ಚೀನಾದಲ್ಲಿ ತಗ್ಗುತ್ತಿರುವ ವಾಯುಮಾಲಿನ್ಯ ಮಟ್ಟ; ಅಲ್ಲಿನ ಕ್ರಮಗಳು ಭಾರತಕ್ಕೆ ಮಾದರಿಯಾಗಬಲ್ಲವೆ?

ಎರಡೂ ದೇಶಗಳನ್ನು ನೇರವಾಗಿ ಹೋಲಿಸಲು ಸಾಧ್ಯವಿಲ್ಲ. ಎರಡೂ ದೇಶಗಳ ಅಭಿವೃದ್ಧಿ ಹಂತಗಳು ವಿಭಿನ್ನ. ಆದರೆ ಚೀನಾದ ಕೆಲವು ಪ್ರಯೋಜನಕಾರಿ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಸೂಕ್ತವಾಗಿದೆ ಎಂಬುದು ಪರಿಣತರ ಅಭಿಪ್ರಾಯ.

Update: 2023-08-24 07:51 GMT

ಅಜಯ್ ನಾಗ್ಪುರೆ

1980ರಿಂದಲೂ ಚೀನಾದ ವಾಯು ಮಾಲಿನ್ಯ ತೀವ್ರವಾಗಿದೆ, ತ್ವರಿತ ಆರ್ಥಿಕ ಬೆಳವಣಿಗೆ ಮತ್ತು ಕೈಗಾರಿಕೀಕರಣ ಇದಕ್ಕೆ ಮುಖ್ಯ ಕಾರಣ. ಆದರೆ ಸುಮಾರು 1990ರಿಂದ ಭಾರತದ ವಾಯು ಮಾಲಿನ್ಯದ ಮಟ್ಟ ಚೀನಾವನ್ನೂ ಮೀರಿಸಿದೆ. ದಟ್ಟ ಹೊಗೆ ಮತ್ತು ಮಬ್ಬು ಪ್ರತೀ ಚಳಿಗಾಲದಲ್ಲಿ ಉತ್ತರ ಭಾರತದಾದ್ಯಂತ ಜನಜೀವನವನ್ನು ಕಂಗೆಡಿಸುತ್ತದೆ.

2019ರಲ್ಲಿ ಚೀನಾ ವಾಯು ಮಾಲಿನ್ಯದಿಂದಾಗಿ ಅತಿ ಹೆಚ್ಚು ತಡೆಗಟ್ಟಬಹುದಾದ ಸಾವುಗಳನ್ನು ಕಂಡಿತು. 1.42 ಮಿಲಿಯನ್ ಜನರು ವಾಯು ಮಾಲಿನ್ಯಕ್ಕೆ ಬಲಿಯಾದರು. ಅದೇ ವರ್ಷ ಭಾರತದಲ್ಲಿಯೂ ಸುಮಾರು ಒಂದು ಮಿಲಿಯನ್ ಸಾವುಗಳು ವಾಯು ಮಾಲಿನ್ಯದಿಂದಾಗಿ ಸಂಭವಿಸಿದವು. ಈ ಲೆಕ್ಕದಲ್ಲಿಯೂ ಚೀನಾಕ್ಕೆ ಭಾರತ ಹತ್ತಿರದಲ್ಲಿದೆ.

ಎರಡೂ ದೇಶಗಳು ವಾಯು ಮಾಲಿನ್ಯ ಕಾನೂನುಗಳನ್ನು ಜಾರಿಗೆ ತಂದಿವೆ. ಆದರೆ ಚೀನಾ ಭಾರತಕ್ಕಿಂತ ಉತ್ತಮ ವಾಯು ಗುಣಮಟ್ಟದ ಫಲಿತಾಂಶಗಳನ್ನು ಸಾಧಿಸಿದೆ. ವಾಯು ಮಾಲಿನ್ಯದ ಮಟ್ಟವನ್ನು ಕಡಿಮೆ ಮಾಡುವಲ್ಲಿ ಚೀನಾ ಮಾಡಿರುವ ಪ್ರಯೋಗಗಳನ್ನು ಭಾರತವೂ ಅನುಸರಿಸಬಹುದೆ ಎಂಬುದು ಹಲವರ ಪ್ರಶ್ನೆ. ಇದನ್ನು ಹೇಗೆ ಸಾಧಿಸಬಹುದು?

