ಬಿಜೆಪಿ ಭಟ್ಕಳಕ್ಕೆ ಬೆಂಕಿ ಹಚ್ಚಲು ಯತ್ನಿಸುತ್ತಿದೆ: ಕಾಂಗ್ರೆಸ್ ಆರೋಪ

Update: 2024-02-02 15:45 GMT

ಭಟ್ಕಳ: ಪ್ರತಿ ಚುನಾವಣೆಯಲ್ಲೋ ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಿಜೆಪಿ ಸಿದ್ಧತೆ ನಡೆಸಿದ್ದು, ಮತ್ತೊಮ್ಮೆ ಭಟ್ಕಳಕ್ಕೆ ಬೆಂಕಿ ಹಚ್ಚಲು ಬಿಜೆಪಿ ಸಿದ್ಧತೆ ನಡೆಸಿದೆ ಎಂದು ಭಟ್ಕಳ ಬ್ಲಾಕ್ ಕಾಂಗ್ರೆಸ್ ಆರೋಪಿಸಿದೆ.

ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತೆಂಗಿನಗುಂಡಿಯಲ್ಲಿ ಅನಧಿಕೃತ ವಾಗಿ ಕಟ್ಟಿದ್ದ ಸಾವರ್ಕರ್ ಕಟ್ಟೆ ತೆರವಿಗೆ ಸಂಬಂಧಿಸಿದ ದಾಖಲೆಗಳೊಂದಿಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಫೆ.5, 2022 ರಂದು ಹೆಬ್ಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾವರಕ್ ನಾಮಫಲಕ ಕಟ್ಟೆ ನಿರ್ಮಾಣಕ್ಕಾಗಿ ಸ್ಥಳೀಯ ನಿವಾಸಿಗಳು ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು. ಇದೇ ವೇಳೆ ಜಾಮಿಯಾ ಕಾಲನಿ ಜುಮ್ಮಾ ಮಸೀದಿ ನಾಮಫಲಕ ಅಳವಡಿಕೆಗೂ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಹೆಬಳೆ ಗ್ರಾಮ ಪಂಚಾಯಿತಿ ಆಡಳಿತ ಸಾವರ್ಕರ್ ಕಟ್ಟೆ ನಿರ್ಮಾಣದ ಅರ್ಜಿಯನ್ನು ತಿರಸ್ಕರಿಸಿ, ಜಾಮಿಯಾ ಕಾಲನಿ ನಾಮಫಲಕ ಅಳವಡಿಸಲು ಅನುಮತಿ ನೀಡಿತ್ತು.

ಆಗ ಹೆಬ್ಳೆ ಗ್ರಾಮ ಪಂ. ಆಡಳಿತ ಬಿಜೆಪಿ ಬೆಂಬಲಿಗರದ್ದಾಗಿತ್ತು. ಭಟ್ಕಳ ಬಿಜೆಪಿ ಮಂಡಲ ಅಧ್ಯಕ್ಷರು ಆ ಪಂಚಾಯಿತಿ ಸದಸ್ಯರಾಗಿದ್ದರು. ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದರು. ಸಂಸದರಾಗಿದ್ದವರು ಕೂಡ ಬಿಜೆಪಿಯವರು. ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರ ನಡೆಸುತ್ತಿತ್ತು. ಹೀಗಿರುವಾಗ ಇಂತಹ ನಿರ್ಧಾರವನ್ನು ಏಕೆ ಮತ್ತು ಹೇಗೆ ತೆಗೆದುಕೊಂಡರು ಎಂಬುದನ್ನು ಬಿಜೆಪಿ ಹೇಳಬೇಕು ಎಂದು ಸವಾಲು ಹಾಕಿದ ವೆಂಕಟೇಶ್ ನಾಯ್ಕ, ಇದೀಗ ತೆಂಗಿನಗುಂಡಿ ಸಾವರ್ಕರ್ ಹೆಸರಿರುವ ಕಟ್ಟೆ ತೆರವು ವಿಚಾರದಲ್ಲಿ ಗದ್ದಲ ಎಬ್ಬಿಸಲು ಬಿಜೆಪಿ ಯತ್ನಿಸಿದೆ ಎಂದರು.

