ಮತಗಟ್ಟೆ ಸಮೀಕ್ಷೆ: ಚದುರಿದ ಬಿಂಬಗಳಲ್ಲಿ ನಿಖರತೆ ಹುಡುಕುವ ಯತ್ನ

ಲೋಕಸಭಾ ಚುನಾವಣೆಗೆ ಮತದಾನ ಮುಗಿದಿದೆ. ಜೂನ್ 4ರಂದು ಫಲಿತಾಂಶ ಹೊರಬೀಳಲಿದೆ. ಅದರ ನಡುವೆ, ಎಕ್ಸಿಟ್ ಪೋಲ್ ಅಥವಾ ಮತಗಟ್ಟೆ ಸಮೀಕ್ಷೆಗಳು ಒಂದು ಹಂತದ ಮಟ್ಟಿಗೆ ಫಲಿತಾಂಶದ ಬಗೆಗಿನ ಕುತೂಹಲವನ್ನು ತಣಿಸಿದ ಹಾಗೆ ಅಥವಾ ಇನ್ನಷ್ಟು ತೀವ್ರಗೊಳಿಸಿದ ಹಾಗೆ ಕಾಣಿಸುತ್ತಿದೆ. ಫಲಿತಾಂಶದ ಬಗೆಗಿನ ಒಂದು ಟ್ರೆಂಡ್ ಅನ್ನು ಸೂಚಿಸುವ ಮತಗಟ್ಟೆ ಸಮೀಕ್ಷೆಗಳು ನಿಖರವೇನೂ ಅಲ್ಲದಿದ್ದರೂ, ಅವು ಫಲಿತಾಂಶಕ್ಕೆ ಎಷ್ಟು ಹತ್ತಿರವಾಗಿದ್ದವು ಎಂಬುದು ಚರ್ಚೆಯಾಗುವ ವಿಚಾರ. ಅದೇನೇ ಇದ್ದರೂ ಮತಗಟ್ಟೆ ಸಮೀಕ್ಷೆಗಳ ವಿಶ್ವಾಸಾರ್ಹತೆ ಅಗ್ನಿಪರೀಕ್ಷೆಗೆ ಒಳಗಾಗುತ್ತಲೇ ಇದೆ. ತೀರಾ ವ್ಯತಿರಿಕ್ತ ಎನ್ನಿಸಿದ ಸಮೀಕ್ಷೆಗಳೂ ಬಂದಿದ್ದಿದೆ. ಎಕ್ಸಿಟ್ ಪೋಲ್‌ಗೆ ಸುತ್ತಿಕೊಂಡಿರುವ ರಾಜಕೀಯದ ಕುರಿತ ಸಂಶಯಗಳೇನು? ಎಕ್ಸಿಟ್ ಪೋಲ್‌ಗಳು ದುರ್ಬಳಕೆ ಆಗುತ್ತಿವೆಯೇ? ರಾಜಕೀಯ ಪಕ್ಷಗಳಿಗೆ ಬೇಕಾದಂತೆ ಅವುಗಳನ್ನು ಬಳಸಲಾಗುತ್ತಿದೆಯೇ?

Update: 2024-06-04 03:06 GMT
Editor : Naufal | By : ಆರ್. ಜೀವಿ

ಎಪ್ರಿಲ್ 19ರಿಂದ ಶುರುವಾಗಿದ್ದ ದೀರ್ಘಾವಧಿಯ ಈ ಸಲದ ಲೋಕಸಭಾ ಚುನಾವಣೆ ಜೂನ್ 1ರ ಅಂತಿಮ ಹಂತದ ಮತದಾನದೊಂದಿಗೆ ಮುಗಿದಿದೆ. ಕೊನೆಯ ಹಂತದ ಮತದಾನ ಮುಗಿಯುತ್ತಿದ್ದಂತೆ ಎಕ್ಸಿಟ್ ಪೋಲ್, ಅಂದರೆ ಮತಗಟ್ಟೆ ಸಮೀಕ್ಷೆಗಳು ಪ್ರಕಟವಾಗಿವೆ.

ಬಹುತೇಕ ಮತಗಟ್ಟೆ ಸಮೀಕ್ಷೆಗಳು ಎನ್‌ಡಿಎ ಮೇಲುಗೈ ಸಾಧಿಸಲಿದೆ ಎಂದಿವೆ. ಎನ್‌ಡಿಎ ಗೆಲ್ಲಬಹುದಾದ ಸ್ಥಾನಗಳು 325ರಿಂದ 371ರವರೆಗೂ ಹೋಗಬಹುದು ಎಂದು ಸಮೀಕ್ಷೆಗಳು ಹೇಳಿವೆ. ಇನ್ನು ‘ಇಂಡಿಯಾ’ ಒಕ್ಕೂಟ 118ರಿಂದ 169ರವರೆಗೆ ಸೀಟುಗಳನ್ನು ಪಡೆಯಬಹುದು ಎಂದು ಸಮೀಕ್ಷೆಗಳು ಅಂದಾಜಿಸಿವೆ. ದಕ್ಷಿಣ ಭಾರತದಲ್ಲಿಯೂ ಕೇರಳ ಮತ್ತು ತಮಿಳುನಾಡು ಹೊರತುಪಡಿಸಿದರೆ ಎನ್‌ಡಿಎ ಬಲವೇ ಹೆಚ್ಚಿರಲಿದೆ ಎಂಬುದು ಸಮೀಕ್ಷೆಗಳ ಅಂದಾಜಾಗಿದೆ.

