ಮೋದಿ 3ನೇ ಅವಧಿ ಮತ್ತು ನಿಜವಾದ ಮೈತ್ರಿ ಸರಕಾರ

ಮೈತ್ರಿಕೂಟ ಇದ್ದೂ ಇಲ್ಲದಂತೆ ಎಲ್ಲವೂ ಒಂದೇ ಪಕ್ಷ, ಒಂದೇ ನಾಯಕ ಎಂಬಂತಿದ್ದ ಮೋದಿ ಹಾಗೂ ಬಿಜೆಪಿ ಪಾಲಿಗೆ ಅಚಾನಕ್ ಆಗಿ ದೊಡ್ಡ ತಿರುವು ಬಂದಿದೆ. ಹೆಸರಿಗೆ ಮಾತ್ರ ಎಂಬಂತಿದ್ದ ಎನ್‌ಡಿಎ ಮೈತ್ರಿಕೂಟ ಮತ್ತೆ ಜೀವಂತವಾಗಿದೆ. ಸಂಪೂರ್ಣವಾಗಿ ತೆರೆಮರೆಗೆ ಸರಿದು ಹೋಗಿದ್ದ ಅದರ ಬಿಜೆಪಿಯೇತರ ನಾಯಕರು ದಿಢೀರನೇ ಪ್ರಾಮುಖ್ಯತೆ ಪಡೆದು ಮೀಡಿಯಾಗಳಲ್ಲಿ ಮಿಂಚುತ್ತಿದ್ದಾರೆ. ಹತ್ತು ವರ್ಷ ಹೆಸರಿಗೆ ಮಾತ್ರ ಮೈತ್ರಿಕೂಟ ಸರಕಾರ ಇತ್ತು. ನಡೆದಿದ್ದೆಲ್ಲ ಮೋದಿ, ಶಾ ಹೇಳಿದ ಹಾಗೆ. ಆದರೆ ಈಗ ಮತ್ತೆ ಮೈತ್ರಿಕೂಟದ ಪಕ್ಷಗಳು ಹೇಳಿದಂತೆ ನಡೆಯುವ ಸರಕಾರ ದೇಶದಲ್ಲಿ ಅಸ್ತಿತ್ವಕ್ಕೆ ಬಂದಿದೆ.

Update: 2024-06-11 05:48 GMT
Editor : Thouheed | Byline : ಆರ್. ಜೀವಿ

ಮತ್ತೊಮ್ಮೆ ಎನ್‌ಡಿಎ ಸರಕಾರ ರಚನೆಯಾಗಿದೆ ಮತ್ತು ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿದ್ದಾರೆ. ಆದರೆ ಈ ಸಲದ್ದು ನಿಜವಾದ ಅರ್ಥದಲ್ಲಿ ಎನ್‌ಡಿಎ ಸರಕಾರವಾಗಿದೆ ಮತ್ತು ಮೋದಿ ಮೈತ್ರಿಪಕ್ಷಗಳ ನಿಯಂತ್ರಣದಲ್ಲಿ ಆಡಳಿತ ನಡೆಸಬೇಕಾಗಿರುವ ಪ್ರಧಾನಿಯಾಗಿದ್ದಾರೆ.

ಎಷ್ಟು ಬೇಗ ಕಾಲ ಬದಲಾಗಿ ಹೋಯಿತು ನೋಡಿ. ಇಲ್ಲಿಯ ವರೆಗೂ ಎನ್‌ಡಿಎ ಎಂದರೆ ಬಿಜೆಪಿ ಬಿಟ್ಟು ಮತ್ತಾವ ಪಕ್ಷವೂ ಕಣ್ಣಿಗೆ ಬೀಳದ ರೀತಿಯಲ್ಲಿ ಮೆರೆದಾಡಿತ್ತು ಮೋದಿಯ ಬಿಜೆಪಿ. ಎನ್‌ಡಿಎ ಇತರ ಸದಸ್ಯರ ನೆನಪು ಮೋದಿಗೆ ಆದದ್ದು ಕೂಡ ಕಳೆದ ವರ್ಷ ಜುಲೈನಲ್ಲಿ ‘ಇಂಡಿಯಾ’ ಮೈತ್ರಿಕೂಟ ತನ್ನ ಎರಡನೇ ಸಭೆಯನ್ನು ನಡೆಸುವ ಹೊತ್ತಿಗೆ.

ಎಲ್ಲ ಮಿತ್ರಪಕ್ಷಗಳ ಸಭೆಯನ್ನು ಆಗ ದಿಲ್ಲಿಯಲ್ಲಿ ನಡೆಸಲಾಯಿತು.

ಸುಮಾರು 38 ಪಕ್ಷಗಳ ಎನ್‌ಡಿಎಯಲ್ಲಿ ಯಾವ ಪಕ್ಷಕ್ಕೂ ಬೆಲೆಯಿರಲಿಲ್ಲ. ಅದಕ್ಕೆ ಕಾರಣ ಮೋದಿ ಬಲ. ಬಹುಮತದ ಅಹಂಕಾರದಿಂದ 10 ವರ್ಷ ಕಳೆದ ಮೋದಿ, ವಿಪಕ್ಷಗಳನ್ನು ಅವರ ನಾಯಕರನ್ನು ಹೀಗಳೆಯುತ್ತಿದ್ದ ಮೋದಿ ಈಗ ಸ್ವತಂತ್ರವಾಗಿ ಸರಕಾರ ರಚಿಸುವ ಬಲವೂ ಇಲ್ಲದಂತಾಗಿದ್ದಾರೆ.

