ಹೈನುಗಾರಿಕೆ ಮೂಲಕ ಕರ್ನಾಟಕದಲ್ಲಿ ಬದುಕು ಕಟ್ಟಿಕೊಂಡ ತಮಿಳುನಾಡಿನ ರೈತ

ರೈತ ಸೋಮಸುಂದರಂ ಜಮೀನಿಗೆ ಬೇರೆ ಜಿಲ್ಲೆಗಳ ರೈತರು ಭೇಟಿ ನೀಡಿ ಅಧ್ಯಯನ ಮಾಡುತ್ತಿದ್ದಾರೆ. ಹಸು ಸಾಕಣೆಯ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ. ಹೊಸದಾಗಿ ಹೈನುಗಾರಿಕೆ ಮಾಡಬೇಕೆಂದು ಬರುವ ಮಂಡ್ಯ ಜಿಲ್ಲೆ, ಚಾಮರಾಜನಗರ ಜಿಲ್ಲೆಯ ಆಸಕ್ತರಿಗೆ ಸಲಹೆ ನೀಡುತ್ತಿದ್ದಾರೆ. ಅನವಶ್ಯವಾಗಿ ಹಾಕುವ ಬಂಡವಾಳ, ಖರ್ಚಿನ ಬಗ್ಗೆ ತಿಳಿಸಿಕೊಡುತ್ತಿದ್ದಾರೆ. ಅಧ್ಯಯನಕ್ಕಾಗಿ ಬಂದ ರೈತರು ದಿನವಿಡೀ ಜಮೀನಿನಲ್ಲೇ ಇದ್ದುಕೊಂಡು ಸೋಮಸುಂದರಂ ಅವರ ಹಸು ಸಾಕಣೆ, ಹಾಲು ಕರೆಯುವುದು ಮತ್ತು ಇನ್ನಿತರ ಕೌಶಲಗಳನ್ನು ತಿಳಿದುಕೊಳ್ಳುತ್ತಿದ್ದಾರೆ.

Update: 2024-09-30 07:03 GMT

 ಚಾಮರಾಜನಗರ: ತಮಿಳುನಾಡಿನಲ್ಲಿದ್ದಾಗ ಸಾಲ ಹೆಚ್ಚಾಗಿತ್ತು. ಅಲ್ಲಿ ಊರು ಬಿಟ್ಟು ಬರುವ ಪರಿಸ್ಥಿತಿ ನಿರ್ಮಾಣವಾಯಿತು. ತಮಿಳುನಾಡಿನಿಂದ ಕರ್ನಾಟಕದ ಚಾಮರಾಜನಗರ ತಾಲೂಕಿನ ಮಲ್ಲೇದೇವನಹಳ್ಳಿಗೆ ಬಂದ ಮೇಲೆ ಹೈನುಗಾರಿಕೆ ಬದುಕನ್ನು ಬದಲಿಸಿತು. ತಮಿಳುನಾಡಿನಲ್ಲಿದ್ದ ಸಾಲವನ್ನು ಕರ್ನಾಟಕದಲ್ಲಿ ಹೈನುಗಾರಿಕೆ ಮಾಡಿ ಸಾಲ ತೀರಿಸಿ ಕಷ್ಟಗಳೆಲ್ಲವೂ ಕಳೆದು ಹೈನೋದ್ಯಮಕ್ಕೆ ಮಾದರಿಯಾಗಿದೆ ತಮಿಳುನಾಡಿನ ರೈತ ಕುಟುಂಬ.

ಚಾಮರಾಜನಗರ ತಾಲೂಕಿನ ಮಲ್ಲೇದೇವನಹಳ್ಳಿಯಲ್ಲಿ ಮಾದರಿ ಎನ್ನುವಂತೆ ಹಸು ಸಾಕಣೆ ಮಾಡುತ್ತಿದ್ದಾರೆ ತಮಿಳುನಾಡು ಮೂಲದ ಸೋಮ ಸುಂದರಂ.

