ಕಾರವಾರ | ರಸ್ತೆ ಅಪಘಾತಕ್ಕೆ ಶಿಕ್ಷಕ ಬಲಿ: ರಸ್ತೆ ಅವ್ಯವಸ್ಥೆ ಖಂಡಿಸಿ ಸಾರ್ವಜನಿಕರ ಪ್ರತಿಭಟನೆ
Update: 2023-12-22 06:37 GMT
ಕಾರವಾರ, ಡಿ.22: ರಸ್ತೆ ಅವ್ಯವಸ್ಥೆ ಕಾರಣ ನಿಯಂತ್ರಣ ತಪ್ಪಿ ಬೈಕ್ ಉರುಳಿಬಿದ್ದ ಬಿದ್ದ ವೇಳೆ ಸವಾರನ ಮೇಲೆ ಲಾರಿ ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ಕಾರವಾರದ ಹಬ್ಬುವಾಡ ಎಂಬಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಶಿಕ್ಷಕ ಉಮೇಶ ಗುನಗಿ (50) ಮೃತಪಟ್ಟವರು. ಇವರು ಕಾರವಾರದಿಂದ ದೇವಳಮಕ್ಕಿ ಶಾಲೆಗೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಸ್ಕಿಡ್ ಆಗಿ ರಸ್ತೆ ಮೇಲೆ ಬಿದ್ದರೆನ್ನಲಾಗಿದೆ. ಈ ವೇಳೆ ಲಾರಿಯೊಂದು ಅವರ ಮೇಲೆ ಹರಿದಿದೆ ಎಂದು ತಿಳಿದುಬಂದಿದೆ.
ಘಟನೆ ಹಿನ್ನೆಲೆಯಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಸಾರ್ವಜನಿಕರು ರಸ್ತೆ ಅವ್ಯವಸ್ಥೆಯಿಂದಲೇ ಈ ಅಪಘಾತ ಸಂಭವಿಸಿದ್ದಾಗಿ ಆಕ್ರೋಶ ವ್ಯಕ್ತಪಡಿಸಿದ್ದು, ಅವೈಜ್ಞಾನಿಕ ರಸ್ತೆ ವಿರುದ್ಧ ಪ್ರತಿಭಟನೆ ಮುಂದಾಗಿದ್ದರು. ಸ್ಥಳಕ್ಕೆ ಕಾರವಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.