ನಿಯಮ ಉಲ್ಲಂಘನೆ: ಭಟ್ಕಳ ಪಿಎಸ್‌ಐ ಯಲ್ಲಪ್ಪ ಮಾದರ್ ಅಮಾನತು

Update: 2024-08-26 11:36 GMT

ಭಟ್ಕಳ: ವಾಹನ ಕಾಯ್ದೆಯಡಿ ದಂಡ ವಸೂಲು ಮಾಡುವಾಗ ಇಲಾಖಾ ನಿಯಮ ಉಲ್ಲಂಘನೆ ಮಾಡಿದ ಆರೋಪದಲ್ಲಿ ಭಟ್ಕಳ ನಗರ ಠಾಣೆ ಪಿಎಸ್‌ಐ ಎಲ್ಲಪ್ಪ ಮಾದಾರ್ ನನ್ನು ತಕ್ಷಣವೇ ಜಾರಿಗೆ ಬರುವಂತೆ ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ ಎಂದು ಉ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ತಿಳಿಸಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಮೋಟಾರು ವಾಹನ ಕಾಯಿದೆ ಅಡಿಯಲ್ಲಿ ನಗರ ಪೊಲೀಸ್ ಠಾಣೆಯ ಎದುರಿನ ರಸ್ತೆಯಲ್ಲಿ ವಾಹನಗಳನ್ನು ತಪಾಸಣೆ ಮಾಡಿ ಹೆಲ್ಮೇಟ್ ಮತ್ತು ಅಗತ್ಯ ದಾಖಲೆಗಳಿಲ್ಲದ ಬೈಕ್ ಸವಾರರಿಗೆ ದಂಡ ವಸೂಲು ಮಾಡುತ್ತಿದ್ದ ನಗರ ಠಾಣೆಯ ಪಿ.ಎಸ್.ಐ ಎಲ್ಲಪ್ಪ ಮಾದರ್ ದಂಡ ವಸೂಲಿಸಿ ಹಣವನ್ನು ಚಿನ್ನದ ವ್ಯಾಪಾರಿಯ ಖಾತೆಗೆ ವರ್ಗಾಯಿಸುತ್ತಿದ್ದ ಬಗ್ಗೆ ಸ್ಥಳೀಯ ವರದಿಗಾರರು ಸಾಕ್ಷಿ ಸಮೇತ ವರದಿ ಮಾಡಿದ್ದು ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಅವರು, ಪ್ರಕರಣವನ್ನು ಭಟ್ಕಳ ಪೊಲೀಸ್ ಉಪಾಧೀಕ್ಷಕರಿಗೆ ವರ್ಗಾಯಿಸಿ ಪರಿಶೀಲಿಸುವಂತೆ ಆದೇಶಸಿದ್ದರು. ಈ ಕುರಿತು ಪರಿಶೀಲನೆ ನಡೆಸಿದ ಉಪಾಧೀಕ್ಷಕರು ಜಿಲ್ಲಾ ವರಿಷ್ಠರಿಗೆ ವರದಿಯನ್ನು ನೀಡಿದ್ದರು. ಇವರ ವರದಿಯಲ್ಲಿ ಪಿ.ಎಸ್.ಐ ಎಲ್ಲಪ್ಪ ಮಾದಾರ್ ಇಲಾಖಾ ನಿಯಮಗಳನ್ನು ಉಲ್ಲಂಘಿಸಿದ್ದು ಕಂಡು ಬಂದ ಹಿನ್ನೆಲೆಯಲ್ಲಿ, ಇಲಾಖಾ ವಿಚಾರಣೆ ಬಾಕಿಯಿರಿಸಿ ತಕ್ಷಣ ಜಾರಿಗೆ ಬರುವಂತೆ ಕರ್ತವ್ಯದಿಂದ ಅಮಾನತುಗೊಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News