ಬಿಜೆಪಿ ಸರ್ಕಾರ ಇದ್ದ ಬಸ್ಸುಗಳನ್ನು ಮಾರಿಕೊಂಡು ತಿಂದಿದೆ: ಸಚಿವ ಮಾಂಕಾಳ್ ವೈದ್ಯ ಆರೋಪ
ಭಟ್ಕಳ: ಬಿಜೆಪಿ ಸರ್ಕಾರ ಇದ್ದಾಗ ನಾಲ್ಕು ವರ್ಷದಲ್ಲಿ ಒಂದೇ ಒಂದು ಬಸ್ಸು ಬರಲಿಲ್ಲ. ಇದ್ದ ಎಲ್ಲ ಬಸ್ಸುಗಳನ್ನು ಮಾರಿ ಕೊಂಡಿದ್ದಾರೆ. ಹೀಗಾಗಿ ಜನರಿಗೆ ಓಡಾಡಲು ಬಸ್ಸುಗಳೇ ಇಲ್ಲದ ಹಾಗೆ ಮಾಡಿದ್ದಾರೆ ಎಂದು ಉ.ಕ.ಜಿಲ್ಲಾ ಉಸ್ತುವಾರಿ ಹಾಗೂ ಮೀನುಗಾರಿಕೆ, ಬಂದರು ಜಲಸಾರಿಗೆ ಸಚಿವ ಮಾಂಕಾಳ್ ವೈದ್ಯ ಆರೋಪಿಸಿದ್ದಾರೆ.
ಅವರು ಶನಿವಾರ ಸಂಜೆ ಭಟ್ಕಳದಲ್ಲಿ ಮುರುಡೇಶ್ವರ-ಬೆಂಗಳೂರು ಎರಡು ನೂತನ ನಾನ್ ಎಸಿ ಸ್ಲೀಪರ್ ಪಲ್ಲಕ್ಕಿ ಸಾರಿಗೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಕೇವಲ ಬೆಂಗಳೂರಿಗೆ ಹೋಗುವ ಬಸ್ಸು ಮಾತ್ರವಲ್ಲ ಹಳ್ಳಿ ಹಳ್ಳಿಗೂ ಹೋಗುವ ಬಸ್ಸುಗಳನ್ನು ನಿಲ್ಲಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಬಂದಾಗಿನಿಂದ ಸಾರಿಗೆ ಸಂಸ್ಥೆಗೆ ಶಕ್ತಿ ತುಂಬು ಕೆಲಸ ಮಾಡಿದೆ. ಇಂದಿನಿಂದ ರಾಜ್ಯದಲ್ಲಿ ಹೊಸ ಬಸ್ಸುಗಳು ಸಂಚರಿಸಲಿವೆ. 5 ಸಾವಿರ ಹೊಸ ಬಸ್ಸುಗಳು ರಾಜ್ಯಕ್ಕೆ ಬರಲಿವೆ. ಎಂದ ಅವರು ಹಂತ ಹಂತವಾಗಿ ಬಸ್ಸುಗಳು ಓಡಾಡಲಿದ್ದು ಉತ್ತರಕನ್ನಡ ಜಿಲ್ಲೆಗೆ ಇನ್ನೂ ೫೦ ನೂತನ ಬಸ್ಸುಗಳು ಬರಲಿವೆ ಎಂದರು.
ಭಟ್ಕಳ ಘಟಕದಿಂದ ಶನಿವಾರ ಆರಂಭಗೊಂಡಿರುವ ನೂತನ ನಾನ್ ಎಸಿ ಸ್ಲಿಪರ್ ಪಲ್ಲಕ್ಕಿ ಸಾರಿಗೆ ಬಸ್ಸು ಪ್ರತಿ ದಿನ ಸಂಜೆ 7.15ಕ್ಕೆ ಮುರುಢೇಶ್ವರದಿಂದ ಭಟ್ಕಳ, ಕೊಲ್ಲೂರು, ಶಿವಮೊಗ್ಗ ಮಾರ್ಗವಾಗಿ ಮರುದಿನ ಬೆಳಿಗ್ಗೆ 6ಗಂಟೆಗೆ ಬೆಂಗಳೂರು ತಲುಪಲಿದೆ. ಹಾಗೂ ಬೆಂಗಳೂರಿನಿಂದ ಪ್ರತಿದಿನ ಸಂಜೆ 7.15ಕ್ಕೆ ನಿರ್ಗಮಿಸಿ ಮುಂಜಾನೆ 6ಗಂಟೆಗೆ ಮುರುಡೇಶ್ವರ ತಲುಪಲಿದೆ.