12th Fail ಚಿತ್ರ : ಯಾವ ಕಾರಣಕ್ಕೂ ಸೋಲೊಪ್ಪಿಕೊಳ್ಳದವನ ವಿಜಯ
ನಮ್ಮಲ್ಲಿ ದ್ವಿತೀಯ ಪಿಯುಸಿ ಅಂತೀವಲ್ಲ, ಅದನ್ನೇ ಬೇರೆ ರಾಜ್ಯಗಳಲ್ಲಿ ಟ್ವೆಲ್ತ್ ಕ್ಲಾಸ್ ಅಂತಾರೆ. ಅದರಲ್ಲಿ ಫೇಲ್ ಆಗಿರುವವನೊಬ್ಬ ದೇಶದಲ್ಲೇ ಅತ್ಯಂತ ಕಠಿಣ ಪರೀಕ್ಷೆ ಅಂತ ಹೇಳೋ ಐಎಎಸ್ ಅಥವಾ ಯುಪಿಎಸ್ಸಿ ಪರೀಕ್ಷೆಯಲ್ಲಿ ಆಯ್ಕೆ ಆಗೋದು ಸಾಧ್ಯನಾ ?. ಐಐಟಿ, ಐಐಎಂ ಗಳ ಟಾಪರ್ ಗಳು ಬರೆಯೋ ಆ ಪರೀಕ್ಷೆಯಲ್ಲಿ ಹನ್ನೆರಡನೇ ತರಗತಿ ಪಾಸಾಗಲು ಎರಡೆರಡು ಸರ್ತಿ ಪರೀಕ್ಷೆ ಬರೆದವನು ಆಯ್ಕೆ ಆಗೋದು ಆಗೋ ಹೋಗೋ ಮಾತಾ ?.
ಖಂಡಿತ ಸಾಧ್ಯವಿದೆ. ಆದರೆ ಅದಕ್ಕೆ ಎರಡು ಷರತ್ತುಗಳಿವೆ. ಒಂದು ರೀ ಸ್ಟಾರ್ಟ್ , ಇನ್ನೊಂದು ನೋ ಚೀಟಿಂಗ್. ಇವೆರಡನ್ನು ಪಾಲಿಸಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂದು ಸತ್ಯಕತೆಯನ್ನೇ ಆಧರಿಸಿ ತೋರಿಸಿದ ಅದ್ಬುತ ಚಿತ್ರ ಟ್ವೆಲ್ತ್ ಫೇಲ್. ಕಂಗನಾ ರಣಾವತ್ ಅವರ ತೇಜಸ್ ಹೇಳಹೆಸರಿಲ್ಲದಂತೆ ಪತನವಾಗಿದೆ. ಆದರೆ ಅದರ ಜೊತೆಜೊತೆಗೆ ರಿಲೀಸ್ ಆದ ಚಿತ್ರ ಟ್ವೆಲ್ತ್ ಫೇಲ್.
ಸಿನಿಮಾವೊಂದು ಯಾವ ದೊಡ್ಡ ಸ್ಟಾರ್ ಗಳು ಇಲ್ಲದೆಯೂ ತನ್ನ ಕಥೆಯಿಂದಾಗಿಯೇ ಹೇಗೆ ವೀಕ್ಷಕರ ಮನಸ್ಸಿನಲ್ಲಿ ಜಾಗ ಪಡೆದುಕೊಳ್ಳಬಲ್ಲದು ಎಂಬುದಕ್ಕೆ ಅತ್ಯುತ್ತಮ ಉದಾಹರಣೆ ಈ ಟ್ವೆಲ್ತ್ ಫೇಲ್. ಯುವ ಸಮುದಾಯದಲ್ಲಿ ಆತ್ಮವಿಶ್ವಾಸ ತುಂಬುವ ಅತ್ಯಂತ ಸ್ಪೂರ್ತಿದಾಯಕ ಚಿತ್ರವಾಗಿ ಅದು ಗಮನ ಸೆಳೆದಿದೆ. ದೇಶದೆಲ್ಲೆಡೆ ಈಗ ಚರ್ಚೆಯಲ್ಲಿದೆ. ಎರಡನೇ ವಾರ ಮೊದಲ ವಾರಕ್ಕಿಂತ ಹೆಚ್ಚು ಆದಾಯವನ್ನೂ ಗಳಿಸಿದೆ.
