ಭಟ್ಕಳ: ಬೋರ್ಡ್ ಅಳವಡಿಕೆ ವಿರೋಧಿಸಿ ಪ್ರತಿಭಟನೆ

Update: 2024-01-16 17:43 GMT

ಭಟ್ಕಳ:ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ದೇವಿನಗರ ಎರಡನೇ ಕ್ರಾಸ್‌ನಲ್ಲಿರುವ ಮಕ್ಕಾ ಮಸೀದಿಯ ಹೊರಭಾಗ ದಲ್ಲಿ ದೇವಿನಗರ ಬೋರ್ಡ್ ಅಳವಡಿಕೆ ವಿರೋಧಿಸಿ ಮಂಗಳವಾರವೂ ಪ್ರತಿಭಟನೆ ಮುಂದುವರಿದ್ದಿದ್ದು ಅಲ್ಲಿ ಬೋರ್ಡ್ (ನಾಮಫಲಕ) ಅಳವಡಿಸಲು ಅನುಮತಿ ನಿರಾಕರಿಸಲಾಗಿದೆ. ಆದರೆ, ಪ್ರತಿಭಟನಾಕಾರರಿಗೆ ಜಾಲಿ ಪಟ್ಟಣ ಪಂಚಾಯತ್ ಗೆ ಈ ಕುರಿತು ಮನವಿ ಪತ್ರ ಸಲ್ಲಿಸಲು ತಿಳಿಸಲಾಗಿದ್ದು ಪಟ್ಟಣ ಪಂಚಾಯತ್ ಆಡಳಿತ ಸೂಕ್ತ ನಿರ್ಣಯ ಕೈಗೊಳ್ಳುವುದು ಎಂಬ ತೀರ್ಮಾನಕ್ಕೆ ಬರಲಾಯಿತು.

ಘಟನೆಯ ವಿವರ: ರವಿವಾರ ಮಕ್ಕಾ ಮಸೀದಿಯ ಹೊರಭಾಗದ ನಾಮಫಲಕಕ್ಕೆ ಬಣ್ಣ ಬಳಿದು ದೇವಿ ನಗರ ಎಂದು ಬರೆದು ಸಂಘಪರಿವಾರದ ಕಾರ್ಯಕರ್ತರು ಅಲ್ಲಿ ದ್ವಜಸ್ಥಂಭ ಸ್ಥಾಪಿಸಲು ಮುಂದಾದಾಗ ಮಸೀದಿ ಆಡಳಿತವು ಇದಕ್ಕೆ ವಿರೋಧವನ್ನು ವ್ಯಕ್ತಪಡಿಸಿತ್ತು. ಜಾಲಿ ಪ.ಪಂ ಆಡಳಿತಾಧಿಕಾರಿ ಸೂಚನೆಯ ಮೇರೆಗೆ ಪೊಲೀಸರ ಉಪಸ್ಥಿತಿಯಲ್ಲಿ ಸೋಮವಾರದಂದು ದ್ವಜಸ್ಥಂಭ ತೆರವುಗೊಳಿಸಲಾಗಿತ್ತು. ಇದರಿಂದ ಕೋಪಗೊಂಡ ಸಂಘಪರಿವಾರದ ಕಾರ್ಯಕರ್ತರು ಮಸೀದಿಯ ಹೊರಗೆ ಜಮಾಯಿಸಿ ಕಂಬ ತೆರವಿನ ವಿರುದ್ಧ ಪ್ರತಿಭಟನೆ ನಡೆಸಿದರು.

ಮಂಗಳವಾರ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಜಾಲಿಪಟ್ಟಣ ಪಂಚಾಯಿತಿಯ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಮಸೀದಿಯ ಹೊರಗೆ ಯಾವುದೇ ಬೋರ್ಡ್, ಕಂಬ ಅಳವಡಿಸದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನಿರ್ಣಯ ಕೈಗೊಳ್ಳಲಾಯಿತು. ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ರಾಜಕೀಯ ಲಾಭಕ್ಕಾಗಿ ಕೆಲವರು ವಾತಾವರಣವನ್ನು ಉದ್ವಿಗ್ನಗೊಳಿಸಲು ಬಯಸುತ್ತಿದ್ದಾರೆ, ಇಂತಹ ಪರಿಸ್ಥಿತಿಯಲ್ಲಿ ಅಂತಹವರನ್ನು ಬಂಧಿಸುವ ಜವಾಬ್ದಾರಿ ಪೊಲೀಸರು ಮತ್ತು ಅಧಿಕಾರಿಗಳ ಮೇಲಿದೆ, ಅವರ ಉದ್ದೇಶಗಳು ಸಫಲವಾಗಲು ಬಿಡಬೇಡಿ ಎಂದು ಜಾಲಿ ಪಟ್ಟಣ ಪಂಚಾಯತ್ ಸದಸ್ಯರು ಹೇಳಿದರು.

ಮಂಗಳವಾರ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಸಭೆಗೆ ಹಾಜರಾಗದ ಸಂಘಪರಿವಾರದ ಕಾರ್ಯಕರ್ತರು ಮಕ್ಕಾ ಮಸೀದಿಯ ಹೊರಗೆ ಜಮಾಯಿಸಿ ಮತ್ತೆ ಪ್ರತಿಭಟನೆ ನಡೆಸಿದರು. ಮಸೀದಿಯ ಹೊರಗೆ ಧ್ವಜವನ್ನು ನೇತುಹಾಕಲು ಬಯಸುವುದಿಲ್ಲ ಆದರೆ ಸವಾರರು ದೂರದಿಂದ ದೇವಿನಗರವನ್ನು ನೋಡುವಂತೆ ಎತ್ತರದಲ್ಲಿ ದೇವಿನಗರ ಎಂದು ಬರೆಯುತ್ತಾರೆ ಎಂದು ಅವರು ಹೇಳಿದರು. ಪ್ರತಿಭಟನಾಕಾರರು ದೇವಿನಗರದ ಬೋರ್ಡ್ ಕಂಬವನ್ನು ಹಿಡಿದು ಮಸೀದಿಯ ಹೊರಗೆ ಅಳವಡಿಸಲು ಮುಂದಾದಾಗ, ಪೊಲೀಸರು ಅವರನ್ನು ತಡೆದು ಇಲ್ಲಿ ಯಾವುದೇ ಬೋರ್ಡ್ ಹಾಕಲು ಬಿಡುವುದಿಲ್ಲ ಎಂದು ಹೇಳಿದರು. ಈ ಸಂದರ್ಭ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ತಹಸೀಲ್ದಾರ್ ತಿಪ್ಪೆಸ್ವಾಮಿ, ಹೆಚ್ಚುವರಿ ಎಸ್ಪಿ ಸಿ.ಟಿ ಜಯಕುಮಾರ್, ಭಟ್ಕಳ ಡಿವೈಎಸ್ಪಿ ಶ್ರೀಕಾಂತ್ ಸೇರಿದಂತೆ ಹಲವು ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News