ಈ ಸಮೀಕ್ಷೆಗಳು ‘ಚಾರ್ ಸೌ ಪಾರ್’ ಎನ್ನುತ್ತಿದ್ದ ಬಿಜೆಪಿಯ ಪ್ರಭಾವದ ನೆರಳಲ್ಲಿಯೇ ಇರುವ ಹಾಗೆ ಕಾಣಿಸುತ್ತಿದೆ.

ಬಹುಮತದ ನಿರೀಕ್ಷೆಯಲ್ಲಿರುವ ಇಂಡಿಯಾ ಒಕ್ಕೂಟಕ್ಕೆ ಆಘಾತ ಎಂದೆಲ್ಲ ಮೀಡಿಯಾಗಳ ವ್ಯಾಖ್ಯಾನವೂ ನಡೆದಿದೆ. ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದ್ದು, ಅದಕ್ಕೂ ಮೊದಲು ಈ ಮತಗಟ್ಟೆ ಸಮೀಕ್ಷೆಗಳು ಫಲಿತಾಂಶ ಏನಿರಬಹುದು ಎಂಬ ಒಂದು ಸ್ಥೂಲ ಚಿತ್ರವನ್ನು ಕೊಟ್ಟಿವೆ. ಅವು ಹೇಳಿದ್ದೇ ಆಗಲಿದೆ ಎಂದೇನೂ ಇಲ್ಲ.

ಹಿರಿಯ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಅವರು ಹೇಳುವಂತೆ, ಚುನಾವಣೆ ಮುಗಿದ ಮೂರು ದಿನಗಳಲ್ಲಿ ಫಲಿತಾಂಶವೇ ಬರಲಿರುವಾಗ ಯಾಕೆ ಇಷ್ಟೊಂದು ಹಣ ಮತ್ತು ಸಮಯ ಹಾಕಿ ಮತಗಟ್ಟೆ ಸಮೀಕ್ಷೆ ಮಾಡುವುದರ ಅಗತ್ಯವಿದೆ ಎಂಬ ಪ್ರಶ್ನೆ ಸಹಜ. ಆದರೆ, ಯಾರು ಗೆದ್ದರು ಎಂದು ಗೊತ್ತಾಗುವ ಮೊದಲೇ ಯಾರು ಗೆಲ್ಲಬಹುದು ಎಂದು ತಿಳಿಯುವ ಕುತೂಹಲ ಜಗತ್ತಿನಾದ್ಯಂತ ದೊಡ್ಡ ಮಟ್ಟದಲ್ಲಿ ಇರುತ್ತದೆ ಎಂಬುದು ಸತ್ಯ.

ಸುದೀರ್ಘ ಅವಧಿಯ ಈ ಚುನಾವಣೆಯಂತೂ ಮತಗಟ್ಟೆ ಸಮೀಕ್ಷೆಯ ವಿಶ್ವಾಸಾರ್ಹತೆಗೇ ಒಂದು ಅಗ್ನಿಪರೀಕ್ಷೆಯಾಗಿತ್ತು. ಚುನಾವಣಾ ಕಣದಲ್ಲಿ ದಾಖಲೆಯ 744 ರಾಜಕೀಯ ಪಕ್ಷಗಳಿದ್ದರೆ, ಅಭ್ಯರ್ಥಿಗಳ ಸಂಖ್ಯೆ 8,360 ಇತ್ತು.

ಮತಗಟ್ಟೆ ಸಮೀಕ್ಷೆ ಎಂಬುದು ಮಾಧ್ಯಮ ಸಮೂಹಗಳೊಂದಿಗಿನ ಸಹಯೋಗ ಮತ್ತು ಪರಿಣಿತರ ಗಂಭೀರ ಚರ್ಚೆಯೊಂದಿಗೆ ಸಂಚಲನ ಮೂಡಿಸುತ್ತದೆ ಮತ್ತು ಅತಿ ಮಹತ್ವ ಪಡೆಯುತ್ತದೆ. ನಮ್ಮಲ್ಲಂತೂ ಮತದಾರರ ಮನಸ್ಸು ತಿಳಿದುಕೊಳ್ಳಲು ಕನಿಷ್ಠ ಒಂದು ಡಜನ್ ಸಂಸ್ಥೆಗಳು ಮತಗಟ್ಟೆ ಸಮೀಕ್ಷೆಗಳನ್ನು ನಡೆಸುತ್ತವೆ.

