ಕಸ್ತೂರಿ ರಂಗನ್ ವರದಿ ಜಾರಿಯಿಂದ ಮಲೆನಾಡಿಗರ ಬದುಕಿಗೆ ಕುತ್ತು

ಕಸ್ತೂರಿರಂಗನ್ ವರದಿ ವ್ಯಾಪ್ತಿಯಲ್ಲಿ ಮಹಾರಾಷ್ಟ್ರದ 4 ಜಿಲ್ಲೆ, ಕೇರಳದ 19, ಕರ್ನಾಟಕದ 10 ಹಾಗೂ ತಮಿಳುನಾಡಿನ 6 ಜಿಲ್ಲೆಗಳು ಸೇರಿದ್ದು, ಒಟ್ಟು 60 ಸಾವಿರ ಚ.ಕಿ.ಮೀ. ಪ್ರದೇಶವನ್ನು ಇಕೋ ಸೆನ್ಸಿಟಿವ್ ಏರಿಯಾ ಎಂದು ವರದಿ ಹೇಳಿದೆ. ಕರ್ನಾಟಕ ರಾಜ್ಯದಲ್ಲಿ 20,668ಚಕಿಮೀ ಪ್ರದೇಶ ಇಎಸ್‌ಎ ಎಂದು ಗುರುತಿಸಲಾಗಿದ್ದು, ರಾಜ್ಯದಲ್ಲಿ ಈ ವರದಿ ಜಾರಿಯಾದಲ್ಲಿ 1,576 ಗ್ರಾಮಗಳು ಇಎಸ್‌ಎ ಪ್ರದೇಶವಾಗಲಿದೆ.

Update: 2024-09-30 06:58 GMT

ಚಿಕ್ಕಮಗಳೂರು: ಪಶ್ಚಿಮಘಟ್ಟ ಪ್ರದೇಶ ಸಂರಕ್ಷಣೆಗಾಗಿ ಪರಿಸರ ವಿಜ್ಞಾನಿ ಕಸ್ತೂರಿರಂಗನ್ ನೀಡಿರುವ ವರದಿ ಮಲೆನಾಡಿನ ಜನರ ನೆಮ್ಮದಿಗೆ ಭಂಗ ತಂದಿದೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ಮಾನವನ ಹಸ್ತಕ್ಷೇಪದಿಂದಾಗಿ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿವೆ ಎಂಬ ಕಾರಣಕ್ಕೆ ಕಸ್ತೂರಿರಂಗನ್ ವರದಿ ಜಾರಿ ವಿಚಾರ ಸದ್ಯ ಮುನ್ನಲೆಗೆ ಬಂದಿದೆ.

ಕಸ್ತೂರಿರಂಗನ್ ವರದಿಯಲ್ಲಿ ರಾಜ್ಯದ ಸುಮಾರು 10 ಜಿಲ್ಲೆಗಳು ಸೇರಿದ್ದರೆ, ಚಿಕ್ಕಮಗಳೂರು ಜಿಲ್ಲೆಯ 5 ತಾಲೂಕುಗಳ ನೂರಕ್ಕೂ ಹೆಚ್ಚು ಗ್ರಾಮಗಳು ಸೇರ್ಪಡೆಯಾಗಿವೆ. ವರದಿ ಜಾರಿಯಾದಲ್ಲಿ ಮಲೆನಾಡಿಗರ ಬದುಕಿಗೆ ಕುತ್ತು ಕಟ್ಟಿಟ್ಟಬುತ್ತಿ ಎಂಬ ಆತಂಕ ಎದುರಾಗಿದೆ.

ಕೇರಳದ ವಯನಾಡ್ ದುರಂತದ ಬಳಿಕ ಕಸ್ತೂರಿರಂಗನ್ ವರದಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ವರದಿ ಜಾರಿ ಪರ ಪರಿಸರವಾದಿಗಳು ಧ್ವನಿ ಎತ್ತುತ್ತಿದ್ದರೆ, ವರದಿ ಜಾರಿಯಿಂದಾಗಿ ಮಲೆನಾಡಿನ ಜನರ ದೈನಂದಿನ ಜೀವನ ಹಾಗೂ ಕೃಷಿಕರ ಬದುಕಿಗೆ ತೊಂದರೆಯಾಗುವ ಭೀತಿ ಕಾರಣಕ್ಕೆ ವರದಿ ಜಾರಿಗೆ ಮಲೆನಾಡಿನಲ್ಲಿ ಪ್ರಗತಿಪರ ಸಂಘಟನೆಗಳು, ರೈತರು, ಬೆಳೆಗಾರರ ಸಂಘಟನೆಗಳು ತೀವ್ರ ಪ್ರತಿರೋಧವನ್ನೂ ತೋರುತ್ತಿದ್ದಾರೆ.

ಈ ಪರ ವಿರೋಧದ ನಡುವೆ ಕೇಂದ್ರ ಸರಕಾರ ವರದಿ ಜಾರಿ ಸಂಬಂಧ 6ನೇ ಬಾರಿ ಅಧಿಸೂಚನೆ ಹೊರಡಿಸಿದ್ದು, ಈ ಅಧಿಸೂಚನೆಗೆ ಆಕ್ಷೇಪ ಸಲ್ಲಿಸಲು ಸೆ.30ರವರೆಗೆ ಗಡುವು ನೀಡಿದೆ. ಈ ಹಿನ್ನೆಲೆಯಲ್ಲಿ ಮಲೆನಾಡಿನಲ್ಲಿ ಸಾವಿರಾರು ಮಂದಿ ನಾಗರಿಕರು, ಕೃಷಿಕರು, ಸಂಘ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು ಕೇಂದ್ರದ ಪರಿಸರ ಇಲಾಖೆಗೆ ಆಕ್ಷೇಪಗಳನ್ನು ಸಲ್ಲಿಸಿ ವರದಿಯಲ್ಲಿರುವ ಲೋಪಗಳನ್ನು ಎತ್ತಿ ತೋರಿಸಿದ್ದಾರೆ. ಈ ವರದಿ ವಿಚಾರವಾಗಿ ರಾಜ್ಯದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಆರಂಭದಲ್ಲಿ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಗೊಂದಲಕ್ಕೆ ಕಾರಣವಾಗುವ ಹೇಳಿಕೆ ನೀಡಿದ್ದರು. ಈ ಹೇಳಿಕೆಯಿಂದ ಅಸಮಾಧಾನಗೊಂಡ ಮಲೆನಾಡಿನ ಜನತೆ, ಕೃಷಿಕರು, ಹೋರಾಟಗಾರರು ಖುದ್ದು ಅರಣ್ಯ ಸಚಿವರ ಬಳಿ ನಿಯೋಗ ತೆರಳಿ ವರದಿಯಲ್ಲಿನ ಲೋಪಗಳು, ವರದಿ ಜಾರಿಯಿಂದ ಮಲೆನಾಡಿನ ಜನತೆ, ಕೃಷಿ, ಊರು, ಗ್ರಾಮಗಳಿಗಾಗುವ ತೊಂದರೆಗಳನ್ನು ಮನವರಿಕೆ ಮಾಡಿದ್ದರು. ಪರಿಣಾಮ ಇತ್ತೀಚೆಗೆ ರಾಜ್ಯ ಸರಕಾರವೂ ವರದಿ ಜಾರಿಗೆ ವಿರುದ್ಧವಾದ ನಿರ್ಣಯಕೈಗೊಂಡಿದೆ. ಇದು ಮಲೆನಾಡಿನ ಜನರನ್ನು ನಿಟ್ಟುಸಿರು ಬಿಡುವಂತೆ ಮಾಡಿದೆ.

ಕಸ್ತೂರಿರಂಗನ್ ವರದಿ ಜಾರಿಯಿಂದ ಮಲೆನಾಡಿನ ಜನರನ್ನು ಒಕ್ಕಲೆಬ್ಬಿಸುವುದಿಲ್ಲ, ಕೃಷಿಕರಿಗೂ ತೊಂದರೆಯಾಗುವುದಿಲ್ಲ ಎಂದು ಪರಿಸರವಾದಿಗಳು ಹೇಳುತ್ತಿದ್ದಾರೆ. ಆದರೆ ವರದಿ ಜಾರಿಯಾಗುವ ಪ್ರದೇಶದಲ್ಲಿರುವ ಕೃಷಿಕರು ಹೀಗೆಯೇ ಕೃಷಿ ಮಾಡಬೇಕು, ಗೊಬ್ಬರ, ಕೀಟನಾಶಕಗಳನ್ನು ಬಳಸ ಬಾರದು, ಅರಣ್ಯ ಇಲಾಖೆ ಸೂಚಿಸಿದಲ್ಲೇ ಸಂಚಾರ ಮಾಡಬೇಕು ಎಂಬಂತಹ ನಿಯಮಗಳು ಜಾರಿಯಾಗುವುದರಿಂದ ಇದು ಇಲ್ಲಿನ ಜನತೆ ಹಾಗೂ ಕೃಷಿ ಬದುಕಿಗೆ ಮಾರಕವಾಗಿ ಪರಿಣಮಿಸಲಿದೆ ಎಂದು ಹೋರಾಟಗಾರರು ದೂರುತ್ತಿದ್ದಾರೆ. ಜಿಲ್ಲೆಯ ಕಳಸ, ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ, ಶೃಂಗೇರಿ ಹಾಗೂ ಚಿಕ್ಕಮಗಳೂರು ತಾಲೂಕುಗಳ ನೂರಾರು ಗ್ರಾಮಗಳು ಸೇರ್ಪಡೆಗೊಂಡಿವೆ. ಈ ವರದಿ ಜಾರಿಯಾದಲ್ಲಿ ಈ ಗ್ರಾಮಗಳ ಜನವಸತಿ ಪ್ರದೇಶ ಹಾಗೂ ವರದಿ ವ್ಯಾಪ್ತಿಯ ಪ್ರದೇಶದಲ್ಲಿ 10ಕಿಮೀ ಬಫರ್ ರೆನ್ ಪ್ರದೇಶ ಘೋಷಣೆಯಿಂದಾಗಿ ವರದಿ ವ್ಯಾಪ್ತಿಯ ಪ್ರದೇಶದಲ್ಲಿನ ಗ್ರಾಮ, ಪಟ್ಟಣಗಳ ಜನವಸತಿಗೆ ತೊಂದರೆಯಾಗಲಿದೆ. ಮೂಲಸೌಲಭ್ಯಗಳ ಅಭಿವೃದ್ಧಿಗೂ ಕಡಿವಾಣ ಬೀಳಲಿದೆ. ಪರಿಸರ ಸಂರಕ್ಷಣೆ ಹೆಸರಿನಲ್ಲಿ ಹಂತಹಂತವಾಗಿ ಇಲ್ಲಿನ ಜನರು ಬೇರೆಡೆಗೆ ಗುಳೆ ಹೋಗಬೇಕಾಗುತ್ತದೆ ಎನ್ನುವುದು ಹೋರಾಟಗಾರರ ವಾದವಾಗಿದೆ.

ಈ ವರದಿಯಲ್ಲಿ ಮಲೆನಾಡು ಭಾಗದ 5 ತಾಲೂಕು ಹಾಗೂ ಚಿಕ್ಕಮಗಳೂರು ತಾಲೂಕಿನ ಮಲೆನಾಡು ಭಾಗದ ಸುಮಾರು 127 ಗ್ರಾಮಗಳನ್ನು ಪಟ್ಟಿ ಮಾಡಲಾಗಿದೆಯಾದರೂ ವರದಿ ವ್ಯಾಪ್ತಿಯ ಗ್ರಾಮಗಳ 10ಕಿಮೀ ವರೆಗೆ ಬಫರ್ ರೆನ್ ಜಾರಿಯಾಗುವುದರಿಂದ ಇಡೀ ಮಲೆನಾಡು ಕಸ್ತೂರಿರಂಗನ್ ವರದಿ ಪಾಲಾಗಲಿದೆ. ವರದಿ ಜಾರಿಯಾದಲ್ಲಿ ಅರಣ್ಯ ಕಾನೂನುಗಳು ಕಟ್ಟುನಿಟ್ಟಿನಿಂದ ಜಾರಿಯಾಗುವುದರಿಂದ ಮಲೆನಾಡಿನ ಜನರ ಜನಜೀವನ ಹಾಗೂ ಕೃಷಿ ಬದುಕಿಗೆ ಭಾರೀ ಕಂಟಕ ಬಂದೊದಗಲಿದೆ. ಈ ಕಾರಣಕ್ಕೆ ಮಲೆನಾಡಿನಲ್ಲಿ ವರದಿ ಜಾರಿಗೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಪಶ್ಚಿಮಘಟ್ಟ ಸಂರಕ್ಷಣೆಗೆ ವರದಿ ಜಾರಿ ಅನಿವಾರ್ಯ ಎಂದಾದರೆ, ವರದಿಯನ್ನು ವೈಜ್ಞಾನಿಕವಾಗಿ ಸರ್ವೇ ಮಾಡಬೇಕು, ಸೆಟಲೈಟ್ ಸಮೀಕ್ಷೆಯ ವರದಿ ಕೈಬಿಟ್ಟು ಭೌತಿಕ ಸರ್ವೇ ನಡೆಸಬೇಕು, ಜನವಸತಿ ಹಾಗೂ ಮೂಲಸೌಕರ್ಯ, ಕಂದಾಯ, ಅರಣ್ಯ ಭೂಮಿ ಗಡಿ ಗುರುತು ಮಾಡಬೇಕು, ಕಂದಾಯ ಭೂಮಿಯಲ್ಲಿ ಕೃಷಿ ಮಾಡಿರುವ ಸಾಗುವಳಿಯನ್ನು ಸಕ್ರಮ ಮಾಡಿ, ಇಂತಹ ಕೃಷಿ ಭೂಮಿಯನ್ನು ವರದಿಯಿಂದ ಹೊರಗಿಡಬೇಕು, ರಸ್ತೆ, ಶಾಲೆ, ಸ್ಮಶಾನದಂತಹ ಸಾರ್ವಜನಿಕ ಉದ್ದೇಶಗಳಿಗೆ ಜಾಗ ಮೀಸಲಿಡುವುದರೊಂದಿಗೆ ಮಲೆನಾಡಿನ ಜನತೆ ಹಾಗೂ ಕೃಷಿಕರ ಬದುಕಿಗೆ ತೊಂದರೆಯಾಗದಿರುವ ಬಗ್ಗೆ ಖಾತ್ರಿ ಪಡಿಸಿ ವರದಿ ಜಾರಿ ಮಾಡಬೇಕೆಂಬ ಬೇಡಿಕೆ ಹೋರಾಟಗಾರರದ್ದಾಗಿದ್ದು, ವರದಿ ವ್ಯಾಪ್ತಿಯಲ್ಲಿನ ಬಫರ್‌ರೆನ್ ಮಿತಿಯನ್ನು ಶೂನ್ಯಕ್ಕೆ ಇಳಿಸಬೇಕು ಎಂಬ ಆಗ್ರಹ ಮುಂದಿಟ್ಟಿದ್ದಾರೆ.

ಮಲೆನಾಡಿನ ಜನರ ನಿದ್ದೆಗೆಡಿಸಿರುವ ಕಸ್ತೂರಿರಂಗನ್ ವರದಿ ಜಾರಿಯನ್ನು ತಡೆಯುವ ನಿಟ್ಟಿನಲ್ಲಿ ಹೋರಾಟಗಾರರು, ರೈತರು, ಬೆಳೆಗಾರರು ವ್ಯಾಪಕ ವಿರೋಧವೊಡ್ಡಿರುವುದರಿಂದ ರಾಜ್ಯ ಸರಕಾರ ಮಲೆನಾಡಿನ ಜನರ ಪರ ನಿಲುವು ತಳೆದಿರುವುದು ಹಾಗೂ ವರದಿ ಜಾರಿ ವಿರೋಧಿಸಿ ಭಾರೀ ಸಂಖ್ಯೆಯಲ್ಲಿ ಆಕ್ಷೇಪಗಳು ಸಲ್ಲಿಕೆಯಾಗಿರುವುದರಿಂದ, ಜನರ ನೆಮ್ಮದಿಗೆ ಭಂಗ ತಂದಿರುವ ಈ ವರದಿ ಬಗ್ಗೆ ಕೇಂದ್ರ ಸರಕಾರ ಯಾವ ನಿಲುವು ತಳೆಯಲಿದೆ ಎಂಬುದು ಮಲೆನಾಡಿನ ಜನತೆ ಹಾಗೂ ವರದಿ ಪರ ಇರುವ ಪರಿಸರವಾದಿಗಳ ಕುತೂಹಲವನ್ನು ಹೆಚ್ಚಿಸಿದೆ. ಮಲೆನಾಡು ಈಗಾಗಲೇ ಹಲವಾರು ಅರಣ್ಯ ಯೋಜನೆಗಳಿಂದ ನಲುಗಿ ಹೋಗಿದೆ. ಅರಣ್ಯ ಯೋಜನೆಗಳಿಂದ ಸಂತ್ರಸ್ತರಾದವರ ಬದುಕು ಅತಂತ್ರವಾಗಿದೆ. ಈ ಹಿನ್ನೆಲೆಯಲ್ಲಿ ಮಲೆನಾಡಿನಲ್ಲಿ ಮತ್ತೊಂದು ಅರಣ್ಯ ಯೋಜನೆ ಜಾರಿಯಾದಲ್ಲಿ ಮಲೆನಾಡಿನಲ್ಲಿ ಮನುಷ್ಯರೇ ಇಲ್ಲವಾಗುವ ದಿನ ದೂರವಿಲ್ಲ ಎಂಬ ಆತಂಕಕ್ಕೆ ಈ ವರದಿ ಕಾರಣವಾಗಿದೆ.

ಸೆಟಲೈಟ್‌ನಿಂದ ತಯಾರಿಸಿದ ವರದಿ ಜಾರಿಯಿಂದ ಮಲೆನಾಡಿನ ಜನರ ಬದುಕು ನಾಶವಾಗಲಿದೆ. ವರದಿ ಜಾರಿ ಅನಿವಾರ್ಯವಾದಲ್ಲಿ ವರದಿಯನ್ನು ಮರುಪರಿಶೀಲಿಸಬೇಕು, ವೈಜ್ಞಾನಿಕವಾಗಿ ಸಮೀಕ್ಷೆ ಮಾಡಬೇಕು. ಅವೈಜ್ಞಾನಿಕ ವರದಿ ಜಾರಿ ವಿರೋಧಿಸಿ ಜನಜಾಗೃತಿ ಮೂಡಿಸಿದ್ದೇವೆ. ಅದರ ಅಪಾಯವನ್ನು ಮನಗಂಡ ಜನತೆ ಸ್ವಯಂಪ್ರೇರಿತರಾಗಿ ಕೇಂದ್ರಕ್ಕೆ ಆಕ್ಷೇಪ ಸಲ್ಲಿಸಿದ್ದಾರೆ. ರಾಜ್ಯ ಸರಕಾರ ನಮ್ಮ ಧ್ವನಿಗೆ ಸ್ಪಂದಿಸಿದೆ. ಕೇಂದ್ರ ಸರಕಾರ ಆಕ್ಷೇಪಗಳನ್ನು ಪರಿಶೀಲಿಸಬೇಕು. ವರದಿಯ ಮರುಪರಿಶೀಲನೆಗಾಗಿ ಕೇಂದ್ರ ಸರಕಾರ ನೇಮಿಸಿದ ಸಂಜಯ್‌ಕುಮಾರ್ ನೇತೃತ್ವದ ಸಮಿತಿ ಇದುವರೆಗೂ ಇತ್ತ ತಲೆ ಹಾಕಿಲ್ಲ. ಆದರೂ ವರದಿ ಜಾರಿಗೆ ಅಧಿಸೂಚನೆ ಹೊರಡಿಸಿ ಅನ್ಯಾಯ ಮಾಡಿದೆ. ಮಲೆನಾಡಿನ ಜನ ಜೀವನಕ್ಕೆ ಧಕ್ಕೆಯಾಗದಂತೆ ವರದಿ ಜಾರಿ ಮಾಡಲು ನಮ್ಮ ಅಭ್ಯಂತರವಿಲ್ಲ. ರಾಜಕಾರಣಿಗಳಲ್ಲಿ ಇಚ್ಛಾಶಕ್ತಿ ಇದ್ದಲ್ಲಿ ಕೇರಳ ರಾಜ್ಯದ ಮಾದರಿಯಲ್ಲಿ ವರದಿಯನ್ನು ಇಲ್ಲೂ ಜಾರಿ ಮಾಡಲಿ.

<ಎಸ್.ವಿಜಯ್‌ಕುಮಾರ್, ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟ ವೇದಿಕೆ ಸಂಚಾಲಕ

ಚಿಕ್ಕಮಗಳೂರು: ವರದಿ ವ್ಯಾಪ್ತಿಗೆ ಸೇರಿರುವ ಗ್ರಾಮಗಳು

 ಚಿಕ್ಕಮಗಳೂರು ತಾಲೂಕು: ಮೇಲುಗಿರಿ, ಕೆಸುವಿನ ಮನೆ, ಹಿಪ್ಲ, ಹೆಗ್ಗರಮತ್ತವಾನಿ, ಮೇಲಿನ ಹುಲುವತ್ತಿ, ಕೆಸವೆ, ಸುಗಡವಾನಿ, ಸಿರಿಗೊಲ, ಕೊಳಗಾಮೆ, ಮಾಡ್ಲ, ಅತ್ತಿಗಿರಿ, ಜಾಗರ, ಸಿರವಾಸೆ, ಬಿದರೆ, ಮೆಲಗಾರು, ದತ್ತಾತ್ರೇಯ ಪೀಠ, ಹುಯಿಗೆರೆ, ಬಸರವಳ್ಳಿ, ಸಾರಗೋಡು, ಚುರ್ಚೆಗುಡ್ಡ ಕಾವಲು, ಬೊಗಸೆ, ಬಾಸಾಪುರ, ಕಡವಂತಿ, ಬೆರಣಗೋಡು, ಮಣಬೂರು, ಮಲ್ಲಂದೂರು, ಅರೆನೂರು, ಬಿಕ್ಕರಣೆ ಗ್ರಾಮಗಳು.

ಕೊಪ್ಪ ತಾಲೂಕು: ಕೆಳಕುಳಿ, ಗುಣವಂತೆ, ಹಿರೇಕುಡಿಗೆ, ಬೊಳಾಪುರ, ಕೆಸವೆ, ಭಂಡಿಗಡಿ, ಕುಂಬರಕೊಪ್ಪ, ದೇವರಹಳ್ಳಿ, ಕಗ್ಗ, ಹೊಸಗಾರು, ತಲಮಕ್ಕಿ ಎಸ್ಟೇಟ್, ಬೋಳಾಪುರ, ಹೊಸಗಾರು, ಅದ್ದಡ, ನುಗ್ಗಿ, ಶಂಕರಪುರ, ಹೆಗ್ಗಾರು, ಕುಂಚೂರು, ಮರಿತೊಟ್ಟಲು, ಬಿಳಿಗದ್ದೆ, ಹೊಸೂರು, ಉಡಣ, ಮಸಿಕೊಪ್ಪ, ಕರಿಮನೆ, ಬೆಳವಡಿ, ಲೋಕನಾಥಪುರ, ದಯಂಬಳ್ಳಿ, ಅಡಿಗೆಬೈಲು, ಹೆಗ್ಗಾರು, ಹುಲಿಗರಡಿ, ದೇವಗೋಡು, ಹರಳಾಣೆ, ಮೇಗೂರು, ಕಲ್ಲುಗುಡ್ಡೆ ಗ್ರಾಮಗಳು.

ಮೂಡಿಗೆರೆ ತಾಲೂಕು: ತನೂಡಿ, ಹೊರನಾಡು, ಕಳಕೋಡು, ಸಂಸೆ, ಇಡಕಣಿ, ಕುಂದೂರು, ಕೆಳಗೂರು, ದರ್ಶನ, ಅರಮನೆ ತಲಗೂರು, ಹೆಗ್ಗೋಡು, ತತ್ಕೊಳ, ಕೆಂಜಿಗೆ ಎಸ್ಟೇಟ್, ದುರ್ಗದಹಳ್ಳಿ, ಮಧುಗುಂಡಿ, ಬಾಳೂರು, ಅತ್ತಿಗೆರೆ, ತರುವೆ, ದಾರಿಮಲೆ ಎಸ್ಟೇಟ್, ಗುತ್ತಿ, ಮೂಲರಹಳ್ಳಿ, ಕೋಗಿಲೆ, ಊರುಬಗೆ, ಭೈರಾಪುರ, ಮೇಕನಗದ್ದೆ, ಭೈರಾಪುರ ಎಸ್ಟೇಟ್.

ಎನ್.ಆರ್.ಪುರ ತಾಲೂಕು: ಭೈರಾಪುರ, ಕುಸಬೂರು, ಕೋಣಕೆರೆ, ಮಣಬೂರು, ಅರಂಬೂರು, ಮಲ್ಲಂದೂರು, ವಿರಲ, ಕಡಹಿನಬೈಲು, ಹಾತೂರು, ಬೆಳ್ಳೂರು, ದಂಡುಬಿಟ್ಟಹರ, ಕೊನೊಡಿ, ನಂದಿಗಾನೆ, ಗುಬ್ಬಿಗ, ಅರಳಿಕೊಪ್ಪ, ಸರಕಾಟಿ, ಕಂಕ್ಷೆ, ಬಾಳೆ, ಸಾಲೂರು, ಹೆಬ್ಬೆ, ಮೇಗರಮಕ್ಕಿ, ಹೊಸೂರು, ಕರ್ಕೆಶ್ವರ, ಅಲೆಹಳ್ಳಿ ದಾವಣ, ಕಾನೂರು, ಹರವರಿ, ವಗ್ಗಡೆ, ಸಾರ್ಯ ಮಧುಗುಣಿ, ಹಲಸೂರು ಗ್ರಾಮಗಳು.

ಶೃಂಗೇರಿ ತಾಲೂಕು: ನೀಲಂದೂರು, ಆತನಬಾಳು, ಮಸಿಗೆ, ಕುಂಬರಗೋಡು, ಮೀಗ, ಮರ್ಕಲ್, ಯಡದಹಳ್ಳಿ, ಯಡದಾಳು, ನೆಮ್ಮಾರು, ಬಾಳೆಕಡಿ, ಗಿಣಿಕಲ್, ಕೂತಗೋಡು, ಕೆರೆ, ಸುಂಕದಮಕ್ಕಿ, ಮಲನಾಡು, ಮಡುಬು, ಮಲನಾಡು ಕೆರೆ, ನೆಮ್ಮಾರ್ ಎಸ್ಟೇಟ್, ಗುಲಗಂಜಿ ಮನೆ, ಹಾದಿ, ಮಾನುವಳ್ಳಿ, ಬಾಳಗೆರೆ, ಶೀರ್ಲು ಗ್ರಾಮಗಳು.

Writer - ವಾರ್ತಾಭಾರತಿ

contributor

Editor - Mushaveer

contributor

Byline - -ಕೆ.ಎಲ್.ಶಿವು

contributor

Similar News

ಓ ಮೆಣಸೇ...