ಸಂಶೋಧನೆ ಹೇಳುತ್ತಿರುವುದೇನು?

ಪರಿಸರ ವಿಜ್ಞಾನ ಮತ್ತು ನೀತಿಯಲ್ಲಿ ಎಪ್ರಿಲ್‌ನಲ್ಲಿ ಪ್ರಕಟವಾದ ‘‘ಚೀನಾ ಮತ್ತು ಭಾರತದಲ್ಲಿ ವಾಯು ಮಾಲಿನ್ಯ ನಿರ್ವಹಣೆ: ಹೋಲಿಕೆ ಮತ್ತು ಪರಿಣಾಮಗಳು’’ ಎಂಬ ಶೀರ್ಷಿಕೆಯ ಸಂಶೋಧನಾ ಪ್ರಬಂಧದಲ್ಲಿ ಕೆಲವು ಉತ್ತರಗಳು ಸಿಗುತ್ತವೆ.

ವಾಯು ಮಾಲಿನ್ಯವನ್ನು ನಿಯಂತ್ರಿಸುವ ಚೀನಾದ ತಂತ್ರ ಶ್ರೇಣೀಕೃತ ನೀತಿ ಮತ್ತು ಅನುಷ್ಠಾನವನ್ನು ಹೆಚ್ಚು ಅನುಸರಿಸಿದೆ. ಪಂಚವಾರ್ಷಿಕ ಯೋಜನೆಗಳು ಮತ್ತು ಇತರ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸುವ ಮೂಲಕ, ಚೀನಾ ಸರಕಾರ ಮಾಲಿನ್ಯವನ್ನು ತಗ್ಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಪ್ರಾಂತಗಳು ಈ ಯೋಜನೆಗಳಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕಿರುತ್ತದೆ. ಉನ್ನತ ಮಟ್ಟದ ಸರಕಾರಗಳು ಪ್ರಗತಿಯನ್ನು ಮೌಲ್ಯಮಾಪನ ಮಾಡುತ್ತವೆ ಮತ್ತು ಕೆಳ ಹಂತದ ಅಧಿಕಾರಿಗಳಿಗೆ ಪ್ರತಿಫಲ ಅಥವಾ ದಂಡ ವಿಧಿಸುವ ಅಧಿಕಾರ ಅವಕ್ಕಿರುತ್ತದೆ.

ಅದರ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿ, ಚೀನೀ ಸರಕಾರದ ಸ್ಟೇಟ್ ಕೌನ್ಸಿಲ್ 2013ರಲ್ಲಿ ವಾಯು ಮಾಲಿನ್ಯ ತಡೆ ಕ್ರಿಯಾ ಯೋಜನೆಯನ್ನು ಆರಂಭಿಸಿತು. 2017ರ ವೇಳೆಗೆ ನಿರ್ದಿಷ್ಟ ಪಿಎಂ2.5 ಸಾಂದ್ರತೆಯ ಗುರಿಗಳನ್ನು ಸಾಧಿಸುವ ಗುರಿ ಹೊಂದಲಾಯಿತು. ಬಳಕೆಯಲ್ಲಿಲ್ಲದ ಸೌಲಭ್ಯಗಳ ವಿರುದ್ಧ ಕಠಿಣ ಕ್ರಮಗಳನ್ನು ವಿಧಿಸುವುದನ್ನು ಮತ್ತು ಮಾಲಿನ್ಯ ನಿಯಂತ್ರಣ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಯಿತು.