ಚುನಾವಣಾ ಪೂರ್ವ ಸಮೀಕ್ಷೆಗಳು ಮೋದಿ ಜನಪ್ರಿಯತೆ ಬಗ್ಗೆ ಹೇಳಿದ್ದರೂ, ಮೊದಲ ಹಂತದ ಮತದಾನದಿಂದ ಕಂಡದ್ದು ಕಡಿಮೆ ಮತದಾನ, ಬಿಸಿಲ ಬೇಗೆಯ ಪರಿಣಾಮ ಮತ್ತು ಮೋದಿ ಹಿಂದುತ್ವ ಮತ್ತು ದ್ವೇಷ ತಂತ್ರ ಬಿಜೆಪಿಗೆ ತಿರುಗುಬಾಣವಾಗಿದೆ ಎಂಬ ಅಭಿಪ್ರಾಯಗಳು. ಇದೆಲ್ಲವೂ ಮತಗಟ್ಟೆ ಸಮೀಕ್ಷೆಯ ಸವಾಲನ್ನು ಇನ್ನಷ್ಟು ಹೆಚ್ಚಿಸಿತ್ತು ಎಂಬುದು ನಿಜ.

ಮತಗಟ್ಟೆ ಸಮೀಕ್ಷೆ ಎಂದರೆ ಏನು?

ಅವುಗಳನ್ನು ನಡೆಸುವ ಬಗೆ ಹೇಗೆ?

ಅತ್ಯಂತ ಸರಳವಾಗಿ ಹೇಳುವುದಾದರೆ, ಚುನಾವಣೆಗೆ ಮುನ್ನ ನಡೆಯುವ ಸಮೀಕ್ಷೆ ಚುನಾವಣಾ ಪೂರ್ವ ಸಮೀಕ್ಷೆಯಾಗಿರುತ್ತದೆ. ಒಂದು ಹಂತದಲ್ಲಿ ಜನರ ಭಾವನೆ ಹೇಗಿದೆ ಎನ್ನುವುದರ ಸ್ಥೂಲ ನೋಟ ಅದರಲ್ಲಿ ಸಿಗುತ್ತದೆ.

ಎಕ್ಸಿಟ್ ಪೋಲ್ ಅಥವಾ ಮತಗಟ್ಟೆ ಸಮೀಕ್ಷೆ ಆಗಷ್ಟೇ ಮತದಾನ ಮಾಡಿ ಬಂದವರಲ್ಲಿ ಕೆಲವರ ಅಭಿಪ್ರಾಯಗಳ ಆಧಾರದ ಮೇಲಿನ ಅಂದಾಜಾಗಿರುತ್ತದೆ. ಅವು ನಿಖರವಾದ ಮುನ್ಸೂಚಕವಲ್ಲದಿದ್ದರೂ, ನಿಜವಾದ ಫಲಿತಾಂಶ ಹೇಗಿರಬಹುದು ಎಂಬುದನ್ನು ಅಳೆಯಲು ನೆರವಾಗುತ್ತವೆ. ಎಕ್ಸಿಟ್ ಪೋಲ್‌ಗಳಲ್ಲಿನ ವಿವರಗಳು ವಿಜೇತರು ಹೇಗೆ ಗೆದ್ದಿದ್ದಾರೆ, ಜನರು ಏಕೆ ಮತ ಚಲಾಯಿಸಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ.

ಮತದಾನ ಪೂರ್ಣವಾಗಿ ಮುಗಿಯುವವರೆಗೂ ಮತಗಟ್ಟೆ ಸಮೀಕ್ಷೆಗಳನ್ನು ಪ್ರಕಟಿಸುವಂತಿಲ್ಲ ಎಂಬುದು ಚುನಾವಣಾ ಆಯೋಗದ ಸ್ಪಷ್ಟ ಸೂಚನೆ. ಹಾಗಾಗಿ, ಪ್ರತೀ ಹಂತದ ಮತದಾನದ ವೇಳೆ ಏಜೆನ್ಸಿಗಳು ಮತಗಟ್ಟೆ ಸಮೀಕ್ಷೆ ಮಾಡಿದ್ದರೂ ಅದರ ವಿವರವನ್ನು ಎಲ್ಲಿಯೂ ಬಹಿರಂಗಪಡಿಸುವುದಿಲ್ಲ. ದೇಶದಾದ್ಯಂತ ಪ್ರತೀ ಹಂತದಲ್ಲೂ ಕೊನೆಯ ಮತ ಚಲಾವಣೆಯಾದ 30 ನಿಮಿಷಗಳ ನಂತರ ಏಜೆನ್ಸಿಗಳು ಸಮೀಕ್ಷೆ ಶುರು ಮಾಡುತ್ತವೆ. ಪ್ರತೀ ಹಂತದ ಮತದಾನದ ನಂತರ, ಮತದಾರರನ್ನು ಅವರು ಯಾವ ರಾಜಕೀಯ ಪಕ್ಷವನ್ನು ಬೆಂಬಲಿಸಿದರು ಎಂದು ಕೇಳಲಾಗುತ್ತದೆ.

