ಕಾನೂನಿನ ಕಂಟಕಕ್ಕೆ ಸಿಲುಕಿದ ಮುಖ್ಯಮಂತ್ರಿಗಳು ಯಾರ್ಯಾರು?

ಭ್ರಷ್ಟಾಚಾರಕ್ಕೂ ರಾಜಕಾರಣಕ್ಕೂ ಬಿಡಲಾರದ ನಂಟು. 1970ರ ದಶಕದಲ್ಲಿ ದೇವರಾಜ ಅರಸು ಕಾಲದಲ್ಲೂ ಅದು ಇತ್ತು, ಮೊನ್ನೆ ಬಿಜೆಪಿಯವರು ಚುನಾವಣೆಯಲ್ಲಿ ಸೋತು ಹೋದದ್ದೂ ಅದೇ ಕಾರಣದಿಂದಾಗಿ. ಈಗ ಕಾಂಗ್ರೆಸ್ ಸರಕಾರಕ್ಮೆ ವಾಲ್ಮೀಕಿ ನಿಗಮ ಹಗರಣ ಮತ್ತು ಮುಡಾ ಹಗರಣದ ಕಳಂಕ ಮೆತ್ತಿಕೊಂಡಿದೆ. ಇದು ರಾಜಕೀಯ ಮತ್ತು ಕಾನೂನು ಹೋರಾಟದ ಮತ್ತೊಂದು ಅಧ್ಯಾಯವನ್ನೂ ತೆರೆದಿದೆ. ಎಲ್ಲಿಗೆ ಮುಟ್ಟುತ್ತದೆ, ಯಾವ ಸ್ವರೂಪ ದೊಂದಿಗೆ ಮುಗಿಯುತ್ತದೆ ಎಂಬುದನ್ನು ನೋಡಬೇಕಿದೆ.

Update: 2024-08-27 08:43 GMT
Editor : Thouheed | Byline : ಆರ್. ಜೀವಿ

ಮುಡಾ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಚಾರಣೆಗೆ ಒಳಪಡಿಸಲು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅನುಮತಿ ನೀಡಿರುವುದು, ರಾಜಕೀಯ ಮತ್ತು ಕಾನೂನು ಸಂಘರ್ಷದ ಸಂಕೀರ್ಣ ಸನ್ನಿವೇಶಕ್ಕೆ ಒಂದು ಉದಾಹರಣೆ. ಮುಖ್ಯಮಂತ್ರಿಯೊಬ್ಬರು ಅಧಿಕಾರದಲ್ಲಿರುವಾಗ ಅವರ ವಿರುದ್ಧ ವಿಚಾರಣೆಗೆ ರಾಜ್ಯಪಾಲರು ಅನುಮತಿ ನೀಡಿರುವುದು ಕರ್ನಾಟಕದಲ್ಲಿ ಇದು ಎರಡನೇ ಪ್ರಕರಣ.

2011ರಲ್ಲಿ ಆಗಿನ ಸಿಎಂ ಯಡಿಯೂರಪ್ಪ ವಿರುದ್ಧ ವಿಚಾರಣೆಗೆ ರಾಜ್ಯಪಾಲರು ಅನುಮತಿ ನೀಡಿದ್ದುದು ಕರ್ನಾಟಕದಲ್ಲಿ ಅಂಥ ಮೊದಲ ಪ್ರಕರಣವಾಗಿತ್ತು. ಸೇವೆಯಲ್ಲಿರುವ ಮುಖ್ಯಮಂತ್ರಿಯ ವಿರುದ್ಧ ವಿಚಾರಣೆಗೆ ರಾಜ್ಯಪಾಲರು ಅನುಮತಿ ನೀಡುವುದಕ್ಕೆ ಸಂಬಂಧಿಸಿದ ಕಾನೂನು ಕೇವಲ ಶಾಸನಬದ್ಧ ನಿಬಂಧನೆಗಳ ಮೂಲಕವಲ್ಲದೆ, ನ್ಯಾಯಾಲಯದ ತೀರ್ಪುಗಳ ಸರಣಿಯಿಂದಲೂ ನಿಯಂತ್ರಿತವಾಗುತ್ತದೆ.