ಬಿಜೆಪಿ ಕಾರ್ಯಕರ್ತರಿಂದ ಹಿಡಿದು ಹಿರಿಯ ನಾಯಕರವರೆಗೂ ಬೂಟಾಟಿಕೆ ರಾಜಕಾರಣ ಮಾಡುತ್ತಿದ್ದಾರೆ. ಮಾಜಿ ಶಾಸಕ ಸುನೀಲ ನಾಯ್ಕ ಮನೆಯಲ್ಲಿ ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿ ಗೋಬಿ ತಿಂದಿದ್ದಾರೆ ಎಂದು ಸಿಟಿ ರವಿ ಹೇಳಿದ್ದಾರೆ. ಕಾರ್ಕಳದಲ್ಲಿ ಬಿಜೆಪಿ ಶಾಸಕ ಸುನೀಲ್‌ಕುಮಾರ್ ಪರಶುರಾಮ ಮೂರ್ತಿ ನಿರ್ಮಾಣ ವಿಚಾರವಾಗಿ ಜನರಿಗೆ ಮೋಸ ಮಾಡಿದ್ದಾರೆ. ಸಂಸದ ಅನಂತಕುಮಾರ ಹೆಗಡೆ ಮುಸ್ಲಿಮರೊಂದಿಗೆ ವ್ಯಾಪಾರ ಮಾಡುತ್ತಿದ್ದಾರೆ. ಆದರೆ ಬಿಜೆಪಿ ನಾಯಕರು ಹೊರಗೆ ಮುಸ್ಲಿಮರ ವಿರುದ್ಧ ಕೂಗಾಡುತ್ತಾರೆ.

ತೆಂಗಿನ ಕಟ್ಟೆ ತೆಗೆಯುವ ವಿಷಯವಿರಲಿ, ನೀವು ಪಾಲಿಸಿಕೊಂಡು ಬಂದಿರುವ ಹಿಂದುತ್ವದ ವಿಷಯ ಇರಲಿ. ಬಹಿರಂಗ ಚರ್ಚೆಗೆ ಬನ್ನಿ. ಹಿಂದೂಗಳ ಪರ ಯಾರಿದ್ದಾರೆ ಎಂಬುದನ್ನು ಜನರಿಗೆ ತಿಳಿಸಲಿ. ಸಚಿವ ಮಾಂಕಾಳ, ಮುಖ್ಯಮಂತ್ರಿ ಸಿದ್ದರಾಮಯ್ಯ ದೇವಸ್ಥಾನ, ಮಠ ಕಟ್ಟಿಸಿದ್ದಾರೆ. ಹಿಂದುತ್ವದ ಹೆಸರಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ನೀವು ಎಷ್ಟಮಟ್ಟಿಗೆ ಹಿಂದೂಗಳ ಪರವಾಗಿದ್ದೀರಿ ಎನ್ನುವುದು ಜನರಿಗೆ ತಿಳಿಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯ ಕೆಟ್ಟ ರಾಜಕಾರಣವನ್ನು ಯಾರೂ ಸಹಿಸುವುದಿಲ್ಲ. ಕಾಂಗ್ರೆಸ್ 5 ಭರವಸೆಗಳನ್ನು ಜಾರಿಗೊಳಿಸಿದೆ. ನೀವು ಹೆಚ್ಚಿನ ಭರವಸೆಗಳನ್ನು ನೀಡಿ, ಅನುಷ್ಠಾನಗೊಳಿಸಿ ಮತ್ತು ಚುನಾವಣೆಗಳನ್ನು ಗೆಲ್ಲಿ, ನಮ್ಮ ಅಭ್ಯಂತರವಿಲ್ಲ. ಆದರೆ ಅದನ್ನು ಬಿಟ್ಟು ಊರಿಗೆ ಬೆಂಕಿ ಹಚ್ಚಬೇಡಿ ಎಂದರು.

ಜಿಪಂ ಮಾಜಿ ಅಧ್ಯಕ್ಷೆ ಜಯಶ್ರೀ ಮೊಗೇರ, ಉಪಾಧ್ಯಕ್ಷೆ ರಾಮಾ ಮೊಗೇರ, ಭಟ್ಕಳ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಯನಾ ನಾಯ್ಕ, ತಾಪಂ ಮಾಜಿ ಅಧ್ಯಕ್ಷ ಈಶ್ವರ ನಾಯ್ಕ, ಎಪಿಎಂಸಿ ಮಾಜಿ ಅಧ್ಯಕ್ಷ ಗೋಪಾಲ ನಾಯ್ಕ, ಭಾಸ್ಕರ ನಾಯ್ಕ, ಜಿಲ್ಲಾ ಕಾರ್ಯದರ್ಶಿ ವಿಷ್ಣು ದೇವಾಡಿಗ, ಅಬ್ದುಲ್ ಮಜೀದ್, ನಾರಾಯಣ ನಾಯ್ಕ. ಯಲ್ವಡಿಕಾವೂರು, ದುರ್ಗಾದಾಸ ಮೊಗೇರ, ಗಣಪತಿ ನಾಯ್ಕ, ಜತ್ತಪ್ಪ ನಾಯ್ಕ, ರಾಜೇಶ ನಾಯ್ಕ, ವೆಂಕಟ್ರಮಣ ನಾಯ್ಕ, ರಮೇಶ ನಾಯ್ಕ, ಈಶ್ವರ ಮೊಗೇರ, ಕೃಷ್ಣಕುಮಾರ ನಾಯ್ಕ, ನಾಗೇಂದ್ರ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News