ಮತಗಟ್ಟೆ ಸಮೀಕ್ಷೆಗಳ ವಿಶ್ವಾಸಾರ್ಹತೆ ಏನು?

ವೈವಿಧ್ಯಮಯ ಮತ್ತು ಅನಿರೀಕ್ಷಿತ ನಿಲುವನ್ನು ವ್ಯಕ್ತಪಡಿಸುವ ನಮ್ಮ ದೇಶದಲ್ಲಿ ಚುನಾವಣಾ ಫಲಿತಾಂಶಗಳನ್ನು ಊಹಿಸುವುದು ಸುಲಭವೇನಲ್ಲ. ಹಾಗಾಗಿ ಅನೇಕ ಸಲ ಮತಗಟ್ಟೆ ಸಮೀಕ್ಷೆಗಳ ಗ್ರಹಿಕೆ ತಪ್ಪಾಗಿರುವುದೂ ಇದೆ. 2004ರ ಚುನಾವಣೆಯಲ್ಲಿ ಎಲ್ಲಾ ಮತಗಟ್ಟೆ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್‌ಡಿಎ ಗೆಲ್ಲಲಿದೆ ಎಂದಿದ್ದವು. ಆದರೆ ಕಾಂಗ್ರೆಸ್ ಅಂತಿಮವಾಗಿ ಲೋಕಸಭೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. 2014ರಲ್ಲಿ ಮಾತ್ರ ಹೆಚ್ಚಿನ ಮತಗಟ್ಟೆ ಸಮೀಕ್ಷೆಗಳು ಗೆಲುವಿನ ಬಗ್ಗೆ ಸರಿಯಾಗಿಯೇ ಭವಿಷ್ಯ ನುಡಿದಿದ್ದವಾದರೂ, ಬಿಜೆಪಿ ಗೆಲುವು ಯಾವ ಮಟ್ಟದ್ದಿರಬಹುದು ಎಂಬುದನ್ನು ಗ್ರಹಿಸಲು ವಿಫಲವಾಗಿದ್ದವು.

ಮತದಾರರ ನಡವಳಿಕೆಯನ್ನು ಊಹಿಸುವುದು ಹಿಂದೆಂದಿಗಿಂತಲೂ ಕಷ್ಟ ಎಂಬುದು ಪರಿಣಿತರ ಅಭಿಪ್ರಾಯ. ಏಕೆಂದರೆ ಜನರು ಎಲ್ಲವನ್ನೂ ಬಹಿರಂಗವಾಗಿ ಹೇಳಲು ನಿರಾಕರಿಸುತ್ತಾರೆ. ಕೆಲವೊಮ್ಮೆ ಅವರು ಸಮೀಕ್ಷೆದಾರರ ದಾರಿ ತಪ್ಪಿಸುವಂತಹ ಉತ್ತರ ಕೊಡುವ ಸಾಧ್ಯತೆಯೂ ಇರುತ್ತದೆ.

