ಮೃಗತ್ವ ನಿವಾರಣೆ ಮಾಡಿ ಮನುಷ್ಯತ್ವ ಬೆಳೆಸುವ ಕಾರ್ಯ ಪ್ರತಿಯೊಬ್ಬರಿಂದ ಆಗಬೇಕಿದೆ: ಹಿರಿಯ ಸಾಹಿತಿ ಬಿ.ಟಿ.ಲಲಿತಾ ನಾಯಕ
ಶಿರಸಿ: ಬ್ರಿಟೀಷರಿಂದ ಬಂದ ಗುಲಾಮಿ ಮನಸ್ಥಿತಿ ಇಂದಿಗೂ ಮುಂದುವರಿದ ಈಗಿನ ಕಾಲಘಟ್ಟದಲ್ಲಿ ಮೃಗತ್ವ ನಿವಾರಣೆ ಮಾಡಿ ಮನುಷ್ಯತ್ವ ಬೆಳೆಸುವ ಕಾರ್ಯ ಪ್ರತಿಯೊಬ್ಬರಿಂದ ಆಗಬೇಕಿದೆ ಎಂದು ಹಿರಿಯ ಸಾಹಿತಿ ಬಿ.ಟಿ.ಲಲಿತಾ ನಾಯಕ ಹೇಳಿದರು.
ಶಿರಸಿ ನಗರದ ರಂಗಧಾಮದಲ್ಲಿ ಆಯೋಜಿಸಿರುವ ಉತ್ತರ ಕನ್ನಡ ಜಿಲ್ಲಾ 24ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬ್ರಿಟಿಷ್ ಆಡಳಿತ ಮುಕ್ತಾಯಗೊಂಡರೂ ಗುಲಾಮಿ ಮನಸ್ಥಿತಿ ಇಂದಿಗೂ ಮುಂದುವರೆದಿದೆ. ಪ್ರತಿಯೊಬ್ಬನ ತಲೆಯಿಂದ ಗುಲಾಮಿ ಮನಸ್ಥಿತಿಯನ್ನು ತೆಗೆದು ಹಾಕಬೇಕು. ಎಲ್ಲ ಮನುಷ್ಯನೂ ಸ್ವಾಭಿಮಾನದಿಂದ ಬದುಕಬೇಕು. ಮೋಸಕ್ಕೆ ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲದ ನಾಡನ್ನು ಕಟ್ಟಲು ನಾವು ಶ್ರಮಿಸಬೇಕು. ನಾಡನ್ನು ಭ್ರಷ್ಟಾಚಾರ, ಭ್ರಮೆಯಿಂದ ಮುಕ್ತ ಮಾಡ ಬೇಕು. ಪಾಶ್ಚಾತ್ಯ ಹಾಗೂ ಸಾಂಪ್ರದಾಯಿಕ ಸಂಸ್ಕೃತಿ ನಡುವೆ ಸಮಾಜ ಕಟ್ಟುವ ಕೆಲಸ ಆಗಬೇಕು. ಮೃಗತ್ವ ಕಳೆದು ಮನುಷ್ಯತ್ವ ಹೆಚ್ಚಿಸಿಕೊಳ್ಳುವತ್ತ ಚಿಂತನೆ ನಡೆಸಬೇಕಿದೆ ಎಂದರು.
ಕನ್ನಡ ನಾಡನ್ನು ಮನೆ ಎಂದು ಪರಿಗಣಿಸಬೇಕು. ಆಗ ಮಾತ್ರ ಭಾಷೆ ಗಟ್ಟಿಯಾಗುತ್ತದೆ ಎಂದ ಅವರು, ಸ್ವಾತಂತ್ರ್ಯದ ಜವಾಬ್ದಾರಿ ಹೊರಲು ಶಕ್ತಿ ಬೇಕು. ಅಂಥ ಶಕ್ತಿ ಬರಲು ಉತ್ತಮ ಸಾಹಿತ್ಯ ರಚನೆ ಆಗಬೇಕು ಎಂದು ಹೇಳಿದರು. ವಿವಿಧ ಲೇಖಕರ ಪುಸ್ತಕ ಬಿಡುಗಡೆ ಮಾಡಿದ ಶಾಸಕ ಶಿವರಾಮ ಹೆಬ್ಬಾರ್ ಮಾತನಾಡಿ, ಸಾಹಿತ್ಯ, ಕನ್ನಡ ಭಾಷೆಯನ್ನು ಜೀವಂತವಾಗಿಟ್ಟ ಜಿಲ್ಲೆ ಇದಾಗಿದೆ. ದಿನಕರ ದೇಸಾಯಿ ಅವರು ಅಕ್ಷರ ಕ್ರಾಂತಿ ಮಾಡಿದ ಜಿಲ್ಲೆ ಇದಾಗಿದೆ. ಎಲ್ಲ ಭಾಷೆಯನ್ನೂ ಕನ್ನಡಿಗರು ಪ್ರೀತಿಸುತ್ತಾರೆ. ಇದರ ಜೊತೆ ಕನ್ನಡ ಭಾಷೆಯನ್ನೂ ಬಳಸಿ ಬೆಳೆಸುವ ಕಾರ್ಯ ಆಗಬೇಕಿದೆ ಎಂದರು. ಎಲ್ಲ ಕ್ಷೇತ್ರಗಳು ಸಂಪಾದನೆ ಮಾಡುವ ಕ್ಷೇತ್ರಗಳಾಗುತ್ತಿದ್ದು, ಸಾಹಿತ್ಯ ಕ್ಷೇತ್ರ ಕೂಡ ಇದಕ್ಕೆ ಹೊರತಾಗಿಲ್ಲ. ಇಂಥ ಮನಸ್ಥಿತಿ ದೂರಾಗಬೇಕು ಎಂದು ಹೇಳಿದರು.
ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಸಾಹಿತ್ಯ ಶ್ರೀಮಂತಗೊಳಿಸಲು ಜಿಲ್ಲೆಯ ಸಾಹಿತಿಗಳ ಕೊಡುಗೆ ಅಪಾರವಿದೆ. ವಿಚಾರವಂತ ಸಾಹಿತ್ಯಕ್ಕೆ ಜಿಲ್ಲೆ ಹೆಸರಾಗಿದೆ. ಕೇವಲ ಕನ್ನಡ ಭಾಷೆ ಬಳಸುವ ಯಕ್ಷಗಾನ ಕೂಡ ನಮ್ಮದೇ ವಿಶೇಷವಾಗಿದೆ. ಕನ್ನಡಕ್ಕೆ ಅಗ್ರ ಸ್ಥಾನ ಎಂಬುದನ್ನು ಯಾರೂ ಮರೆಯಬಾರದು. ಹಾಗಾಗಿ ಯುವ ಪೀಳಿಗೆಗೆ ಕನ್ನಡ ಭಾಷೆ ಬಳಕೆಗೆ ಪ್ರೋತ್ಸಾಹಿಸಬೇಕಿದೆ. ಎಲ್ಲ ಶಾಲೆಗಳಲ್ಲಿ ಕನ್ನಡ ಪ್ರಥಮ ಭಾಷೆಯಾಗಿ ಬಳಸಲು ಸರ್ಕಾರ ಕ್ರಮವಹಿಸಬೇಕು. ಸಮಾಜ ಬದಲಾವಣೆಯಲ್ಲಿ ಸಾಹಿತ್ಯದ ಪಾಲು ದೊಡ್ಡದಿರಬೇಕು ಎಂದು ಹೇಳಿದರು.
ವಿಮರ್ಶಕ ಆರ್.ಡಿ.ಹೆಗಡೆ ಆಲ್ಮನೆ ಗೌರವಾಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಸರ್ವಾಧ್ಯಕ್ಷ ಶ್ರೀಪಾದ ಶೆಟ್ಟಿ, ಹಿರಿಯ ಸಾಹಿತಿ ಭಾಗೀರಥಿ ಹೆಗಡೆ, ಜಾನಪದ ವಿದ್ವಾಂಸ ಎನ್.ಆರ್.ನಾಯಕ, ಸಾಹಿತಿ ಶಾಂತಿ ನಾಯಕ, ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ ಭಟ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಉಪವಿಭಾಗಾಧಿಕಾರಿ ಕೆ.ಕಾವ್ಯಾರಾಣಿ, ಕನ್ನಡ ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ಮಂಗಲಾ ನಾಯ್ಕ, ಡಿಡಿಪಿಐ ಬಸವರಾಜ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ, ಸಿಸಿಎಫ್ ಕೆ.ವಿ.ವಸಂತ ರೆಡ್ಡಿ, ಶಿರಸಿ ರೋಟರಿ ಅಧ್ಯಕ್ಷೆ ಡಾ.ಸುಮನ್ , ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಚಾರ್ಜ್ ಫರ್ನಾಂಡಿಸ್, ಇತರರಿದ್ದರು.
ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್.ವಾಸರೆ ಪ್ರಾಸ್ತಾವಿಕ ಮಾತನಾಡಿದರು. ರೇಷ್ಮಾ ಎಂ ನಾಯ್ಕ ಪುಸ್ತಕ ಹಾಗೂ ನಾಗಪತಿ ಹೆಗಡೆ ವೇದಿಕೆ, ದ್ವಾರಗಳನ್ನು ಪರಿಚಯಿಸಿದರು. ಪರಿಷತ್ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಪಿ.ಆರ್.ನಾಯ್ಕ ಸ್ವಾಗತಿಸಿದರು. ಕೆ.ಎನ್.ಹೊಸಮನಿ, ಭವ್ಯಾ ಹಳೆಯೂರು ನಿರೂಪಿಸಿದರು. ಸಾಹಿತ್ಯ ಪರಿಷತ್ ಶಿರಸಿ ತಾಲೂಕು ಘಟಕದ ಅಧ್ಯಕ್ಷ ಸುಬ್ರಾಯ ಭಟ್ ಬಕ್ಕಳ ವಂದಿಸಿದರು.