ನೀತಿಸಂಹಿತೆ ಉಲ್ಲಂಘನೆ: ಮಧ್ಯಪ್ರದೇಶ ಸಚಿವರ ವಿರುದ್ಧ ಪ್ರಕರಣ ದಾಖಲು
ಹೊಸದಿಲ್ಲಿ: ಚುನಾವಣಾ ನೀತಿಸಂಹಿತೆ ಉಲ್ಲಂಘನೆಯ ಆರೋಪದಲ್ಲಿ ಮಧ್ಯಪ್ರದೇಶ ಸಚಿವ ಗೋವಿಂದ ಸಿಂಗ್ ರಜಪೂತ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಗರಿಷ್ಠ ಮತ ನೀಡಿದ ಬೂತ್ ಗಳಿಗೆ 25 ಲಕ್ಷ ರೂಪಾಯಿ ನೀಡುವುದಾಗಿ ಆಶ್ವಾಸನೆ ನೀಡಿದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.
ಇದು ಬಿಜೆಪಿ ಸರ್ಕಾರದ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿ ಎಂದು ಕಾಂಗ್ರೆಸ್ ಹೇಳಿದೆ. ರಜಪೂತ್ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು ಮತ್ತು ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧ ವಿಧಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಚೌಹಾಣ್ ಸರ್ಕಾರದಲ್ಲಿ ಪ್ರಮುಖವಾದ ಸಾರಿಗೆ ಮತ್ತು ಕಂದಾಯ ಖಾತೆಗಳನ್ನು ಹೊಂದಿದ್ದ ರಜಪೂತ್, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧ್ಯ ಅವರ ನಿಕಟವರ್ತಿ. ಇವರು ಸಾಗರ ಜಿಲ್ಲೆಯ ಸುರಖಿ ಕ್ಷೇತ್ರದಿಂದ ಬಿಜೆಪಿ ಹುರಿಯಾಳು ಆಗಿದ್ದಾರೆ.
ಜಿಲ್ಲಾ ಚುನಾವಣಾಧಿಕಾರಿ ನೀಡಿದ ದೂರಿನ ಹಿನ್ನೆಲೆಯಲ್ಲಿ ರಹತ್ ಗಢ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಐಸಿಸಿ ವಕ್ತಾರೆ ಶೋಭಾ ಓಜಾ, "ಇದು ಒಂದು ಪ್ರತ್ಯೇಕ ಪ್ರಕರಣ ಎನಿಸಿದರೂ, ಇಡೀ ಸ್ಥಿತಿಗೆ ಸುಳಿವು ನೀಡುವಂಥದ್ದು" ಎಂದು ಹೇಳಿದ್ದಾರೆ. ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಆಡಳಿತಾರೂಢ ಪಕ್ಷ ಯಾವ ಮಟ್ಟಕ್ಕೆ ಇಳಿದಿದೆ ಎನ್ನುವುದಕ್ಕೆ ಇದು ಸಾಕ್ಷಿ ಎಂದು ಅವರು ಹೇಳಿದ್ದಾರೆ. ಮತಗಟ್ಟೆ ಮಟ್ಟದಲ್ಲಿ ಇಂಥ ಆಮಿಷವೊಡ್ಡಲು ಎಲ್ಲಿಂದ ಹಣ ಬಂತು ಎಂಬ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.