ಈ ಸಲದ್ದು ಬಿಜೆಪಿ ಸರಕಾರವಲ್ಲ. ನಿಜವಾಗಿಯೂ ಎನ್‌ಡಿಎ ಮೈತ್ರಿಕೂಟದ ಸರಕಾರ ಮತ್ತು ಅದರಲ್ಲಿ ಮೋದಿ ತಾನು ನಡೆದದ್ದೇ ದಾರಿ ಎಂದು ಬಿಡುಬೀಸಾಗಿ ಹೋಗುವುದಕ್ಕೆ ಅವಕಾಶವೇ ಇಲ್ಲ. ಅವರೇನಿದ್ದರೂ ಒಂದೆಡೆ ಚಂದ್ರಬಾಬು ನಾಯ್ಡು ಮತ್ತೊಂದೆಡೆ ನಿತೀಶ್ ಕುಮಾರ್ ಅವರ ನಿಯಂತ್ರಣದಲ್ಲಿ ತಗ್ಗಿ ಬಗ್ಗಿ ನಡೆಯಬೇಕಾಗಿದೆ. ಅವರಿಬ್ಬರೂ ಯಾವಾಗ ಹೇಗೆ ಮನಸ್ಸು ಬದಲಾಯಿಸುತ್ತಾರೆ, ಯಾವಾಗ ವರಸೆ ಬದಲಿಸಿ ಕೈಕೊಡುತ್ತಾರೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಹಾಗಾಗಿ ಮೋದಿ ಮೂರನೇ ಅವಧಿ ಮಧ್ಯದಲ್ಲಿಯೇ ತುಂಡಾಗಿ ಅವರು ಅಧಿಕಾರದಿಂದ ಇಳಿದುಹೋಗಬೇಕಾಗಿಯೂ ಬರಬಹುದು. ಇದು ಹೆಚ್ಚು ದಿನ ಬಾಳುವ ಸರಕಾರವಲ್ಲ ಎಂದೇ ಪರಕಾಲ ಪ್ರಭಾಕರ್ ರಂತಹ ರಾಜಕೀಯ ವಿಶ್ಲೇಷಕರು ಕೂಡ ಹೇಳುತ್ತಿದ್ಧಾರೆ.

10 ವರ್ಷಗಳ ಬಳಿಕ ನಿಜವಾದ ಮೈತ್ರಿ ಸರಕಾರವೊಂದು ರಚನೆಯಾಗಿರುವ ಹೊತ್ತಿನಲ್ಲಿ, ದೇಶದ ರಾಜಕಾರಣದಲ್ಲಿ ಮೈತ್ರಿಕೂಟಗಳ ಪಾತ್ರ ಮತ್ತು ಪ್ರಾಬಲ್ಯವೇನು? ಎಲ್ಲಿಂದ ಶುರುವಾದ ಮೈತ್ರಿ ರಾಜಕೀಯ, ಎಲ್ಲಿಯವರೆಗೆ ಬಂದುಮುಟ್ಟಿದೆ? ಎಂಬುದನ್ನು ಒಮ್ಮೆ ಗಮನಿಸಬೇಕು.

ಸ್ವಾತಂತ್ರ್ಯಾನಂತರದ ಮೊದಲೆರಡು ದಶಕಗಳು ಕಾಂಗ್ರೆಸ್ ನಿರಾತಂಕ ಪ್ರಾಬಲ್ಯ ಮೆರೆದ ಕಾಲಘಟ್ಟ.

ಆನಂತರದ ವರ್ಷಗಳಲ್ಲಿ ಕಾಂಗ್ರೆಸ್ ಒಳಗೆ ಅಲ್ಲೋಲ ಕಲ್ಲೋಲವೆದ್ದಿತಾದರೂ, ಅದರೆಲ್ಲ ಅಪಸವ್ಯಗಳ ನಡುವೆಯೂ ಮತ್ತೊಂದು ದಶಕದವರೆಗೂ ಅದನ್ನು ಮಣಿಸಲಾಗಲಿಲ್ಲ. ಅದಾದ ಬಳಿಕ ಮೈತ್ರಿಕೂಟ ಗೆಲ್ಲುವುದರೊಂದಿಗೆ ಮೊದಲ ಕಾಂಗ್ರೆಸೇತರ ಸರಕಾರ ಅಸ್ತಿತ್ವಕ್ಕೆ ಬಂದಿತ್ತು. ಹೀಗೆ ಮೈತ್ರಿಕೂಟದ ರಾಜಕಾರಣ ಶುರುವಾದದ್ದೇ ಅತಿಬಲದ ಸರಕಾರ ಪ್ರಜಾಪ್ರಭುತ್ವದ ಮೂಲತತ್ವಗಳನ್ನು ಮರೆತ ಹೊತ್ತಿನಲ್ಲಿ.

ಕೆಲವು ಅಂಶಗಳನ್ನು ಸ್ಥೂಲವಾಗಿ ಗುರುತಿಸುತ್ತ ಹೋಗುವುದಾದರೆ,

ತುರ್ತು ಪರಿಸ್ಥಿತಿಯ ನಂತರ ಕಾಂಗ್ರೆಸ್ ಅವನತಿ ಪ್ರಾರಂಭ.

1977ರಲ್ಲಿ ಮೊದಲ ಸಮ್ಮಿಶ್ರ ಸರಕಾರದ ರಚನೆಯೊಂದಿಗೆ ಮೈತ್ರಿಯುಗಕ್ಕೆ ಅಡಿಪಾಯ.

ರಾಜಕೀಯ ಪಕ್ಷಗಳು ರಾಷ್ಟ್ರದ ಹಿತಾಸಕ್ತಿ ಉದ್ದೇಶದಿಂದ ಜೊತೆಗೂಡಿ ಹೋಗುವುದು ಮೈತ್ರಿ ರಾಜಕಾರಣ ಎನ್ನಿಸಿಕೊಳ್ಳುತ್ತದೆ.

1947ರಲ್ಲಿ ಸ್ವಾತಂತ್ರ್ಯದ ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ದೇಶದ ಪ್ರಮುಖ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿತು. ಸ್ವಾತಂತ್ರ್ಯಾನಂತರದ ಅವಧಿಯಲ್ಲಿ ಕಾಂಗ್ರೆಸ್ ಪ್ರಾಬಲ್ಯ ಸ್ಪಷ್ಟವಾಗಿತ್ತು.

1952ರ ಚೊಚ್ಚಲ ಸಾರ್ವತ್ರಿಕ ಚುನಾವಣೆಯಲ್ಲಿ ಕೇಂದ್ರ ಮತ್ತು ಬಹುತೇಕ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, 1977ರವರೆಗೂ ಆಳಿತು.