ಬಾಲಿವುಡ್ನ ಕೆಲವು ಸಿನಿಮಾಗಳ ಪ್ರಮೋಷನ್ಗೆ ಸಿನಿಮಾ ಮಂದಿ ಮಾತ್ರವಲ್ಲ, ಕೇಂದ್ರ ಸರ್ಕಾರವೇ, ಕಡೆಗೆ ಸ್ವತಃ ಪ್ರಧಾನಿಯೇ ನಿಂತುಬಿಡುವ ಕಾಲವನ್ನು ನೋಡುತ್ತಿದ್ದೇವೆ. ಆದರೆ ಈ ಸಿನಿಮಾ ಬಗ್ಗೆ ಯಾರೂ ಎಲ್ಲಿಯೂ ಹೆಚ್ಚು ಮಾತನಾಡಲೇ ಇಲ್ಲ. ಮೀಡಿಯಾಗಳೂ ಅಷ್ಟೆ. ಹೆಚ್ಚೇನೂ ಹೇಳಲೇ ಇಲ್ಲ.
ಈ ಸಿನಿಮಾದ ಹೀರೋ ವಿಕ್ರಾಂತ್ ಮಾಸ್ಸೆ ಬಗ್ಗೆ ಜಿರಳೆ ಎಂದು ದುರಹಂಕಾರಿ ನಟಿ ಕಂಗನಾ ಕರೆದಿದ್ದು ಮಾತ್ರ ಸುದ್ದಿಯಾಗಿತ್ತು. ಆದರೆ, ಟ್ವಲ್ತ್ ಫೇಲ್ ಸಿನಿಮಾ ತಂತಾನೇ ಗಳಿಸುತ್ತಿರುವ ಯಶಸ್ಸು, ಅದು ಯುವಕರಿಗೆ ಸ್ಫೂರ್ತಿ ತುಂಬುತ್ತಿರುವ ಬಗೆ, ಕಂಗನಾ ರಣಾವತ್ ರಂತಹ ಅಹಂಕಾರವನ್ನು ಚೂರು ಚೂರು ಮಾಡುವ ಹಾಗಿದೆ.
ಟ್ವೆಲ್ತ್ ಫೇಲ್ ಹಿಂದಿ ಭಾಷೆಯ ಬಯೋಪಿಕ್ ಚಿತ್ರ. ಹಿರಿಯ ನಿರ್ಮಾಪಕ, ನಿರ್ದೇಶಕ ವಿಧು ವಿನೋದ್ ಚೋಪ್ರಾ ನಿರ್ಮಿಸಿ ಅವರೇ ಬರೆದು ನಿರ್ದೇಶಿಸಿರುವ ಈ ಚಿತ್ರ ಸತತ ವಿಫಲತೆಯ ಹಾದಿಯಲ್ಲೂ ಹೇಗೆ ಕೊನೆಗೆ ಯಶಸ್ಸನ್ನು ಪಡೆಯಲು ಸಾಧ್ಯವಿದೆ ಎಂದು ಯುವಸಮುದಾಯದಲ್ಲಿ ಸ್ಫೂರ್ತಿಯನ್ನು ತುಂಬುವ ಅದ್ಭುತ ಕಥೆಯನ್ನು ಹೊಂದಿದೆ.
ಐಪಿಎಸ್ ಅಧಿಕಾರಿಯಾಗಲು ತೀವ್ರ ಬಡತನವನ್ನು ಹಿಮ್ಮೆಟ್ಟಿ ಗೆದ್ದ ಮನೋಜ್ ಕುಮಾರ್ ಶರ್ಮಾ ಅವರ ನಿಜ ಜೀವನದ ಕಥೆಯ ಕುರಿತು ಅನುರಾಗ್ ಪಾಠಕ್ ಅವರು 2019ರಲ್ಲಿ ಬರೆದ ಪುಸ್ತಕವನ್ನು ಈ ಚಿತ್ರ ಆಧರಿಸಿದೆ.