ಚೀನಾದ ವಾಯು ಗುಣಮಟ್ಟ

ತಜ್ಞರ ಸಂದರ್ಶನಗಳು, ಸಾಂದರ್ಭಿಕ ತೀರ್ಮಾನದ ಸಂಶೋಧನೆ, ಉಪಗ್ರಹ ಮತ್ತು ನೆಲದ ಮೇಲಿನ ಮೇಲ್ವಿಚಾರಣೆ ಮತ್ತು ಮಾಲಿನ್ಯ ಹೊರಸೂಸುವಿಕೆಯ ಆಧಾರದ ಮೇಲೆ ನಡೆದ ಅಧ್ಯಯನದ ಪ್ರಕಾರ ಚೀನಾದ ಕ್ರಮಗಳು ವಾಯು ಗುಣಮಟ್ಟದಲ್ಲಿ ಸುಧಾರಣೆಗೆ ಕಾರಣವಾಗಿವೆ.

2013 ಮತ್ತು 2018ರ ನಡುವೆ ಪ್ರಾಂತೀಯ ರಾಜಧಾನಿ ನಗರಗಳಲ್ಲಿ ವಾರ್ಷಿಕ ಸರಾಸರಿ ಪಿಎಂ2.5 ಸಾಂದ್ರತೆ 74 g/m3 ನಿಂದ 39 g/m3 ಗೆ ಕಡಿಮೆಯಾಗಿದೆ, ಆದರೆ ಬೀಜಿಂಗ್‌ನಲ್ಲಿ ಪಿಎಂ2.5 ಸಾಂದ್ರತೆ 90 g/m3 ನಿಂದ ೫೧ g/m3 ಗೆ ಕಡಿಮೆಯಾಗಿದೆ.

ಸ್ಥಿರವಾದ ಆರ್ಥಿಕ ಬೆಳವಣಿಗೆ ಮತ್ತು ಪೂರ್ವಭಾವಿ ಮಾಲಿನ್ಯ ಕಡಿತ ಕಾರ್ಯಕ್ರಮಗಳ ಸಂಯೋಜನೆಯ ಮೂಲಕ ಚೀನಾ ಈಗಾಗಲೇ ಕೆಟ್ಟ ವಾಯುಮಾಲಿನ್ಯ ಸ್ಥಿತಿಯಿಂದ ಚೇತರಿಸಿಕೊಂಡಿದೆ. ದೇಶದ ವಾಯು ಗುಣಮಟ್ಟ ಸುಧಾರಿಸುವುದನ್ನು ಮುಂದುವರಿಸಲು ಯೋಜನೆ ರೂಪಿಸಲಾಗಿದೆ.

ಚೀನಾದ ಮಾಲಿನ್ಯದಲ್ಲಿ 2017ರಲ್ಲಿ ಸಲ್ಫರ್ ಡೈಆಕ್ಸೈಡ್ ಮತ್ತು 2012ರಲ್ಲಿ ನೈಟ್ರೋಜನ್ ಆಕ್ಸೈಡ್ ಅತಿರೇಕಕ್ಕೆ ಮುಟ್ಟಿದ್ದವು. ನಂತರ ಗಮನಾರ್ಹ ಇಳಿಕೆ ಕಂಡುಬಂದಿದೆ. 2013ರಿಂದ ಕಟ್ಟುನಿಟ್ಟಾದ ವಾಯು ಮಾಲಿನ್ಯ ನಿಯಂತ್ರಣ ಕಾನೂನುಗಳನ್ನು ಜಾರಿಗೊಳಿಸಿದಾಗಿನಿಂದ ಚೀನಾದಲ್ಲಿ ವಾಯು ಗುಣಮಟ್ಟ ಹೆಚ್ಚು ಸುಧಾರಿಸಿದೆ. ಬೀಜಿಂಗ್‌ನಂತಹ ಮಹತ್ವದ ಪ್ರದೇಶಗಳಲ್ಲಿ 2019ರ ವೇಳೆಗೆ ಪಿಎಂ2.5 ಮಟ್ಟ ಸುಮಾರು ಶೇ.೫೦ರಷ್ಟು ಕಡಿಮೆಯಾಗಿದೆ.

