ರಾಜ್ಯದಲ್ಲಿ ಪಾಳು ಬಿದ್ದಿರುವ 21 ಲಕ್ಷ ಹೆಕ್ಟೇರ್ ಕೃಷಿ ಭೂಮಿ
ಬೆಂಗಳೂರು: ಗೇಣಿದಾರ ರೈತರು ಕೃಷಿ ಭೂಮಿ ಮೇಲೆ ಹಕ್ಕುಗಳನ್ನು ಪಡೆಯಲಿದ್ದಾರೆ ಎಂಬ ಭಯ ಭೂ ಮಾಲಕರನ್ನು ಕಾಡುತ್ತಿದ್ದು, ಹೀಗಾಗಿ ರಾಜ್ಯದಲ್ಲಿ 21 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಪಾಳು ಬಿದ್ದಿದೆ. ಇಂತಹ ಪಾಳು ಭೂಮಿಯಿಂದ ವರ್ಷಕ್ಕೆ ಸುಮಾರು 8,000 ಕೋಟಿ ರೂ.ನಷ್ಟು ಬೆಳೆ ನಷ್ಟವಾಗಿದೆ ಎಂದು ಕರ್ನಾಟಕ ಆಡಳಿತ ಸುಧಾರಣೆ ಆಯೋಗ-2ರ 7ನೇ ವರದಿ ಅಭಿಪ್ರಾಯಪಟ್ಟಿದೆ.
ರಾಜ್ಯ ಸರಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ನೇತೃತ್ವದ ಕರ್ನಾಟಕ ಆಡಳಿತ ಸುಧಾರಣೆ ಆಯೋಗವು ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಜಾರಿಯಲ್ಲಿರುವ ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961, ಭೂ ಗುತ್ತಿಗೆ ನಿಬಂಧನೆಗಳ ಕುರಿತು ವಿಶ್ಲೇಷಿಸಿದೆ. ಅಲ್ಲದೇ ಕರ್ನಾಟಕ ಭೂ ಕಂದಾಯ ಕಾಯ್ದೆಯ ಕಲಂ 49ಕ್ಕೆ ತಿದ್ದುಪಡಿ ತರಲು ಶಿಫಾರಸು ಮಾಡಿದೆ.
ಅದೇ ರೀತಿ ರಾಜ್ಯದಲ್ಲಿ ಹೊಸದಾಗಿ ಕರ್ನಾಟಕ ಬೆಳೆ ಉತ್ಪಾದನೆ ಮತ್ತು ಭೂ ಪುನ:ಶ್ಚೇತನ ಮಸೂದೆಯ ಕರಡನ್ನು ವರದಿಯಲ್ಲಿ ಪ್ರಸ್ತಾಪಿಸಿದೆ. ಹಾಗೆಯೇ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ತಾಲೂಕುಗಳನ್ನು ಹೊರತುಪಡಿಸಿ ಎಲ್ಲ ತಾಲೂಕುಗಳಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆಯ ಕಲಂ 49ಕ್ಕೆ ತಿದ್ದುಪಡಿ ತಂದು ಜಾರಿ ಮಾಡಬಹುದು ಎಂದೂ ಸಲಹೆ ನೀಡಿದೆ.