ಜನರು ಸಾಮಾನ್ಯವಾಗಿ ನಿಜವಾದ ಫಲಿತಾಂಶಕ್ಕೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಮತಗಟ್ಟೆ ಸಮೀಕ್ಷೆಗಳಿಗೆ ಕೊಡುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಅನೇಕ ಮತಗಟ್ಟೆ ಸಮೀಕ್ಷೆಗಳು ಗೊಂದಲಕಾರಿಯಾಗುತ್ತಿವೆ. ಕಳೆದ ವರ್ಷ ಅನೇಕ ಸಮೀಕ್ಷೆಗಳು ಛತ್ತೀಸ್‌ಗಡ ಮತ್ತು ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಯಾರದೆಂದು ಅಂದಾಜಿಸುವಲ್ಲಿ ಎಡವಿದ್ದವು. ಮತ್ತೆ ಕೆಲವು ಸಮೀಕ್ಷೆಗಳು ರಾಜಸ್ಥಾನದಲ್ಲಿನ ನಿಜ ಫಲಿತಾಂಶಕ್ಕೆ ಬಹಳ ದೂರದ ಅಂದಾಜು ಮಾಡಿದ್ದವು. ಇದಕ್ಕೆ ಇಂಥದೇ ಎಂಬ ಯಾವುದೇ ಮಾದರಿಯಿಲ್ಲ. ಒಂದೆಡೆ ಫಲಿತಾಂಶವನ್ನು ಸರಿಯಾಗಿಯೇ ಊಹಿಸುವ ಏಜೆನ್ಸಿ ಮತ್ತೊಂದೆಡೆ ತಪ್ಪು ಮಾಡಲೂಬಹುದು. ಹೀಗಿರುವಾಗ ಎಕ್ಸಿಟ್ ಪೋಲ್ ಅನ್ನು ಆಧಾರವಾಗಿಟ್ಟುಕೊಂಡು ನಿಖರತೆಯನ್ನು ಹೇಗೆ ಗ್ರಹಿಸಬಹುದು? ಕೆಲವರು ಇದನ್ನು ಮತಗಟ್ಟೆ ಸಮೀಕ್ಷೆ ಮಾಡಿರುವ ಏಜೆನ್ಸಿ ಅಥವಾ ಅದರ ಹಿಂದಿರುವ ಮಾಧ್ಯಮ ಸಂಸ್ಥೆ ಯಾವುದು ಎಂಬುದರ ಮೇಲೆ ಗ್ರಹಿಸುತ್ತಾರೆ. ಇನ್ನು ಕೆಲವರು ಹಲವಾರು ವಿಭಿನ್ನ ಅಂಶಗಳ ಮೇಲೆ ಅವಲಂಬಿತವಾಗಿರುವ ಸಮೀಕ್ಷೆಯನ್ನು ನಿಖರತೆಗೆ ಹೆಚ್ಚು ಹತ್ತಿರವಾದೀತೆಂದು ನಂಬುತ್ತಾರೆ.

ಮತಗಟ್ಟೆ ಸಮೀಕ್ಷೆಯಲ್ಲಿ ಅನುಸರಿಸುವ ಕ್ರಮಗಳೇನು?

1957ರಲ್ಲಿ ಮತಗಟ್ಟೆ ಸಮೀಕ್ಷೆಗಳು ಶುರುವಾದಾಗಿನಿಂದ ಬದಲಾಗಿರುವ ಒಂದು ಅಂಶವೆಂದರೆ, ಸಾವಿರಗಳ ಲೆಕ್ಕದಲ್ಲಿ ಜನರನ್ನು ಮಾತನಾಡಿಸುವ ದಿನಗಳು ಮುಗಿದುಹೋಗಿ ಲಕ್ಷಗಟ್ಟಲೆ ಜನರನ್ನು ಮಾತನಾಡಿಸುವ ಬೃಹತ್ ಮಾದರಿಯನ್ನು ಸಮೀಕ್ಷೆಗೆ ಆಧಾರ ಮಾಡಿಕೊಳ್ಳಲಾಗುತ್ತಿದೆ. 20,000 ಅಥವಾ 30,000 ಜನರ ಪ್ರತಿಕ್ರಿಯೆ ಪಡೆದದ್ದೇ ಹೆಚ್ಚು ಎಂಬ ದಿನಗಳಿದ್ದವು. ಆದರೆ ಈಗ 10 ಲಕ್ಷದಷ್ಟು ಜನರನ್ನು ಮಾತನಾಡಿಸುವ ದೊಡ್ಡ ಮಾದರಿಗಳೊಂದಿಗಿನ ಮತಗಟ್ಟೆ ಸಮೀಕ್ಷೆಗಳನ್ನು ಕಾಣಬಹುದು.

ದೊಡ್ಡ ಮಾದರಿಯು ಹೆಚ್ಚು ನಿಖರವಾದ ಫಲಿತಾಂಶಗಳನ್ನು ಗ್ರಹಿಸುತ್ತದೆ ಎಂದು ‘ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್’(ಸಿಎಸ್‌ಡಿಎಸ್) ಪ್ರಾಧ್ಯಾಪಕ ಸಂಜಯ್ ಕುಮಾರ್ ಖಚಿತವಾಗಿ ಹೇಳುತ್ತಾರೆ.

ಮತಗಟ್ಟೆ ಸಮೀಕ್ಷೆಯಲ್ಲಿ ಆಯ್ದ ಕೆಲವರನ್ನು ಮಾತನಾಡಿಸುವ ಮೂಲಕ ವಿವಿಧ ಪಕ್ಷಗಳು ಮತ್ತು ಮೈತ್ರಿಗಳಿಗೆ ಆಗಿರಬಹುದಾದ ಮತ ಹಂಚಿಕೆಯ ಅಂದಾಜು ಮಾಡಲಾಗುತ್ತದೆ ಮತ್ತು ಹಿಂದಿನ ಚುನಾವಣೆಯ ಫಲಿತಾಂಶದ ಆಧಾರದ ಮೇಲೆ ಸೀಟುಗಳ ಸಾಧ್ಯತೆ ಊಹಿಸಲಾಗುತ್ತದೆ. ಈಚಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲ ಸಮೀಕ್ಷೆಗಳಲ್ಲೂ ಲಕ್ಷಗಟ್ಟಲೆ ಮಾದರಿಯ ಗಾತ್ರವೇ ಇರುವುದರಿಂದ, ಏಜೆನ್ಸಿಗಳು ಸೀಟುವಾರು ಅಂದಾಜುಗಳನ್ನು ಮಾಡಿರುವುದಾಗಿ ಹೇಳಿಕೊಂಡಾಗ ಅದನ್ನು ಅತ್ಯಂತ ಸಮಗ್ರ ಎನ್ನಲಾಗುತ್ತದೆ.

