ಬಲಕ್ಕೆ ತಿರುಗಿರುವ ಭಾರತದ ರಾಜಕಾರಣದಲ್ಲಿ ಎಡರಂಗ ಎಲ್ಲಿ?
ದೇಶದ ರಾಜಕಾರಣದಲ್ಲಿ ಒಂದು ಕಾಲದಲ್ಲಿ ಭವ್ಯತೆಯನ್ನು ಕಂಡಿದ್ದ ಎಡರಂಗದ ಸ್ಥಿತಿ ಇಂದೇನಾಗಿದೆ ಎಂಬುದನ್ನು ನೋಡಿಕೊಂಡರೆ, ಅತಿರೇಕಗಳು, ದುಸ್ಸಾಹಸಗಳು, ಪ್ರಮಾದಗಳ ಸಾಲುಗಳೇ ಕಾಣಿಸುತ್ತವೆ. ಒಂದು ಕಾಲದ ಪ್ರಭಾವಿ ರಾಜಕೀಯ ಶಕ್ತಿ ಎಲ್ಲಿ ತನ್ನ ಪತನದ ಹಾದಿಗೆ ತಿರುಗಿಕೊಂಡಿತು ಎಂದು ನೋಡಿಕೊಳ್ಳುವಾಗಲೂ ಅವೇ ಕಣ್ಣಿಗೆ ರಾಚುತ್ತವೆ. ಹಾಗಾದರೆ ಎಡರಂಗ ಮಾಡಿಕೊಂಡ ಯಡವಟ್ಟುಗಳೇನು? ಅದರ ಶಕ್ತಿಗುಂದಲು ಕಾರಣವಾಗಿರುವ ಅಂಶಗಳೇನು?
ಎಡರಂಗ ಎಲ್ಲಿದೆ ಎಂಬುದು ದೇಶದ ಇವತ್ತಿನ ರಾಜಕಾರಣದಲ್ಲಿ ಒಂದು ಪ್ರಮುಖವಾದ ಪ್ರಶ್ನೆ. ಎಡಪಕ್ಷಗಳು ಅಸ್ತಿತ್ವದ ಪ್ರಶ್ನೆಯನ್ನು ಎದುರಿಸುತ್ತಿರುವ ಹೊತ್ತು ಇದು. ವಿಪಕ್ಷ ಮೈತ್ರಿಕೂಟ ಇಂಡಿಯಾದ ಭಾಗವಾಗಿರುವ ಎಡಪಕ್ಷಗಳಿಂದ 17ನೇ ಲೋಕಸಭೆಯಲ್ಲಿ ಇರುವವರು ಕೇವಲ ಐವರು ಸಂಸದರು. 2019ರ ಚುನಾವಣೆಯಲ್ಲಿ ಸಾರ್ವಕಾಲಿಕ ಕನಿಷ್ಠ ಸ್ಥಾನಗಳನ್ನು ಗೆದ್ದ ಬಳಿಕ ಈ ಸಲದ ಚುನಾವಣೆಯಲ್ಲಿ ಎಡರಂಗದ್ದು ಮಾಡು ಇಲ್ಲವೇ ಮಡಿ ಹೋರಾಟ.
1967ರ 4ನೇ ಲೋಕಸಭೆಯಿಂದ ಹಿಡಿದು, 2004ರಲ್ಲಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ ಬೀಳುವವರೆಗಿನ ಸುಮಾರು 40 ವರ್ಷಗಳ ಅವಧಿ ದೇಶದಲ್ಲಿ ಎಡರಂಗದ ಪಾಲಿನ ಸುವರ್ಣಯುಗದಂತಿತ್ತು. ಎಡಪಕ್ಷಗಳೆಲ್ಲವೂ ಒಟ್ಟಾರೆಯಾಗಿ ಪ್ರತೀ ಚುನಾವಣೆಯಲ್ಲಿಯೂ ಸರಾಸರಿ 50 ಸ್ಥಾನಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದವು. ಸಿಪಿಐಎಂ ಅಂತೂ 2004ರಲ್ಲಿ 43 ಸ್ಥಾನಗಳನ್ನು ಗೆಲ್ಲುವುದರೊಂದಿಗೆ ತನ್ನ ಅತ್ಯುನ್ನತ ಸಾಧನೆಯನ್ನು ತೋರಿತ್ತು. ಸಿಪಿಐ 1962ರಲ್ಲಿ 3ನೇ ಲೋಕಸಭೆಯಲ್ಲಿ 29 ಸ್ಥಾನಗಳನ್ನು ಗೆಲ್ಲುವುದರೊಂದಿಗೆ ತನ್ನ ಸಾಧನೆಯ ಉತ್ತುಂಗವನ್ನು ದಾಖಲಿಸಿತ್ತು. ಪಕ್ಷ ಹೋಳಾದ ಬಳಿಕ 1967ರ ಚುನಾವಣೆಯಲ್ಲಿ ಸಿಪಿಐಎಂ 19 ಸ್ಥಾನಗಳನ್ನು ಗೆದ್ದಿದ್ದರೆ, ಸಿಪಿಐ 23 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಎಡರಂಗದ ಉತ್ತುಂಗ ಕಾಲದಲ್ಲಿ ಸಿಪಿಐಎಂನ ಮತಗಳ ಪಾಲು ಶೇ.6 ಮತ್ತು ಸಿಪಿಐನ ಮತಗಳ ಪಾಲು ಶೇ.5ಕ್ಕಿಂತ ಹೆಚ್ಚಿತ್ತು. ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ (ಎಐಬಿಸಿ) ಮತ್ತು ಆರ್‌ಎಸ್‌ಪಿ ಕೂಡ ತಮ್ಮದೇ ಆದ ಭದ್ರ ಸ್ಥಾನ ಹೊಂದಿದ್ದವು.
ಕಳೆದ ಎರಡು ದಶಕಗಳ ಅವುಗಳ ಚುನಾವಣಾ ಸಾಧನೆ ಗಮನಿಸಿದರೆ ಅವು ತೀವ್ರ ಕುಸಿತ ಕಂಡಿರುವುದು ಸ್ಪಷ್ಟವಾಗುತ್ತದೆ. ಸಿಪಿಐಎಂ ಶಕ್ತಿಯಂತೂ ತೀವ್ರವಾಗಿ ಕುಗ್ಗುತ್ತಿದ್ದು, ಅದರ ರಾಷ್ಟ್ರೀಯ ಪಕ್ಷ ಸ್ಥಾನಮಾನ ಕೂಡ ಅಪಾಯದಲ್ಲಿದೆ. ಮೂರು ದಶಕಗಳಿಗೂ ಹೆಚ್ಚು ಕಾಲ ಪಶ್ಚಿಮ ಬಂಗಾಳವನ್ನು ಆಳಿದ್ದ, ಕೇಂದ್ರದಲ್ಲಿ ಸಮ್ಮಿಶ್ರ ಸರಕಾರಗಳಿಗೆ ಬೆಂಬಲವಾಗಿದ್ದ ಎಡ ಪಕ್ಷಗಳು ಇಂದು ಭಾರತೀಯ ರಾಜಕೀಯ ಸನ್ನಿವೇಶದಲ್ಲಿ ತೀರಾ ಕೆಳ ಮಟ್ಟಕ್ಕೆ ಕುಸಿದಿವೆ. ಕೇರಳ, ತ್ರಿಪುರಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಎಡರಂಗದ ಪಾಲಿನ ಸಾಂಪ್ರದಾಯಿಕ ಭದ್ರಕೋಟೆಗಳಾಗಿದ್ದವು. 