ವಿಕ್ರಾಂತ್ ಮಾಸ್ಸೆ, ಮೇಧಾ ಶಂಕರ್, ಅನಂತ್ ವಿ ಜೋಶಿ, ಅಂಶುಮನ್ ಪುಷ್ಕರ್ ಮತ್ತು ಪ್ರಿಯಾಂಶು ಚಟರ್ಜಿ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಿಶೇಷವೆಂದರೆ, ಇದರ ಬಗ್ಗೆ ಉತ್ತಮ ವಿಮರ್ಶೆಗಳು ಬಂದುದಷ್ಟೇ ಅಲ್ಲ, ಕಮರ್ಷಿಯಲ್ ಆಗಿಯೂ ಗಲ್ಲಾಪೆಟ್ಟಿಗೆಯಲ್ಲಿ ಇದು ದೊಡ್ಡ ಯಶಸ್ಸನ್ನೇ ಗಳಿಸಿದೆ.
ಢಕಾಯಿತರಿಗಾಗಿ ಕುಖ್ಯಾತಿ ಪಡೆದಿರುವ ಮಧ್ಯ ಪ್ರದೇಶದ ಚಂಬಲ್ ಕುಗ್ರಾಮದಲ್ಲಿ ಶಾಲೆಯ ಪ್ರಾಂಶುಪಾಲರೇ ಪರೀಕ್ಷೆಯಲ್ಲಿ ಕಾಪಿ ಮಾಡುವ ವ್ಯವಸ್ಥೆ ಮಾಡಿಕೊಡುತ್ತಾರೆ. ಇಲ್ಲದಿದ್ದರೆ ಅಲ್ಲಿ ಯಾವ ಮಕ್ಕಳೂ ಪಾಸಾಗೋದಿಲ್ಲ. ಅಂತ ಶಾಲೆಯಲ್ಲಿ ಹನ್ನೆರಡನೇ ತರಗತಿಯಲ್ಲಿ ಮೊದಲು ಫೇಲ್ ಆಗುತ್ತಾನೆ ಮನೋಜ್ ಶರ್ಮ. ಆಮೇಲೆ ಅಲ್ಲಿಗೆ ಬಂದಿದ್ದ ಡಿವೈಎಸ್ಪಿ ದುಷ್ಯಂತ್ ಸಿಂಗ್ ಅವರಿಂದ ಪ್ರೇರಿತನಾಗಿ ಯಾವ ಕಾರಣಕ್ಕೂ ಕಾಪಿ ಮಾಡೋದಿಲ್ಲ ಎಂದು ಕಷ್ಟಪಟ್ಟು ಓದಿ ಮುಂದಿನ ವರ್ಷ ತೃತೀಯ ದರ್ಜೆಯಲ್ಲಿ ಪಾಸಾಗುತ್ತಾನೆ.
ಆಮೇಲೆ ಯುಪಿಎಸ್ಸಿ ಪರೀಕ್ಷೆ ಎಂದರೆ ಏನೆಂದೇ ಗೊತ್ತಿಲ್ಲದೆ ಐಪಿಎಸ್ ಅಧಿಕಾರಿ ಆಗಲು ಹೊರಡುತ್ತಾನೆ ಮನೋಜ್ ಕುಮಾರ್ ಶರ್ಮಾ. ಮತ್ತೆ ಮತ್ತೆ ಯುಪಿಎಸ್ಸಿ ಪರೀಕ್ಷೆಯಲ್ಲಿ ವಿಫಲರಾದರೂ ಸೋಲೊಪ್ಪಿಕೊಳ್ಳದೆ ಆ ಹಾದಿಯಲ್ಲಿ ಮರಳಿ ಯತ್ನಿಸುವ ಬಗೆಯನ್ನು ಈ ಚಿತ್ರದಲ್ಲಿ ಮನಮುಟ್ಟುವಂತೆ ಕಟ್ಟಿಕೊಡಲಾಗಿದೆ.
