ಕುಂಟುತ್ತಾ ಸಾಗಿದ ಮಂಗಳೂರಿನ 24x7 ನೀರು ಸರಬರಾಜು ಯೋಜನೆ

Update: 2023-11-27 05:31 GMT
Editor : jafar sadik | Byline : ಸತ್ಯಾ. ಕೆ

Photo:istock

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್‌ಗಳಿಗೆ 24x7 ಕುಡಿಯುವ ನೀರು ಒದಗಿಸುವ ಮಹತ್ವಾ ಕಾಂಕ್ಷೆಯ ಯೋಜನೆ ಕುಂಟುತ್ತಾ ಸಾಗಿದ್ದು, 2024ರ ಮೇ ತಿಂಗಳಿಗೆ ಗುತ್ತಿಗೆ ಅವಧಿ ಮುಗಿಯಲಿದೆ. ಆದರೆ ಈ ಅವಧಿಯಲ್ಲಿ ಆಗಿರುವ ಕಾಮಗಾರಿ ಶೇ. 63ರಷ್ಟು ಮಾತ್ರ!

24x7 ನೀರು ಸರಬರಾಜು ಯೋಜನೆಯಡಿ 1,288.8 ಕಿ.ಮೀ. ನೀರು ಪೂರೈಕೆ ಜಾಲ, 19 ಓವರ್ ಹೆಡ್‌ಟ್ಯಾಂಕ್‌ಗಳ ನಿರ್ಮಾಣ, ಆರು ಜಿಎಲ್‌ಎಸ್‌ಆರ್ ಹಾಗೂ ಏಳು ಪಂಪಿಂಗ್ ಹೌಸ್‌ಗಳ ನಿರ್ಮಾಣದ ಜತೆಗೆ ಮಲ್ಟಿ ಜೆಟ್ ವಾಟರ್ ಮೀಟರ್‌ನೊಂದಿಗೆ 96,300 ಗೃಹ ಬಳಕೆಯ ಸಂಪರ್ಕ ಕಲ್ಪಿಸುವುದು, 81.7 ಎಂಎಲ್‌ಡಿ ಫಿಲ್ಟರ್, ಪಂಪ್ ಹೌಸ್, ರಾಮಲ್‌ಕಟ್ಟೆಯಲ್ಲಿ ಕೆಸರು ಶುದ್ಧೀ ಕರಣ ವ್ಯವಸ್ಥೆ(ಇನ್ನೂ ನಿರ್ಧರಿಸಲಾಗಿಲ್ಲ)ಯ ಪ್ರಸ್ತಾವ ಯೋಜನೆಯಲ್ಲಿದೆ. ಇವೆಲ್ಲಾ ಪೂರ್ಣಗೊಳ್ಳುವುದು ಯಾವಾಗ? 2023ಕ್ಕೆ ಪೂರ್ಣಗೊಳ್ಳಬೇಕಾಗಿದ್ದ ಯೋಜನೆಗೆ ಕೋವಿಡ್ ಹಿನ್ನೆಲೆಯಲ್ಲಿ ಗುತ್ತಿಗೆದಾರ ಸಂಸ್ಥೆಗೆ ಒಂದು ವರ್ಷ ಹೆಚ್ಚುವರಿ ಅವಧಿ ನೀಡಲಾಗಿದೆ. ಅದರಂತೆ ಬಾಕಿ ಉಳಿದಿರುವ ಒಂಭತ್ತು ತಿಂಗಳಲ್ಲಿ ಇವೆಲ್ಲ ಕಾಮಗಾರಿಗಳು ಮುಗಿಸಲು ಸಾಧ್ಯವೇ?

ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ (ಕೆಯುಐಡಿಎಫ್‌ಸಿ) ಅಥವಾ ಕರ್ನಾಟಕ ಸಮಗ್ರ ನಗರ ನೀರು ನಿರ್ವಹಣಾ ಹೂಡಿಕೆ ಕಾರ್ಯಕ್ರಮವಾಗಿ ಮಂಗಳೂರು ನಗರಕ್ಕೆ 24x7 ನೀರು ಸರಬರಾಜು ಯೋಜನೆಯ ಗುತ್ತಿಗೆಯು ಒಟ್ಟು 587.67 ಕೋಟಿ ರೂ. ವೆಚ್ಚದಲ್ಲಿ 2019ರ ಡಿಸೆಂಬರ್ 24ರಂದು ಆರಂಭಗೊಂಡಿತ್ತು. ಎಂಟು ವರ್ಷಗಳ ಕಾರ್ಯಾಚರಣೆ ಹಾಗೂ ನಿರ್ವಹಣೆ ವೆಚ್ಚವಾಗಿ 204.75 ಕೋಟಿ ರೂ.ಗಳೊಂದಿಗೆ ಮೆಸರ್ಸ್ ಸುಯೇಜ್ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್- ಮೆಸರ್ಸ್ ಡಿಆರ್‌ಎಸ್ ಇನ್ಫ್ರಾ ಪ್ರೈವೇಟ್ ಲಿಮಿಟೆಡ್ ಈ ಯೋಜನೆಯ ಗುತ್ತಿಗೆ ವಹಿಸಿ ಕೊಂಡಿದೆ. ಗುತ್ತಿಗೆ ವಹಿಸಿಕೊಂಡಿದ್ದ ಸಂಸ್ಥೆಗೆ 3030ರ ಮೇ 23ರವರೆಗೆ ವಿನ್ಯಾಸ ಮತ್ತು ಮೌಲ್ಯಮಾಪನ ಅವಧಿಯಾಗಿತ್ತು. ಬಳಿಕ ನಿರ್ಮಾಣ ಕಾಮಗಾರಿಗೆ 2020ರ ಮೇ 24ರಿಂದ 2023ರ ಮೇ 23ರವರೆಗೆ 36 ತಿಂಗಳ ಅವಧಿ ನಿಗದಿಪಡಿಸಲಾಗಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಒಂದು ವರ್ಷ ಹೆಚ್ಚುವರಿ ಅವಧಿ ಯನ್ನು ಒದಗಿಸಲಾಗಿದೆ. ಕಾಮಗಾರಿ ಮುಕ್ತಾಯ ಗೊಂಡು ಗುತ್ತಿಗೆ ಸಂಸ್ಥೆಯು ಮೂರು ತಿಂಗಳ ಅವಧಿಯೊಳಗೆ ಅಂದರೆ 2024ರ ಆಗಸ್ಟ್ 23ರೊಳಗೆ ಮನಪಾಕ್ಕೆ ಯೋಜನೆ ಹಸ್ತಾಂತರ ಗೊಂಡು ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರಿಗೆ 24x7 ನೀರು ಸರಬರಾಜು ಆಗಬೇಕಾಗಿದೆ.

ಆದರೆ, ಕೆಯುಐಡಿಎಫ್‌ಸಿ ಮಾಹಿತಿ ಪ್ರಕಾರ ಈವರೆಗೆ ಶೇ.63ರಷ್ಟು ಕಾಮಗಾರಿ ಆಗಿದ್ದು, 276.73 ಕೋಟಿ ರೂ. ವ್ಯಯಿಸಲಾಗಿದೆ. ಇನ್ನುಳಿದ ಒಂಭತ್ತು ತಿಂಗಳಲ್ಲಿ ಬಾಕಿ ಸುಮಾರು 37ರಷ್ಟು ಕಾಮಗಾರಿ ಆಗಲಿದೆಯೇ? ಮತ್ತೆ ಯೋಜನಾ ವೆಚ್ಚ ಬದಲಾಗಲಿದೆಯೇ? ಕಳೆದ ದಶಕದಿಂದೀಚೆಗೆ ಮಂಗಳೂರು ನಗರಕ್ಕೆ 24x7 ನೀರು ಎಂಬ ಜನಪ್ರತಿನಿಧಿಗಳ ಹೇಳಿಕೆ ವಾಸ್ತವ ಆಗುವುದಾದರೂ ಯಾವಾಗ?