1977ರಿಂದ 2011ರವರೆಗೆ 34 ವರ್ಷಗಳ ಕಾಲ ಬಂಗಾಳವನ್ನು ಆಳಿದ್ದ ಸಿಪಿಐಎಂ 2021ರಲ್ಲಿ ರಾಜ್ಯದಲ್ಲಿ ಒಂದೇ ಒಂದು ಸ್ಥಾನ ಗೆಲ್ಲುವುದಕ್ಕೂ ವಿಫಲವಾಯಿತು. 1993ರಿಂದ 2018ರವರೆಗೆ 25 ವರ್ಷಗಳ ಕಾಲ ಎಡರಂಗ ತ್ರಿಪುರಾವನ್ನು ಆಳಿತ್ತು. ಕೇರಳದಲ್ಲಿ 1957ರಿಂದಲೂ ಕಾಂಗ್ರೆಸ್ ಜೊತೆ ಎಡಪಕ್ಷಗಳದ್ದೇ ದರ್ಬಾರು. ಒಮ್ಮೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಧಿಕಾರಕ್ಕೆ ಬಂದರೆ ಇನ್ನೊಮ್ಮೆ ಎಡರಂಗ ಅಲ್ಲಿ ಸರಕಾರ ರಚಿಸುತ್ತದೆ. ಈಗ ಸತತ ಎರಡು ಬಾರಿ ಅಲ್ಲಿ ಎಡರಂಗವೇ ಅಧಿಕಾರದಲ್ಲಿದೆ. ಈ ಮೂರು ರಾಜ್ಯಗಳಲ್ಲಿ ಸರಕಾರಗಳನ್ನು ನಡೆಸುವುದರ ಜೊತೆಗೆ ಎಡಪಕ್ಷಗಳು 1996-98ರಲ್ಲಿ ತೃತೀಯ ರಂಗ ಮತ್ತು 2004ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದವು.
ಈ ಬಾರಿ ಸಿಪಿಐಎಂ ಈವರೆಗೆ ಪಶ್ಚಿಮ ಬಂಗಾಳದಲ್ಲಿ 17 ಸ್ಥಾನಗಳು ಸೇರಿದಂತೆ 44 ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಅಂಡಮಾನ್ ಮತ್ತು ನಿಕೋಬಾರ್, ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಜಾರ್ಖಂಡ್, ಕರ್ನಾಟಕ, ಪಂಜಾಬ್, ರಾಜಸ್ಥಾನ, ತೆಲಂಗಾಣ ಮತ್ತು ತ್ರಿಪುರಾದಲ್ಲಿ ತಲಾ ಒಂದು ಸ್ಥಾನಕ್ಕೆ ಸ್ಪರ್ಧಿಸುತ್ತಿದೆ. ತಮಿಳುನಾಡಿನಲ್ಲಿ ಇಂಡಿಯಾ ಮೈತ್ರಿಕೂಟದ ಭಾಗವಾಗಿ ಮಧುರೈ ಮತ್ತು ದಿಂಡಿಗಲ್ ಈ ಎರಡು ಸ್ಥಾನಗಳನ್ನು ಎಡಪಕ್ಷಗಳು ಪಡೆದುಕೊಂಡಿವೆ. ಬಿಹಾರದಲ್ಲಿಯೂ ಇಂಡಿಯಾ ಮೈತ್ರಿಕೂಟದ ಭಾಗವಾಗಿ ಸಿಪಿಐ (ಎಂಎಲ್) ಮೂರು ಸ್ಥಾನಗಳನ್ನು ಪಡೆದಿದ್ದು, ಸಿಪಿಐ ಮತ್ತು ಸಿಪಿಐಎಂ ತಲಾ ಒಂದು ಸ್ಥಾನ ಪಡೆದಿವೆ. ಜಾರ್ಖಂಡ್‌ನಲ್ಲಿ ಸೀಟು ಹಂಚಿಕೆಯ ಮಾತುಕತೆ ವಿಫಲವಾದ ನಂತರ, ಸಿಪಿಐ ರಾಜ್ಯದ ಎಂಟು ಸ್ಥಾನಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ. ಕೇರಳದಲ್ಲಿ ಎಲ್‌ಡಿಎಫ್ ಭಾಗವಾಗಿ ಸಿಪಿಐ ನಾಲ್ಕು ಸ್ಥಾನಗಳಲ್ಲಿ ಕಣದಲ್ಲಿದೆ.
