ಶಿವಕುಮಾರ ಸ್ವಾಮೀಜಿಗೂ ‘ಭಾರತ ರತ್ನ’ ಸಿಗಬೇಕು: ಡಿ.ಕೆ.ಶಿವಕುಮಾರ್
Update: 2024-02-03 13:03 GMT
ವಿಜಯಪುರ: ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರಿಗೆ ಭಾರತ ರತ್ನ ನೀಡಿರುವುದನ್ನು ಸ್ವಾಗತಿಸುತ್ತೇವೆ. ಅದಕ್ಕೆ ನಮ್ಮ ಯಾವುದೇ ತಕರಾರಿಲ್ಲ. ಆದರೆ, ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮಿಜಿಗೂ ಭಾರತ ರತ್ನ ಗೌರವ ನೀಡಬೇಕೆಂಬುದು ನಮ್ಮ ಆಗ್ರಹ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಶನಿವಾರ ಬಸವನ ಬಾಗೇವಾಡಿಯಲ್ಲಿ ಬಸವಣ್ಣ ದೇಗುಲದಲ್ಲಿ ಪೂಜೆ ಸಲ್ಲಿಸಿದ ನಂತರ ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿದರು.
ನಮ್ಮ ರಾಜ್ಯದಲ್ಲಿ ಅನ್ನದಾಸೋಹಕ್ಕೆ ಹೆಸರಾಗಿದ್ದವರು ಶಿವಕುಮಾರ ಸ್ವಾಮೀಜಿಗಳು. ಅವರಿಗೆ ಈ ಗೌರವ ಸಲ್ಲಬೇಕು ಎಂಬುದು ನಮ್ಮ ಒತ್ತಾಯ. ಈ ಬಗ್ಗೆ ನಮ್ಮ ಸರಕಾರ ಕೇಂದ್ರಕ್ಕೆ ಪತ್ರ ಬರೆದು ಮನವಿ ಮಾಡಿತ್ತು. ಈ ವಿಚಾರದಲ್ಲಿ ತೀರ್ಮಾನ ಅವರಿಗೆ ಬಿಟ್ಟಿದೆ ಎಂದು ಶಿವಕುಮಾರ್ ಹೇಳಿದರು.