ಭಟ್ಕಳ: ಮತದಾರರ ನೋಂದಣಿ ಅಭಿಯಾನ

Update: 2023-12-10 15:51 GMT

ಭಟ್ಕಳ: ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢಗೊಳಿಸಲು ಮತದಾನ ಪ್ರಮಾಣ ಹೆಚ್ಚಳ ಮತ್ತು ಕಡ್ಡಾಯ ನೋಂದಣಿ ಪ್ರಕ್ರಿಯೆ ಪ್ರಮುಖ ತಳಹದಿಯಾಗಿದ್ದು, ಈ ಕುರಿತು ಭಾರತ ಚುನಾವಣಾ ಆಯೋಗ ನೀಡಿರುವ ಅವಕಾಶವನ್ನು ಸದುಪಯೋಗಪಡಿ ಸಿಕೊಳ್ಳುವಂತೆ ಯುವ ಮತದಾರರಿಗೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ, ಪ್ರಭಾಕರ ಚಿಕ್ಕನ್ಮನೆ ಕರೆ ನೀಡಿದರು.

ಅವರು ಯಲ್ವಡಿಕವೂರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರಿ ಪದವಿ ಪೂರ್ವ ಕಾಲೇಜು ಹಡೀನದಲ್ಲಿ ಯುವ ಮತದಾರರ ನೋಂದಣಿ ಅಭಿಯಾನದ ಮಾನವ ಸರಪಳಿಯಲ್ಲಿ ಭಾಗವಹಿಸಿ ನಂತರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಡಿಸೆಂಬರ್ 31ಕ್ಕೆ 18 ವರ್ಷ ಪೂರ್ಣಗೊಳ್ಳುವ ಯುವ ಮತದಾರರ ನೋಂದಣಿ, ನಿಗದಿತ ದಿನಾಂಕದೊಳಗೆ ಹೆಸರು ತೆಗೆದು ಹಾಕುವುದು, ವರ್ಗಾವಣೆ, ತಿದ್ದುಪಡಿಗೆ ಅವಕಾಶ ಇರುತ್ತದೆ. ಈ ಬಗ್ಗೆ ನಮೂನೆಗಳನ್ನು ಭರ್ತಿ ಮಾಡುವ ಕುರಿತು ಯುವ ಸಮೂಹ ತಿಳುವಳಿಕೆ ಪಡೆದು ತಾವು ಮತ್ತು ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿರುವವರಿಗೆ ಮಾಹಿತಿ ನೀಡಿ ಈ ಅಭಿಯಾನದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಪ್ರಭಾರ ಪ್ರಾಚಾರ್ಯ ಎಂ.ಕೆ. ನಾಯ್ಕ, ತಾ.ಪಂ. ಸಹಾಯಕ ಲೆಕ್ಕಾಧಿಕಾರಿ, ರಾಜೇಶ ಮಹಾಲೆ, ಪಂಚಾಯತ ಅಭಿವೃದ್ಧಿ ಅಧಿಕಾರಿ ಯಾದವ ನಾಯ್ಕ, ತಾ.ಪಂ. ಕಚೇರಿಯ ಕರಿಯಪ್ಪ ನಾಯ್ಕ ಹಾಗೂ ಕಾಲೇಜಿನ ಉಪನ್ಯಾಸಕರಾದ ರಾಜೇಶ ನಾಯ್ಕ ಹಾಜರಿದ್ದರು.

ಉಪನ್ಯಾಸಕರಾದ ರಾಜೇಶ ನಾಯ್ಕ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ ಕೊನೆಯಲ್ಲಿ ವಂದಿಸಿದರು.




Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News