ಪ್ರಸಕ್ತ ರಾಜಕೀಯ ವಾತಾವರಣದಲ್ಲಿ, ರಾಜಭವನ ಕೇಂದ್ರದಲ್ಲಿ ಆಡಳಿತದಲ್ಲಿರುವ ಪಕ್ಷದ ರಾಜಕೀಯ ಹಿತಾಸಕ್ತಿಗಳನ್ನು ಪೂರೈಸುತ್ತಿರುವಂತೆ ಕಾಣಿಸುವುದು, ಅಂಥ ಆರೋಪಗಳು ಮತ್ತೆ ಮತ್ತೆ ಕೇಳಿಬರುವುದು ಹೊಸದಲ್ಲ.

ರಾಜ್ಯಪಾಲರ ಕೆಲಸ ರಾಜಕೀಯ ಪಕ್ಷಪಾತದಿಂದ ಸಂಪೂರ್ಣವಾಗಿ ಮುಕ್ತವಾಗಿರುತ್ತದೆ ಎಂದು ಹೇಳುವ ಸ್ಥಿತಿಯೂ ಇವತ್ತಿನ ರಾಜಕೀಯದಲ್ಲಿ ಇಲ್ಲವಾಗಿದೆ. ಹಾಗಿದ್ದೂ, ಅವರ ನಿರ್ಧಾರಗಳಿಗೆ ಕಾನೂನು ಸನ್ನಿವೇಶದಲ್ಲಿ ಹಾಗೂ ನ್ಯಾಯಾಂಗದ ಈ ಹಿಂದಿನ ತೀರ್ಪುಗಳ ಆಧಾರದಲ್ಲಿ ಸಮರ್ಥನೆಗಳೂ ಇರಬಹುದು. ಸಿದ್ದರಾಮಯ್ಯನವರು ರಾಜ್ಯಪಾಲರ ಆದೇಶವನ್ನು ರಾಜಕೀಯ ಉದ್ದೇಶದ್ದು ಎಂದು ಆರೋಪಿಸಿದ್ದು, ಅದರ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಆಗಸ್ಟ್ 29ಕ್ಕೆ ಮುಂದೂಡಿದೆ.

2011ರಲ್ಲಿ ಯಡಿಯೂರಪ್ಪ ವಿರುದ್ಧ ವಿಚಾರಣೆಗೆ ರಾಜ್ಯಪಾಲರು ಅನುಮತಿ ನೀಡಿದ್ದಾಗ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಯಡಿಯೂರಪ್ಪ ರಾಜೀನಾಮೆಗೆ ಆಗ್ರಹಿದ್ದರು. ಈಗ ಅದೇ ಸನ್ನಿವೇಶದಲ್ಲಿ ಸಿದ್ದರಾಮಯ್ಯನವರಿದ್ದು, ಅವರ ರಾಜೀನಾಮೆಗೆ ಬಿಜೆಪಿ ಒತ್ತಾಯಿಸುತ್ತಿದೆ. ಮುಡಾದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಯವರ ಹೆಸರಿಗೆ 14 ನಿವೇಶನಗಳು ಹಂಚಿಕೆಯಾಗಿರುವ ಪ್ರಕರಣ ಈಗ ಹಗರಣ ಎಂಬ ಸ್ವರೂಪ ಪಡೆದುಕೊಂಡಿದ್ದು, ರಾಜಕೀಯದಲ್ಲಿ ಸದ್ದು ಮಾಡುತ್ತಿದೆ. ಸಿದ್ದರಾಮಯ್ಯ ವಿರುದ್ಧ ವಿಚಾರಣೆಗೆ ರಾಜ್ಯಪಾಲರು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದ್ದು, ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳ ನಡುವೆ ಕಾನೂನು ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ.