ಕಾಂಗ್ರೆಸ್ ಅನ್ನು ಮೊದಲ ಬಾರಿಗೆ ಅಧಿಕಾರದಿಂದ ಕೆಳಗಿಳಿಸಿದ್ದು ಜನತಾ ಮೈತ್ರಿಕೂಟ. ಅದಾದ ಬಳಿಕ 1989ರಲ್ಲಿ ಕಾಂಗ್ರೆಸ್ ಪ್ರಾಬಲ್ಯವನ್ನು ಕುಗ್ಗಿಸಿದ್ದು ರಾಷ್ಟ್ರೀಯ ರಂಗ.

1989ರಿಂದ 2014ರ ಅವಧಿಯಲ್ಲಿ ಯಾವುದೇ ಪಕ್ಷವೂ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವುದು ಸಾಧ್ಯವಾಗದೆ, ಕೇಂದ್ರದಲ್ಲಿ ಸಮ್ಮಿಶ್ರ ಸರಕಾರಗಳದ್ದೇ ಯುಗವಾಯಿತು.

ಈ ನಡುವೆ 1998ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಥವಾ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ ರಚನೆಯಾಗಿತ್ತು.

2004ರ ಚುನಾವಣೆಯ ನಂತರದ ಅತಂತ್ರ ಲೋಕಸಭೆ ಸ್ಥಿತಿಯಲ್ಲಿ ರೂಪುಗೊಂಡಿದ್ದೇ ಕಾಂಗ್ರೆಸ್ ನೇತೃತ್ವದ ಯುಪಿಎ ಅಥವಾ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲಯನ್ಸ್.

2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದರೂ, ಎನ್‌ಡಿಎ ಪಾಲುದಾರ ಪಕ್ಷಗಳೊಂದಿಗೆ ಸರಕಾರ ರಚಿಸಿತು.

ಮೊದಲ ಮೈತ್ರಿಕೂಟ ಜನತಾ ಮೋರ್ಚಾ

1970ರ ದಶಕದ ಮಧ್ಯಭಾಗದಲ್ಲಿ ಇಂದಿರಾ ಗಾಂಧಿಯವರ ವಿರುದ್ಧ ಕಾಂಗ್ರೆಸ್ ಒಳಗೇ ಪ್ರಬಲ ವಿರೋಧಿ ದನಿಗಳು ಕೇಳಿಬರತೊಡಗಿದವು. 1969ರ ಹೊತ್ತಿಗೆ ಕಾಂಗ್ರೆಸ್ ಹೋಳಾಗಿತ್ತು. ಹಿರಿಯ ಕಾಂಗ್ರೆಸಿಗರೆಲ್ಲ ಮೊರಾರ್ಜಿ ದೇಸಾಯಿ ನೇತೃತ್ವದ ಸಂಸ್ಥಾ ಕಾಂಗ್ರೆಸ್ ಭಾಗವಾಗಿ ಉಳಿದರೆ, ಹೊಸ ತಲೆಮಾರಿನ ಕಾಂಗ್ರೆಸಿಗರು ಇಂದಿರಾ ನೇತೃತ್ವದ ಕಾಂಗ್ರೆಸ್ (ಆರ್) ಜೊತೆಗೆ ನಿಂತರು. 1971ರ ಲೋಕಸಭೆ ಚುನಾವಣೆ ಘೋಷಣೆಯಾದಾಗ ಇಂದಿರಾ ಕಾಂಗ್ರೆಸ್ ವಿರುದ್ಧ ಸಂಸ್ಥಾ ಕಾಂಗ್ರೆಸ್ ನೇತೃತ್ವದಲ್ಲಿ ನಾಲ್ಕು ಪಕ್ಷಗಳು ಒಟ್ಟಾಗಿ ‘ಜನತಾ ಮೋರ್ಚಾ’ ಎಂಬ ಹೆಸರಿನಲ್ಲಿ ಕಣಕ್ಕಿಳಿದವು. ಸಂಸ್ಥಾ ಕಾಂಗ್ರೆಸ್, ಸ್ವತಂತ್ರ ಪಾರ್ಟಿ, ಜನಸಂಘ ಮತ್ತು ಸಂಯುಕ್ತ ಸೋಷಲಿಸ್ಟ್ ಪಾರ್ಟಿಗಳನ್ನು ಒಳಗೊಂಡಿದ್ದ ಜನತಾ ಮೋರ್ಚಾ ಮೈತ್ರಿಕೂಟವೇ ಭಾರತದ ಚುನಾವಣಾ ರಾಜಕಾರಣದಲ್ಲಿ ಮೊದಲ ಚುನಾವಣಾ ಪೂರ್ವ ಮೈತ್ರಿಕೂಟ ಎನ್ನಿಸಿಕೊಂಡಿದೆ.

ಆದರೆ ಆ ಸಲದ ಚುನಾವಣೆಯಲ್ಲಿ ಜನತಾ ಮೋರ್ಚಾ ಮೈತ್ರಿಕೂಟ 46 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಮುಂದಿನ ದಿನಗಳಲ್ಲಿ, ಇಂದಿರಾ ವಿರೋಧಿಗಳೆಲ್ಲ ಒಟ್ಟಾಗುವ ಪ್ರಕ್ರಿಯೆ ತೀವ್ರಗೊಂಡು, ವಿವಿಧ ವಿರೋಧ ಪಕ್ಷಗಳು ಸೇರಿಕೊಂಡು ಹೊಸದಾಗಿ ಜನತಾ ಪಾರ್ಟಿಯನ್ನು ರಚಿಸಿದವು. ತುರ್ತುಪರಿಸ್ಥಿತಿಯನ್ನು ವಿರೋಧಿಸಿದ್ದವರು ಮಾತ್ರವಲ್ಲದೆ, ಕಾಂಗ್ರೆಸ್ ಒಳಗಿನವರೂ ಸೇರ್ಪಡೆಗೊಂಡರು. ಪ್ರಮುಖ ದಲಿತ ನಾಯಕರಲ್ಲಿ ಒಬ್ಬರಾದ ಜಗಜೀವನ್ ರಾಮ್ ಅಂಥವರಲ್ಲಿ ಗಮನಾರ್ಹರಾಗಿದ್ದರು. ಮೊರಾರ್ಜಿಯವರ ಸಂಸ್ಥಾ ಕಾಂಗ್ರೆಸ್, ಜನಸಂಘ, ಪ್ರಜಾ ಸೋಷಲಿಸ್ಟ್ ಪಾರ್ಟಿ, ಚರಣ್ ಸಿಂಗ್ ಅವರ ಲೋಕದಳ ಜೆಪಿ ನಾಯಕತ್ವದಡಿ ಒಂದಾದದ್ದು ವಿಶೇಷವಾಗಿತ್ತು.