ತಮಿಳುನಾಡಿನ ಮೂಲದ ಎಂ.ಸೋಮಸುಂದರಂ 28 ವರ್ಷಗಳ ಹಿಂದೆ ಕಷ್ಟಗಳೇ ಹಾಸು ಹೊದ್ದು ಮಲಗಿದ್ದಾಗ ಅಲ್ಲಿಂದ ಕರ್ನಾಟಕಕ್ಕೆ ಬಂದರು. ಬೇರೆಯವರ ಜಮೀನಿನಲ್ಲಿ ಕೂಲಿ ಮಾಡುತ್ತಾ, ಹಣ ಕೂಡಿಟ್ಟು, ಬಡ್ಡಿ ಸಾಲ ಮಾಡಿ ಭೂಮಿಯನ್ನು ಗುತ್ತಿಗೆ ತೆಗೆದುಕೊಂಡು ಕೃಷಿ ಮಾಡುವಷ್ಟು ಶಕ್ತರಾದರು. ಇದೇ ಸಂದರ್ಭದಲ್ಲಿ 1 ಹಸು ಖರೀದಿಸಿ ಹೈನುಗಾರಿಕೆ ಶುರು ಮಾಡಿದರು. ಮತ್ತಷ್ಟು ಹಸುಗಳ ಖರೀದಿ, ಕರುಗಳ ಹುಟ್ಟಿದ್ದರಿಂದ ಹೈನೋದ್ಯಮ ದೊಡ್ಡದಾಗುತ್ತಾ ಬಂತು.

ಪ್ರಸ್ತುತ 14 ಹಸುಗಳು(ಎಚ್.ಎಫ್, ಜರ್ಸಿ), 1 ಹೋರಿ, 6 ಹೆಣ್ಣು ಕರುಗಳು, 7 ಗಂಡು ಕರುಗಳನ್ನು ಸಾಕುವ ಮಟ್ಟಕ್ಕೆ ಬಂದು ನಿಂತಿದ್ದಾರೆ. ಗುತ್ತಿಗೆ ಪಡೆದಿರುವ 3 ಎಕರೆ ಜಮೀನಲ್ಲಿ ಹಸುಗಳಿಗಾಗಿ ಮೇವು ಬೆಳೆದಿದ್ದಾರೆ. ಹೀಗಾಗಿ ಹಿಂಡಿ, ಬೂಸಾ ಮಾತ್ರ ಹೊರಗಿನಿಂದ ತರುತ್ತಿದ್ದಾರೆ. 14 ಹಸುಗಳಿಂದ ಹಾಲು ಕರೆದು ಡೇರಿಗೆ ಹಾಕುತ್ತಿದ್ದಾರೆ. ದಿನಕ್ಕೆ ಕಡಿಮೆ ಎಂದರೂ 70 ಲೀಟರ್ ಹಾಲು ಸಿಗುತ್ತಿದೆ.

ತಿಂಗಳಿಗೆ ಕನಿಷ್ಠ 60 ಸಾವಿರ ರೂ. ಆದಾಯ ಬರುತ್ತಿದೆ. ಹಸುವಿನ ಸೆಗಣಿಯನ್ನು ಸಂಗ್ರಹಿಸಿ ವರ್ಷಕ್ಕೆ 2 ಸಲ ಗೊಬ್ಬರ ಮಾರಾಟ ಮಾಡುತ್ತಿದ್ದಾರೆ. ಇವರ ಬಳಿ ಇರುವ ಗಿರ್ ಮಿಶ್ರ ತಳಿಯ ಹೋರಿಯನ್ನು ಬೇರೆ ರೈತರು ತಳಿ ಅಭಿವೃದ್ಧಿಗೆ ಬಳಕೆ ಮಾಡುತ್ತಿದ್ದಾರೆ. ಹಸು, ಕರುಗಳು ಆರೋಗ್ಯವಾಗಿದೆ.