ರಾಜ್ಯದ ನೂತನ ನಗರಾಭಿವೃದ್ಧಿ ಸಚಿವ ಸುರೇಶ ಬೈರತಿ ಅವರು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನ.24ರಂದು ಈ ವಿಷಯ ಕುರಿತಾದ ಪರಿಶೀಲನೆಯ ಸಂದರ್ಭ ವಿಳಂಬಕ್ಕೆ ಕಾರಣ ಕೇಳಿದಾಗ ಯೋಜನೆಯ ಪ್ರಮುಖ ಅಧಿಕಾರಿ ರಾಜೀನಾಮೆ ನೀಡುವುದಾಗಿ ಹೇಳಿ ಸಭೆಯಿಂದ ಹೊರನಡೆದ ಪ್ರಸಂಗವೂ ನಡೆದಿದೆ. ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಶಾಸಕ ವೇದವ್ಯಾಸ ಕಾಮತ್, ದ.ಕ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ.ಅತೀಕ್, ಪಾಲಿಕೆಯ ಸದಸ್ಯರ ಉಪಸ್ಥಿತಿಯಲ್ಲಿ ಸಭೆ ನಡೆದಿತ್ತು.

ನಗರಕ್ಕೆ ನೀರು ಪೂರೈಕೆ ಹಾಗೂ ಒಳಚರಂಡಿ ವ್ಯವಸ್ಥೆಗೆ ಸಂಬಂಧಿಸಿ ಎಡಿಬಿ 1ನೇ ಹಂತದ ಯೋಜನೆ ವಿಫಲವಾಗಿರುವ ಬಗ್ಗೆ ಬಹಳ ವರ್ಷಗಳಿಂದ ಸಾಕಷ್ಟು ಚರ್ಚೆ ಆರೋಪ, ಪ್ರತ್ಯಾರೋಪಗಳು ಮುಂದುವರಿಯುತ್ತಲೇ ಬಂದಿದೆ. ಆ ಯೋಜನೆಯನ್ನು ಬದಿಗೊತ್ತಿ ಹೊಸತಾಗಿ ಆರಂಭಿಸಿರುವ ಈ ಯೋಜನೆಯೂ ಆಮೆಗತಿಯಲ್ಲಿ ಸಾಗುತ್ತಿರುವುದು ತೆರಿಗೆ ಕಟ್ಟುತ್ತಿರುವ ಸಾರ್ವಜನಿಕರ ಸಹನೆಯನ್ನೂ ಪರೀಕ್ಷಿಸುವಂತಿದೆ.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2023ರ ಅಕ್ಟೋಬರ್ 31ರವರೆಗೆ ಗೃಹಬಳಕೆ, ಗೃಹೇತರ, ವಾಣಿಜ್ಯ, ಕೈಗಾರಿಕೆ ಸೇರಿ ಒಟ್ಟು 90,187 ನೀರಿನ ಸಂಪರ್ಕಗಳಿವೆ. ಇದರಲ್ಲಿ ಗೃಹಬಳಕೆಯ ಸಂಪರ್ಕಗಳು 83,804. ನಗರಕ್ಕೆ ನೀರು ಸರಬರಾಜಿನ ಮೂಲ ನೇತ್ರಾವತಿ ನದಿ. ಪಾಲಿಕೆಯ ಮಾಹಿತಿಯ ಪ್ರಕಾರ ಪ್ರಸಕ್ತ 50 ವಾರ್ಡ್‌ಗಳಿಗೆ ದಿನಂಪ್ರತಿ ಹಾಗೂ 10 ವಾರ್ಡ್ (ಭಾಗಶಃ) ಗಳಿಗೆ ಎರಡು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡ ಲಾಗುತ್ತಿದೆ. 24x7 ನೀರು ಪೂರೈಕೆಯ ಕನಸು ನನಸಾಗುವುದು ಯಾವಾಗ?