ಲಕ್ಷಾಂತರ ವಿದ್ಯಾರ್ಥಿಗಳ ನಡುವೆ ಪೈಪೋಟಿಗಿಳಿಯಬೇಕಾಗಿರುವಲ್ಲಿ ಬಡತನ, ಗ್ರಾಮೀಣ ಹಿನ್ನೆಲೆ, ಭಾಷೆಯ ತೊಡಕು ಮತ್ತು ವೈಫಲ್ಯವನ್ನು ಮೀರಿ ಮುನ್ನಡೆಯುವ ನಿಜ ಬದುಕಿನ ಈ ಕಥೆ ಅತ್ಯಂತ ಸ್ಫೂರ್ತಿದಾಯಕವಾಗಿದೆ. "ರಿ ಸ್ಟಾರ್ಟ್" ಎಂಬುದೇ ಈ ಚಿತ್ರದ ಮೂಲಮಂತ್ರ. ಸೋಲೊಪ್ಪಿಕೊಳ್ಳದೆ "ರೀ ಸ್ಟಾರ್ಟ್" ಮಾಡಿ ಎಂಬುದೇ ಇಲ್ಲಿ ಯಶಸ್ಸಿನ ಗುಟ್ಟು.
ಏನಾಗುತ್ತಿದೆ ಎಂಬುದನ್ನು ನಿಮ್ಮ 'ನಸೀಬು' ಎಂದುಕೊಂಡುಬಿಡುವುದು ಅತಿ ದೊಡ್ಡ ತಪ್ಪು. ಅದರೊಡನೆ ರಾಜಿ ಮಾಡಿಕೊಳ್ಳದೆ, ನಮಗೆ ಬೇಕಿರುವುದನ್ನು ಪಡೆಯಲು ಹೋರಾಡಬೇಕು ಎಂಬ ಮಾತೊಂದು ಚಿತ್ರದ ಒಂದು ದೃಶ್ಯದಲ್ಲಿ ಬರುತ್ತದೆ. ಕಲಿಯಲು ಕೈಯಲ್ಲಿ ದುಡ್ಡಿಲ್ಲ. ಪ್ರಾಮಾಣಿಕತೆಯನ್ನೇ ನೆಚ್ಚಿಕೊಂಡ ತಂದೆ ಸರಕಾರಿ ಉದ್ಯೋಗ ಕಳಕೊಂಡಿದ್ದಾರೆ. ಹಾಗಾಗಿ ಮನೆ ಖರ್ಚಿಗೂ ತಾನೇ ಪ್ರತಿ ತಿಂಗಳು ಕಳಿಸಬೇಕಾದ ಅನಿವಾರ್ಯತೆ.
ಆಗ ದಿಲ್ಲಿಯ ಹಿಟ್ಟಿನ ಗಿರಣಿಯೊಂದರಲ್ಲಿ ದಿನಕ್ಕೆ 15 ಗಂಟೆ ಕೆಲಸ ಮಾಡಿ ಅದೇ ಗಿರಣಿಯೊಳಗಿನ ಒಂದು ಮೂಲೆಯಲ್ಲಿ ಕೂತು ರಾತ್ರಿಯಿಡೀ ಓದುವ ಮನೋಜ್ ಕೊನೆಗೂ ಹೇಗೆ ಗುರಿ ತಲುಪುತ್ತಾನೆ ಎಂಬುದನ್ನು ನೋಡಿದ ಯಾರೂ ಕಣ್ಣೀರು ಹಾಕದೆ ಬರಲು ಸಾಧ್ಯವೇ ಇಲ್ಲ. ಕಥೆ ಸರಳವಾಗಿದ್ದರೂ ಚಿಂತನೆಗೆ ಹಚ್ಚುವಂತಿದೆ. ಯಾವುದನ್ನೂ ಸಿನೀಮಿಯ ಎನ್ನಿಸದ ಹಾಗೆ ನಿರೂಪಿಸಲಾಗಿದೆ.