ಎಲ್ಲ ಹಸುಗಳಿಗೂ ವಿಮೆ ಮಾಡಿಸಲಾಗಿದೆ. ಈವರೆಗೂ ಯಾವ ಹಸುಗಳೂ ರೋಗ ಬಂದು ಸತ್ತಿಲ್ಲ. ಆಗಾಗ್ಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡುತ್ತಿರುತ್ತಾರೆ. ಇವರು ಇಲಾಖೆಗಳಿಂದ ಯಾವುದೇ ರೀತಿಯ ಸಹಾಯಧನ, ಸೌಲಭ್ಯಗಳನ್ನು ಪಡೆದುಕೊಂಡಿಲ್ಲ. ಹಸು ಸಾಕಣೆಗೆ ಹೈಟೆಕ್ ರೂಪ ಕೊಟ್ಟಿಲ್ಲ. ಹಳೇ ಕೊಟ್ಟಿಗೆಯಲ್ಲೇ ಹೈನುಗಾರಿಕೆ ನಡೆಸುತ್ತಿದ್ದಾರೆ. ಹಾಲು ಕರೆಯುವ ಯಂತ್ರ ಬಳಕೆಗೆ ಕೊಟ್ಟಿಗೆಯಲ್ಲಿ ಏರ್ ಪೈಪ್ ಅಳವಡಿಕೆ ಮಾಡಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಹೈನುಗಾರಿಕೆ ಮಾಡಲು ಯುವಕರು ಉತ್ಸಾಹ ತೋರುತ್ತಿದ್ದಾರೆ. ಅಧಿಕ ಬಂಡವಾಳ ಹಾಕಿ ಹೈನೋದ್ಯಮಕ್ಕೆ ಹೈಟೆಕ್ ಸ್ಪರ್ಶ ನೀಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಸೋಮಸುಂದರಂ ದೇಸಿ ಶೈಲಿಯ ಹಸು ಸಾಕಣೆ ಅಧಿಕ ಬಂಡವಾಳವನ್ನು ಬಯಸುವುದಿಲ್ಲ. ಆದರೆ ಲಾಭ ಹೆಚ್ಚು ಎನ್ನುವುದನ್ನು ಸಾಬೀತು ಮಾಡಿದ್ದಾರೆ.

ಭಾವನಾತ್ಮಕ ಬೆಸುಗೆ: ಸೋಮಸುಂದರಂಗೆ ಹಸು ಸಾಕಣೆ ಕೇವಲ ವ್ಯವಹಾರ ಮಾತ್ರವಲ್ಲ, ಭಾವನಾತ್ಮಕ ಬೆಸುಗೆಯಾಗಿದೆ. ತಮಿಳುನಾಡಿನಲ್ಲಿದ್ದಾಗ ಸಾಲ ಹೆಚ್ಚಾಗಿತ್ತು. ಊರು ಬಿಟ್ಟು ಬರುವ ಪರಿಸ್ಥಿತಿ ನಿರ್ಮಾಣವಾಯಿತು. ಇಲ್ಲಿಗೆ ಬಂದ ಮೇಲೆ ಹೈನುಗಾರಿಕೆ ಕೈ ಹಿಡಿಯಿತು. ಮಾಡಿದ್ದ ತೀರಿತು. ಕಷ್ಟಗಳೆಲ್ಲವೂ ಕಳೆಯಿತು. ಸೋಮಸುಂದರಂ ಜತೆಗೆ ಪತ್ನಿ ವಲ್ಲಿಯಮ್ಮ, ಮಗ ಗಣೇಶ್ (ಜೇಮ್ಸ್) ಹಸು ಸಾಕಣೆಯಲ್ಲಿ ತೊಡಗಿಕೊಂಡಿದ್ದಾರೆ. ಮಗಳನ್ನು ಓದಿಸಲು ಹೈನುಗಾರಿಕೆ ನೆರವಾಗಿದೆ. ತಮಿಳುನಾಡಿನಲ್ಲಿ ಸೋಮಸುಂದರಂ ಹೊಸ ಮನೆ ಕಟ್ಟಿಕೊಂಡಿದ್ದಾರೆ. ಓದು ಮುಗಿಸಿರುವ ಮಗಳು ಕೆಲಸಕ್ಕೆ ಸೇರಿದ್ದಾಳೆ. ಮಗ ಗಣೇಶ್ (ಜೇಮ್ಸ್) ತಂದೆಯೊಂದಿಗೆ ಸೇರಿ ಸ್ವ ಉದ್ಯೋಗ ಮಾಡುತ್ತಿರುವ ಸಂತೃಪ್ತಿಯಲ್ಲಿದ್ದಾರೆ.

ಹಸು ಸಾಕಣೆ ಮಾಡಬೇಕಾದರೆ ಅನುಭವ ಬೇಕು. ಇಲ್ಲದಿದ್ದರೆ ಸಾಕಣೆ ಮಾಡಲು ಸಾಧ್ಯವಿಲ್ಲ ನಷ್ಟ ಉಂಟಾಗಲಿದೆ. ನಾವು ಈ ಉದ್ಯಮವನ್ನು ಸಂತೋಷದಿಂದ ನಡೆಸಿಕೊಂಡು ಹೋಗುತ್ತಿದ್ದೇವೆ.

 ಎಂ.ಸೋಮಸುಂದರಂ,

ಮಲ್ಲೇದೇವನಹಳ್ಳಿ, ಚಾಮರಾಜನಗರ

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ನಾ.ಅಶ್ವಥ್ ಕುಮಾರ್

contributor

Similar News