ಕ.ವಿ.ಧಾರವಾಡ 6ನೇ ಸೆಮಿಸ್ಟರ್ ಪರೀಕ್ಷಾ ಫಲಿತಾಂಶ ಪ್ರಕಟ: ವಾಣಿಜ್ಯ ವಿಭಾಗದಲ್ಲಿ ಭಟ್ಕಳದ ಅಂಜುಮನ್ ಕಾಲೇಜು ವಿದ್ಯಾರ್ಥಿ ಮುಹಿದ್ದೀನ್ ಅಸ್ಬಾ ಶೇ.99.14 ಅಂಕ
ಭಟ್ಕಳ: ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಇದರ 6ನೇ ಸೆಮಿಸ್ಟರ್ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ಭಟ್ಕಳದ ಪ್ರತಿಷ್ಟಿತ ಅಂಜುಮನ್ ಹಾಮಿಯೇ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ವಾಣಿಜ್ಯ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ಮುಹಿದ್ದೀನ್ ಅಸ್ಬಾ 700 ಅಂಕಗಳಿಗೆ 694 ಅಂಕಗಳನ್ನು ಪಡೆದು ಶೇ.99.14 ಫಲಿತಾಂಶ ಪಡೆದಿದ್ದಾರೆ.
ಅಂಜುಮನ್ ಶಿಕ್ಷಣ ಸಂಸ್ಥೆಯ ಇತಿಹಾಸದಲ್ಲೇ ವಾಣಿಜ್ಯ ವಿಭಾಗದಲ್ಲಿ ಇಷ್ಟೊಂದು ಅಂಕಪಡೆದು ಉತ್ತೀರ್ಣಗೊಂಡವರಲ್ಲಿ ಮುಹಿದ್ದೀನ್ ಅಸ್ಬಾ ಮೊದಲಿಗರಾಗಿದ್ದಾರೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಸಿದ್ದೀಖ್ ಮಾಹಿತಿ ನೀಡಿದ್ದಾರೆ.
ಸೋಮವಾರ ಅಂಜುಮನ್ ಹಾಮಿಯೇ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಹಿದ್ದೀನ್ ಅಸ್ಬಾ, ಇಂತಹ ಅವಕಾಶ ಒದಗಿಸಿಕೊಟ್ಟ ತನ್ನ ಪಾಲಕರು, ಉಪನ್ಯಾಸಕರು, ಹಾಗೂ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಿಗೆ ಧನ್ಯವಾದ ಸಲ್ಲಿಸಿದರು. ತಾನು ಭವಿಷ್ಯದಲ್ಲಿ ಚಾರ್ಟಡ್ ಅಕೌಂಟೆಂಟ್ ಆಗುವ ಕನಸು ಹೊತ್ತಿದ್ದು ಇದಕ್ಕಾಗಿ ಸಿದ್ದತೆಗಳನ್ನು ನಡೆಸುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಅಂಜುಮನ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಮುಹಮ್ಮದ್ ಸಾದಿಕ್ ಪಿಲ್ಲೂರ್, ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಇಸ್ಹಾಖ್ ಶಾಬಂದ್ರಿ, ಸ್ಕೂಲ್ ಬೋರ್ಡ್ ಕಾರ್ಯದರ್ಶಿ ಸೈಯ್ಯದ್ ಸಾದುಲ್ಲಾ ಬರ್ಮಾವರ್, ಕಾಲೇಜು ಬೋಡ್ ಕಾರ್ಯದರ್ಶಿ ಆಪ್ತಾಬ್ ಖಮರಿ, ಆಸಿಫ್ ದಾಮೂದಿ ಮತ್ತಿತರರು ಉಪಸ್ಥಿತರಿದ್ದರು.