13 ವರ್ಷಗಳ ಹಿಂದೆ, ಅಂದರೆ 2011ರಲ್ಲಿ ಅಂದಿನ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಆಗಿನ ಸಿಎಂ ಯಡಿಯೂರಪ್ಪ ವಿರುದ್ಧ ವಿಚಾರಣೆಗೆ ಅನುಮತಿ ನೀಡಿದ್ದರು. ರಾಚೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಅರ್ಜಿದಾರರು ಸಲ್ಲಿಸಿದ್ದ ಸುಮಾರು 1,600ಕ್ಕೂ ಹೆಚ್ಚು ಪುಟಗಳ ಸಾಕ್ಷ್ಯಗಳನ್ನು ಪರಾಮರ್ಶಿಸಿ ಯಡಿಯೂರಪ್ಪ ವಿರುದ್ಧ ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಿದ್ದರು. ಹಾಗೆಂದು ಯಡಿಯೂರಪ್ಪ ಕೂಡಲೇ ರಾಜೀನಾಮೆ ಸಲ್ಲಿಸಿರಲಿಲ್ಲ. ರಾಜೀನಾಮೆಗೆ ಒತ್ತಡ ಬಂದರೂ ರಾಜೀನಾಮೆ ನೀಡಲು ನಿರಾಕರಿಸಿದ್ದರು. ಅವರೂ ಸಚಿವ ಸಂಪುಟದ ಸಭೆ ನಡೆಸಿ ರಾಜ್ಯಪಾಲರ ನಡೆ ಖಂಡಿಸುವ ನಿರ್ಣಯ ಕೈಗೊಂಡಿದ್ದರು. ಲೋಕಾಯುಕ್ತ ಸಂತೋಷ್ ಹೆಗ್ಡೆ, ಅಕ್ರಮ ಗಣಿಗಾರಿಕೆ ಕುರಿತು ರಾಜ್ಯಪಾಲರಿಗೆ ವರದಿ ಸಲ್ಲಿಸಿದ ನಂತರ ಯಡಿಯೂರಪ್ಪ 2011ರ ಆಗಸ್ಟ್‌ನಲ್ಲಿ ರಾಜೀನಾಮೆ ಸಲ್ಲಿಸಿದ್ದರು. ಅಕ್ರಮ ಗಣಿಗಾರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ 16,500 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿತ್ತು.

2015ರ ನವೆಂಬರ್‌ನಲ್ಲಿ ಕರ್ನಾಟಕ ಹೈಕೋರ್ಟ್, ಯಡಿಯೂರಪ್ಪ ಅವರನ್ನು ವಿಚಾರಣೆಗೆ ಒಳಪಡಿಸಲು ಮಾಜಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ನೀಡಿದ್ದ ಅನುಮತಿಯನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಅಂದಿನ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಸೂಚಿಸಿತ್ತು. ಯಡಿಯೂರಪ್ಪ ನೇತೃತ್ವದ ಸರಕಾರ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಅಕ್ರಮವಾಗಿ ಡಿನೋಟಿಫಿಕೇಶನ್ ಮಾಡಿದ ಆರೋಪದ ಐದು ಪ್ರಕರಣಗಳಲ್ಲಿ ತನಿಖೆಗೆ ನೀಡಲಾಗಿದ್ದ ಅನುಮತಿಯನ್ನು ನ್ಯಾಯಾಲಯ ರದ್ದುಗೊಳಿಸಿತ್ತು. ಡಿಸೆಂಬರ್ 2010ರಲ್ಲಿ ಸಿರಾಜಿನ್ ಬಾಷಾ ಮತ್ತು ಬಾಲರಾಜ್ ಎಂಬ ಇಬ್ಬರು ವಕೀಲರು ಈ ಪ್ರಕರಣಗಳನ್ನು ದಾಖಲಿಸಿದ್ದರು. ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠ, ರಾಜ್ಯಪಾಲರಾಗಿದ್ದ ಭಾರದ್ವಾಜ್ ಅವರು ತನಿಖೆಕೆ ನೀಡಿದ ಅನುಮತಿ ವಿರುದ್ಧದ ಆಗಿನ ಸಚಿವ ಸಂಪುಟದ ಶಿಫಾರಸುಗಳನ್ನು ಪರಿಗಣಿಸಿಲ್ಲ ಎಂಬುದನ್ನು ಗಮನಿಸಿತ್ತು.