ಎಡರಂಗದ ಇವತ್ತಿನ ಸ್ಥಿತಿಗೆ ಕಾರಣಗಳೇನು ಎಂದು ನೋಡಿಕೊಳ್ಳುವಾಗ, ಮುಖ್ಯವಾಗಿ ಕಣ್ಣಿಗೆ ಹೊಡೆದು ಕಾಣಿಸುವ ಸಂಗತಿಗಳು ಎರಡು: ಒಂದು, ಹೊಸ ರಾಜಕೀಯ ಸನ್ನಿವೇಶಕ್ಕೆ ಒಗ್ಗಿಕೊಳ್ಳುವಂತೆ ತನ್ನನ್ನು ತಾನು ಮರು ರೂಪಿಸಿಕೊಳ್ಳಲಾಗದ ಅದರ ಅಸಮರ್ಥತೆ. ಎರಡನೆಯದು, ದಶಕಗಳಷ್ಟು ಹಿಂದಿನ ಧೋರಣೆಗೇ ಈಗಲೂ ಅಂಟಿಕೊಂಡಿರುವ ಅದರ ಮೊಂಡುತನ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಎಡಪಕ್ಷಗಳ ಚುನಾವಣಾ ಸಾಧನೆಯಲ್ಲಿನ ತೀವ್ರ ಕುಸಿತ ಒಳ್ಳೆಯ ಲಕ್ಷಣವಲ್ಲ ಎಂಬುದು ರಾಜಕೀಯ ತಜ್ಞರು ಮತ್ತು ವಿಶ್ಲೇಷಕರ ಅಭಿಪ್ರಾಯವಾಗಿದೆ. ಅವುಗಳ ವರ್ಚಸ್ಸು ಕಡಿಮೆಯಾಗಿರುವುದರ ಪ್ರಮುಖ ಹೊಣೆಗಾರಿಕೆ ಕೂಡ ಎಡಪಕ್ಷಗಳದ್ದೇ ಆಗಿದೆ ಎನ್ನುತ್ತಾರೆ ಪರಿಣಿತರು.
ಸಮ್ಮಿಶ್ರ ಯುಗದಲ್ಲಿ ಜ್ಯೋತಿ ಬಸು ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಲು ನಿರಾಕರಿಸಿದ್ದೂ ಸೇರಿದಂತೆ ಹಲವಾರು ದುಸ್ಸಾಹಸಗಳು ಮತ್ತು ತಪ್ಪು ನಿರ್ಧಾರಗಳು ಎಡರಂಗದ ಬಗೆಗಿನ ಜನರ ಒಳ್ಳೆಯ ಭಾವನೆ ಹೊರಟುಹೋಗಲು ಕಾರಣವಾದವು ಎಂಬುದು ಜೆಎನ್‌ಯು ಪ್ರಾಧ್ಯಾಪಕ ಅಜಯ್ ಗುಡವರ್ತಿ ಅಭಿಪ್ರಾಯ. ಹಿಂದುತ್ವ ರಾಜಕಾರಣದ ಉದಯದ ನಂತರವಂತೂ ಎಡಪಕ್ಷಗಳು ಇದ್ದಕ್ಕಿದ್ದಂತೆ ಬೇರೆ ಎನ್ನಿಸತೊಡಗಿದವು. ಜನರಿಗೆ ಹತ್ತಿರವಾಗಬಲ್ಲ ಧೋರಣೆಯನ್ನು ಅವು ಹುಡುಕಿಕೊಳ್ಳಲಿಲ್ಲ ಎಂಬ ಗುಡವರ್ತಿ ಅಭಿಪ್ರಾಯವನ್ನು ಇಂಡಿಯನ್ ಎಕ್ಸ್‌ಪ್ರೆಸ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಅವರು ಕೊಡುವ ಇನ್ನೊಂದು ಕಾರಣವೆಂದರೆ, ಬದಲಾವಣೆಗಳನ್ನು