ನಿತ್ಯ ಹರಿದ್ವರ್ಣದ ಕಾಡಿನೊಳಗೊಂದು ರೈಲು ಪಯಣ

Update: 2023-11-27 05:23 GMT

ಹಾಸನ: ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೈಲು ಸಂಚಾರ ನಿಜಕ್ಕೂ ಒಂದು ರೋಮಾಂಚಕಾರಿ ಅನುಭವ. ಪಶ್ಚಿಮ ಘಟ್ಟಗಳ ಸುಂದರ ಪ್ರಕೃತಿಯನ್ನು ದಾಟಿ ರೈಲು ಹೋಗುತ್ತಿರುವಾಗ ಅಕ್ಕ ಪಕ್ಕದ ರಮಣೀಯ ದೃಶ್ಯಗಳನ್ನು ನೋಡಲು ಎರಡು ಕಣ್ಣುಗಳು ಸಾಲದು.

ರೈಲು ಕೆಲವೊಂದು ಎತ್ತರದ ಪ್ರದೇಶಗಳಲ್ಲಿ ಹೋಗುತ್ತಿದ್ದಾಗ ಕೆಳಗೆ ಬಗ್ಗಿ ಪ್ರಪಾತವನ್ನು ನೋಡಿದರೆ ಎದೆ ಝಲ್ ಅನಿಸುತ್ತದೆ. ಸುಬ್ರಹ್ಮಣ್ಯದಿಂದ ದೋಣಿಗಲ್‌ವರೆಗಿನ ಸುಮಾರು 60 ಕಿಲೋಮೀಟರ್ ಪ್ರಯಾಣ ಮಜಾ ತರಿಸುತ್ತದೆ. ಈ ನಿಗದಿತ ಪ್ರದೇಶ ಪ್ರಕೃತಿಯ ಸೌಂದರ್ಯದ ದರ್ಶನವನ್ನು ಮಾಡಿಸುತ್ತದೆ. ಸುಮಾರು 57 ಸುರಂಗಗಳು ಮತ್ತು 225ಕ್ಕೂ ಹೆಚ್ಚಿನ ಸಣ್ಣ-ಪುಟ್ಟ ಹಾಗೂ ಉದ್ದದ ಸೇತುವೆಗಳ ಮೇಲೆ ರೈಲು ಹೋಗುವಾಗ ಸುತ್ತಮುತ್ತಲಿನ ಪ್ರಕೃತಿಯ ರಮಣೀಯ ಸೌಂದರ್ಯವನ್ನು ವರ್ಣಿಸುವುದಕ್ಕಿಂತಲೂ ಅನುಭವಿಸಿದರೇನೇ ಚೆಂದ. ಮಳೆಗಾಲದಲ್ಲಿ ಹರಿಯುವ ಸಣ್ಣ ಸಣ್ಣದ ಝರಿ ತೊರೆ ಗಿರಿಗಳು ಪಶ್ಚಿಮ ಘಟ್ಟದ ರುದ್ರ ರಮಣೀಯತೆಯನ್ನು ಮನ ಮುಟ್ಟಿಸುತ್ತವೆ. ಇಲ್ಲೊಂದು ಷರತ್ತು ಮಾತ್ರ ಕಡ್ಡಾಯವಾಗಿ ಅನ್ವಯಿಸುತ್ತದೆ; ಅದೇನೆಂದರೆ ಪ್ರಕೃತಿಯನ್ನು ಪ್ರೀತಿಸುವ ಮನಸ್ಸು ನಿಮ್ಮದಾಗಿರಬೇಕು, ಜಗತ್ತನ್ನು ಸುಂದರವಾಗಿ ನೋಡುವ ದೃಷ್ಟಿ ನಿಮ್ಮಲ್ಲಿರಬೇಕು, ಸೌಂದರ್ಯವನ್ನು ಅನುಭವಿಸುವ ಕನಿಷ್ಟ ಗ್ರಹಿಕೆ, ಜೊತೆಗೆ ಮಾನವೀಯ ಮೌಲ್ಯಗಳನ್ನು ಗೌರವಿಸುವ ವ್ಯಕ್ತಿ ನೀವಾಗಿದ್ದರೆ ಮಾತ್ರ ಈ ಪರಿಸರ ನಿಮಗೆ ತಲ್ಲಣಗೊಳಿಸುತ್ತದೆ. ನೀವು ಯಾಂತ್ರಿಕ ಮನಸ್ಸಿನ ವ್ಯಕ್ತಿಯಾಗಿದ್ದರೆ. ಖಂಡಿತ ಈ ಪ್ರಯಾಣ ಮನಸ್ಸಿಗೆ ನಾಟುವುದಿಲ್ಲ.

ವಿಸ್ಟಾಡೋಮ್ ಕೋಚ್

ಈ ಸುಂದರ ಪ್ರಯಾಣದ ಅನುಭವವನ್ನು ನೋಡಲು ವಿಸ್ಟಾಡೋಮ್ ಕೋಚ್ ಸೇವೆಯನ್ನು ರೈಲ್ವೆ ಇಲಾಖೆ ಪ್ರಾರಂಬಿಸಿದೆ. ವಿಸ್ಟಾಡೋಮ್ ಕೋಚ್‌ನಲ್ಲಿ ಪ್ರಯಾಣಿಸಿದವರು ಇದೊಂದು ಅದ್ಭುತ ಮರೆಯಲಾಗದ ಅನುಭವ ಎನ್ನುತ್ತಾರೆ. ಬೆಟ್ಟ ಗುಡ್ಡಗಳ ಮಧ್ಯೆ ಗುಹೆಗಳನ್ನು ದಾಟುತ್ತಾ ರೈಲು ಸಾಗುತ್ತಿದ್ದರೆ ಸ್ವರ್ಗದಲ್ಲಿ ಇದ್ದೆವೇನೋ ಎನ್ನುವಂತಹ ಅನುಭವ ನೀಡುವ ಈ ಸುಂದರ ಪ್ರಯಾಣ ನಿಜಕ್ಕೂ ರಮಣೀಯವಾಗಿರುತ್ತದೆ. ಅದರಲ್ಲೂ ಮಳೆಗಾಲದಲ್ಲಿ ಪ್ರಯಾಣ ಇನ್ನಷ್ಟು ರಂಗು ನೀಡುತ್ತದೆ ಎನ್ನುತ್ತಾರೆ ಪ್ರಯಾಣಿಕರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಮಲ್ನಾಡ್ ಮೆಹಬೂಬ್

contributor

Similar News

ಓ ಮೆಣಸೇ...