ಹೆಬಳೆ ಪಂಚಾಯತ್ ತ್ಯಾಜ್ಯ ವಿಲೆವಾರಿ ಸಮಸ್ಯೆ: ಭಟ್ಕಳ ಪುರಸಭೆ ಡಂಪಿಂಗ್ ಯಾರ್ಡ್ ಬಳಕೆಗೆ ತಾತ್ಕಾಲಿಕ ಅನುಮತಿ

Update: 2023-11-08 14:50 GMT

ಭಟ್ಕಳ: ಹೆಬಳೆ ಪಂಚಾಯತ್ ವ್ಯಾಪ್ತಿಯ ತ್ಯಾಜ್ಯವಿಲೆವಾರಿ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ದೊರಕಿದ್ದು ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ್ ವೈದ್ಯರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಹಾಗೂ ಸಾರ್ವಜನಿಕ ಪ್ರತಿನಿಧಿಗಳ ಪರಿಶೀಲನ ಕುಂದುಕೊರತೆಯ ಸಭೆಯಲ್ಲಿ ಹೆಬಳೆ ಪಂಚಾಯತ್ ತ್ಯಾಜ್ಯವನ್ನು ವಿಲೆಮಾಡಲು ಭಟ್ಕಳ ಪುರಸಭೆಯ ಡಂಪಿಂಗ್ ಯಾರ್ಡ್ ಬಳಕೆಗೆ ತಾತ್ಕಾಲಿಕ ಅನುಮತಿ ನೀಡುವಂತೆ ಸಹಾಯಕ ಆಯುಕ್ತರಿಗೆ ಹಾಗೂ ಪುರಸಭೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ತ್ಯಾಜ್ಯ ವಿಲೆಗೆ ಸಂಬಂಧಿಸಿದಂತೆ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರ ಬಹುದಿನಗಳ ಹೋರಾಟಕ್ಕೆ ತಾತ್ಕಾಲಿಕ ಜಯಸಿಕ್ಕಿದ್ದು ಮುಂದೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿಕೊಡಬೇಕು ಎಂಬ ಆಗ್ರಹ ಸಾರ್ವಜನಿಕ ರಿಂದ ಕೇಳಿಬಂದಿದೆ.

ತಾಲೂಕಿನ ಹೆಬ್ಳೆ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸವನ್ನು ಮನೆ ಮನೆಗೆ ಕೊಂಡೊಯ್ಯಲು ಪಂಚಾಯಿತಿ ವ್ಯವಸ್ಥೆ ಮಾಡದ ಕಾರಣ ಜನರು ತಮ್ಮ ಮನೆಗಳ ಕಸವನ್ನು ರಸ್ತೆ ಬದಿ ಎಸೆಯುವ ಸ್ಥಿತಿ ನಿರ್ಮಾಣವಾಗಿದ್ದು, ಕಸದ ರಾಶಿಗಳು ಶೇಖರಣೆ ಯಾಗುತ್ತಿವೆ. ಹನೀಫಾಬಾದ್, ಮಿನಾ ರೋಡ್, ಫಿರ್ದೌಸ್ ನಗರ ಮೊದಲಾದ ಪ್ರದೇಶಗಳಲ್ಲಿ ಖಾಲಿ ಜಾಗ ಹಾಗೂ ರಸ್ತೆ ಬದಿಯ ಕಸದ ರಾಶಿಯಿಂದ ರೋಗ ಹರಡುವ ಭೀತಿ ಉಂಟಾಗಿದ್ದು, ತ್ಯಾಜ್ಯ ವಿಲೇವಾರಿ ಮಾಡಲು ಜಾಗವಿಲ್ಲದೇ ಪರದಾ ಡುವಂತಾಗಿದೆ. ತ್ಯಾಜ್ಯವನ್ನು ಹೊರಹಾಕಲು ಸಾಧ್ಯವಾಗುತ್ತಿಲ್ಲ, ಆದರೆ ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ್ ವೈದ್ಯ ತಾಲೂಕಾಡಳಿತಕ್ಕೆ ಖಡಕ್ ಸೂಚನೆ ನೀಡಿದ್ದು ಹೆಬ್ಳೆ ಪಂಚಾಯತ್‌ನ ಕಸದ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ದೊರಕಿದಂತಾಗಿದೆ.

ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ್ ವೈದ್ಯ ಅವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಎಲ್ಲ ಸರಕಾರಿ ಅಧಿಕಾರಿ ಗಳು ಹಾಗೂ ಭಟ್ಕಳದ ಸಾರ್ವಜನಿಕ ಪ್ರತಿನಿಧಿಗಳ ಸಮ್ಮುಖದಲ್ಲಿ ನಡೆದ ಜಿಲ್ಲಾ ಮಟ್ಟದ ಪರಿಶೀಲನಾ ಸಭೆಯಲ್ಲಿ ಜಾಲಿಪಟ್ಟಣ ಪಂಚಾಯತ್ ಸದಸ್ಯ ಸೈಯದ್ ಇಮ್ರಾನ್ ಲಂಕಾ ಹೆಬಳೆ, ಮಾವಳಿ ಸೇರಿದಂತೆ ಇತರೆ ಪಂಚಾಯಿತಿಗಳಿಗೆ ತ್ಯಾಜ್ಯ ವಿಲೇವಾರಿಗೆ ಹತ್ತು ಎಕರೆ ಅರಣ್ಯ ಭೂಮಿ ನೀಡಬೇಕು. ಸಚಿವರು ಹಾಗೂ ಜಿಲ್ಲಾಧಿಕಾರಿಗಳ ಅನುಮೋದನೆ ನೀಡಿದರೆ ತ್ಯಾಜ್ಯ ಸಮಸ್ಯೆ. ಪಂಚಾಯಿತಿಗಳ ವಿಲೇವಾರಿ ಪರಿಹಾರ ಸಾಧ್ಯ ಎಂದು ಪ್ರಸ್ತಾಪಿಸಿದ್ದು, ಹೆಬಳೆ ಪಂಚಾಯಿತಿ ಕಸವನ್ನು ತಾತ್ಕಾಲಿಕವಾಗಿ ಪುರಸಭೆಯ ಡಂಪಿಂಗ್ ಯಾರ್ಡ್‌ಗೆ ಹಾಕಲು ಅವಕಾಶ ನೀಡಬೇಕು, ಪುರಸಭೆಗೆ 10 ಎಕರೆ ಅರಣ್ಯ ಜಮೀನಿದೆ, ಅದಕ್ಕೆ ಹೊಂದಿಕೊಂಡಂತೆ ಇನ್ನೂ ಹತ್ತು ಎಕರೆ ಭೂಮಿಯನ್ನು ತ್ಯಾಜ್ಯ ವಿಲೆ ಮಾಡಲು ಒದಗಿಸ ಬೇಕು. ಇದರಿಂದ ಭವಿಷ್ಯದಲ್ಲಿ ತ್ಯಾಜ್ಯ ವಿಲೇವಾರಿಯಲ್ಲಿ ಸ್ಥಳಾವಕಾಶದ ಸಮಸ್ಯೆ ಎದುರಾಗುವುದಿಲ್ಲ ಎಂದು ಸಲಹೆ ನೀಡಿದರು.

ಮೂರು ಪ್ರಸ್ತಾವನೆಗಳನ್ನು ಸ್ವೀಕರಿಸಿದ ಮಾಂಕಾಳ್ ವೈದ್ಯ ಅವರು ಹೆಬಳೆ ಪಂಚಾಯಿತಿಯ ತ್ಯಾಜ್ಯ ವಿಲೇವಾರಿ ಮಾಡಲು ಪುರಸಭೆಯ ಡಂಪಿಂಗ್ ಯಾರ್ಡ್ ಬಳಕೆಗೆ ತಾತ್ಕಾಲಿಕವಾಗಿ ಅನುಮತಿ ನೀಡುವಂತೆ ಮತ್ತು ಅರಣ್ಯ ಇಲಾಖೆಗೆ ಪ್ರಸ್ತಾವನೆ ಕಳುಹಿಸುವಂತೆ ಭಟ್ಕಳ ಸಹಾಯಕ ಆಯುಕ್ತರು ಹಾಗೂ ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಿದರು.

ಸಾಗರ ರಸ್ತೆಯಲ್ಲಿ ನಗರಸಭೆಯ ಡಂಪಿಂಗ್ ಯಾರ್ಡ್ ಪಕ್ಕದ ಹತ್ತು ಎಕರೆ ಜಾಗಕ್ಕೆ ಅರಣ್ಯ ಇಲಾಖೆಗೆ ಪ್ರಸ್ತಾವನೆ ಕಳುಹಿಸುವಂತೆ ತಾಲೂಕಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕನಮನೆ ಅವರಿಗೆ ಮಾಂಕಾಳ್ ವೈದ್ಯ ಸೂಚಿಸಿದರು. ಕನಿಷ್ಠ ಒಂದು ಸ್ಥಳವಾದರೂ ತ್ಯಾಜ್ಯ ವಿಲೇವಾರಿಗೆ ಇದ್ದರೆ ಪಂಚಾಯಿತಿ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಎಂದಿಗೂ ಬರುವುದಿಲ್ಲ. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರ ಸಮ್ಮುಖದಲ್ಲಿ ಮಂಕಾಳ್ ವೈದ್ಯ ಅವರು ಪ್ರಸ್ತಾವನೆ ಸ್ವೀಕರಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್ ಅವರಿಗೆ ಸೂಚಿಸಿದರು.

ಸಚಿವರ ನಿರ್ದೇಶನದ ಮೇರೆಗೆ ಸಾಗರ ರಸ್ತೆಯ ಡಂಪಿಂಗ್ ಯಾರ್ಡ್ ಪಕ್ಕದ ಹತ್ತು ಎಕರೆ ಜಾಗ ನೀಡುವಂತೆ ಅರಣ್ಯ ಇಲಾಖೆಗೆ ಲಿಖಿತ ಮನವಿ ಸಲ್ಲಿಸಲಾಗಿದೆ. ಇನ್ನೊಂದೆಡೆ ಅರಣ್ಯ ಇಲಾಖೆಗೆ ಐದು ಎಕರೆ ಅರಣ್ಯ ಭೂಮಿ ನೀಡುವಂತೆ ತಾಲೂಕು ಪಂಚಾಯಿತಿಯಿಂದ ಮನವಿ ಮಾಡಲಾಗಿದೆ ಎಂದು ಭಟ್ಕಳ ಪುರಸಭಾಧಿಕಾರಿ ನೀಲಕಂಠ ಮೇಸ್ತ ಮಾಧ್ಯಮ ಗಳಿಗೆ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News