ಮನುಷ್ಯತ್ವ ಇರುವವರೆಲ್ಲರೂ ಸ್ಪಂದಿಸಬೇಕಾಗಿದೆ

ಸ್ವಾತಂತ್ರ್ಯ ದಿನಾಚರಣೆಯಿಂದ ಹಿಡಿದು ರಾಷ್ಟ್ರೀಯ ಹಬ್ಬಗಳೆಂದು ಗುರುತಿಸಿರುವ ಎಲ್ಲ ಆಚರಣೆಗಳಲ್ಲಿ ಹೆಣ್ಣನ್ನು ಭಾರತಾಂಬೆಯಾಗಿ ಅಲಂಕರಿಸಿ ಮೆರವಣಿಗೆ ಮಾಡಲಾಗುತ್ತಿದೆ. ಆದರೆ, ದೇಶಕ್ಕೆ ಸ್ವಾತಂತ್ರ್ಯ ದೊರೆತು ಎಪ್ಪತ್ತೈದು ವರ್ಷಗಳು ಕಳೆದರೂ ಹೆಣ್ಣು ಬೀದಿಯಲ್ಲಿ ಬೆತ್ತಲಾಗಿಸಲ್ಪಡುತ್ತಿದ್ದಾಳೆ. ಹಾಗಾದರೆ ಸ್ವಾತಂತ್ರ್ಯ ಸಿಕ್ಕಿದ್ದು ಯಾರಿಗೆ?

Update: 2023-08-06 05:00 GMT

ಮಣಿಪುರದಲ್ಲಿ ಕುಕಿ ಮತ್ತು ಮೈತೈ ಬುಡಕಟ್ಟು ಜನರ ನಡುವೆ ಈಗ ನಿತ್ಯವೂ ಸೇಡಿಗೆ ಪ್ರತಿ ಸೇಡು ಎಂಬಂತೆ ಕೃತ್ಯಗಳು ಘಟಿಸುತ್ತಲೇ ಇವೆ. ದ್ವೇಷ ಭಾವನೆ ಕಾಡ್ಗಿಚ್ಚಿನಂತೆ ಶರವೇಗವಾಗಿ ಹಬ್ಬುತ್ತಿದೆ. ಈ ದ್ವೇಷಕ್ಕೆ ಇತ್ತೀಚೆಗೆ ಇಬ್ಬರು ಮಹಿಳೆಯರ ನಗ್ನ ಮೆರವಣಿಗೆಯೂ (ಇದರಲ್ಲಿ ಒಬ್ಬಳು ಸೈನಿಕನ ಪತ್ನಿ!) ನಡೆದಿದೆ. ಇಂಫಾಲ ಪೂರ್ವ ಜಿಲ್ಲೆಯಲ್ಲಿ ಮೂವರ ಸಜೀವ ದಹನವಾಗಿದ್ದು, ಕುಕಿ ವ್ಯಕ್ತಿಯನ್ನು ವಿವಾಹವಾಗಿದ್ದ ಮೈತೈ ಮಹಿಳೆಯು ಆಕೆಯ ಮಗ ಮತ್ತು ಸಂಬಂಧಿಕರ ಜೊತೆಗೆ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಮೈತೈ ಗುಂಪು ಬೆಂಕಿ ಹಾಕಿ ಸುಟ್ಟಿದೆ.

ಕಾರ್ಚಿಂಗ್ ಜಿಲ್ಲೆಯ ಸೆರೋ ಗ್ರಾಮದಲ್ಲಿ ಕುಕಿ ಗುಂಪಿಗೆ ಸೇರಿದ್ದ ಗುಂಪೊಂದು ಮೈತೈ ಸಮುದಾಯದಕ್ಕೆ ಸೇರಿದ 80ವರ್ಷದ ವೃದ್ಧೆಯನ್ನು ಮನೆಯಲ್ಲಿ ಕೂಡಿಹಾಕಿ ಬೆಂಕಿ ಹಚ್ಚಿದೆ(ಈ ವೃದ್ಧೆಯ ಪತಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು). ಚುರಾಚಾಂದ್ಪುರ ಜಿಲ್ಲೆಯಲ್ಲಿ ಕುಕಿ ಯುವಕನ ಶಿರಚ್ಛೇದ ಮಾಡಿದ್ದು, ಇಂಫಾಲದಲ್ಲಿ ಕುಕಿ ಗುಂಪಿಗೆ ಸೇರಿದ ಇಬ್ಬರನ್ನು ಮೈತೈ ಗುಂಪಿನವರು ಗುಂಡಿಕ್ಕಿ ಕೊಂದಿದ್ದು, ಮೈತೈ ಪ್ರಭಾವವಿರುವ ಇಂಫಾಲ ಪಶ್ಚಿಮ ಜಿಲ್ಲೆಯಲ್ಲಿ ನಾಗಾ ಸಮುದಾಯದ ಮಧ್ಯವಯಸ್ಸಿನ ಮಹಿಳೆಯನ್ನು ಕೊಲೆ ಮಾಡಿದ್ದು, ಜೊತೆಗೆ ಮೊನ್ನೆ 39 ಕುಕಿಗಳ ದಾರುಣ ಸಾವಾಗಿದೆ. ಹೀಗೆ ಎರಡು ಗುಂಪುಗಳ ನಡುವೆ ಪರಸ್ಪರ ದ್ವೇಷದ ಜ್ವಾಲೆ ಪ್ರತಿದಿನ ಉರಿಯುತ್ತಲೇ ಇದೆ. ಆದರೆ ಪ್ರಭುತ್ವದ ದೊರೆಗಳು ಮಾತ್ರ ನೋಡಿಯೂ ನೋಡದಂತಿದ್ದಾರೆ.

ಆದರೆ, ಪ್ರತಿಭಟನೆಯ ನೆಪದಲ್ಲಿ ಹೆಣ್ಣನ್ನು ಅವಮಾನಿಸುವ, ಬೆತ್ತಲುಗೊಳಿಸುವ ಬಗೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯೇ ತಲೆಬಾಗುವ ಕೃತ್ಯ. ಈ ಕೃತ್ಯವನ್ನು ಬೆಂಬಲಿಸುವುದು, ಪ್ರಶ್ನಿಸದೇ ವೌನವಹಿಸುವುದು ಇನ್ನೂ ಘೋರವಾದ ಸಂಗತಿ. ಈ ದೇಶದ ಪ್ರಭುತ್ವ ಈ ಘರ್ಷಣೆಯನ್ನು ನಿಯಂತ್ರಿಸದೆ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿರುವುದು ಎಷ್ಟು ಸರಿ? ಈ ದೇಶದಲ್ಲಿ ಯಾವುದೇ ಅಹಿತಕರವಾದ ಘಟನೆಗಳು ಸಂಭವಿಸಿದಾಗ ಮೊದಲು ದೌರ್ಜನ್ಯಕ್ಕೆ, ಅವಮಾನಕ್ಕೆ, ಅಪಮಾನಕ್ಕೆ, ಶೋಷಣೆಗೆ ಗುರಿಯಾಗುವವರು ಮಹಿಳೆ. ನಮ್ಮಲ್ಲಿ ಮಹಿಳೆಯರ ಜೀವನ ಪದ್ಧತಿ ಹೇಗಿದೆ ಎಂದರೆ; ಸಮಾಜ, ಕುಟುಂಬ ಹಾಗೂ ಯಾವುದೇ ವಲಯದಲ್ಲಿಯೂ ಮಹಿಳೆ ