ತುಂಡು ಭೂಮಿಯಲ್ಲಿ ಯುವ ಕೃಷಿಕನ ಯಶೋಗಾಥೆ

Update: 2023-11-27 09:14 GMT

ಮಂಡ್ಯ: ಕೃಷಿಯಲ್ಲಿ ಲಾಭಗಳಿಸಲು ದೊಡ್ಡ ಹಿಡುವಳಿದಾರರೇ ಆಗಿರಬೇಕು ಎಂಬುದನ್ನು ಸುಳ್ಳಾಗಿಸಿದ ಅತಿಸಣ್ಣ ರೈತರೊಬ್ಬರು ಇರುವ ತುಂಡುಭೂಮಿಯಲ್ಲಿ ಸಾಧನೆಗೈದ ಯಶೋಗಾಥೆ ಇದು. ಇರುವ ಜಮೀನಿನಲ್ಲಿ ಸಮಗ್ರ ಸಾವಯವ ಕೃಷಿ ಮಾಡುವ ಮೂಲಕ ಇತರ ರೈತರ ಗಮನ ಸೆಳೆದಿದ್ದಾರೆ.

ಸಮಗ್ರ ಮತ್ತು ಸಾವಯವ ಕೃಷಿ ಎಂದರೆ ಮೂಗು ಮುರಿಯುತ್ತಿದ್ದ ಕೃಷಿಕರು ಇವರ ಕೃಷಿಯನ್ನು ನೋಡಿ ಉತ್ತೇಜನಗೊಂಡಿದ್ದಾರೆ. ತಾವೂ ಈ ಪದ್ದತಿ ಅಳವಡಿಸಿಕೊಳ್ಳಲು ಉತ್ಸುಕರಾಗಿದ್ದಾರೆ ಮತ್ತು ದಿನವೂ ಅವರ ತಾಕನ್ನು ನೋಡಲು ಕೃಷಿಕರ ದಂಡೇ ನೆರೆಯುತ್ತಿದೆ.

ಪಾಂಡವಪುರ ತಾಲೂಕಿನ ಶಂಭೂನಹಳ್ಳಿ ರೈತ ಮಂಜುನಾಥ್ ಕುಟುಂಬ ಕೇವಲ ಒಂದೂವರೆ ಎಕರೆ ಜಮೀನಿನಲ್ಲಿ, ಅದರಲ್ಲೂ ಕೊಳವೆ ಬಾವಿ ಆಧಾರಿತ ಖುಷ್ಕಿ ಭೂಮಿಯಲ್ಲಿ ವರ್ಷಕ್ಕೆ 8 ರಿಂದ 9 ಲಕ್ಷ ರೂ. ಲಾಭ ಪಡೆಯುವ ಮೂಲಕ ಕೃಷಿಯಿಂದ ವಿಮುಖರಾಗಿರುವ ರೈತರ ಹುಬ್ಬೇರುವಂತೆ ಮಾಡಿದ್ದಾರೆ.

ಮಾರುಕಟ್ಟೆಯಲ್ಲಿ ಅತಿ ಹೆಚ್ಚು ದರ ಹೊಂದಿರುವ ಸಾಂಬಾರ ಪದಾರ್ಥಗಳ ಬೆಳೆಗಳಾದ ಕಾಳು ಮೆಣಸು, ಏಲಕ್ಕಿ ಜತೆಗೆ ಇತರ ಬೆಳೆಗಳಾದ ತೆಂಗು, ಅಡಿಕೆ, ಹಣ್ಣು, ತರಕಾರಿ ಬೆಳೆಗಳನ್ನು ಮಂಜುನಾಥ್ ಕುಟುಂಬ ಬೆಳೆಯುತ್ತಿದೆ.

ಒಣಭೂಮಿಯಲ್ಲಿ ಒಂದು ಕೊಳವೆ ಬಾವಿ ಕೊರೆಸಿ ಎಂಟು ವರ್ಷದಿಂದ ಬೇಸಾಯ ಆರಂಭಿಸಿದ ಇವರು, ಕಳೆದ ವರ್ಷ ಮೊದಲ ಕೊಯ್ಲಿನಲ್ಲಿಯೇ ಕಾಳುಮೆಣಸು ಒಂದರಿಂದಲೇ ಒಂದೂವರೆ ಕ್ವಿಂಟಾಲ್ ಫಸಲು ತೆಗೆದು ಎರಡು ಲಕ್ಷ ರೂ. ಲಾಭ ಮಾಡಿದ್ದಾರೆ. ಈ ವರ್ಷ 7 ಕ್ವಿಂಟಾಲ್ ಕಾಳುಮೆಣಸು ಸಿಗಲಿದ್ದು, ಐದು ಲಕ್ಷ ರೂ. ಲಾಭ ಗಳಿಸುತ್ತೇನೆ ಎಂದು ದೃಢವಾಗಿ ಹೇಳುತ್ತಾರೆ ಮಂಜುನಾಥ್.

