ಎಸ್.ಎಸ್.ಎಲ್.ಸಿ.ಪರೀಕ್ಷೆ; ಭಯ ಬೇಡ: ಬಿಇಒ ವಿ.ಡಿ.ಮೊಗೇರ್
ಭಟ್ಕಳ: ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ಐಟಾ ಭಟ್ಕಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾ ಲಯದ ಸಹಯೋಗದೊಂದಿಗೆ ಗುರುವಾರ ಇಲ್ಲಿನ ರಾಬಿತಾ ಸೂಸೈಟಿ ಸಂಭಾಂಗಣದಲ್ಲಿ ಆಯೋಜಿಸಿದ್ದ ಎಸ್.ಎಸ್.ಎಲ್.ಸಿ ಪರೀಕ್ಷೆ ಎದುರಿಸುವುದು ಹೇಗೆ? ಎಸ್.ಎಸ್.ಎಲ್.ಸಿ. ನಂತರ ಮುಂದೇನು? ಎಂಬ ಕಾರ್ಯಾಗಾರ ಯಶಸ್ವಿಯಾಗಿ ಜರುಗಿತು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಭಟ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಡಿ. ಮೊಗೇರ್ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಭಯ ಬೇಡ ಎಚ್ಚರಿಕೆ ಇರಲಿ ಎಂಬ ಕಿವಿ ಮಾತು ಹೇಳಿದರು. ತಾಲೂಕಿನ ಎಸ್.ಎಸ್.ಎಲ್.ಸಿ ಫಲಿತಾಂಶವು ಕನ್ನಡ ಹಾಗೂ ಇಂಗ್ಲಿಷ್ ವಿಷಯದಿಂದಾಗಿ ಕಡಿಮೆಯಾಗುತ್ತಿರುವುದು ವಿಶ್ಲೇಷಣೆಯಿಂದ ತಿಳಿದುಬಂದಿದೆ. ಈ ನಿಟ್ಟಿನಲ್ಲಿ ಉರ್ದು ಮಾಧ್ಯಮದ ವಿದ್ಯಾರ್ಥಿಗಳು ಕನ್ನಡ ಭಾಷೆಯ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಸಿದ್ಧತೆ ಮಾಡಿಕೊಳ್ಳಬೇಕು ಎಂಬ ಸಲಹೆ ನೀಡಿದರು.
ಮುಖ್ಯ ಅತಿಥಿ ಭಟ್ಕಳ ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಮೌಲಾನ ಎಸ್.ಎಂ.ಸೈಯ್ಯದ್ ಝುಬೇರ್ ಮಾತನಾಡಿ ವಿದ್ಯಾರ್ಥಿಗಳ ಜೀವನದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬಹುಮುಖ್ಯವಾಗಿದ್ದು ಇಲ್ಲಿ ಉತ್ತಮ ಸಾಧನೆ ಮಾಡಿದ್ದಲ್ಲಿ ಮುಂದಿನ ಹಾದಿ ಸುಗಮವಾಗಲಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಐಟಾ ಸಂಘಟನೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿರುವುದು ಉತ್ತಮ ಬೆಳವಣೆಗೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ವಿಶ್ವದ ಅತಿದೊಡ್ಡ ತಪಾಸಣಾ ಕಂಪನಿ ಅಪ್ಲಸ್ ವೆಲೋಸಿ (APPLUS VELOSI) ಎನರ್ಜಿ & ಇಂಡಸ್ಟ್ರಿ ವಿಭಾಗದ ನೇಮಕಾತಿ ಸಲಹೆಗಾರ ಜಿಬ್ರಾನುದ್ದೀನ್ ಖಾನ್ ಪಿಪಿಟಿ ಪ್ರದರ್ಶನದ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.
ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಮುಹಮ್ಮದ್ ರಝಾ ಮಾನ್ವಿ, ಐಟಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವ ಕೆಸಲ ಮಾಡುತ್ತಿದೆ. ರಾಜ್ಯದಾದ್ಯಂತ ಹಲವಾರು ಕಡೆಗಳಲ್ಲಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ಪಾಲಕರಿಗೆ ಮಾರ್ಗದರ್ಶನ ಶಿಬಿರಗಳನ್ನು ಆಯೋಜಿಸುವುದರ ಮೂಲಕ ವಿದ್ಯಾರ್ಥಿಗಳನ್ನು ಸಮಾಜದ ಸತ್ಪ್ರಜೆಗಳನ್ನಾಗಿ ಮಾಡುವಲ್ಲಿ ಸಕ್ರೀಯವಾಗಿದೆ ಎಂದರು.
ಆಲ್ ಇಂಡಿಯಾ ಐಡಿಯಲ್ ಟೀಚರ‍್ಸ್ ಸೋಸಿಯೇಶನ್ ಭಟ್ಕಳ ತಾಲೂಕಾ ಆಧ್ಯಕ್ಷ ನಯೀಮುಲ್ ಹಖ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಅರ್ಪಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ಅಶೋಕ್ ಆಚಾರಿ, ನವಾಯತ್ ಕಾಲೋನಿ ಉರ್ದು ಪ್ರೌಢಶಾಲೆಯ ಮುಖ್ಯಾ ಧ್ಯಾಪಕ ಅಫ್ಝಲ್ ಹುಸೇನ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿ ಗಳು ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.