ಸಾಂಪ್ರದಾಯಿಕ ವಿಧಾನ ಬಳಸಿ ನಡೆಸಿದ ಸಮೀಕ್ಷೆಗಳಿಗಿಂತ ಹೊಸ ಬಗೆಯ ಮತಗಟ್ಟೆ ಸಮೀಕ್ಷೆಗಳು ಹೆಚ್ಚು ನಿಖರವಾಗಿರಲು ಸಾಧ್ಯ. ಆದರೆ ಸಾಂಪ್ರದಾಯಿಕ ವಿಧಾನದ ಸಮೀಕ್ಷೆಗಳು ಮತ ಹಂಚಿಕೆಯನ್ನು ಅಂದಾಜು ಮಾಡುತ್ತವೆ ಮತ್ತು ವಿಭಿನ್ನ ಸಾಮಾಜಿಕ ಆರ್ಥಿಕ ಹಿನ್ನೆಲೆಗಳ ಆಧಾರದ ಮೇಲೆ ಮತದಾನದಲ್ಲಿನ ರೀತಿಯನ್ನು ವಿಶ್ಲೇಷಿಸಲು ಸಹಾಯ ಮಾಡುತ್ತವೆ. ಆದರೂ, ಮತದಾನದಲ್ಲಿ ಮತದಾರರು ತೋರಬಹುದಾದ ನಡವಳಿಕೆಯ ಯಾವುದೇ ಕರಾರುವಾಕ್ ವಿಶ್ಲೇಷಣೆ ಎಂಬುದು ಇರಲಾರದು ಎನ್ನುತ್ತಾರೆ ಪರಿಣಿತರು.

ಈ ಹಿಂದಿನ ಎಕ್ಸಿಟ್ ಪೋಲ್‌ಗಳು ಎಷ್ಟು ನಿಜವಾಗಿವೆ, ಎಷ್ಟು ತಪ್ಪಾಗಿವೆ ?

ಮತಗಟ್ಟೆ ಸಮೀಕ್ಷೆಗಳು ಯಾವಾಗಲೂ ನಿಖರವಾಗಿಯೇ ಇದ್ದದ್ದಿದೆಯೇ? ಖಂಡಿತ ಇಲ್ಲ. ಆಗಾಗ ಅವು ಅಂತಿಮ ಫಲಿತಾಂಶವನ್ನು ನಿಖರವಾಗಿ ಸೂಚಿಸುವಲ್ಲಿ ಎಡವಿದ್ದೂ ಇದೆ. ಅಂತಹ ಕೆಲವು ಉದಾಹರಣೆಗಳೆಂದರೆ,

1.ಗಮನಾರ್ಹವಾಗಿ 2004ರ ಲೋಕಸಭೆ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳು ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ ಬರುತ್ತದೆ ಎಂದಿದ್ದವು. ಆದರೆ ಅಂತಿಮ ಫಲಿತಾಂಶ ಬೇರೆಯೇ ಇತ್ತು. ಆಗ ಎಕ್ಸಿಟ್ ಪೋಲ್‌ಗಳು ಬಿಜೆಪಿ ನೇತೃತ್ವದ ಎನ್‌ಡಿಎಗೆ 240ರಿಂದ 250 ಸ್ಥಾನಗಳನ್ನು ನಿರೀಕ್ಷಿಸಿದ್ದವು. ಆದರೆ ನಿಜವಾದ ಫಲಿತಾಂಶ ಬಂದಾಗ ಸಂಖ್ಯೆಗಳು ಸಂಪೂರ್ಣವಾಗಿ ವಿರುದ್ಧವಾಗಿದ್ದವು.

2. ದಿಲ್ಲಿ ಅಸೆಂಬ್ಲಿ ಚುನಾವಣೆ 2015ರಲ್ಲಿ ನಡೆದಾಗಲೂ, ಎಎಪಿಗೆ ಸ್ಪಷ್ಟ ಗೆಲುವನ್ನು ಮತಗಟ್ಟೆ ಸಮೀಕ್ಷೆಗಳು ಅಂದಾಜು ಮಾಡಿದ್ದವು. ಆದರೆ ಯಾವ ಏಜೆನ್ಸಿಗೂ ಅದರ ಪ್ರಚಂಡ ಗೆಲುವನ್ನು ಊಹಿಸಲು ಸಾಧ್ಯವಾಗಿರಲಿಲ್ಲ. ಚುನಾವಣೆಯಲ್ಲಿ ಎಎಪಿ 70 ಸೀಟುಗಳಲ್ಲಿ 67ರಲ್ಲಿ ಗೆದ್ದು ಅದ್ಭುತ ಸಾಧನೆ ಮಾಡಿತ್ತು.