ಸಿಎಂ ಸಿದ್ದರಾಮಯ್ಯ ವಿರುದ್ಧ ವಿಚಾರಣೆಗೆ ರಾಜ್ಯಪಾಲರು ಅನುಮತಿ ನೀಡಿರುವ ಪ್ರಕರಣದಲ್ಲಿ ದೊಡ್ಡ ಸುದ್ದಿಯಾಗುತ್ತಿರುವುದು ದೂರುದಾರರಲ್ಲಿ ಒಬ್ಬರಾದ ಟಿ.ಜೆ. ಅಬ್ರಹಾಂ. ಹಲವು ವರ್ಷಗಳಿಂದ ಪ್ರಭಾವಿ ರಾಜಕೀಯ ನಾಯಕರ ವಿರುದ್ಧ ದೂರುತ್ತಲೇ ಬಂದವರು ಅವರು. ಅಬ್ರಹಾಂ ಕರ್ನಾಟಕದ ಮುಖ್ಯಮಂತ್ರಿಗಳ ವಿರುದ್ಧ ನೀಡಿರುವುದೂ ಇದೇ ಮೊದಲ ದೂರೇನೂ ಅಲ್ಲ. ಕರ್ನಾಟಕದ ಮಾಜಿ ಸಿಎಂಗಳಾಗಿದ್ದ ಎಸ್.ಎಂ. ಕೃಷ್ಣ, ಎಚ್.ಡಿ. ಕುಮಾರಸ್ವಾಮಿ, ಧರಂ ಸಿಂಗ್ ಮತ್ತು ಬಿ.ಎಸ್. ಯಡಿಯೂರಪ್ಪ ವಿರುದ್ಧವೂ ಅಬ್ರಹಾಂ ಹೋರಾಟ ನಡೆಸಿದ್ದರು. ಈಗ ಸಿಎಂ ಸಿದ್ದರಾಮಯ್ಯ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ. ಮುಖ್ಯಮಂತ್ರಿಯವರ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ ಮೈಸೂರಿನ ವಿಜಯನಗರದಲ್ಲಿ 14 ನಿವೇಶನಗಳನ್ನು ಪರ್ಯಾಯ ಪರಿಹಾರವಾಗಿ ಹಂಚಿಕೆ ಮಾಡಿರುವುದು ಅಕ್ರಮವಾಗಿದ್ದು, ಇದರಿಂದ ರಾಜ್ಯದ ಬೊಕ್ಕಸಕ್ಕೆ ಕೋಟಿ ಕೋಟಿ ನಷ್ಟವಾಗಿದೆ ಎಂಬುದು ಅವರ ದೂರು.

ಇನ್ನು, ರಾಜ್ಯಪಾಲರು ಮತ್ತು ರಾಜ್ಯಗಳಲ್ಲಿನ ವಿಪಕ್ಷ ಸರಕಾರಗಳ ನಡುವಿನ ಸಂಘರ್ಷವೂ ಈಗಿನದ್ದಲ್ಲ.