ಜನತಾ ಪಕ್ಷವನ್ನು 1977ರ ಜನವರಿ 23ರಂದು ಅಧಿಕೃತವಾಗಿ ಪ್ರಾರಂಭಿಸಲಾಯಿತು. 1977ರ ಚುನಾವಣೆಯಲ್ಲಿ 298 ಕ್ಷೇತ್ರಗಳಲ್ಲಿ ಜನತಾ ಪಾರ್ಟಿ ಗೆಲುವು ಸಾಧಿಸಿತು. ಆ ಮೂಲಕ ಜನತಾ ಪಾರ್ಟಿ ರಚಿಸಿದ ಬಹುಮತದ ಸರಕಾರ ದೇಶದ ಮೊದಲ ಕಾಂಗ್ರೆಸೇತರ ಸರಕಾರವಾಯಿತು. ಅದು ಮೊದಲ ಮೈತ್ರಿಕೂಟ ಸರಕಾರವೂ ಆಗಿತ್ತು. ಜನತಾ ಪಕ್ಷದ ಎರಡು ವರ್ಷಗಳ ಆಳ್ವಿಕೆ ಇಬ್ಬರು ಪ್ರಧಾನಿಗಳನ್ನು ಕಂಡಿತು. ಒಬ್ಬರು ಮೊರಾರ್ಜಿ ದೇಸಾಯಿ ಮತ್ತೊಬ್ಬರು ಚರಣ್ ಸಿಂಗ್.

ಜನತಾ ಪಾರ್ಟಿಯ ವಿಭಿನ್ನ ಘಟಕಗಳ ನಡುವಿನ ಆಂತರಿಕ ಕಲಹದಿಂದಾಗಿ ಅದು ಹೆಚ್ಚು ಕಾಲ ಬಾಳಲಿಲ್ಲ.

ಈ ಒಡಕು ಅಂತಿಮವಾಗಿ ಮೊದಲ ಕಾಂಗ್ರೆಸೇತರ ಸರಕಾರದ ಮತ್ತು ಮೈತ್ರಿಯ ಪತನಕ್ಕೆ ಕಾರಣವಾಯಿತು.

ರಾಷ್ಟ್ರೀಯ ರಂಗ

ಮೊದಲ ಮೈತ್ರಿಕೂಟ ಸರಕಾರ ಪತನವಾದ ಹತ್ತು ವರ್ಷಗಳ ಬಳಿಕ ಅಂದರೆ 1989ರಲ್ಲಿ ತೃತೀಯ ರಂಗವೆಂಬ ಪರಿಕಲ್ಪನೆ ಮುನ್ನೆಲೆಗೆ ಬರುವುದರೊಂದಿಗೆ, ಮೈತ್ರಿ ರಾಜಕಾರಣದ ಮತ್ತೊಂದು ಆಯಾಮ ತೆರೆದುಕೊಂಡಿತು. ಕಾಂಗ್ರೆಸ್ ಪಕ್ಷವನ್ನು ಮಾತ್ರವಲ್ಲ, ಜೊತೆಗೆ ಬಿಜೆಪಿಯನ್ನೂ ದೂರವಿಡುವುದು ತೃತೀಯ ರಂಗ ಪರಿಕಲ್ಪನೆಯ ವಿಶೇಷವಾಗಿತ್ತು. ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ತೃತೀಯ ರಂಗ ಸರಕಾರಗಳಿಗೆ ಪ್ರತ್ಯೇಕ ಸಂದರ್ಭಗಳಲ್ಲಿ ಬಾಹ್ಯ ಬೆಂಬಲ ನೀಡಿದ್ದವು ಮತ್ತು ತಮಗೆ ಬೇಕೆನ್ನಿಸಿದಾಗ ಅವು ಬೆಂಬಲ ಹಿಂದೆಗೆದುಕೊಂಡದ್ದೂ ನಡೆದಿತ್ತು.

ರಾಜೀವ್ ಗಾಂಧಿ ಸರಕಾರದಲ್ಲಿ ರಕ್ಷಣಾ ಸಚಿವರಾಗಿದ್ದ ವಿ.ಪಿ. ಸಿಂಗ್ ರಾಜೀನಾಮೆ ನೀಡಿ ಹೊರಬಂದ ಬಳಿಕ ಕಟ್ಟಿದ್ದೇ ರಾಷ್ಟ್ರೀಯ ರಂಗ ಮೈತ್ರಿಕೂಟ. ಇಂದಿರಾ ಗಾಂಧಿ ಹತ್ಯೆಯ ಹಿನ್ನೆಲೆಯಲ್ಲಿ 1984ರ ಲೋಕಸಭಾ ಚುನಾವಣೆಯಲ್ಲಿ ಭಾರೀ ಗೆಲುವು ಕಂಡಿದ್ದ ಕಾಂಗ್ರೆಸ್, ರಾಜೀವ್ ಗಾಂಧಿ ಸರಕಾರದ ಮೇಲೆ ಬೋಫೋರ್ಸ್ ಹಗರಣದ ಆರೋಪದ ಹಿನ್ನೆಲೆಯಲ್ಲಿ 1989ರ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಬೇಕಾಯಿತು. ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಕಾಂಗ್ರೆಸ್ ಗಳಿಸಿದ್ದು 197 ಸ್ಥಾನಗಳನ್ನು ಮಾತ್ರ. ಆಗ, 146 ಸ್ಥಾನಗಳನ್ನು ಗೆದ್ದಿದ್ದ ರಾಷ್ಟ್ರೀಯ ರಂಗ, 86 ಸ್ಥಾನಗಳನ್ನು ಹೊಂದಿದ್ದ ಬಿಜೆಪಿಯ ಬಾಹ್ಯ ಬೆಂಬಲದೊಂದಿಗೆ ಸರಕಾರ ರಚಿಸಿತು. 52 ಸ್ಥಾನಗಳನ್ನು ಹೊಂದಿದ್ದ ಎಡಪಕ್ಷಗಳೂ ಕೈಜೋಡಿಸಿದ್ದವು. ವಿ.ಪಿ. ಸಿಂಗ್ ಪ್ರಧಾನಿಯಾದರು. ಆದರೆ, ಅಯೋಧ್ಯೆಯಲ್ಲಿ ರಥಯಾತ್ರೆ ನಡೆಸುತ್ತಿದ್ದ ಎಲ್.ಕೆ. ಅಡ್ವಾಣಿ ಅವರನ್ನು ಬಂಧಿಸಿದ ನಂತರ 1990ರಲ್ಲಿ ಬಿಜೆಪಿ ತನ್ನ ಬಾಹ್ಯ ಬೆಂಬಲವನ್ನು ಹಿಂದೆಗೆದುಕೊಳ್ಳುವುದರೊಂದಿಗೆ ವಿ.ಪಿ. ಸಿಂಗ್ ಸರಕಾರ ಪತನಗೊಂಡಿತು.