ನಿಜವಾದ ವಿದ್ಯಾರ್ಥಿಗಳು, ನೈಜ ಸ್ಥಳಗಳು, ಮಧ್ಯ ಪ್ರದೇಶದ ಚಂಬಲ್ ನ ಗ್ರಾಮೀಣ ಶಿಕ್ಷಣ ವ್ಯವಸ್ಥೆಯ ಕಟು ವಾಸ್ತವ ಹಾಗು ಐಎಎಸ್ ಆಕಾಂಕ್ಷಿಗಳ ನೆಚ್ಚಿನ ದಿಲ್ಲಿಯ ಮುಖರ್ಜಿ ನಗರದ ಚಿತ್ರಣವನ್ನು ಅತ್ಯಂತ ಪ್ರಭಾವಶಾಲಿಯಾಗಿ ಹೇಳುವ ಯತ್ನ ಚಿತ್ರದಲ್ಲಿದೆ. ಬದುಕಿನಲ್ಲಿ ನಮ್ಮವರು ಎಂಬವರ ಪ್ರೀತಿ, ಬೆಂಬಲ ದೊಡ್ಡ ಬಲವಾಗಿರುತ್ತದೆ. ಹಾಗೆಯೇ ಈ ಸಿನಿಮಾದಲ್ಲಿ ಮನೋಜ್ ಕುಮಾರ್ ಹಾದಿಯಲ್ಲಿ ಬಲವಾಗಿರುವುದು ಗೆಳತಿ ಶ್ರದ್ಧಾ ಶರ್ಮಾ ಅವರ ಪ್ರೀತಿ. ಶ್ರದ್ಧಾ ಪಾತ್ರವನ್ನು ಚಿತ್ರದಲ್ಲಿ ಮೇಧಾ ಶಂಕರ್ ನಿರ್ವಹಿಸಿದ್ದಾರೆ.
ನಿಜಜೀವನದಲ್ಲಿ ಮನೋಜ್ ಕುಮಾರ್ ಶರ್ಮಾ ಪತ್ನಿ ಶ್ರದ್ಧಾ ಶರ್ಮಾ ಐ ಆರ್ ಎಸ್ ಅಧಿಕಾರಿಯಾಗಿದ್ದಾರೆ. ಚಿತ್ರದಲ್ಲಿ ಮನೋಜ್ ನ ತಂದೆ, ತಾಯಿ ಹಾಗು ಅಜ್ಜಿಯ ಪಾತ್ರಧಾರಿಗಳೂ ಅದ್ಭುತ ನಟನೆಯ ಮೂಲಕ ಮನಸ್ಸಲ್ಲಿ ಮನೆ ಮಾಡುತ್ತಾರೆ. ಪ್ರಾಮಾಣಿಕವಾಗಿ ಪ್ರಯತ್ನಿಸಿ, ಕಠಿಣ ಪರಿಶ್ರಮ ಮಾಡಲು ದೃಢ ಸಂಕಲ್ಪ ಮಾಡಿರುವ ಮನೋಜ್ ನ ನಿಷ್ಠೆಗೆ ತಕ್ಕಂತೆ ದಾರಿಯುದ್ದಕ್ಕೂ ಒಬ್ಬೊಬ್ಬರು ಆಸರೆಯಾಗುವುದೂ ಚೇತೋಹಾರಿಯಾಗಿದೆ.
ಯುಪಿಎಸ್ಸಿ ಪರೀಕ್ಷೆಯನ್ನೇ ಚಿತ್ರದಲ್ಲಿ ಮುಖ್ಯವಾಗಿ ತೋರಿಸಿದ್ದರೂ ಬದುಕಿನ ಯಾವ ಪರೀಕ್ಷೆಯಲ್ಲೂ ಏನೇ ಆದರೂ ಕುಗ್ಗುವುದು ಬೇಡ, ಸೋಲುವುದು ಬೇಡ ಎಂಬ ಗಟ್ಟಿಯಾದ ಸಂದೇಶವನ್ನು ಈ ಚಿತ್ರ ನೀಡುತ್ತದೆ. ಇಂದು ಯುವಜನತೆ ಸಣ್ಣ ಸಣ್ಣ ಕಾರಣಕ್ಕೂ ಖಿನ್ನತೆಗೆ ಒಳಗಾಗುವ, ಆತಂಕಗೊಳ್ಳುವ, ಕಡೆಗೆ ಬದುಕನ್ನೇ ಕೊನೆಗಾಣಿಸಿಕೊಳ್ಳುವ ಸಂದರ್ಭಗಳನ್ನು ನೋಡುತ್ತಿದ್ದೇವೆ.
