ಭಟ್ಕಳದಲ್ಲಿ ಕ್ಯಾನ್ಸರ್ ಜಾಗೃತಿ ಜಾಥಾಕ್ಕೆ ಸಚಿವ ಮಾಂಕಾಳ್ ವೈದ್ಯ ಚಾಲನೆ

Update: 2024-02-05 17:05 GMT

ಭಟ್ಕಳ: ವಿಶ್ವ ಕ್ಯಾನ್ಸರ್ ದಿನಾಚರಣೆಯ ನಿಮಿತ್ತ ಭಟ್ಕಳದ ಫೆ.5 ರಂದು ಇಲ್ಲಿನ ತಾಲೂಕು ಸರಕಾರಿ ಆಸ್ಪತ್ರೆಯಿಂದ ಆಯೋಜಿಸಲಾಗಿದ್ದ ಕ್ಯಾನ್ಸರ್ ಜಾಗೃತಿ ಜಾಥಾವನ್ನು ಸಚಿವ ಮಾಂಕಾಳ್ ವೈದ್ಯ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ನನ್ನ ಮಾಹಿತಿಯ ಪ್ರಕಾರ ಭಟ್ಕಳ ತಾಲೂಕಿನಲ್ಲಿ ಶೇಕಡ ಮೂರಕ್ಕಿಂತ ಹೆಚ್ಚು ಜನರು ಕ್ಯಾನ್ಸರ್ ಪೀಡಿತರಾಗಿದ್ದು, ಹೆಚ್ಚಿನವರಿಗೆ ಕ್ಯಾನ್ಸರ್ ಇದೆ ಎಂಬುದೇ ಗೊತ್ತಿಲ್ಲ, ಇದರಿಂದ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ ಎಂದರು. ನಿಮಗೆ ಕ್ಯಾನ್ಸರ್ ಇರುವುದು ಗೊತ್ತಾದರೆ ವಾಸಿಯಾಗದ ಕಾಯಿಲೆ ಎಂದು ಭಯಪಡುವ ಅಗತ್ಯ ವಿಲ್ಲ, ಕ್ಯಾನ್ಸರ್ ಚಿಕಿತ್ಸೆ ಈಗ ಸಾಧ್ಯ, ಅದನ್ನು ನಿರ್ಲಕ್ಷಿಸದೆ ಸಕಾಲಿಕ ಚಿಕಿತ್ಸೆಗೆ ಗಮನ ಕೊಡಿ ಎಂದು ಸಾರ್ವಜನಿಕರಲ್ಲಿ ವಿನಂತಿಸಿಕೊಂಡರು.

ತಾಲೂಕು ಆರೋಗ್ಯಾಧಿಕಾರಿ ಡಾ.ಸವಿತಾ ಕಾಮತ್ ಮಾತನಾಡಿ, ಕಳೆದ ದಶಕಗಳಲ್ಲಿ ಕ್ಯಾನ್ಸರ್ ಒಂದು ದೊಡ್ಡ ಆರೋಗ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಆರಂಭಿಕ ಹಂತಗಳಲ್ಲಿ, ಗಮನಾರ್ಹ ಲಕ್ಷಣಗಳು ಕಾಣಿಸಿಕೊಳ್ಳುವ ಮೊದಲು ಪತ್ತೆಯಾಗದೆ, ಹರಡುತ್ತದೆ. ಈ ಮಾರಣಾಂತಿಕ ರೋಗವನ್ನು ತಡೆಗಟ್ಟಲು ಆರಂಭಿಕ ಪತ್ತೆ ಅತ್ಯಗತ್ಯ ಎಂದರು.

ಸಾರ್ವಜನಿಕರಲ್ಲಿ ಕ್ಯಾನ್ಸರ್‌ ಕುರಿತು ಜಾಗೃತಿ ಮೂಡಿಸಲು ಸರ್ಕಾರಿ ಆಸ್ಪತ್ರೆಯಿಂದ ಸಂತೆ ಮಾರ್ಕೆಟ್‌ ರಸ್ತೆ ಮಾರ್ಗವಾಗಿ ಶಂಶುದ್ದೀನ್‌ ವೃತ್ತದ ವರೆಗೆ ಜಾಥಾ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ತಾಲೂಕಾ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ (ಆರೋಗ್ಯ ರಕ್ಷಣಾ ಸಮಿತಿ) ನಝೀರ್ ಖಾಸಿಂಜೀ, ಡಾ.ಜಹೀರ್ ಕೋಲಾ, ರಾಜೇಶ್ ನಾಯ್ಕ್, ಸುಧಾಕರ ನಾಯ್ಕ್ ಹಾಗೂ ಸಮಾಜ ಸೇವಕ ಟಾಪ್ ನಿಸಾರ್ ಆಹಮದ್ ರುಕ್ನುದ್ದೀನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News