ಇದಾದ ಬಳಿಕ, ಜನತಾದಳದಿಂದ ಹೊರಬಂದು 64 ಸಂಸದರ ಜೊತೆ ಸಮಾಜವಾದಿ ಜನತಾ ಪಕ್ಷವನ್ನು ಸ್ಥಾಪಿಸಿದ್ದ ಚಂದ್ರಶೇಖರ್ ಅವರು ಕಾಂಗ್ರೆಸ್ ಬೆಂಬಲದೊಂದಿಗೆ ಪ್ರಧಾನಿಯಾದರು. ಆದರೆ, ರಾಜೀವ್ ಗಾಂಧಿಯವರ ಮೇಲೆ ಸರಕಾರ ಕಣ್ಣಿಡುತ್ತಿದೆ ಎಂಬ ಆರೋಪದ ನಂತರ 1991ರಲ್ಲಿ ಕಾಂಗ್ರೆಸ್ ಬೆಂಬಲ ಹಿಂದೆಗೆದುಕೊಂಡಿತು. ಚಂದ್ರಶೇಖರ್ ಸರಕಾರ ಬರೀ ಏಳು ತಿಂಗಳ ಕಾಲ ನಡೆಯಿತು.

ಸಂಯುಕ್ತ ರಂಗ

ಇದು ಚುನಾವಣೋತ್ತರವಾಗಿ, 1996ರಲ್ಲಿ ಹುಟ್ಟಿಕೊಂಡ ಮೈತ್ರಿಕೂಟ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದು ಉದ್ದೇಶವಾಗಿತ್ತು. ಎರಡು ವರ್ಷಗಳ ಅವಧಿಯಲ್ಲಿ ಈ ಮೈತ್ರಿಕೂಟದ ಸರಕಾರ ಇಬ್ಬರು ಪ್ರಧಾನಿಗಳನ್ನು ಕಂಡಿತು. ಮೊದಲನೆಯವರು ಎಚ್.ಡಿ. ದೇವೇಗೌಡ, ಎರಡನೆಯವರು ಐ.ಕೆ.ಗುಜ್ರಾಲ್. ಜನತಾದಳ, ಸಿಪಿಐ, ಕಾಂಗ್ರೆಸ್ (ಟಿ), ಸಮಾಜವಾದಿ ಪಕ್ಷ, ಡಿಎಂಕೆ, ಎಜಿಪಿ, ತಮಿಳು ಮಾನಿಲ ಕಾಂಗ್ರೆಸ್ (ಟಿಎಂಸಿ), ಸಿಪಿಐ ಮತ್ತು ತೆಲುಗು ದೇಶಂ ಪಕ್ಷ (ಟಿಡಿಪಿ) ಈ ಮೈತ್ರಿಕೂಟದ ಭಾಗವಾಗಿದ್ದವು.

ಹೆಚ್ಚಿನ ಸ್ಥಾನಗಳನ್ನು ಗೆದ್ದಿದ್ದರೂ ಬಹುಮತವಿರದ ಬಿಜೆಪಿ ವಿಶ್ವಾಸಮತ ಸಾಬೀತುಪಡಿಸಲಾಗದೆ ಪ್ರಧಾನಿ ಹುದ್ದೆಯಿಂದ ವಾಜಪೇಯಿ ಕೆಳಗಿಳಿದಾಗ ಸಂಯುಕ್ತರಂಗದ ದೇವೇಗೌಡರು ಕಾಂಗ್ರೆಸ್ ಬಾಹ್ಯ ಬೆಂಬಲದೊಂದಿಗೆ ಪ್ರಧಾನಿಯಾದರು. ಆದರೆ ಸರಕಾರ ಹೆಚ್ಚು ಕಾಲ ಬಾಳಲಿಲ್ಲ. ಗುಜ್ರಾಲ್ ಅವರನ್ನು ಪ್ರಧಾನಿ ಮಾಡುವಂತೆ ಕಾಂಗ್ರೆಸ್ ಹಠ ಹಿಡಿದ ಪರಿಣಾಮವಾಗಿ 1997ರಲ್ಲಿ ಗುಜ್ರಾಲ್ ಪ್ರಧಾನಿಯಾದರು. ಬಳಿಕ ಗುಜ್ರಾಲ್ ಸರಕಾರವೂ ಪತನ ಕಂಡಿತು.

ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)

ಇದು 1998ರಲ್ಲಿ ರಚನೆಯಾದ ಮೈತ್ರಿಕೂಟ. ಗುಜ್ರಾಲ್ ಸರಕಾರ ಪತನವಾಗುತ್ತಿದ್ದಂತೆ, ಎಐಎಡಿಎಂಕೆ, ಬಿಜು ಜನತಾ ದಳ, ಶಿವಸೇನೆ, ಲೋಕಶಕ್ತಿ, ಅರುಣಾಚಲ ಕಾಂಗ್ರೆಸ್, ಸಮತಾ ಪಕ್ಷ, ಅಕಾಲಿದಳಗಳನ್ನು ಕೂಡಿಸಿಕೊಂಡು ಬಿಜೆಪಿ ಈ ಮೈತ್ರಿಕೂಟವನ್ನು ರಚಿಸಿತು. 25 ವರ್ಷಗಳಿಂದ ಅಸ್ತಿತ್ವದಲ್ಲಿರುವ ಏಕೈಕ ಮೈತ್ರಿಕೂಟ ಇದಾಗಿದೆ.

ಗುಜ್ರಾಲ್ ರಾಜೀನಾಮೆ ಬಳಿಕ ಈ ಮೈತ್ರಿಕೂಟ ಅಧಿಕಾರಕ್ಕೇರಿತು. ವಾಜಪೇಯಿ ಪ್ರಧಾನಿಯಾದರು. 13 ತಿಂಗಳ ಬಳಿಕ ಎಐಎಡಿಎಂಕೆ ಬೆಂಬಲ ವಾಪಸ್ ಪಡೆದ ಪರಿಣಾಮವಾಗಿ ವಾಜಪೇಯಿ ಸರಕಾರ ಪತನ ಕಂಡಿತು. 1999ರ ಚುನಾವಣೆಯಲ್ಲಿ ಎನ್‌ಡಿಎ ಗೆಲುವಿನೊಂದಿಗೆ ವಾಜಪೇಯಿ ಮೂರನೇ ಬಾರಿಗೆ ಪ್ರಧಾನಿಯಾದರು. ಇದಾದ ಬಳಿಕ 2014, 2019ರ ಚುನಾವಣೆಗಳನ್ನೂ ಎನ್‌ಡಿಎ ಗೆದ್ದಿತು. ಎನ್‌ಡಿಎ ಹೆಸರಿನಲ್ಲಿ ಬಿಜೆಪಿ ಪ್ರಬಲವಾಗಿ ಬೆಳೆಯಿತು. ಹಲವು ಪಾಲುದಾರ ಪಕ್ಷಗಳು ಮೈತ್ರಿ ತ್ಯಜಿಸಿದವು. ಹಲವು ಪಕ್ಷಗಳನ್ನು ಬಿಜೆಪಿ ಪೂರ್ತಿ ದುರ್ಬಲಗೊಳಿಸಿತು. ಪ್ರಾದೇಶಿಕ ಪಕ್ಷಗಳನ್ನು ಬೇಕಾದಾಗ ಬಳಸಿಕೊಂಡ ಬಿಜೆಪಿ, ಬೇಡವೆನ್ನಿಸಿದಾಗ ಯಾವ ಮುಲಾಜೂ ಇಲ್ಲದೆ ಬದಿಗೆ ತಳ್ಳಿದ್ದು ಹಾಗೂ ಮೈತ್ರಿ ಮುರಿದುಕೊಂಡು ಆಚೆ ಹೋದ ಪಕ್ಷಗಳನ್ನು ಒಡೆದು ಆ ಪಕ್ಷವೇ ಇಲ್ಲದಂತೆ ಮಾಡಿದ್ದೂ ನಡೆಯಿತು. ಅನೇಕ ಹೊಸ ಪಕ್ಷಗಳು ಮೈತ್ರಿಯನ್ನು ಸೇರಿಕೊಂಡವು. ಹಿಂದುತ್ವ ರಾಜಕಾರಣ, ಮೋದಿ ಮುಖ ಇವೆಲ್ಲವೂ ವಿಜೃಂಭಿಸಿದವು.

ಯುನೈಟೆಡ್ ಪ್ರೊಗ್ರೆಸಿವ್ ಅಲಯನ್ಸ್ (ಯುಪಿಎ):

ಕಾಂಗ್ರೆಸ್ ನೇತೃತ್ವದ ಈ ಮೈತ್ರಿಕೂಟ 2004ರ ಚುನಾವಣೆಯ ನಂತರದ ಅತಂತ್ರ ಲೋಕಸಭೆಯ ಸನ್ನಿವೇಶದಲ್ಲಿ ಹುಟ್ಟಿಕೊಂಡಿತು. ಎನ್‌ಡಿಎ ಸರಳ ಬಹುಮತ ಪಡೆಯುವಲ್ಲಿ ವಿಫಲವಾದಾಗ, ಯಾರಿಗೂ ಸ್ಪಷ್ಟ ಬಹುಮತ ಇರದ ಆ ಸಂದರ್ಭದಲ್ಲಿ ಸೋನಿಯಾ ಗಾಂಧಿ ನೇತೃತ್ವದಲ್ಲಿ 13 ಪ್ರಮುಖ ರಾಜ್ಯಮಟ್ಟದ ಮತ್ತು ಪ್ರಾದೇಶಿಕ ಪಕ್ಷಗಳು ಒಂದಾದವು. ಕಡೆಗೆ ಎಡಪಕ್ಷಗಳ ಬಾಹ್ಯ ಬೆಂಬಲದೊಂದಿಗೆ ಯುಪಿಎ ಮೊದಲ ಅವಧಿಯ ಸರಕಾರ ರಚನೆಯಾಯಿತು. ಬಳಿಕ 2009ರ ಚುನಾವಣೆಯಲ್ಲಿ ಗೆದ್ದು ಎರಡನೇ ಅವಧಿಗೆ ಯುಪಿಎ ಸರಕಾರ ರಚನೆಯಾದಾಗ ಮಿತ್ರಪಕ್ಷಗಳ ಸಂಖ್ಯೆ ಇನ್ನೂ ಹೆಚ್ಚಿತ್ತು. ಮೊದಲು ಎನ್‌ಡಿಎ ಭಾಗವಾಗಿದ್ದ ಕೆಲ ಪಕ್ಷಗಳು ನಂತರದ ವರ್ಷಗಳಲ್ಲಿ ಯುಪಿಎ ಸೇರಿದ್ದವು.

