ಅಪೂರ್ಣ ಹೆದ್ದಾರಿ ಕಾಮಗಾರಿ; ಐಆರ್‌ಬಿ ಅಧಿಕಾರಿಗಳ ವಿರುದ್ಧ ಸಚಿವ ಮಾಂಕಾಳ್ ವೈದ್ಯ ಆಕ್ರೋಶ
ಭಟ್ಕಳ: ಐ.ಆರ್.ಬಿ (IRB) ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ್ ಎಸ್.ವೈದ್ಯ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ ಕುಮಾಟಾ ಮತ್ತು ಶಿರೂರ್ ಟೋಲ್ ಸಂಗ್ರಹ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.
ಅವರು ಗುರುವಾರ ಸಂಜೆ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ನಂತರ ಅಪೂರ್ಣ ಹೆದ್ದಾರಿ ಕಾಮಗಾರಿಯಿಂದಾಗಿ ಭಟ್ಕಳದ ರಂಗಿನಕಟ್ಟೆಯಿಂದ ಶಮ್ಸುದ್ದೀನ್ ವೃತ್ತದ ವರೆಗೆ ಹೊಳೆಯಾಗಿ ಮಾರ್ಪಟ್ಟಿದ್ದನ್ನು ಕಂಡು ಆಕ್ರೋಶಿತರಾದರು. ಅಲ್ಲೇ ಇದ್ದ ಐ.ಆರ್.ಬಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಸಚಿವರು “ನಿವು ಹೊಟ್ಟೆಗೆ ಅನ್ನ ತಿನ್ನುತ್ತೀರೋ ಬೇರೇನನ್ನಾದರೂ ತಿನ್ನುತ್ತಿರೋ ಎಂದು ಪ್ರಶ್ನಿಸಿದರು. ಇದಕ್ಕೆ ಸ್ಪಷ್ಟನೆ ನೀಡಲು ಹೋದ ಅಧಿಕಾರಿಯನ್ನು ತಡೆದ ಸಚಿವರು ಕೂಡಲೆ ಜಿಲ್ಲಾಧಿಕಾರಿಯನ್ನುದ್ದೇಶಿಸಿ ಇವರ ವಿರುದ್ಧ ಪ್ರಕರಣ ದಾಖಲಿ ಟೋಲ್ ಸಂಗ್ರಹವನ್ನು ಸ್ಥಗಿತಗೊಳಿಸಲು ಆದೇಶಿಸಿದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅಪೂರ್ಣಗೊಂಡಿದ್ದರಿಂದ ಸ್ಥಳೀಯ ನಿವಾಸಿಗಳ ಜೀವನ ಅಸ್ತವ್ಯಸ್ತವಾಗಿರುವುದನ್ನು ಸಚಿವರು ತಮ್ಮ ಪರಿಶೀಲನೆಯ ವೇಳೆ ಗಮನಿಸಿದರು. ತೀವ್ರ ಕಳವಳ ವ್ಯಕ್ತಪಡಿಸಿದ ಸಚಿವರು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬವಾಗಿರುವ ಬಗ್ಗೆ ಅಧಿಕಾರಿಗಳು ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
ಐಆರ್‌ಬಿ (ಮೂಲಸೌಕರ್ಯ ಮತ್ತು ರಿಯಲ್ ಎಸ್ಟೇಟ್ ಅಭಿವೃದ್ಧಿ) ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯದ ಪ್ರಕರಣ ದಾಖಲಿಸುವಂತೆ ಸ್ಥಳದಲ್ಲಿದ್ದ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು. ಮೂಲಸೌಕರ್ಯ ಯೋಜನೆಗಳಲ್ಲಿ ನಿರ್ಲಕ್ಷ್ಯವನ್ನು ಸಹಿಸಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.