‘ಷೇರುದಾರರು ಅಥವಾ ಗೇಣಿದಾರ ರೈತರು ಕೃಷಿ ಭೂಮಿ ಮೇಲೆ ಹಕ್ಕುಗಳನ್ನು ಪಡೆಯುವ ಕಾರಣದಿಂದಾಗಿ ಭೂ ಮಾಲಕರು ಭಯಭೀತರಾಗಿದ್ದು, ಕರ್ನಾಟಕದಲ್ಲಿ ಇಚ್ಛಾಪೂರ್ವಕ ಗುತ್ತಿಗೆದಾರರಿಗೆ ಗುತ್ತಿಗೆ ನೀಡುವ ಬದಲು ದೊಡ್ಡ ಪ್ರಮಾಣದ ಭೂಮಿಯನ್ನು ಪಾಳು ಬಿಟ್ಟಿದ್ದಾರೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಕರ್ನಾಟಕವು ಪ್ರಸ್ತುತ 21 ಲಕ್ಷ ಹೆಕ್ಟೇರ್ ಪಾಳು ಭೂಮಿಯನ್ನು ಹೊಂದಿದೆ. ಇದು ಒಟ್ಟು ಉಳುಮೆ ಮಾಡಬಹುದಾದ ಭೂಮಿಯ ಸುಮಾರು ಶೇ.16ರಷ್ಟಿದೆ. ಶುಷ್ಕತೆ, ಅಂತರ್ಜಲ, ಸವಕಳಿ, ಮಣ್ಣಿನ ಫಲವತ್ತತೆಯ ಕೊರತೆ, ಕಾರ್ಮಿಕ ಸಮಸ್ಯೆಗಳು, ಭೂ ಉತ್ಪಾದಕತೆಯ ಕೊರತೆ ಮತ್ತು ಕೃಷಿಯಿಂದ ಕಡಿಮೆ ನಿವ್ವಳ ಆದಾಯ, ವಲಸೆ, ನಗರೀಕರಣ, ಭೂ ಹಿಡುವಳಿಗಳ ವಿಘಟನೆ ಇತ್ಯಾದಿಗಳು ಇದಕ್ಕೆ ಕಾರಣವಾಗಿವೆ ಎಂದು ಉಲ್ಲೇಖಿಸಿದೆ.
ರಾಜ್ಯದ ಒಟ್ಟು ಪಾಳು ಭೂಮಿಯಲ್ಲಿ ಸುಮಾರು ಶೇ.48ರಷ್ಟು ಎಸ್ಸಿ-ಎಸ್ಟಿ, ಒಬಿಸಿ, ಅಲ್ಪಸಂಖ್ಯಾತ ವರ್ಗಗಳು, ಸಣ್ಣ ಮತ್ತು ಅತೀ ಸಣ್ಣ ರೈತರು, ಭೂ ಮಾಲಕರು ಇದ್ದಾರೆ. ಇದು ವಿಶೇಷವಾಗಿ ಸಮಾಜದ ದುರ್ಬಲ ವರ್ಗಗಳಲ್ಲಿ ಭೂ ಬಳಕೆ ಬದಲಾವಣೆಯನ್ನೂ ಸೂಚಿಸುತ್ತದೆ ಎಂದು ವರದಿಯು ವಿವರಿಸಿದೆ.
ನಿರ್ಬಂಧಿತ ಭೂ ಗುತ್ತಿಗೆ ನಿಬಂಧನೆಯು ಯಾವುದೇ ಅವಧಿಯ ಭದ್ರತೆ ಇಲ್ಲದೇ ಅನೌಪಚಾರಿಕ ಮತ್ತು ಗುಪ್ತ ಹಿಡುವಳಿಗಳ ಸೃಷ್ಟಿಗೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಇದು ಈ ಕಾಯ್ದೆಯ ಅನಪೇಕ್ಷಿತ ಪರಿಣಾಮವಾಗಿದೆ. ಇದು ಕೃಷಿ ಕ್ಷೇತ್ರದಲ್ಲಿ ಹೂಡಿಕೆಗೆ ಅಡ್ಡಿಯಾಗಿದೆ ಮತ್ತು ಇದರಿಂದಾಗಿ ಕೃಷಿ ಉತ್ಪಾದಕತೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಭೂ ಗುತ್ತಿಗೆಯನ್ನು ಕಾನೂನು ಬದ್ಧಗೊಳಿಸುವುದರಿಂದ ಅಂತಹ ಅಸಂಗತತೆಗಳನ್ನು ಸರಿಪಡಿಸಬಹುದು. ಹೆಚ್ಚುತ್ತಿರುವ ಆದಾಯದ ಮಟ್ಟದೊಂದಿಗೆ ಕೃಷಿ ಭೂಮಿಯ ಬೆಲೆಗಳು ಏರುತ್ತಿವೆ. ಮತ್ತು ಅದರಿಂದ ಭೂ ರಹಿತ ಕೃಷಿ ಕಾರ್ಮಿಕರು, ಸಣ್ಣ ಮತ್ತು ಅತೀ ಸಣ್ಣ ರೈತರು ಹೊಸ ಭೂಮಿಯನ್ನು ಖರೀದಿಸಲು ಸಾಧ್ಯವಿಲ್ಲ. ಭಾರತ ಮತ್ತು ವಿಶ್ವದ ಇತರ ಭಾಗಗಳಲ್ಲಿನ ಪುರಾವೆಗಳಿಂದ ಭೂ ಗುತ್ತಿಗೆ ಮಾರುಕಟ್ಟೆಗೆ ಬಡ ಜನರಿಗೆ ಪ್ರವೇಶವನ್ನು ಖಚಿತಪಡಿಸಿಕೊಳ್ಳುವುದು ರೈತರ ಆದಾಯವನ್ನು ಹೆಚ್ಚಿಸಲು ಕೈಗೊಂಡ ಬದಲಾವಣೆ ಎಂದು ಸಾಬೀತಪಡಿಸುತ್ತದೆ,’ಎಂದು ವಿಶ್ಲೇಷಿಸಿದೆ.
ಅನೌಪಚಾರಿಕ ಗೇಣಿದಾರ ರೈತರು ಔಪಚಾರಿಕ ಸಾಲ ಮಾರ್ಗಗಳಿಂದ ಬೆಳೆಸಾಲ, ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ ಇನ್ಪುಟ್ ಸಬ್ಸಿಡಿಗಳು, ಪಿಎಂ ಕಿಸಾನ್ ನಂತಹ ಪ್ರಯೋಜನಗಳು, ರಸಗೊಬ್ಬರ ಸಬ್ಸಿಡಿಗಳು, ಬೆಳೆ ವಿಮೆ, ಎಂಎಸ್ಪಿ ಸಂಗ್ರಹಣೆ ಮತ್ತು ಇತರ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ವರದಿ ಹೇಳಿದೆ.
ಯೋಜನೆಯ ಪ್ರಯೋಜನೆಗಳು ಮತ್ತು ಸಂಗ್ರಹಣೆಗಳನ್ನು ಕಾನೂನುಬದ್ಧ ಭೂ ಮಾಲಕರು ಸ್ವಾಧೀನಪಡಿಸಿಕೊಳ್ಳುತ್ತಾರೆ. ಇದು ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ಗೇಣಿದಾರರಿಗೆ ಅಂತಹ ಪ್ರಯೋಜನಗಳನ್ನು ನಿರಾಕರಿಸುತ್ತದೆ ಎಂದು ವಿವರಿಸಿದೆ. ಈ ಕಾನೂನು ಭೂಮಾಲಕರು ಒಪ್ಪಂದಕ್ಕೆ ಒಳಪಟ್ಟು ಪಾಳು ಭೂಮಿಯನ್ನು ಬಳಸಿಕೊಳ್ಳಲು ಮತ್ತು ಅನೌಪಚಾರಿಕ ಹಿಡುವಳಿ ವ್ಯವಸ್ಥೆಗಳನ್ನು ಔಪಚಾರಿಕಗೊಳಿಸಲು ನೆರವಾಗಲಿದೆ ಎಂದು ಹೇಳಿರುವ ವರದಿಯು ಹೆಚ್ಚಿನ ಸಾಮಾಜಿಕ ಭದ್ರತೆ, ಬಲವಂತದ ಒಕ್ಕಲೆಬ್ಬಿಸುವಿಕೆಯ ವಿರುದ್ಧ ಅಧಿಕಾರವಧಿಯ ಭದ್ರತೆ, ಬಾಡಿಗೆ ನಿಗದಿ ಮತ್ತು ಪಾವತಿಯಲ್ಲಿ ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆ, ಬೆಳೆಸಾಲಗಳ ಲಭ್ಯತೆ, ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ ನೆರವು ಸಿಗಲಿದೆ ಎಂದು ಆಶಿಸಿದೆ.