ತರಲು ಎಡಪಕ್ಷಗಳು ದಶಕಗಳಷ್ಟು ಸಮಯ ತೆಗೆದುಕೊಳ್ಳುತ್ತವೆ. ಈ ಆಲಸ್ಯ ಮತ್ತು ಎಡರಂಗದ ಒಟ್ಟಾರೆ ಸಾಂಸ್ಥಿಕ ಸ್ವರೂಪವೇ ಪ್ರಸಕ್ತ ಸಂದರ್ಭದಲ್ಲಿ ಅದರ ಪಾಲಿನ ತೊಡಕಾಗಿದೆ. ಅಂದರೆ, ಎಡಪಂಥೀಯರ ಪತನದಲ್ಲಿ ಅವರ ದುಷ್ಕೃತ್ಯಗಳು ಮತ್ತು ತಪ್ಪು ನಿರ್ಧಾರಗಳ ಸರಣಿಯದ್ದೇ ದೊಡ್ಡ ಪಾಲಿದೆ ಎಂಬುದು ಸ್ಪಷ್ಟ.
ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ಸಂಸ್ಕೃತಿ ಮಾಧ್ಯಮ ಕೇಂದ್ರದ ಪ್ರೊ. ಬಿಸ್ವಜಿತ್ ದಾಸ್ ಪ್ರಕಾರ, ದೇಶದಲ್ಲಿ ಎಡರಂಗದ ಸಾಂಪ್ರದಾಯಿಕ ಕಲ್ಪನೆ ಸಂಪೂರ್ಣವಾಗಿ ಕುಸಿದಿದೆ. ಒಂದರ್ಥದಲ್ಲಿ ಎಡಪಕ್ಷಗಳ ಸೈದ್ಧಾಂತಿಕ ಸರಕನ್ನೆಲ್ಲ ಮುಖ್ಯವಾಹಿನಿಯ ಪಕ್ಷಗಳು ತಮ್ಮ ವಶ ಮಾಡಿಕೊಂಡಿವೆ. ಪರ್ಯಾಯಗಳನ್ನು ಕಂಡುಕೊಳ್ಳಲಾಗದೆ ಎಡರಂಗ ಸುಸ್ತಾಗಿಬಿಟ್ಟಿದೆ. ಹೊಸದೇನನ್ನೂ ಕೊಡಲು ಅದಕ್ಕೆ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಅವರು. ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಪ್ರತೀ ಚಳವಳಿಗಳು ನಡೆಯುತ್ತಿರುವ ಹೊತ್ತಿನಲ್ಲಿ ತಾವು ಅಪ್ರಸ್ತುತವಾಗುತ್ತಿರುವ ಭೀತಿಯಲ್ಲಿ ಎಡಪಕ್ಷಗಳಿವೆ ಮತ್ತು ಹೊಸಸನ್ನಿವೇಶಕ್ಕೆ ಹೊಂದಿಕೊಳ್ಳಲು ಅವಕ್ಕೆ ಆಗುತ್ತಿಲ್ಲ ಎಂಬುದು ದಾಸ್ ಅಭಿಪ್ರಾಯ.
ಸಂಸತ್ತಿನಲ್ಲಿ ಸಿಪಿಐಎಂ ಬಲ ಕ್ಷೀಣಿಸುತ್ತಿರುವುದಕ್ಕೆ ಪಕ್ಷದ ವಿರುದ್ಧದ ಇತರ ಪಕ್ಷಗಳ ಗುಂಪುಗಾರಿಕೆ ಕಾರಣವಾಗಿರುವುದರ ಜೊತೆಗೇ ಪಕ್ಷದ ಕಡೆಯಿಂದಲೂ ಆಗಿರುವ ಕೆಲವು ಪ್ರಮಾದಗಳ ಪಾಲೂ ಇದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳುತ್ತಾರೆ.
