ಹೆಬಳೆ ಪಂಚಾಯತ್ ನಿಂದ ಅನಧಿಕೃತ ಧ್ವಜಸ್ತಂಭ ತೆರವು; ಸಂಘಪರಿವಾರ ಕಾರ್ಯಕರ್ತರ ಪ್ರತಿಭಟನೆ

Update: 2024-01-30 18:03 GMT

ಭಟ್ಕಳ: ಅನುಮತಿ ಇಲ್ಲದೆ ಹೆಬಳೆ ಪಂಚಾಯತ್ ವ್ಯಾಪ್ತಿಯ ತೆಂಗಿನಗುಂಡಿ ಕಡಲ ಕಿನಾರೆ ಬಳಿ ಸಂಘಪರಿವಾರ ಸಂಘಟನೆಯ ಕಾರ್ಯಕರ್ತರು ನಿರ್ಮಿಸಿದ್ದ ಧ್ವಜಸ್ತಂಭವನ್ನು ಪಂಚಾಯತ್ ಅಧಿಕಾರಿಗಳು ತೆರವುಗೊಳಿಸಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಶಾಂತಿಯ ಪಟ್ಟಣವಾಗಿರುವ ಭಟ್ಕಳದಲ್ಲಿಯೂ ಕಳೆದ ಕೆಲವು ದಿನಗಳಿಂದ ಒಂದಿಲ್ಲೊಂದು ವಿವಾದಗಳು ಹುಟ್ಟುಪಡೆಯುತ್ತಲೇ ಇದ್ದು, ಇತ್ತಿಚೆಗೆ ದೇವಿನಗರದ ನಾಮಫಲಕ ಹಾಗೂ ಧ್ವಜಸ್ತಂಭ ವಿವಾದದಿಂದ ಉದ್ವಿಘ್ನಗೊಂಡಿದ್ದ ಜಾಲಿ ಪಟ್ಟಣ ಪಂಚಾಯತ್, ಅಧಿಕಾರಿಗಳು ಹಾಗೂ ಉಭಯ ಸಮುದಾಯಗಳೊಂದಿಗೆ ನಡೆಸಿದ ಮಾತುಕತೆಯಿಂದಾಗಿ ಪ್ರಕರಣ ಶಮನಗೊಂಡಿತ್ತು.

ಇಂತಹದ್ದೇ ವಿವಾದವೊಂದು ಕಳೆದ ಎರಡು ದಿನಗಳಿಂದ ಸೃಷ್ಟಿಯಾಗಿದ್ದು ಹೆಬಳೆ ಪಂಚಾಯತ್ ಅಧಿಕಾರಿಗಳು ಅನಧಿಕೃತ ಧ್ವಜಸ್ತಂಭವನ್ನು ತೆರವುಗೊಳಿಸಿದ್ದನ್ನು ಪ್ರಶ್ನಿಸಿ ಪಂಚಾಯತ್ ಅಧಿಕಾರಿಗಳು ಮತ್ತು ಪೊಲೀಸರೊಂದಿಗೆ ಸಂಘಪರಿವಾರದ ಕಾರ್ಯಕರ್ತರು ಮತ್ತು ಪಂಚಾಯತ್ ನ ಬಿಜೆಪಿ ಸದಸ್ಯರು ತಗಾದೆ ತೆಗೆದಿದ್ದು ಅನಧಿಕೃತ ನಾಮ ಫಲಕ ಮತ್ತು ಧ್ವಜಸ್ತಂಭಗಳನ್ನು ತೆರವುಗೊಳಿಸುವ ತಾಕತ್ತಿದ್ದರೆ ಎಲ್ಲ ಕಡೆ ಹಾಕಲಾಗಿರುವ ಅನಧಿಕೃತ ನಾಮಫಲಕ ಗಳನ್ನು ತೆರವುಗೊಳಿಸಿ ಎಂದು ಸವಾಲು ಹಾಕಿದ್ದಾರೆ. ಈ ನಡುವೆ ಪೊಲೀಸರು ಮತ್ತು ಸಂಘಪರಿವಾರದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿಯೂ ನಡೆಯಿತು.

ಸಾವರ್ಕರ್‌ಗೆ ಸಂಬಂಧಿಸಿದ ನಾಮಫಲಕ ಹಾಗೂ ಧ್ವಜಕ್ಕೆ ಸಂಬಂಧಿಸಿದ ನಾಮಫಲಕವನ್ನು ಯಾವುದೇ ಮುನ್ಸೂಚನೆ ನೀಡದೆ ಜೆಸಿಬಿ ಬಳಸಿ ತೆರವುಗೊಳಿಸಲು ಗ್ರಾಮ ಪಂಚಾಯಿತಿ ಕ್ಷಿಪ್ರ ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ ಬಿಜೆಪಿಯ ಮುಖಂಡರಾದ ಗೋವಿಂದ ನಾಯ್ಕ, ಸುಬ್ರಾಯ ದೇವಾಡಿಗ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News