ತೃತೀಯ ರಂಗ ಎಂಬ ಮರೀಚಿಕೆ

ಇದೆಲ್ಲದರ ನಡುವೆ, ರಾಷ್ಟ್ರೀಯ ಪಕ್ಷಗಳನ್ನು ದೂರವಿಟ್ಟು ತೃತೀಯ ರಂಗವನ್ನು ಕಟ್ಟುವ ಯತ್ನಗಳೂ ಹಲವು ಬಾರಿ ನಡೆದಿರುವುದಿದೆ. ಆದರೆ ಅವೆಲ್ಲ ಕೆಲವರ ವೈಯಕ್ತಿಕ ಲಾಭದ ಮಟ್ಟಕ್ಕೆ ಸೀಮಿತವಾದಂಥ ಯತ್ನಗಳೆಂಬ ಅನುಮಾನವೂ ಸುತ್ತುವರಿದುಕೊಂಡದ್ದನ್ನು ಕಾಣಬಹುದು. ಅಧಿಕಾರ ಮಾತ್ರವೇ ಆಂತರಿಕ ಉದ್ದೇಶವಾಗಿ, ಬದ್ಧತೆ ದುರ್ಬಲವಾಗಿದ್ದುದು ಇಂಥ ಯತ್ನಗಳ ವಿಫಲತೆಗೆ ಕಾರಣ. ಆದರೆ ಪ್ರಾದೇಶಿಕ ಪಕ್ಷಗಳೇ ಸೇರಿದ ಅಂಥದೊಂದು ರಂಗ ನಿಜವಾಗಿಯೂ ರೂಪುಗೊಂಡಿದ್ದೇ ಆದರೆ, ದೇಶದ ರಾಜಕಾರಣದಲ್ಲಿ ಅದೊಂದು ಸುಂದರ ವಿದ್ಯಮಾನವಾದೀತು. ಸದ್ಯಕ್ಕಂತೂ ಅದು ಮರೀಚಿಕೆ ಮಾತ್ರ.

ಪ್ರಾದೇಶಿಕ ಪಕ್ಷಗಳಿಗೆ ಮನ್ನಣೆ

ಮೈತ್ರಿ ರಾಜಕಾರಣದಿಂದಾಗಿ ಪ್ರಾದೇಶಿಕ ಪಕ್ಷಗಳಿಗೆ ಮಹತ್ವ, ಮನ್ನಣೆ ಸಿಗತೊಡಗಿದ್ದು ಈಚಿನ ದಶಕಗಳ ರಾಜಕಾರಣದಲ್ಲಿ ಕಾಣಿಸುತ್ತಿರುವ ಗಮನಾರ್ಹ ಬೆಳವಣಿಗೆಯಾಗಿದೆ. ಪ್ರಮುಖ ಮೈತ್ರಿಕೂಟಗಳ ರಚನೆಯಲ್ಲಿ ಪ್ರಾದೇಶಿಕ ಪಕ್ಷಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ತಮಿಳುನಾಡಿನ ಎಐಎಡಿಎಂಕೆ, ಆಂಧ್ರ ಪ್ರದೇಶದ ತೆಲುಗು ದೇಶಂ ಪಾರ್ಟಿ(ಟಿಡಿಪಿ), ಈಗ ಎರಡು ಹೋಳಾಗುವುದಕ್ಕೂ ಮುಂಚಿನ ಮಹಾರಾಷ್ಟ್ರದ ಶಿವಸೇನೆ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ, ಕರ್ನಾಟಕದ ಜೆಡಿಎಸ್, ಕೇರಳದ ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್, ಒಡಿಶಾದ ಬಿಜು ಜನತಾ ದಳ, ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್, ಜಾರ್ಖಂಡ್‌ನ ಜಾರ್ಖಂಡ್ ಮುಕ್ತಿ ಮೋರ್ಚಾ, ಜಮ್ಮು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ ಮತ್ತಿತರ ಪಕ್ಷಗಳು ಬೇರೆ ಬೇರೆ ಕಾಲದಲ್ಲಿ ಬೇರೆ ಬೇರೆ ಮೈತ್ರಿಕೂಟಗಳಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಭಾವಿಯಾಗಿದ್ದವು.

ಭಾರತ ಬಹು ಸಂಸ್ಕೃತಿಗಳನ್ನು ಹೊಂದಿರುವ ದೇಶ. ವಿವಿಧ ಸಮುದಾಯಗಳು, ಉಪಭಾಷೆಗಳು, ಜಾತಿಗಳು, ನಂಬಿಕೆಗಳು ಮತ್ತು ಭೌಗೋಳಿಕ ವಿಭಾಗಗಳು ಅಸ್ತಿತ್ವದಲ್ಲಿವೆ. ಇಂಥ ಸನ್ನಿವೇಶದಲ್ಲಿ ಸಮ್ಮಿಶ್ರ ಸರಕಾರವೊಂದು ಎಲ್ಲರ ಭಾವನೆಗಳನ್ನು ಪ್ರತಿನಿಧಿಸುವ ಸಾಧ್ಯತೆಯಾಗಿಯೂ ಮಹತ್ವ ಪಡೆಯುತ್ತದೆ. ಇದೆಲ್ಲದರ ನಡುವೆಯೂ ಸಮ್ಮಿಶ್ರ ಸರಕಾರಗಳು ಅಸ್ಥಿರವಾಗಿರುತ್ತವೆ ಎಂಬುದೂ ನಿಜ. ಮೈತ್ರಿಕೂಟದ ಸದಸ್ಯರ ನಡುವಿನ ಭಿನ್ನಾಭಿಪ್ರಾಯಗಳು ಅಂತಹ ವಿದ್ಯಮಾನಕ್ಕೆ ಕಾರಣವಾಗುವುದುಂಟು.