350 ಅಡಿಕೆ ಮರದ ಪೈಕಿ 180 ಮರಕ್ಕೆ ಕಾಳುಮೆಣಸಿನ ಗಿಡ ಹಬ್ಬಿಸಿದ್ದಾರೆ. 50 ತೆಂಗು, ವಿವಿಧ ಜಾತಿಯ 20 ಹಣ್ಣಿನ ಗಿಡಗಳನ್ನು ಬೆಳೆಸಿದ್ದಾರೆ. ಮನೆಗೆ ಬೇಕಾದ ತರಕಾರಿಗಳನ್ನು ಬೆಳೆದುಕೊಳ್ಳುತ್ತಾರೆ. ಕೃಷಿ ಗೊಬ್ಬರಕ್ಕಾಗಿ ಎರಡು ಹಸುಗಳನ್ನು ಸಾಕಿಕೊಂಡು ಜೀವಾಮೃತ, ಬೀಜಾಮೃತ ಮಾಡುತ್ತಾರೆ. ಎರೆಹುಳು, ಜೇನು ಸಾಕಣೆಯೂ ಇದೆ.

ಮಂಜುನಾಥ್ ಪತ್ನಿ ವಿನುತಾ ಮಂಜುನಾಥ್‌ಗೆ ಕೃಷಿಯಲ್ಲಿ ಸಾಥ್ ನೀಡುತ್ತಿದ್ದಾರೆ. ತಂದೆ ಶಂಕರಸ್ವಾಮಿ, ತಾಯಿ ಕಮಲಮ್ಮ ಅವರೂ ಕೃಷಿ ಉಪಕಸುಬಗಳ ನಿರ್ವಹಣೆ ಮಾಡುವ ಮೂಲಕ ಮಗ ಸೊಸೆಯ ಶ್ರಮಕ್ಕೆ ಒತ್ತಾಸೆಯಾಗಿ ನಿಂತಿದ್ದಾರೆ.

ವಿವಿಧ ಇಲಾಖೆಗಳು ಇವರ ಸಾಧನೆಯನ್ನು ಗಮನಸಿವೆ. ‘ಆತ್ಮ’ ಯೋಜನೆಯಡಿ ಈ ರೈತ ಕುಟುಂಬವನ್ನು ನೋಂದಣಿ ಮಾಡಿಕೊಂಡಿವೆ. ಡಿಸೆಂಬರ್ ತಿಂಗಳಲ್ಲಿ ಇವರ ಪ್ರಾತ್ಯಕ್ಷಿಕೆ ಏರ್ಪಡಿಸಿ ಇತರ ರೈತರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿವೆ.

ವಿವಿಧ ಸ್ವಯಂಸೇವಾ ಸಂಸ್ಥೆಗಳು ಇವರ ಸಾಧನೆಗೆ ಬೆಂಬಲವಾಗಿ ನಿಂತು ಇತರ ಆಸಕ್ತ ರೈತರಿಗೆ ತಾಕುಗಳನ್ನು ತೋರಿಸುವ ಮೂಲಕ ನೆರವಾಗುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆದ ಯಶಸ್ವಿ ಕೃಷಿಮೇಳದಲ್ಲಿ ಮಂಜುನಾಥ್ ಪತ್ನಿ ವಿನುತಾ ಅವರಿಗೆ ಯುವ ರೈತ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಕಾಳುಮೆಣಸಿನ ಗಿಡಗಳ ನರ್ಸರಿ ಮಾಡುವುದು ನನ್ನಗುರಿ. ಬಂದವರೆಲ್ಲಾ ಮೆಣಸಿನ ಗಿಡಗಳನ್ನು ಬೆಳೆಸಿ ಕೊಡಿ ಎಂದು ಕೇಳುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಮೈಸೂರಿನ ಒಡಿಪಿ ಸಂಸ್ಥೆಯವರು ನನ್ನ ಬೆಂಬಲಕ್ಕಿದ್ದಾರೆ. ಕೃಷಿ ಮಾಡಲು ಆಸಕ್ತಿ ಇರುವ ರೈತರು ನೇರವಾಗಿ ಭೇಟಿಯಾಗಬಹುದು, ಇಲ್ಲವೇ ದೂರವಾಣಿ ಸಂಖ್ಯೆ 8762040846ಗೆ ಕರೆ ಮಾಡಬಹುದು.

-ಮಂಜುನಾಥ್,

ಯುವ ರೈತ

Writer - ವಾರ್ತಾಭಾರತಿ

contributor

Editor - jafar sadik

contributor

Byline - ಕುಂಟನಹಳ್ಳಿ ಮಲ್ಲೇಶ

contributor

Similar News