19 ಓವರ್ ಹೆಡ್ ಟ್ಯಾಂಕ್‌ಗಳಲ್ಲಿ 10 ಮಾತ್ರ ಪೂರ್ಣ!

24x7 ಕುಡಿಯುವ ನೀರು ಪೂರೈಕೆ ಯೋಜನೆಯಡಿ ಪ್ರಸ್ತಾವಿತ 19 ಓವರ್ ಹೆಡ್ ಟ್ಯಾಂಕ್(ಒಎಚ್‌ಟಿ)ಗಳಲ್ಲಿ ಕೋಡಿಬಳ್ಳಿ, ಎನ್‌ಐಟಿಕೆ, ಅಮೃತ್ ನಗರ, ಉದಯ ನಗರ, ವೆಲೆನ್ಸಿಯಾ, ಮೋರ್ಗನ್ಸ್‌ಗೇಟ್, ಕುಂಜತ್ತಬೈಲ್, ಸಂತೋಷ್ ನಗರ, ಶಕ್ತಿನಗರ, ನಂದಿಗುಡ್ಡದಲ್ಲಿ ನಿರ್ಮಾಣವಾಗಿವೆ. ಉಳಿದಂತೆ ಜೆ.ಎಂ.ರೋಡ್, ಮೇರಿಹಿಲ್, ಕೃಷ್ಣಾಪುರ, ಕಾನ, ನೆಕ್ಕಿಲಗುಡ್ಡ, ನೆಹರೂ ಮೈದಾನ ಹಾಗೂ ಕೋಡಿಕಲ್‌ನ ಒಎಚ್‌ಟಿ ಕಾಮಗಾರಿ ಪ್ರಗತಿಯಲ್ಲಿವೆ. ಬಿಕರ್ನಕಟ್ಟೆ ಮತ್ತು ಪಣಂಬೂರಿನಲ್ಲಿ ಇನ್ನಷ್ಟೇ ಒಎಚ್‌ಟಿ ನಿರ್ಮಾಣವಾಗಬೇಕಿದೆ.

ಮೇನ್ ಲೈನ್, ಟ್ಯಾಂಕ್ ನಿರ್ಮಾಣ ಮೊದಲಾದ ಸುಲಭದ ಕಾಮಗಾರಿಗಳನ್ನು ಮಾತ್ರವೇ ಯೋಜನೆಯಡಿ ಈವರೆಗೆ ಮಾಡಿರುವುದು. ಉಳಿದಂತೆ ಪೂರೈಕೆ ಜಾಲ ಇನ್ನೂ ಆಗಿಲ್ಲ. ಡಿಜಿಟಲ್ ಮೀಟರ್‌ಗಳ ಖರೀದಿ ಮಾಡಲಾಗಿದೆ. ಅವುಗಳ ಅಳವಡಿಕೆ ಕಾರ್ಯ ಆಗಿಲ್ಲ. ಯೋಜನೆ ಆರಂಭವಾದ ಬಳಿಕ ಗುತ್ತಿಗೆದಾರ ಸಂಸ್ಥೆಯಿಂದ ಶೇ.೫೦ರಷ್ಟು ಕಾಮಗಾರಿಯನ್ನು ಪೂರ್ಣ ಮಾಡಲು ಸಾಧ್ಯವಾಗಿಲ್ಲ.

ಪ್ರವೀಣ್‌ ಚಂದ್ರ ಆಳ್ವ, ವಿಪಕ್ಷ ನಾಯಕ, ಮನಪಾ

Writer - ವಾರ್ತಾಭಾರತಿ

contributor

Editor - jafar sadik

contributor

Byline - ಸತ್ಯಾ. ಕೆ

contributor

Similar News