ನ್ಯೂ ಶಮ್ಸ್ ಸ್ಕೂಲ್ ನಲ್ಲಿ ವಾರ್ಷಿಕ ಕ್ರೀಡಾಕೂಟ
ಭಟ್ಕಳ: ಆಟೋಟಗಳು ವಿದ್ಯಾರ್ಥಿ ಸಮೂಹವನ್ನು ಬಲಿಷ್ಠರನ್ನಾಗಿ ಮಾಡುತ್ತದೆ. ಕ್ರೀಡೆಯಲ್ಲಿ ಯಶಸ್ಸು ಸಿಗದೆ ಇದ್ದರೂ ಚಿಂತಿಸಬೇಡಿ, ಆದರೆ ಜನರ ಹೃದಯವನ್ನು ಗೆಲ್ಲುವಲ್ಲಿ ನೀವು ಯಶಸ್ಸು ಕಾಣುವಂತಾಗಬೇಕು ಎಂದು ಭಟ್ಕಳದ ಜಾಮಿಯಾ ಇಸ್ಲಾಮಿಯ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕ ಮೌಲಾನ ಸೈಯ್ಯದ್ ಸಾಲಿಕ್ ನದ್ವಿ ಬರ್ಮಾವರ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಅವರು ಗುರುವಾರ ಹೆಬಳೆ ಗ್ರಾ.ಪಂ.ವ್ಯಾಪ್ತಿಯ ನ್ಯೂ ಶಮ್ಸ್ ಸ್ಕೂಲ್ ನ ವಾರ್ಷಿಕ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ತಂಝೀಮ್ ಸಂಸ್ಥೆಯ ರಾಜಕೀಯ ಸಮಿತಿ ಸಂಚಾಲಕ ನ್ಯಾಯವಾದಿ ಸೈಯ್ಯದ್ ಇಮ್ರಾನ್ ಲಂಕಾ, ಕ್ರೀಡೆಯಲ್ಲಿ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಇದರಿಂದ ಕಲಿಯುವ ಅವಕಾಶ ಸಿಗುತ್ತದೆ. ಇನ್ನೋಬ್ಬರನ್ನು ಸೋಲಿಸುವುದು, ಗೆಲ್ಲಿಸುವುದು ಮುಖ್ಯವಲ್ಲ. ನಾನು ಮಾಡುತ್ತೇನೆ ಎನ್ನುವುದಕ್ಕಿಂತ ನಾವು ಮಾಡುತ್ತೇವೆ. ತಂಡದ ಗೆಲುವು ನನ್ನ ಗೆಲುವು ಎಂಬ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಸಮಾಜದಲ್ಲಿ ಉತ್ತಮ ಪರಿಸರ ನಿರ್ಮಾಣವಾಗಲು ಸಾಧ್ಯ ಎಂದರು.
ತರಬಿಯತ್ ಎಜ್ಯುಕೇಶನ್ ಸೂಸೈಟಿಯ ಅಧ್ಯಕ್ಷ ಮುಹಮ್ಮದ್ ಇಸ್ಮಾಯಿಲ್ ಮೋಹತೆಶಮ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಮುಹಮ್ಮದ್ ಯೂನೂಸ್ ರುಕ್ನುದ್ದೀನ್, ಭಟ್ಕಳ ಮುಸ್ಲಿಮ್ ಯುತ್ ಫೆಡರೇಶನ್ ಅಧ್ಯಕ್ಷ ಮೌಲಾನ ಅಝೀಝುರ‍್ರಹ್ಮಾನ್ ನದ್ವಿ ರುಕ್ನುದ್ದೀನ್, ಸ್ಕೂಲ್ ಬೋರ್ಡ್ ಉಪಾಧ್ಯಕ್ಷ ಮೌಲಾನ ಸೈಯ್ಯದ್ ಇಸ್ಮಾಯಿಲ್ ಖುತುಬ್ ಬರ್ಮಾವರ್ ನದ್ವಿ, ಮುಸಾಬ್ ರುಕ್ನುದ್ದೀನ್, ಇಷ್ತಿಯಾಖ್ ರುಕ್ನುದ್ದೀನ್ ಪ್ರಾಂಶುಪಾಲ ಲಿಯಾಖತ್ ಅಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ರಾಝಿ ಸಿದ್ದೀಖಾ ಕುರಾನ್ ಪಠಿಸಿದರು. ಮುಹಮ್ಮದ್ ಗಿತ್ರೀಫ್ ರಿದಾ ಮಾನ್ವಿ ಅನುವಾದಿಸಿದರು. ಮುಷಾಹಿಲ್ ಸ್ವಾಗತಿಸಿದರು. ತಾಹೀರ್ ಮತ್ತು ಬಾಸಿಖ್ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸಖ್ಲೈನ್ ಎಸ್.ಎಂ. ಧನ್ಯವಾದ ಅರ್ಪಿಸಿದರು.