3.ಬಿಹಾರ ವಿಧಾನಸಭಾ ಚುನಾವಣೆ 2015ರಲ್ಲಿ ನಡೆದಾಗ ಯಾವುದೇ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ದೊರೆಯುವುದಿಲ್ಲ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿದ್ದವು. ಆದರೆ ಆರ್‌ಜೆಡಿ-ಜೆಡಿಯು-ಕಾಂಗ್ರೆಸ್ ಒಕ್ಕೂಟ ಭರ್ಜರಿ ಜಯ ಸಾಧಿಸಿ, ಆರ್‌ಜೆಡಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.

4.ಯುಪಿ ಅಸೆಂಬ್ಲಿ ಚುನಾವಣೆ 2017ರಲ್ಲಿ ನಡೆದಾಗ, ಅತಂತ್ರ ವಿಧಾನಸಭೆ ಬಗ್ಗೆ ಮತಗಟ್ಟೆ ಸಮೀಕ್ಷೆಗಳು ಹೇಳಿದ್ದವು. ಅದಕ್ಕೆ ವ್ಯತಿರಿಕ್ತವಾಗಿ ಬಿಜೆಪಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿತ್ತು. ಅದು ನಿರೀಕ್ಷಿತ ಫಲಿತಾಂಶಕ್ಕಿಂತಲೂ ಗಣನೀಯವಾಗಿ ಭಿನ್ನವಾಗಿತ್ತು. 2012ರಲ್ಲಿ 47 ಸ್ಥಾನಗಳನ್ನಷ್ಟೇ ಗಳಿಸಿದ್ದ ಬಿಜೆಪಿ 2017ರಲ್ಲಿ ಅಸಾಧಾರಣ ಗೆಲುವನ್ನು ಕಂಡಿತ್ತು.

5. ಹಾಗೆಯೇ 2014ರ ಲೋಕಸಭಾ ಚುನಾವಣೆಯಲ್ಲಿ ಬಹುತೇಕ ಮತಗಟ್ಟೆ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್‌ಡಿಎ ಗೆಲುವನ್ನು ಊಹಿಸಿದ್ದವು. ಆದರೆ ಬಿಜೆಪಿ ಸಂಪೂರ್ಣ ಬಹುಮತ ಪಡೆಯುತ್ತದೆಂದು ಯಾವುದೇ ಸಮೀಕ್ಷೆ ಹೇಳಿರಲಿಲ್ಲ. ಚುನಾವಣೆಯಲ್ಲಿ ಎನ್‌ಡಿಎ 300 ಸ್ಥಾನಗಳನ್ನು ದಾಟಿತ್ತು. ಬಿಜೆಪಿಯೊಂದೇ ಮ್ಯಾಜಿಕ್ ನಂಬರ್ 272ನ್ನು ದಾಟಿತ್ತು. ಕಾಂಗ್ರೆಸ್ ಗಮನಾರ್ಹ ಹಿನ್ನಡೆಯೊಂದಿಗೆ ಕೇವಲ 44 ಸ್ಥಾನಗಳನ್ನು ಗಳಿಸಿತ್ತು. ಈ ಸಂಪೂರ್ಣ ವ್ಯತಿರಿಕ್ತತೆಯನ್ನು ಎಕ್ಸಿಟ್ ಪೋಲ್‌ಗಳು ಊಹಿಸಿರಲಿಲ್ಲ.

ಇನ್ನು 2019ರ ಮತಗಟ್ಟೆ ಸಮೀಕ್ಷೆಗಳು ಅಂತಿಮ ಫಲಿತಾಂಶಕ್ಕೆ ಸಾಕಷ್ಟು ಹತ್ತಿರವಾಗಿದ್ದವು ಎಂಬುದನ್ನು ಇಲ್ಲಿ ಗಮನಿಸಬಹುದು.

ಎಕ್ಸಿಟ್ ಪೋಲ್‌ಗೆ ಸುತ್ತಿಕೊಂಡಿರುವ ರಾಜಕೀಯದ ಕುರಿತ ಸಂಶಯಗಳು ಕೂಡ ದೊಡ್ಡ ಪ್ರಮಾಣದಲ್ಲಿಯೇ ಇವೆ.