ಇದೇನೇ ಇದ್ದರೂ, ಪ್ರಾದೇಶಿಕ ಪಕ್ಷಗಳಿಗೆ ಮಹತ್ವ ಬರುತ್ತಿರುವುದು ರಾಷ್ಟ್ರಮಟ್ಟದಲ್ಲಿ ಮಹತ್ವಪೂರ್ಣ ಬೆಳವಣಿಗೆಗಳಿಗೆ ಕಾರಣವಾಯಿತೆಂಬುದು ನಿಜ. ಒಂದೇ ಪಕ್ಷ ಪ್ರಬಲವಾಗಿರುವ ಸರಕಾರಗಳ ವಿರುದ್ಧ ಪ್ರಜಾಸತ್ತಾತ್ಮಕ ಕಾಳಜಿಯೊಂದಿಗೆ ನಿಲ್ಲಬೇಕಾದ ಜರೂರು ಬಂದಾಗೆಲ್ಲ ಪ್ರಾದೇಶಿಕ ಪಕ್ಷಗಳ ಬಲ ಒಂದು ಒಕ್ಕೂಟವಾಗುವುದಕ್ಕೆ ಜೊತೆಯಾಗುವುದಿದೆ.

ಈಗ ಮತ್ತೊಮ್ಮೆ ದೇಶದ ರಾಜಕಾರಣದಲ್ಲಿ ಅಂತಹ ಮತ್ತೊಂದು ಸಂದರ್ಭವನ್ನು ಕಾಣುತ್ತಿದ್ದೇವೆ. ಕಾಂಗ್ರೆಸ್ ಸೇರಿದಂತೆ 26 ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟ ಆ ಸನ್ನಿವೇಶಕ್ಕೆ ಕಾರಣ.ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಎಎಪಿ, ಆರ್ಜೆಡಿ, ಜೆಎಂಎಂ, ಎನ್‌ಸಿಪಿ ಶರದ್ ಪವಾರ್ ಬಣ, ಶಿವಸೇನೆ ಉದ್ಧವ್ ಠಾಕ್ರೆ ಬಣ, ಎಸ್‌ಟಿ, ರಾಷ್ಟ್ರೀಯ ಲೋಕದಳ, ಅಪ್ನಾ ದಳ(ಕಮೆರಾವಾಡಿ), ಜಮ್ಮು ಕಾಶ್ಮೀರ್ ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ, ಸಿಪಿಐ, ಸಿಪಿಐ(ಎಂ), ಸಿಪಿಐ(ಎಂಎಲ್), ರೆವಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ, ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್, ಎಂಡಿಎಂಕೆ, ವಿಸಿಕೆ, ಕೆಎಂಡಿಕೆ, ಎಂಎಂಕೆ, ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್, ಕೇರಳ ಕಾಂಗ್ರೆಸ್-ಮಣಿ ಹಾಗೂ ಕೇರಳ ಕಾಂಗ್ರೆಸ್ - ಜೋಸೆಫ್ ಇವು ‘ಇಂಡಿಯಾ’ ಮೈತ್ರಿಕೂಟದ 25 ಪಕ್ಷಗಳಾಗಿವೆ.

ಪ್ರತಿಪಕ್ಷಗಳ ಈ ಒಗ್ಗಟ್ಟು ಮೋದಿ ಮತ್ತು ‘ಇಂಡಿಯಾ’ ನಡುವಿನ ಹೋರಾಟವಾಗಿ, ಬಿಜೆಪಿ ಸಿದ್ಧಾಂತದ ವಿರುದ್ಧದ ಹೋರಾಟವಾಗಿ ರೂಪುಗೊಂಡಿದ್ದರ ಪರಿಣಾಮ ಈ ಸಲದ ಲೋಕಸಭೆ ಚುನಾವಣೆಯಲ್ಲಿ ಮೋದಿ ಮತ್ತವರ ಬಿಜೆಪಿಯ ಅಹಂ ಅನ್ನು ಮುರಿದುಹಾಕಿದೆ. ‘ಚಾರ್ ಸೌ ಪಾರ್’ ಎನ್ನುತ್ತಿದ್ದವರು 300 ಗಡಿಯನ್ನೂ ಮುಟ್ಟಲಾರದೆ, ಕಡೆಗೆ ಸ್ವತಂತ್ರವಾಗಿ ಸರಕಾರ ರಚಿಸುವ ಬಲವನ್ನೂ ಪಡೆಯಲಾರದೆ ತೊಡೆ ಮುರಿದುಕೊಂಡು ಬಿದ್ದಿರುವುದು ದೇಶದ ಪ್ರಜಾಪ್ರಭುತ್ವದ ಹಿತದ ದೃಷ್ಟಿಯಿಂದ ಬಹು ಮುಖ್ಯ ಬೆಳವಣಿಗೆ.

ಸಂವಿಧಾನದಲ್ಲಿ ಪ್ರತಿಪಾದಿತವಾಗಿರುವ ಪರಿಕಲ್ಪನೆಯ ಭಾರತವನ್ನು ರಕ್ಷಿಸುವ, ದೇಶದ ಪ್ರಜಾಪ್ರಭುತ್ವ, ಒಕ್ಕೂಟ ವ್ಯವಸ್ಥೆ, ಸಾಂವಿಧಾನಿಕ ಸಂಸ್ಥೆಗಳನ್ನು ಕಾಪಾಡಿಕೊಳ್ಳುವ ಸಾಮೂಹಿಕ ಸಂಕಲ್ಪ ದೊಂದಿಗೆ ಶುರುವಾಗಿದ್ದ ‘ಇಂಡಿಯಾ’ ಒಕ್ಕೂಟ ತನ್ನ ಉದ್ದೇಶವನ್ನು ದೊಡ್ಡ ಮಟ್ಟದಲ್ಲಿಯೇ ಸಾಧಿಸಿ, ಬಿಜೆಪಿಯನ್ನು ಕೆಡವಿಹಾಕಿದೆ. ಈಗ ವಿಪಕ್ಷವಾಗಿ ಕುಳಿತು ‘ಇಂಡಿಯಾ’ ಒಕ್ಕೂಟ ಮೋದಿ ಸರಕಾರದ ಲಗಾಮು ಹಿಡಿಯಲಿರುವುದು ಕೂಡ ಈ ದೇಶದ ಪ್ರಜಾಪ್ರಭುತ್ವದಲ್ಲಿನ ಒಂದು ಸುಂದರ ಚಿತ್ರವಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಆರ್. ಜೀವಿ

contributor

Similar News