ಕಾಂಗ್ರೆಸ್ ಕಾಲದಲ್ಲೂ ಇತರ ಪಕ್ಷಗಳ ಸರಕಾರಗಳ ವಿರುದ್ಧ ರಾಜಭವನವನ್ನು ಬಳಸಿದ್ದಿತ್ತು. ಈಗ ಬಿಜೆಪಿ ಕೇಂದ್ರದಲ್ಲಿರುವ ಹೊತ್ತಿನಲ್ಲಿ ಅದು ಅತಿರೇಕಕ್ಕೆ ಹೋಗಿದೆ. ವಿಪಕ್ಷಗಳ ಸರಕಾರಗಳ ವಿರುದ್ಧ ಈ.ಡಿ., ಸಿಬಿಐ, ಐಟಿಯಂಥವುಗಳನ್ನು ದುರ್ಬಳಕೆ ಮಾಡಿಕೊಳ್ಳುವ ಮಟ್ಟದಲ್ಲೇ ಕೇಂದ್ರದ ಬಿಜೆಪಿ ಸರಕಾರ ರಾಜ್ಯಪಾಲರನ್ನೂ ಬಳಸಿಕೊಳ್ಳುತ್ತಿದೆ. ತನ್ನ ವಿರುದ್ಧ ನಿಂತಿರುವ ಮತ್ತು ತನಗೆ ಮಣಿಯದ ವಿಪಕ್ಷ ನಾಯಕರನ್ನು ಹಣಿಯಲು ಈ ಎಲ್ಲವನ್ನೂ ಬಿಜೆಪಿ ಸರಕಾರ ಅಸ್ತ್ರವಾಗಿ ಬಳಸುತ್ತಲೇ ಬಂದಿದೆ.

ಇತ್ತೀಚಿನ ಎರಡು ಉದಾಹರಣೆಗಳೆಂದರೆ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಮತ್ತು ಜಾರ್ಖಂಡ್‌ನಲ್ಲಿ ಹೇಮಂತ್ ಸೊರೇನ್ ಈ ಮೊದಲು ಸಿಎಂ ಹುದ್ದೆಯಲ್ಲಿದ್ದಾಗಲೇ ಬಂಧಿಸಿ ಜೈಲಿಗೆ ಕಳಿಸಿದ್ದು. ದಿಲ್ಲಿ ಮದ್ಯ ನೀತಿ ಪ್ರಕರಣದಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಈ.ಡಿ. ಮಾ. 21ರಂದು ಬಂಧಿಸಿತ್ತು. ಅವರು ಇನ್ನೂ ಜೈಲಿನಲ್ಲಿದ್ದಾರೆ. ಇನ್ನು ಹೇಮಂತ್ ಸೊರೇನ್ ಅವರನ್ನು ಭೂಹಗರಣವೊಂದರಲ್ಲಿ ಈ.ಡಿ. ಫೆಬ್ರವರಿ 2ರಂದು ಬಂಧಿಸಿತ್ತು. ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಮತ್ತೆ ಜಾರ್ಖಂಡ್ ಸಿಎಂ ಹುದ್ದೆ ವಹಿಸಿಕೊಂಡಿದ್ದಾರೆ. ಈಗ ಕರ್ನಾಟಕ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿರುವುದು ಕೂಡ ಬಿಜೆಪಿ ಸರಕಾರದ ಒತ್ತಡದಿಂದಲೇ ಎಂಬ ಆರೋಪಗಳಿವೆ.

ಅದೇನೇ ಇದ್ದರೂ, ಅರವಿಂದ ಕೇಜ್ರಿವಾಲ್ ಮತ್ತು ಹೇಮಂತ್ ಸೊರೇನ್ ಅವರಂತೆ ಸಿಎಂ ಹುದ್ದೆಯಲ್ಲಿರುವಾಗಲೇ ಬಂಧನಕ್ಕೊಳಗಾದ ಇತರ ಮುಖ್ಯಮಂತ್ರಿಗಳೆಂದರೆ, ಲಾಲು ಪ್ರಸಾದ್ ಯಾದವ್, ಜಯಲಲಿತಾ ಮತ್ತು ಬಿ.ಎಸ್. ಯಡಿಯೂರಪ್ಪ. ಲಾಲೂ ಪ್ರಸಾದ್ ಯಾದವ್ ಮೇವು ಹಗರಣದಲ್ಲಿ, ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದಲ್ಲಿ ಹಾಗೂ ಯಡಿಯೂರಪ್ಪ ಡಿನೋಟಿಫಿಕೇಷನ್ ವಿಚಾರಕ್ಕೆ ಸಂಬಂಧಿಸಿದಂತೆ ಕಿಕ್ ಬ್ಯಾಕ್ ಪಡೆದ ಆರೋಪದಲ್ಲಿ ಜೈಲಿಗೆ ಹೋಗುವಂತಾಗಿತ್ತು.

