ಅಂಜುಮನ್ ಮಹಾವಿದ್ಯಾಲಯದ 'ಸ್ವಚ್ಛ ಸಾಗರ್, ಸುರಕ್ಷಿತ ಸಾಗರ್' ಕಾರ್ಯಕ್ರಮ

Update: 2024-10-02 17:11 GMT

ಭಟ್ಕಳ, ಅ.2: ಅಂಜುಮನ್ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ (NSS) ಘಟಕ ಮತ್ತು ಎನ್.ಸಿ.ಸಿ ಘಟಕವು 'ಸ್ವಚ್ಛ ಸಾಗರ್, ಸುರಕ್ಷಿತ ಸಾಗರ್' ಕಾರ್ಯಕ್ರಮವನ್ನು ಭಟ್ಕಳದ ಮಾವಿನಕುರ್ವೆ ಕಡಲ ತೀರದಲ್ಲಿ ಯಶಸ್ವಿಯಾಗಿ ನಡೆಸಿತು.

ಈ ಕಾರ್ಯಕ್ರಮವು ಕೇಂದ್ರ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಇಲಾಖೆಯ ನಿರ್ದೇಶನದಂತೆ, ಮಾವಿನಕುರ್ವೆ ಗ್ರಾಮಪಂಚಾಯತದ ಸಹಕಾರದೊಂದಿಗೆ ಅರ್ಥಪೂರ್ಣವಾಗಿ ನೆರವೇರಿತು.

'ಸ್ವಚ್ಛತಾ ಹಿ ಸೇವಾ' ಪಾಕ್ಷಿಕದ ಕೊನೆಯ ದಿನದ ಅಂಗವಾಗಿ ನಡೆದ ಈ ಬೃಹತ್ ಕಾರ್ಯಕ್ರಮದಲ್ಲಿ ಅಂಜುಮನ್ ಮಹಾವಿದ್ಯಾಲಯದ ಎನ್.ಎಸ್.ಎಸ್. ಮತ್ತು ಎನ್.ಸಿ.ಸಿ. ಸ್ವಯಂಸೇವಕರು, ಕಾಲೇಜಿನ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಿಬ್ಬಂದಿ ವರ್ಗ ಪಾಲ್ಗೊಂಡು, ಕಡಲ ತೀರದ ವಿವಿಧೆಡೆ ರಾಶಿಯಾಗಿ ಬಿದ್ದ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಇತರ ಕಸಗಳನ್ನು ಸಂಗ್ರಹಿಸಿ, ಸಮುದ್ರತೀರವನ್ನು ಸ್ವಚ್ಛಗೊಳಿಸಿದರು.

ಮಾವಿನಕುರ್ವೆ ಗ್ರಾಮಪಂಚಾಯತದ ಸಹಕಾರದಿಂದ ಈ ಕಾರ್ಯಕ್ರಮವು ಮತ್ತಷ್ಟು ಯಶಸ್ವಿಯಾಯಿತು. ವಿದ್ಯಾರ್ಥಿಗಳು ನಿರ್ಧರಿಸಿದ ಮಿತಿಗಿಂತ ಹೆಚ್ಚಾಗಿ ತ್ಯಾಜ್ಯ ಸಂಗ್ರಹಿಸುವಲ್ಲಿ ತೊಡಗಿದ್ದರು. ಕಸವನ್ನು ಸಂಗ್ರಹಿಸಿ ವಿಲೇವಾರಿ ಮಾಡುವ ಕಾರ್ಯವನ್ನು ಗ್ರಾಮಪಂಚಾಯತದವರು ಸಮರ್ಪಕವಾಗಿ ನಿರ್ವಹಿಸಿದರು.

ಈ ಸಂದರ್ಭ ಎನ್‌ಎಸ್‌ಎಸ್ ಅಧಿಕಾರಿ ಪ್ರೊ. ಆರ್. ಎಸ್. ನಾಯಕ ಅವರು ಸ್ವಚ್ಛತೆಯ ಮಹತ್ವವನ್ನು ಪ್ರತಿಪಾದಿಸಿದರು. ಮಾವಿನಕುರ್ವೆ ಗ್ರಾಮಪಂಚಾಯತದ ಕಾರ್ಯಾಲಯದಲ್ಲಿ ನಡೆದ ಗಾಂಧೀ ಜಯಂತಿ ಸಮಾರಂಭದಲ್ಲಿ ಎನ್‌ಎಸ್‌ಎಸ್ ಸ್ವಯಂಸೇವಕರು ಮತ್ತು ಅಧ್ಯಾಪಕರು ಭಾಗವಹಿಸಿದ್ದು, ಕಾರ್ಯಕ್ರಮದ ವಿಶೇಷತೆಯಾಗಿದೆ.

ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ. ಕೆ. ಶೇಖ್ ಮತ್ತು ಗ್ರಾಮಪಂಚಾಯತದ ಅಧಿಕಾರಿಗಳು ಗಾಂಧೀಜಿಯ ಸಂದೇಶಗಳನ್ನು ತಿಳಿಸುವ, ಪರಿಸರ ಶುದ್ಧತೆಯ ಬಗ್ಗೆ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವೆಂದು ಉಪದೇಶಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News