ಮಾಧ್ಯಮಗಳ ವಿರುದ್ಧ ಅವಹೇಳನಕಾರಿ ಹೇಳಿಕೆ: ಸಂಸದ ಅನಂತ್ ಕುಮಾರ್ ಹೆಗಡೆಯಿಂದ ಮತ್ತೊಂದು ವಿವಾದ
ಕಾರವಾರ : ಸಂವಿಧಾನ ತಿದ್ದುಪಡಿಗೆ ಬಿಜೆಪಿ 400 ಸೀಟು ಗೆಲ್ಲಬೇಕು ಎಂದು ಹೇಳಿ ವಿವಾದ ಹುಟ್ಟು ಹಾಕಿದ್ದ ಸಂಸದ ಅನಂತ್ ಕುಮಾರ್ ಹೆಗಡೆ ಸೋಮವಾರ ಮಾಧ್ಯಮಗಳ ವಿರುದ್ಧವೂ ಅವಹೇಳನಕಾರಿ ಹೇಳಿಕೆ ನೀಡಿ ಮತ್ತೊಂದು ವಿವಾದ ಸೃಷ್ಟಿಸಿಕೊಂಡಿದ್ದಾರೆ.
ಸೋಮವಾರ ಅಂಕೋಲಾ ತಾಲೂಕಿನ ಹಿಲ್ಲೂರಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಆನೆ ನಡೆದು ಹೋಗುವಾಗ ನಾಯಿಗಳು ಬೊಗಳುವುದು ಸಹಜ. ಅವು ಬೊಗಳಿದರೆ ಮಾತ್ರ ಆನೆಗೆ ಗತ್ತು ಎಂದು ತಮ್ಮನ್ನು ಆನೆಗೆ ಹಾಗೂ ಮಾಧ್ಯಮಗಳನ್ನು ನಾಯಿಗೆ ಹೋಲಿಕೆ ಮಾಡಿರುವುದಾಗಿ ಆರೋಪಗಳು ಕೇಳಿ ಬಂದಿವೆ.
ವಿವಾದ ಸೃಷ್ಟಿಯಾದರೂ ದೃಢವಾಗಿ ನಿಲ್ಲುವುದು ನಿಜವಾದ ನಾಯಕತ್ವ. ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಗೆ ಕಾರ್ಯಕರ್ತರು ತಲೆಕೆಡಿಸಿಕೊಳ್ಳಬಾರದು. ಬಿಜೆಪಿ ಸಶಕ್ತ ನಾಯಕತ್ವ ಹೊಂದಿದೆ. ಪ್ರತಿ ಐದು ವರ್ಷಕ್ಕೊಮ್ಮೆ ಬಿಜೆಪಿ ಗೆಲ್ಲುತ್ತಲೇ ಇರಬೇಕು. ವಿವಾದ ಸೃಷ್ಟಿಯಾಗಿದೆ ಎಂದು ಕಾರ್ಯಕರ್ತರು ವಿಚಲಿತರಾದರೆ ನಾಯಕತ್ವ ಅಲುಗಾಡುತ್ತದೆ. ಹೀಗಾಗಿ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುವ ವಿಷಯಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಅನಂತ್ ಕುಮಾರ್ ಹೆಗಡೆ ಹೇಳಿರುವುದಾಗಿ ವರದಿಯಾಗಿದೆ.