ಭಟ್ಕಳದ 40ಕ್ಕೂ ಅಧಿಕ ಭಾರತೀಯರು ಇಸ್ರೇಲ್‌ನಲ್ಲಿ ಸುರಕ್ಷಿತ: ವರದಿ

Update: 2023-10-10 14:04 GMT

ಭಟ್ಕಳ: ಇಸ್ರೇಲ್‌ನಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಭಟ್ಕಳದ 40ಕ್ಕೂ ಅಧಿಕ ಭಾರತೀಯರು ಅಪಾಯಕ್ಕೆ ಸಿಲುಕಿ ದ್ದರು. ಆದರೆ ಭಾರತೀಯ ರಾಯಭಾರಿ ಕಚೇರಿಯ ಸಮಯೋಚಿತ ಕ್ರಮದಿಂದಾಗಿ ಅವರೆಲ್ಲರೂ ಸುರಕ್ಷಿತವಾಗಿರುವುದಾಗಿ ತಿಳಿದು ಬಂದಿದೆ.

ಇಸ್ರೇಲ್‌ನಲ್ಲಿ ನೆಲೆಸಿರುವ ಭಟ್ಕಳದ ಮುಂಡಳ್ಳಿಯ ಭಾಗದ 12 ಮಂದಿ ಮತ್ತು ಮುರುಡೇಶ್ವರ ಬಳಿಯ 29 ಮಂದಿ ಈವರೆಗೆ ಭಾರತೀಯ ರಾಯಭಾರಿ ಕಚೇರಿಯಿಂದ ಸಂಪರ್ಕಕ್ಕೆ ಬಂದಿದ್ದಾರೆ.

"ಘಟನೆಯ ನಡೆದ ದಿನದಂದು ನಾವು ಜೀವ ಭಯದಲ್ಲಿಯೇ ಬದುಕಿದ್ದೇವೆ. ಘಟನೆ ನಡೆದ ಜಾಗದ ಸಮೀಪದಲ್ಲಿಯೇ ನಾವು ಕೆಲಸಕ್ಕಾಗಿ ನೆಲೆಸಿದ್ದ ಪ್ರದೇಶವಿದ್ದು ಯಾವ ಸಂದರ್ಭದಲ್ಲಿ ಪರಿಸ್ಥಿತಿ ಏನಾಗಲಿದೆ ಎಂಬ ಭಯ ನಮ್ಮಲ್ಲಿದೆ. ಆದರೆ ಭಾರತೀಯ ರಾಯಭಾರಿ ಕಚೇರಿಯಿಂದ ಭಾರತೀಯರನ್ನು ಸಂಪರ್ಕಿಸುವ ಕಾರ್ಯ ಆರಂಭವಾಗಿದೆ ಎಂಬ ಮಾಹಿತಿಯ ಮೇಲೆ ನಮ್ಮಿಬ್ಬರು ಸಹ ಕಚೇರಿಯ ಸಿಬ್ಬಂದಿಗಳು ಸಂಪರ್ಕಿಸಿ ನಮ್ಮ ಸುರಕ್ಷತೆಯ ಬಗ್ಗೆ ಮಾಹಿತಿ ಪಡೆದುಕೊಂಡರು," ಎಂದು ಇಸ್ರೇಲ್‌ನಲ್ಲಿ ನೆಲೆಸಿರುವ ಸುನೀಲ ಎಫ್. ಗೋಮ್ಸ್ ಮತ್ತು ಡಾಲ್ಪಿ ಗೋಮ್ಸ್ ಭಟ್ಕಳದಲ್ಲಿರುವ ತಮ್ಮ ಕುಟುಂಬದೊಂದಿಗೆ ವಿಡಿಯೋ ಕರೆ ಮಾಢಿ ಮಾಹಿತಿ ಹಂಚಿಕೊಂಡಿದ್ದಾರೆ.

