ವಕ್ಪ್‌ ಆಸ್ತಿ ವಿವಾದ | ಜಿಲ್ಲಾಧಿಕಾರಿ ನೇತೃತ್ವದಲ್ಲಿ ಟಾಸ್ಕ್‌ ಪೋರ್ಸ್ ರಚನೆ : ಎಂ.ಬಿ.ಪಾಟೀಲ್‌

Update: 2024-10-28 07:19 GMT

ವಿಜಯಪುರ: ಜಿಲ್ಲೆಯ ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಟಾಸ್ಕ್‌ ಪೋರ್ಸ್ ಸಮಿತಿಯೊಂದನ್ನು ರಚಿಸಿ, 1964 ರಿಂದ 1974ರವರೆಗಿನ ದಾಖಲೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ವಹಿಸುವಂತೆ ಸಚಿವ ಡಾ.ಎಂ.ಬಿ.ಪಾಟೀಲ್‌ ಸೂಚಿಸಿದರು.

ನಗರದ ಸೋಲಾಪುರ ರಸ್ತೆಯಲ್ಲಿರುವ ಸಚಿವರ ಗೃಹ ಕಚೇರಿಯಲ್ಲಿ ಜಿಲ್ಲೆಯ ವಿವಿಧ ತಹಶೀಲ್ದಾರರು, ವಕ್ಫ್ ಅಧಿಕಾರಿಗಳು ಸೇರಿದಂತೆ ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ವಿಜಯಪುರ ಜಿಲ್ಲೆಯಾದ್ಯಂತ ರೈತರು ಸೇರಿದಂತೆ ಖಾಸಗಿ ಜಮೀನುಗಳ ಪೈಕಿ ಒಂದು ಎಕರೆಯೂ ಸಹ ವಕ್ಪ್‌ಗೆ ಸೇರಿಸಿಲ್ಲ. 1974ರ ಗೆಜೆಟ್ ನೋಟಿಫಿಕೇಶನ್ ಪ್ರಕಾರ ವಕ್ಫ್ ಆಸ್ತಿ ಮಾತ್ರ ಇಂದೀಕರಣ ಮಾಡಲಾಗುತ್ತಿದ್ದು, ಈ ಕುರಿತು ಅನಾವಶ್ಯಕವಾಗಿ ಗೊಂದಲ ಸೃಷ್ಟಿಸಲಾಗುತ್ತಿದೆ. ಎಲ್ಲ ಗೊಂದಲಕ್ಕೆ ಅಂತ್ಯ ಹಾಡಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಟಾಸ್ಕ್ ಸಮಿತಿ ರಚಿಸಿಕೊಂಡು 1964 ರಿಂದ 1974 ರವರೆಗಿನ ದಾಖಲೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.

1974ರಲ್ಲಿ ಹೊರಡಿಸಲಾದ ಗೆಜೆಟ್ ನೋಟಿಫಿಕೇಶನ್‍ನಲ್ಲಿ ನಗರದಲ್ಲಿರುವ ಖಾಜಾ ಅಮೀನ ದರ್ಗಾ ಸರ್ವೇ ನಂಬರ್ ಹೊನವಾಡ ಗ್ರಾಮದ ಆಸ್ತಿ ಎಂದು ನಮೂದಾಗಿರುವುದರಿಂದ ವಕ್ಫ್ ಮಂಡಳಿಯಿಂದ 1977ರಲ್ಲಿ ಮತ್ತೆ ಬದಲಾವಣೆ ಮಾಡಿ ಸರಿಪಡಿಸಲಾಗಿದೆ. ಹೊನವಾಡ ಗ್ರಾಮದ ಯಾರಿಗೂ ನೋಟಿಸ್ ಈವರೆಗೆ ಜಾರಿ ಮಾಡಿರುವುದಿಲ್ಲ. ಸಂಬಂಧಿಸಿದ ರೈತರ-ಮಾಲೀಕರ ಹೆಸರಿನಲ್ಲಿಯೇ ಜಮೀನುಗಳು ಇವೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದಾಗ ಗೆಜೆಟ್ ನೋಟಿಫಿಕೇಶನ್‍ಗಿಂತ ಮುಂಚಿತವಾಗಿ 1964 ರಿಂದ 1974 ರವರೆಗಿನ ದಾಖಲೆಗಳನ್ನು ಪರಿಶೀಲಿಸಿ ಸರಿಪಡಿಸಿ ಕ್ರಮ ವಹಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್, ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ಇಂಡಿ ಉಪವಿಭಾಗಾಧಿಕಾರಿ ಆಬೀದ ಗದ್ಯಾಳ, ವಿಜಯಪುರ ತಹಶೀಲ್ದಾರ ಪ್ರಶಾಂತ ಚನಗೊಂಡ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ವಕ್ಫ್ ಇಲಾಖೆ ಅಧಿಕಾರಿ ತಬಸ್ಸುಮ್ ಎಂ.ಮೊಹಸೀನ್ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News