ಎಕ್ಸಿಟ್ ಪೋಲ್‌ಗಳು ದುರ್ಬಳಕೆ ಆಗುತ್ತಿರುವುದು ಕೂಡ, ಆಯಾ ಮಾಧ್ಯಮ ಸಂಸ್ಥೆಗಳು ಯಾವ ರಾಜಕೀಯ ಪಕ್ಷದೊಡನೆ ಗುರುತಿಸಿಕೊಂಡಿವೆ ಎಂಬುದರ ಜೊತೆಗೆ ತಳುಕು ಹಾಕಿಕೊಂಡಿದೆಯೇ ಎಂಬ ಅನುಮಾನವೂ ಇದೆ. ರಾಜಕೀಯ ಪಕ್ಷಗಳಿಗೆ ಬೇಕಾದ ಹಾಗೆ ಅವುಗಳನ್ನು ಬಳಸಲಾಗುತ್ತಿರುವ ಅನುಮಾನಗಳೂ ಇವೆ. ಈ ಹಿಂದೆ, ಕೆಲವು ಸಮೀಕ್ಷೆ ಏಜನ್ಸಿಗಳು ಆಡಳಿತಾರೂಢ ಪಕ್ಷ ಸಿಟುಗಳನ್ನು ಕಳೆದುಕೊಳ್ಳುವ ಸಾಧ್ಯತೆಯನ್ನು ಹೇಳದಂತೆ ಟಿವಿ ಚಾನೆಲ್‌ಗಳು ಅಥವಾ ರಾಜಕೀಯ ಪಕ್ಷಗಳಿಂದ ಒತ್ತಡ ಎದುರಿಸಿದ್ದವೆಂಬ ಮಾತುಗಳೂ ಇವೆ. ಪಕ್ಷನಿಷ್ಠೆ ಸಹಜವಾಗಿಯೇ ಮತಗಟ್ಟೆ ಸಮೀಕ್ಷೆಯ ನಂಬರುಗಳನ್ನು ಅಂತಿಮಗೊಳಿಸುವಲ್ಲಿ ಪ್ರಭಾವ ಬೀರುತ್ತದೆ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಇದಲ್ಲದೆ, ಪ್ರಾಮಾಣಿಕ ಸಂಶೋಧನೆಗೆ ಅಗತ್ಯವಾದ ಸಾಕಷ್ಟು ಹಣವನ್ನು ಒದಗಿಸುವುದಕ್ಕೆ ಮಾಧ್ಯಮ ಸಂಸ್ಥೆಗಳು ಅಷ್ಟಾಗಿ ಮನಸ್ಸು ಮಾಡುವುದಿಲ್ಲ ಎಂಬುದು ಕೂಡ, ಚುನಾವಣಾ ಸಂಶೋಧನೆ ಉದ್ಯಮದಲ್ಲಿರುವವರ ದೂರು.

ಅನೇಕ ಎಕ್ಸಿಟ್ ಪೋಲ್‌ಗಳು ಕೇವಲ ಸ್ಥಾನಗಳ ಸಂಖ್ಯೆಯನ್ನು ಊಹಿಸುವುದಕ್ಕಷ್ಟೇ ಸೀಮಿತವಾಗಿವೆ. ಅವು ಮತ ಹಂಚಿಕೆ ಬಗ್ಗೆ ಹೇಳುವುದಿಲ್ಲ. ಯಾವುದೇ ಕ್ರಮಬದ್ಧ ವ್ಯವಸ್ಥೆಯ ಅನುಸರಣೆ ಇರುವುದಿಲ್ಲ ಎಂಬ ತಕರಾರುಗಳನ್ನೂ ಪರಿಣಿತರು ಎತ್ತುವುದಿದೆ. ಯಾವುದೇ ಸಮೀಕ್ಷೆಗೆ ಮತ ಹಂಚಿಕೆ ಅಂದಾಜು ಕಡ್ಡಾಯ. ಮತ ಹಂಚಿಕೆಯನ್ನು ಅಂದಾಜು ಮಾಡದಿದ್ದರೆ, ಗೆಲ್ಲಬಹುದಾದ ಸೀಟುಗಳ ಕುರಿತ ಅಂದಾಜಿಗೆ ಯಾವ ಆಧಾರವೂ ಇರುವುದಿಲ್ಲ. ಇಂಥವುಗಳನ್ನು ಎಕ್ಸಿಟ್ ಪೋಲ್‌ಗಳೆಂದು ಪರಿಗಣಿಸಬೇಕೇ? ಎಂಬ ಪ್ರಶ್ನೆಯೂ ಏಳುತ್ತದೆ.

ನಿಜವಾದ ಮತಗಟ್ಟೆ ಸಮೀಕ್ಷೆ ಮತ್ತು ಬರೀ ಅಂದಾಜು ಸಮೀಕ್ಷೆಗಳ ನಡುವೆ ವ್ಯತ್ಯಾಸವನ್ನು ಮಾಡಬೇಕಾದ ಹೊತ್ತು ಇದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ಆರ್. ಜೀವಿ

contributor

Similar News