ಭಟ್ಕಳ: ತಹಶೀಲ್ದಾರ್, ಸಹಾಯಕ ಆಯುಕ್ತರ ಕಚೇರಿಗಳ ಸಿಬ್ಬಂದಿ ವರ್ಗಾವಣೆಗೆ ಆಗ್ರಹಿಸಿ ಧರಣಿ
ಭಟ್ಕಳ: ಹಲವು ವರ್ಷಗಳಿಂದ ತಹಶೀಲ್ದಾರ್ ಕಚೇರಿ ಮತ್ತು ಸಹಾಯಕ ಆಯುಕ್ತರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿ ರುವ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಾವಣೆಗೆ ಒತ್ತಾಯಿಸಿ, ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಉತ್ತರ ಕನ್ನಡ ಹಾಗೂ ಭಟ್ಕಳ ಘಟಕದ ವತಿಯಿಂದ ಹಳೆ ತಹಶೀಲ್ದಾರ್ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಶುಕ್ರವಾರದಿಂದ ಆರಂಭಿಸಲಾಗಿದೆ.
ಪ್ರತಿಭಟನೆಯಲ್ಲಿ ಭಾಗವಹಿಸಿದ ಕಾರ್ಯಕರ್ತರು, ಭಟ್ಕಳ ತಹಶೀಲ್ದಾರ್ ಕಚೇರಿ ಮತ್ತು ಸಹಾಯಕ ಆಯುಕ್ತರ ಕಚೇರಿ ಯಲ್ಲಿ ಕೆಲವರು ಹಲವು ವರ್ಷಗಳಿಂದ ನಿಯಮಗಳ ಉಲ್ಲಂಘನೆ ಮೂಲಕ ಒಂದೇ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಿದರು. ಇಂತಹ ಅಧಿಕಾರಿಗಳ ತಕ್ಷಣ ವರ್ಗಾವಣೆಯನ್ನು ಮಾಡಿ, ಸಾರ್ವಜನಿಕ ಸೇವೆಯಲ್ಲಿ ಪಾರದರ್ಶಕತೆ ತರಬೇಕೆಂದು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಶಂಕರ ನಾಯ್ಕ ಮಾತನಾಡಿ, “ಇಲ್ಲಿನ ಕೆಲವು ಸಿಬ್ಬಂದಿ ದಲ್ಲಾಳಿಗಳ ಕೆಲಸಕ್ಕೆ ಸೀಮಿತಗೊಂಡಿದ್ದಾರೆ. ಇದರ ಪರಿಣಾಮವಾಗಿ ಸಾರ್ವಜನಿಕರ ಕೆಲಸ ಮಾಡಲು ಸಮಯವಿಲ್ಲ. ಇನ್ನೂ ಮುಂದೆ ಇದನ್ನು ಸಹಿಸಲಾಗದು,” ಎಂದು ಹೇಳಿದ್ದಾರೆ.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರಾಜ್ಯಾಧ್ಯಕ್ಷ ಚೆನ್ನಯ್ಯ ವಸ್ತ್ರದ್ ಮಾತನಾಡಿ, "ವರ್ಗಾವಣೆಗೆ ಒಳಪಡದ ಅಧಿಕಾರಿಗಳು ಪರಸ್ಪರ ತಹಶೀಲ್ದಾರ್ ಮತ್ತು ಸಹಾಯಕ ಆಯುಕ್ತರ ಕಚೇರಿಗಳ ನಡುವೆ ವರ್ಗಾವಣೆಗೊಂಡು, ಅವಶ್ಯಕತೆಗಳಿಗೆ ಸ್ಪಂದಿ ಸುತ್ತಿಲ್ಲ. ಈ ಸ್ಥಿತಿಯನ್ನು ಬದಲಾಯಿಸುವ ತನಕ ನಮ್ಮ ಧರಣಿ ಮುಂದುವರಿಯಲಿದೆ" ಎಂದರು.
ಈ ಸಂದರ್ಭ ಬೆಳಗಾವಿ ವಿಭಾಗದ ಸಂಘಟನಾ ಕಾರ್ಯದರ್ಶಿ ರಾಜು ನಾಯ್ಕ, ಭಟ್ಕಳ ತಾಲೂಕು ಅಧ್ಯಕ್ಷ ನಾಗೇಂದ್ರ ನಾಯ್ಕ , ಉಪಾಧ್ಯಕ್ಷ ವಸಂತ ದೇವಾಡಿಗ, ತಾಲೂಕು ಪ್ರಧಾನ ಕಾರ್ಯದರ್ಶಿ ನಾಗೇಶ ನಾಯ್ಕ, ಜೇವರ್ಗಿ ತಾಲೂಕು ಅಧ್ಯಕ್ಷ ವೀರೇಶ ಮಠ, ಪ್ರಧಾನ ಕಾರ್ಯದರ್ಶಿ, ವಿಶ್ವನಾಥ ಪಾಟೀಲ, ಕಲಬುರ್ಗಿ ಜಿಲ್ಲಾ ಉಪಾಧ್ಯಕ್ಷ ಶ್ರೀಶೈಲ ಬಲ್ಲಾಳ ಮತ್ತು ವಿವಿಧ ಸಂಘಟನೆಯ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.