ಟಿಪ್ಪು ಸುಲ್ತಾನ್ ಇತಿಹಾಸ ಸ್ಮರಿಸುವ ದೇವನಹಳ್ಳಿ ಕೋಟೆ

Update: 2024-09-30 06:30 GMT

 ಹೊಸಕೋಟೆ: ದೇವನಹಳ್ಳಿ ಕೋಟೆಯು ಬೆಂಗಳೂರಿಗರಿಗೆ ಅದ್ಭುತವಾದ ವಾರಾಂತ್ಯ ತಾಣವಾಗಿದೆ. ಕೋಟೆಯನ್ನು ಅನ್ವೇಷಿಸಲು ಇಷ್ಟ ಪಡುವವರಿಗೆ ಇದು ಸೂಕ್ತವಾದ ತಾಣ ಎಂದೇ ಹೇಳಬಹುದು. ಇದು ಬೆಂಗಳೂರಿನಿಂದ ಕೇವಲ 35 ಕಿ.ಮೀ ದೂರದಲ್ಲಿದೆ.

ಒಂದು ಕಾಲದಲ್ಲಿ ದೇವನದೊಡ್ಡಿ ಎಂದು ಕರೆಯಲಾಗುತ್ತಿದ್ದ, ದೇವನಹಳ್ಳಿಯು ಐತಿಹಾಸಿಕವಾಗಿ ಪ್ರಾಮುಖ್ಯತೆ ಪಡೆದಿರುವ ಕೋಟೆಯನ್ನು ಹೊಂದಿದೆ. ಈ ಕೋಟೆಯಲ್ಲಿಯೇ ಟಿಪ್ಪುಸುಲ್ತಾನ ಹುಟ್ಟಿ ಬೆಳೆದಿದ್ದು ಎಂದು ಇತಿಹಾಸವು ತಿಳಿಸುತ್ತದೆ.

ನಿಮ್ಮ ವಾರಾಂತ್ಯಕ್ಕೆ ಭೇಟಿ ನೀಡಲು ದೇವನಹಳ್ಳಿಯಲ್ಲಿನ ಕೋಟೆ ಉತ್ತಮ ಎಂದೇ ಹೇಳಬಹುದು.

 ಭವ್ಯವಾದ ಕೋಟೆ ನಿರ್ಮಿಸಿದವರಾರು?: ದೇವನಹಳ್ಳಿಯಲ್ಲಿರುವ ಕೋಟೆಯನ್ನು ಕಂಚಿಯಿಂದ ವಲಸೆ ಬಂದ ಆವತಿ ರಾಜವಂಶದ ಮಲ್ಲಭೈರೇಗೌಡರು 1501 ರಲ್ಲಿ ನಿರ್ಮಿಸಿದರು ಎಂದು ಇತಿಹಾಸವು ತಿಳಿಸುತ್ತದೆ. ಈ ಸುಂದರವಾದ ಕೋಟೆಯನ್ನು ಕಲ್ಲು, ಇಟ್ಟಿಗೆ, ಗಾರೆಯಿಂದ ನಿರ್ಮಿಸಲಾಗಿದ್ದು, 13 ವೃತ್ತಾಕಾರದ ಕೊತ್ತಲಗಳಿವೆ.

ಇಲ್ಲಿ ಚೌಕಾಕಾರದ ಬತ್ತೇರಿಗಳಿವೆ. ಪ್ರತಿ ಹೊರಭಿತ್ತಿಯ ಒಳಭಾಗದಲ್ಲಿ ಚಿಕ್ಕ ಚಿಕ್ಕ ರಂಧ್ರಗಳು ಇವೆ. ಈ ರಂಧ್ರಗಳು ದೂರದರ್ಶಕದಂತೆ ಕೆಲಸ ಮಾಡುತ್ತಿತ್ತು. ಈ ಕಿಂಡಿಯಿಂದ ಕೋಟೆಯ ಹೊರಗಿನ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಬಹುದು. ಶತ್ರು ಪಡೆಗಳಿಂದ ರಕ್ಷಿಸಿಕೊಳ್ಳಲು ಇದನ್ನು ನಿರ್ಮಿಸಲಾಗಿದೆ.

 ಕೋಟೆಯ ಬಾಗಿಲು: ಕೋಟೆಯು ಎರಡು ಬಾಗಿಲುಗಳನ್ನು ಹೊಂದಿದ್ದು, ಕೋಟೆಯ ಪೂರ್ವದ ಬಾಗಿಲು ಬಿದ್ದು ಹೋಗಿದೆಯಾದರೂ ಪಶ್ಚಿಮದ ಬಾಗಿಲು ಸುಭದ್ರವಾಗಿದೆ. ಶತ್ರುಗಳ ದಾಳಿಯಿಂದ ರಕ್ಷಿಸಿಕೊಳ್ಳಲು ಬೇಕಾದ ಸಕಲ ವ್ಯವಸ್ಥೆಗಳು ಈ ಕೋಟೆಯಲ್ಲಿ ಮಾಡಲಾಗಿದೆ. ಅನಿವಾರ್ಯ ಪರಿಸ್ಥಿತಿಯಲ್ಲಿ ತಪ್ಪಿಸಿಕೊಳ್ಳಲು ತುರ್ತು ಮಾರ್ಗವು ಕೂಡ ಇಲ್ಲಿದೆ.

 ದೇವಾಲಯಗಳು: ಇಲ್ಲಿನ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರ ಮುಖ್ಯವಾದ ನಿವಾಸವು ಪ್ರಮುಖ ಆಕರ್ಷಣೆ. ಕೋಟೆಯ ಆವರಣದಲ್ಲಿ ವೇಣುಗೋಪಾಲ ಸ್ವಾಮಿ ದೇವಾಲಯ, ಸಿದ್ದೇಶ್ವರ ಸ್ವಾಮಿ ದೇವಾಲಯ, ಚಂದ್ರಮೌಳೇಶ್ವರ ದೇವಾಲಯ ಇವೆ. ಇಲ್ಲಿನ ವೇಣುಗೋಪಾಲಸ್ವಾಮಿ ದೇವಾಲಯದ ವಾಸ್ತುಶಿಲ್ಪ ಶೈಲಿಯು ಅತ್ಯಂತ ಹಳೆಯದಾದ ಆಕರ್ಷಕ ವಿಗ್ರಹಗಳನ್ನು ಹೊಂದಿವೆೆ.

ಏನೇನಿದೆ ಕೋಟೆಯಲ್ಲಿ?

ಕೋಟೆಯ ಮೇಲ್ಭಾಗದಲ್ಲಿ ಕಾವಲು ಗೋಪುರಗಳಿವೆ. ಅಲ್ಲಿ ಕಾವಲುಗಾರರ ನಿವಾಸಗಳು ಕೂಡ ಇವೆ. ಇಂದು ಅವು ಶೌಚಗೃಹವಾಗಿರುವುದು ದುರ್ದೈವ. ದಂತಕಥೆಯ ಪ್ರಕಾರ, ಕೋಟೆಯ ಸುತ್ತ ರಕ್ಷಣಾರ್ಥ ಕಂದಕವನ್ನು ತೋಡಿ ಅದರಲ್ಲಿ ನೀರು ತುಂಬಿಸಿ, ಮೊಸಳೆಗಳನ್ನು ಬಿಟ್ಟಿದ್ದರು ಎಂದು ಹೇಳಲಾಗುತ್ತದೆ. ಇಲ್ಲಿ ಕಂದಕಗಳು ಇತ್ತು ಎಂಬುದಕ್ಕೆ ಕುರುಹುಗಳು ಕೂಡ ಇವೆ.

ಟಿಪ್ಪು ಜನ್ಮಸ್ಥಳ

ಇತ್ತೀಚೆಗೆ ಪಾಳುಬಿದ್ದಿರುವ ಈ ಕೋಟೆಯು ಒಂದು ಕಾಲದಲ್ಲಿ ಮಹಾನ್ ಯೋಧ ಟಿಪ್ಪುಸುಲ್ತಾನನ ಜನ್ಮ ಸ್ಥಳ ಮತ್ತು ನಿವಾಸವಾಗಿತ್ತು. ಈ ಬೃಹತ್ ಕೋಟೆಯನ್ನು ಸುಮಾರು 20 ಎಕರೆಗಷ್ಟು ವಿಸ್ತೀರ್ಣವಾದ ಪ್ರದೇಶದಲ್ಲಿ ನಿರ್ಮಿಸಲಾಗಿದೆ. 1501 ರಲ್ಲಿ ಮಲ್ಲೈಬೈರೆ ಗೌಡರಿಂದ ನಿರ್ಮಿಸಲಾಯಿತು. 1749 ರಲ್ಲಿ ಮೈಸೂರು ನಂಜರಾಜಯ್ಯನ ದಳವಾಯಿ ಇದನ್ನು ಆಕ್ರಮಿಸಿಕೊಂಡರು. ಅಂತಿಮವಾಗಿ ಹೈದರ್ ಅಲಿ ವಶಪಡಿಸಿಕೊಂಡರು.

 

ತಲುಪುವುದು ಹೇಗೆ?

ಈ ಐತಿಹಾಸಿಕ ಕೋಟೆಗೆ ಭೇಟಿ ನೀಡುವುದು ಸುಲಭ. ಇದು ಬೆಂಗಳೂರು ನಗರದ ಉತ್ತರಕ್ಕೆ 35 ಕಿ.ಮೀ ದೂರದಲ್ಲಿದ್ದು, ಟ್ಯಾಕ್ಸಿ ಕ್ಯಾಬ್‌ಗಳನ್ನು ಬಾಡಿಗೆಗೆ ತೆಗೆದುಕೊಳ್ಳುವ ಮೂಲಕ ಇಲ್ಲಿಗೆ ತಲುಪಬಹುದು. ಬೆಂಗಳೂರಿನಿಂದ ಸರಕಾರಿ ಮತ್ತು ಖಾಸಗಿ ಬಸ್‌ಗಳ ಸಂಚಾರವಿದೆ.

 

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ನಾರಾಯಣಸ್ವಾಮಿ ಸಿ.ಎಸ್.

contributor

Similar News

ಓ ಮೆಣಸೇ...