ಸ್ವಾತಂತ್ರ್ಯಾನಂತರದ ಬಹುತೇಕ ಎಲ್ಲಾ ಚಳವಳಿಗಳಲ್ಲಿ, ಸಾಂಸ್ಕೃತಿಕ ಹೋರಾಟ, ವಿದ್ಯಾರ್ಥಿ ಚಳವಳಿಗಳು, ರೈತ ಮತ್ತು ಕಾರ್ಮಿಕ ಹೋರಾಟ ಎಲ್ಲದರಲ್ಲೂ ದೀರ್ಘ ಕಾಲ ಎಡಪಕ್ಷಗಳ ಪ್ರಾಬಲ್ಯವಿತ್ತು. 2004ರಲ್ಲಿ ಎಡಪಕ್ಷಗಳ 60 ಸಂಸದರು ಯುಪಿಎ ಸರಕಾರದ ಮೇಲೆ ಪ್ರಭಾವ ಹೊಂದಿದ್ದರು. ನರೇಗಾ ಯೋಜನೆ, ಆರ್‌ಟಿಐ ಕಾಯ್ದೆ, ಸಾಲ ಮನ್ನಾ ಮತ್ತು ಆದಿವಾಸಿಗಳಿಗೆ ಭೂಮಿ ಮುಂತಾದ ಕ್ರಮಗಳು ಎಡಪಕ್ಷಗಳ ಸಾಧನೆಗಳಾಗಿವೆ ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಾಂಗೋ ನೆನಪು ಮಾಡಿಕೊಳ್ಳುತ್ತಾರೆ.
ಗತ ವೈಭವ ನೆನಪಿಸಿಕೊಳ್ಳಲು ಚೆಂದ ಮತ್ತು ಅದು ಹೆಮ್ಮೆಯ ವಿಷಯ. ಆದರೆ ಕಾಲ ದಾಟಿದಂತೆ ಅಪ್ರಸ್ತುತವಾಗುವ ಅದರ ದಾರುಣತೆ ಅಸಹನೀಯ. ಇವತ್ತಿನ ರಾಜಕೀಯ ಸಂದರ್ಭದಲ್ಲಿ ತಾನೆಲ್ಲಿಗೆ ಮುಟ್ಟಿದ್ದೇನೆ ಎಂಬುದನ್ನು ಅವಲೋಕಿಸುತ್ತಲೇ ಅಸ್ತಿತ್ವದ ಪರ್ಯಾಯ ದಾರಿಯನ್ನೂ ವಿವೇಚಿಸಬೇಕಾದ ಅನಿವಾರ್ಯತೆ ಎರಡರಂಗದ ಎದುರು ಇದೆ.
ಮತ್ತೊಮ್ಮೆ ಅದು ತನ್ನ ಹಿಂದಿನ ಶಕ್ತಿಯನ್ನು ಒಗ್ಗೂಡಿಸಿಕೊಂಡು ಮೇಲೇಳಬಲ್ಲುದೆ? ತೀರಾ ಎಂದರೆ ತೀರಾ ಒಡೆದುಹೋಗಿರುವ, ಬಿಂಬಗಳೇ ಕಾಣಿಸದಂತಾದ ಎಡರಂಗದ ಪಾಲಿಗೆ ಆಶಾವಾದ ಎಂಬುದು ಕೂಡ ಕನ್ನಡಿಯೊಳಗಿನ ಗಂಟಾಗಿದೆಯೇ?
ಇವತ್ತಿನ ಸಂದರ್ಭದಲ್ಲಿ ಹೀಗೆ ಉಳಿದುಬಿಡುವ ಪ್ರಶ್ನೆಗಳಾಗಿ ಎಡರಂಗದ ಸ್ಥಿತಿಯಿದೆ.
ಮಾಹಿತಿ ಕೃಪೆ: The New Indian Express