ಈಗ ಸಿದ್ದರಾಮಯ್ಯನವರ ವಿರುದ್ಧದ ತನಿಖೆಗೆ ಅನುಮತಿ ಆದೇಶ ವಿಚಾರ ಹೈಕೋರ್ಟ್ ಎದುರು ಇರುವಾಗಲೇ ಮಾಜಿ ಸಿಎಂಗಳಾದ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಇಬ್ಬರಿಗೂ ಹಳೆಯ ಕೇಸ್‌ಗಳು ಕಂಟಕವಾಗುತ್ತಿವೆ.

ಪೊಕ್ಸೊ ಪ್ರಕರಣ ಯಡಿಯೂರಪ್ಪ ಬೆನ್ನುಬಿದ್ದಿದ್ದು, ಅವರ ಬಂಧನಕ್ಕಿರುವ ತಡೆಯನ್ನು ಹೈಕೋರ್ಟ್ ಆಗಸ್ಟ್ 30ರವರೆಗೆ ವಿಸ್ತರಿಸಿದೆ. ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಗಣಿಗಾರಿಕೆಗೆ ಗುತ್ತಿಗೆ ನೀಡಿದ್ದರೆನ್ನಲಾದ ಪ್ರಕರಣವೊಂದರಲ್ಲಿ ಕುಮಾರಸ್ವಾಮಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಲೋಕಾಯುಕ್ತ ಎಸ್‌ಐಟಿ ಮತ್ತೊಮ್ಮೆ ರಾಜ್ಯಪಾಲರ ಅನುಮತಿ ಕೇಳಿದ್ದು, ರಾಜ್ಯಪಾಲರ ನಿರ್ಧಾರ ಏನಿರಲಿದೆ ಎಂಬುದು ಕುತೂಹಲ ಕೆರಳಿಸಿದೆ.

ಭ್ರಷ್ಟಾಚಾರಕ್ಕೂ ರಾಜಕಾರಣಕ್ಕೂ ಬಿಡಲಾರದ ನಂಟು. 1970ರ ದಶಕದಲ್ಲಿ ದೇವರಾಜ ಅರಸು ಕಾಲದಲ್ಲೂ ಅದು ಇತ್ತು, ಮೊನ್ನೆ ಬಿಜೆಪಿಯವರು ಚುನಾವಣೆಯಲ್ಲಿ ಸೋತು ಹೋದದ್ದೂ ಅದೇ ಕಾರಣದಿಂದಾಗಿ. ಈಗ ಕಾಂಗ್ರೆಸ್ ಸರಕಾರಕ್ಕೆ ವಾಲ್ಮೀಕಿ ನಿಗಮ ಹಗರಣ ಮತ್ತು ಮುಡಾ ಹಗರಣದ ಕಳಂಕ ಮೆತ್ತಿಕೊಂಡಿದೆ. ಇದು ರಾಜಕೀಯ ಮತ್ತು ಕಾನೂನು ಹೋರಾಟದ ಮತ್ತೊಂದು ಅಧ್ಯಾಯವನ್ನೂ ತೆರೆದಿದೆ. ಎಲ್ಲಿಗೆ ಮುಟ್ಟುತ್ತದೆ, ಯಾವ ಸ್ವರೂಪ ದೊಂದಿಗೆ ಮುಗಿಯುತ್ತದೆ ಎಂಬುದನ್ನು ನೋಡಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಆರ್. ಜೀವಿ

contributor

Similar News