ಆದರೆ, ಬದುಕನ್ನು ಹೇಗೆ ಗೆಲುವಿನ ಕಡೆಗೆ ತಿರುಗಿಸಿಕೊಳ್ಳಬೇಕು ಎಂದು ಅಂಥವರಿಗೆ ಸ್ಫೂರ್ತಿಯಾಗಬಲ್ಲ ತಾಕತ್ತು ಈ ಚಿತ್ರಕ್ಕಿದೆ. ಚಿತ್ರದಲ್ಲಿನ ದೃಶ್ಯವೊಂದರಲ್ಲಿ, ಈ ಬಾರಿಯೂ ಫೇಲ್ ಆದರೆ ಏನು ಮಾಡುತ್ತೀರಿ ಎಂಬ ಪ್ರಶ್ನೆಯನ್ನು ಸಂದರ್ಶಕರು ಕೇಳುತ್ತಾರೆ. ಅದಕ್ಕೆ ಮನೋಜ್ " ಐಪಿಎಸ್ ಅಧಿಕಾರಿ ಆಗೋದೇ ಅಂತಿಮ ಗುರಿಯಲ್ಲ. ಸಮಾಜವನ್ನು ಸುಧಾರಿಸುವುದು ಅಂತಿಮ ಗುರಿ. ಹಳ್ಳಿಗೆ ಹೋಗಿ ಶಿಕ್ಷಕನಾಗುತ್ತೇನೆ. ಯಾವ ಕಾರಣಕ್ಕೂ ಪರೀಕ್ಷೆಯಲ್ಲಿ ಕಾಪಿ ಮಾಡಬೇಡಿ ಎಂದು ನನ್ನ ಊರಿನ ಮಕ್ಕಳಿಗೆ ಕಲಿಸುತ್ತೇನೆ" ಎಂದು ಉತ್ತರಿಸುತ್ತಾರೆ.
ಬಡತನವನ್ನು, ಸಂಘರ್ಷದ ಬದುಕನ್ನು ಕಂಡಿರುವ ಗ್ರಾಮೀಣ ಭಾಗದವರು ಕಷ್ಟಪಟ್ಟು ಇಂಥದೊಂದು ಹುದ್ದೆಗೆ ಬರುವಲ್ಲಿನ ಹೆಚ್ಚುಗಾರಿಕೆಯೇ ಅವರೊಳಗೆ ಗ್ರಾಮಭಾರತಕ್ಕೆ ಸ್ಪಂದಿಸುವ ಮನಸ್ಸು ಇರುತ್ತದೆ ಎಂಬುದನ್ನೂ ಇದರಲ್ಲಿ ಹೇಳಲಾಗಿದೆ. ಹಾಗಾಗಿ, ಇದು ಶೈಕ್ಷಣಿಕ ಸಂದರ್ಭದಲ್ಲಿ ಬೇರೆ ಬೇರೆ ಕಾರಣಗಳಿಗಾಗಿ ಕೀಳರಿಮೆಗೆ ತುತ್ತಾಗುವ ಗ್ರಾಮೀಣ ವಿದ್ಯಾರ್ಥಿಗಳ ಪಾಲಿಗೂ ಸ್ಫೂರ್ತಿ ತುಂಬುವ ಚಿತ್ರವಾಗಿದೆ. ವಿದ್ಯಾರ್ಥಿಗಳು, ಯುವಜನರು, ಸ್ವಉದ್ಯೋಗ ಮಾಡಿಕೊಂಡಿರುವವರು, ಬದುಕಿನ ಯಾವುದೇ ಹಂತದಲ್ಲಿರುವವರು - ಎಲ್ಲರೂ ಒಮ್ಮೆ ನೋಡಲೇಬೇಕಾದ ಚಿತ್ರ ಟ್ವೆಲ್ತ್ ಫೇಲ್.