"ಅನಾವಶ್ಯಕವಾಗಿ ಯಾರು ಸಹ ಓಡಾಟ ಮಾಡಬಾರದು ಎಂಬ ಕಠಿಣ ಆದೇಶವಿದ್ದು, ಅವಶ್ಯಕತೆಯಿದ್ದಲ್ಲಿ ಮಾತ್ರ ಓಡಾಡಲು ಅನುಮತಿ ನೀಡಿದ್ದಾರೆ. ಕೆಲವೊಂದು ಪ್ರದೇಶದಲ್ಲಿ ಅಂಗಡಿ ಮುಂಗಟ್ಟುಗಳು ತೆರೆದಿಡಲಾಗಿದ್ದು, ಆಹಾರ ಹಾಗೂ ಇನ್ನಿತರ ವಸ್ತುಗಳ ಖರೀದಿಗೆ ತೆರಳಬಹುದಾಗಿದೆ. ಸಮಸ್ಯೆಯಿದ್ದಲ್ಲಿ ರಾಯಭಾರಿ ಕಛೇರಿಗೆ ಮಾಹಿತಿ ತಿಳಿಸಿದ್ದಲ್ಲಿ ನಿಮ್ಮನ್ನು ಸಂಪರ್ಕಿಸಲಿದ್ದೇವೆ. ಸೈರನ್ ಮೂಲಕ ಜನರು ಸುರಕ್ಷಿತ ಪ್ರದೇಶದಲ್ಲಿ ಇರುವಂತೆ ಮುಂಜಾಗೃತೆಗಾಗಿ ವ್ಯವಸ್ಥೆ ಮಾಡಲಾಗಿದ್ದು, ಜನರು ಸರಕಾರದ ಆದೇಶದಂತೆ ಪಾಲನೆ ಮಾಡಬೇಕು," ಎಂದು ಅವರು ಹೇಳಿದರು.

"ಇಸ್ರೇಲನಲ್ಲಿರುವ ನಮ್ಮ ರಕ್ಷಣೆಗೆ ಸುರಕ್ಷತೆಗಾಗಿ ಭಾರತೀಯ ರಾಯಭಾರಿ ಕಚೇರಿಯು ನಿರಂತರ ಸಂಪರ್ಕದಲ್ಲಿದ್ದು ಅವರಿಗೆ ನಾವೆಲ್ಲರು ಚಿರಋಣಿಯಾಗಿದ್ದೇವೆ. ಸದ್ಯ ಕನ್ನಡಿಗರೆಲ್ಲರು ಒಂದು ವಾಟ್ಸಾಪ್ ಗ್ರೂಪ ಮಾಡಿದ್ದು ನಾವೆಲ್ಲರು ನಿರಂತರ ಸಂಪರ್ಕದಲ್ಲಿದ್ದು ಸುರಕ್ಷಿತರಾಗಿದ್ದೇವೆ," ಎಂದು ಅವರು ಹೇಳಿದರು.

ಭಟ್ಕಳದ ಕುಟುಂಬಗಳಿಗೆ ನೆಮ್ಮದಿ ಇಸ್ರೇಲ್‌ನಲ್ಲಿರುವ ತಮ್ಮ ಕುಟುಂಬಗಳ ಬಗ್ಗೆ ಭಯದಲ್ಲಿದ್ದ ಭಟ್ಕಳದ ಕುಟುಂಬಗಳಿಗೆ ಈ ಸುದ್ದಿ ನೆಮ್ಮದಿಯನ್ನು ನೀಡಿದೆ. "ಯುದ್ಧದ ಬಗ್ಗೆ ತಿಳಿದಾಗ ನಮಗೆ ತುಂಬಾ ಚಿಂತೆಯಾಗಿತ್ತು. ಆದರೆ ಭಾರತೀಯ ರಾಯಭಾರಿ ಕಚೇರಿಯವರು ನಮ್ಮ ಕುಟುಂಬದವರನ್ನು ಸಂಪರ್ಕಿಸಿ ಸುರಕ್ಷತೆ ಬಗ್ಗೆ ಖಚಿತಪಡಿಸಿಕೊಂಡರು. ಅವರ ಕಾರ್ಯಕ್ಕೆ ನಾವು ಧನ್ಯವಾದಗಳನ್ನು ತಿಳಿಸುತ್ತೇವೆ" ಎಂದು ಭಟ್ಕಳದ ಕೆಲವು ಕುಟುಂಬದವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News