ಕಾಯ್ದೆಯಲ್ಲಿ ಏನಿದೆ?
ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಪ್ರಕಾರ ಅಸ್ತಿತ್ವದಲ್ಲಿರುವ ಭೂ ಗುತ್ತಿಗೆ ನಿಬಂಧನೆಗಳು ಕೃಷಿ ಭೂಮಿಯನ್ನು ಕೃಷಿ ಉದ್ದೇಶಗಳಿಗಾಗಿ ಗುತ್ತಿಗೆಗೆ ನೀಡುವುದನ್ನು ನಿರ್ಬಂಧಿಸುತ್ತದೆ. ಭೂ ಮಾಲಕನು ರಕ್ಷಣಾ ಸಿಬ್ಬಂದಿ, ನಾವಿಕ ಅಥವಾ ಅಂತಹ ಕೃಷಿ ಭೂಮಿ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದಂತಹ ಜಿಲ್ಲೆಗಳಲ್ಲಿದ್ದರೆ ಅದನ್ನು ಹೊರತುಪಡಿಸಿ ಈ ಕಾಯ್ದೆಯ ಮುಖ್ಯ ಉದ್ದೇಶವೆಂದರೆ ಹಿಡುವಳಿದಾರರಿಗೆ ಒಕ್ಕಲೆಬ್ಬಿಸುವುದರ ವಿರುದ್ಧ ಭದ್ರತೆ ಒದಗಿಸುವುದು ಮತ್ತು ಭೂ ಮಾಲಕರು ತಮ್ಮ ಹಿಡುವಳಿದಾರರು ದೀರ್ಘಕಾಲದಿಂದ ಕೃಷಿ ಮಾಡುತ್ತಿದ್ದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ತಡೆಯತ್ತದೆ ಎಂದು ವರದಿ ವಿವರಿಸಿದೆ.
ಹೀಗಾಗಿ ಕರ್ನಾಟಕದಲ್ಲಿ ಪ್ರಸ್ತುತ ಕಾನೂನು ನಿಬಂಧನೆಗಳ ಪ್ರಕಾರ ಕೃಷಿ ಭೂಮಿಯು ಗೇಣಿದಾರರ ಕೃಷಿಯು ಹೆಚ್ಚಾಗಿ ಕಾನೂನುಬಾಹಿರವಾಗಿದೆ. ಈ ಕಾಯ್ದೆಯನ್ನು ಹಿಡುವಳಿಯನ್ನು ರದ್ದುಗೊಳಿಸಲು, ಹೆಚ್ಚಿನ ಗುತ್ತಿಗೆಗಳನ್ನು ನಿಷೇಧಿಸಲು ಆಗ ಅಸ್ತಿತ್ವದಲ್ಲಿದ್ದ ಗುತ್ತಿಗೆಗಳಿಗೆ ಸಂಬಂಧಿಸಿದಂತೆ ನ್ಯಾಯಯುತ ಬಾಡಿಗೆ ನಿಗದಿಪಡಿಸಲು ಮತ್ತು ಭೂ ಹಿಡುವಳಿಗಳ ಮೇಲೆ ಮಿತಿ ವಿಧಿಸಲು ವಿನ್ಯಾಸಗೊಳಿಸಲಾಗಿದೆ. ಇದರಿಂದ ಹೆಚ್ಚುವರಿ ಭೂಮಿಯನ್ನು ಬಡ ಕೃಷಿಕರು ಮತ್ತು ಅಗತ್ಯವಿರುವ ಭೂ ರಹಿತ ಕೃಷಿ ಕಾರ್ಮಿಕರಿಗೆ ಮರು ಹಂಚಿಕೆ ಮಾಡುವುದಾಗಿತ್ತು ಎಂದು ವರದಿಯು ಅಭಿಪ್ರಾಯಿಸಿದೆ.