ಹೋಲಿಕೆ ಕಷ್ಟ

ಭಾರತ ಮತ್ತು ಚೀನಾವನ್ನು ನೇರವಾಗಿ ಹೋಲಿಸಲಾಗದು. ಅಭಿವೃದ್ಧಿಯ ವಿವಿಧ ಹಂತಗಳಲ್ಲಿರುವುದರಿಂದ, ಭಾರತವು ಚೀನಾದ ವಿಧಾನದಿಂದ ಕೆಲವು ಕ್ರಮಗಳನ್ನು ಅಳವಡಿಸಿಕೊಳ್ಳುವುದನ್ನು ಮಾತ್ರ ಪರಿಗಣಿಸಬಹುದು.

ಭಾರತ ಮತ್ತು ಚೀನಾ ನಡುವಿನ ವಾಯು ಮಾಲಿನ್ಯದ ಮೂಲಗಳಲ್ಲಿನ ವ್ಯತ್ಯಾಸವೇ ಇಂಥದೊಂದು ಹೋಲಿಕೆ ಅಸಾಧ್ಯವಾಗಲು ಕಾರಣ. ಹಾಗಾಗಿಯೇ ಚೀನಾದಲ್ಲಿನ ಮಾಲಿನ್ಯ ತಗ್ಗಿಸುವಿಕೆ ಕ್ರಮಗಳನ್ನು ಇಲ್ಲಿಗೆ ನೇರವಾಗಿ ಹೋಲಿಸುವುದು ಸವಾಲಾಗಿದೆ. ಚೀನಾದಲ್ಲಿ ಕೈಗಾರಿಕೆಗಳು ಮಾಲಿನ್ಯಕ್ಕೆ ಗಮನಾರ್ಹವಾಗಿ ಕಾರಣವಾಗುತ್ತವೆ. ಆದರೆ ಭಾರತದಲ್ಲಿ ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿರುವುದು ಮನೆ, ಕೃಷಿ ತ್ಯಾಜ್ಯ ಮತ್ತು ಧೂಳು. ಇವುಗಳನ್ನು ತಗ್ಗಿಸಲು ಗಣನೀಯ ಹೂಡಿಕೆಯ ಅಗತ್ಯವಿರುತ್ತದೆ. ಚದುರಿದ ಮತ್ತು ಅನಿರೀಕ್ಷಿತ ಮೂಲಗಳಿಂದ ಉಂಟಾಗುವ ಮಾಲಿನ್ಯವನ್ನು ತಡೆಯಲು ಇಲ್ಲಿ ಹೊಸ ತಂತ್ರಗಳನ್ನು ಹುಡುಕಿಕೊಳ್ಳಬೇಕಿದೆ.

ವಿಶೇಷವಾಗಿ ಗಂಗಾ ಬಯಲು ಪ್ರದೇಶದಂತಹ ಪ್ರದೇಶಗಳಲ್ಲಿ ಭಾರತ ನಿರಂತರವಾಗಿ ಹೆಚ್ಚಿನ ವಾಯು ಮಾಲಿನ್ಯ ಮಟ್ಟವನ್ನು ಎದುರಿಸುತ್ತಿದೆ. ಪಳೆಯುಳಿಕೆ ಇಂಧನ ಬಳಕೆ, ಬೆಳೆ ಸುಡುವಿಕೆ ಮತ್ತು ಕೈಗಾರಿಕಾ ಮತ್ತು ಸಾರಿಗೆ ವಿಸ್ತರಣೆಯಂತಹ ಅಂಶಗಳಿಂದಾಗಿ ಇದು ಇನ್ನಷ್ಟಾಗುತ್ತದೆ.

ದೇಶದ ವಾಯು ಮಾಲಿನ್ಯ ನಿಯಂತ್ರಣದ ನಿರ್ವಹಣೆ ವಿಕೇಂದ್ರೀಕೃತ ವಿಧಾನವನ್ನು ಅನುಸರಿಸುತ್ತದೆ ಮತ್ತು ಅದರ ಕಡ್ಡಾಯ ಅನುಸರಣೆ ಆಗುತ್ತಿಲ್ಲ. ಅದಕ್ಕೆ ಕಠಿಣ ಕಾನೂನುಗಳಿಲ್ಲದಿರುವುದೇ ಕಾರಣ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News