಿತ್ರತೆ ಮತ್ತು ಉದ್ದೇಶವನ್ನು ಕಾಪಾಡಲು ಮುಸ್ಲಿಂ ವಿದ್ವಾಂಸರು ಪ್ರಾತಿನಿಧ್ಯ ವಹಿಸಬೇಕು ಎಂದ ಅವರು, ವಕ್ಫ್ ತಿದ್ದುಪಡಿ ಮಸೂದೆ ಯನ್ನು ಧಾರ್ಮಿಕ ವಿಷಯಗಳಲ್ಲಿನ ಹಸ್ತಕ್ಷೇಪ ಎಂದು ಪರಿಗಣಿಸಬೇಕು ಎಂದು ಅತಿಕುರ್ ರೆಹಮಾನ್ ಮುನಿರಿ ಹೇಳಿದರು.
ಪ್ರಸ್ತಾವಿತ ವಕ್ಫ್ ತಿದ್ದುಪಡಿಗಳು ಅಸಂವಿಧಾನಿಕ ಮತ್ತು ಗಂಭೀರ ಸ್ವರೂಪದ್ದಾಗಿವೆ ಮತ್ತು ಅದೇ ತಿದ್ದುಪಡಿಗಳನ್ನು ಮುಸ್ಲಿಮರಿಗೆ ನೀಡಲಾಗಿದೆ ಇದು ಸಾಂವಿಧಾನಿಕ ಹಕ್ಕುಗಳ ಮೇಲಿನ ದಾಳಿ. ಇತರೆ ಧರ್ಮದವರು ತಮ್ಮ ಧಾರ್ಮಿಕ ವಿಚಾರಗಳಲ್ಲಿ ಬಾಹ್ಯ ಹಸ್ತಕ್ಷೇಪವನ್ನು ಒಪ್ಪಿಕೊಳ್ಳದಿರುವಂತೆ ನಾವು ಕೂಡ ವಕ್ಫ್ ಆಸ್ತಿಗಳ ನಿರ್ವಹಣೆ ಮುಸ್ಲಿಮರ ಕೈಯಲ್ಲಿ ರಬೇಕು ಮತ್ತು ಯಾವುದೇ ಬಾಹ್ಯ ಹಸ್ತಕ್ಷೇಪವನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಅತಿಕುರ್ ರೆಹಮಾನ್ ಮುನಿರಿ ಹೇಳಿದರು.
ಪ್ರಸ್ತಾವಿತ ತಿದ್ದುಪಡಿಗಳನ್ನು ಹಿಂಪಡೆಯಲು ಮತ್ತು ಧಾರ್ಮಿಕ ಮುಖಂಡರು ಮತ್ತು ವಕ್ಫ್ ಬೋರ್ಡ್ ಆಡಳಿತ ಸೇರಿದಂತೆ ಎಲ್ಲಾ ಪಾಲುದಾರರೊಂದಿಗೆ ವಿವರವಾದ ಸಮಾಲೋಚನೆ ನಡೆಸುವಂತೆ ಅನಿವಾಸಿ ಭಾರತೀಯ ಸಂಘಟನೆಯಾಗಿರುವ ರಾಬಿತಾ ಸೂಸೈಟಿ ಸರ್ಕಾರವನ್ನು ಆಗ್ರಹಿಸುತ್ತಿದ್ದು. ಈ ಸಂಬಂಧ ಕೇಂದ್ರ ಸರ್ಕಾರ ಮತ್ತು ಸರ್ಕಾರದ ಜಂಟಿ ಕಾರ್ಯ ದರ್ಶಿಗೆ ಇ-ಮೇಲ್ ಮೂಲಕ ಮನವಿ ಪತ್ರವನ್ನು ರವಾನಿಸಲಾಗಿದೆ ಎಂದು ಮುನಿರಿ ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ರಾಬಿತಾ ಸೊಸೈಟಿಯ ಮಾಜಿ ಪ್ರಧಾನ ಕಾರ್ಯದರ್ಶಿ ಎಸ್.ಜೆ.ಸೈಯದ್ ಹಾಶಿಂ, ಗಲ್ಫ್‌ನ ಇತರ ಪದಾಧಿಕಾರಿಗಳಾದ ಅಬ್ದುಲ್ ಖಾದಿರ್ ಬಾಷಾ ರುಕ್ನುದ್ದೀನ್, ಮೌಲ್ವಿ ತಲ್ಹಾ ರುಕ್ನುದ್ದೀನ್ ನದ್ವಿ, ಇಲ್ಯಾಸ್ ಸಿದ್ದಿಬಾಪಾ ಮೊದಲಾದವರು ಉಪಸ್ಥಿತರಿದ್ದರು.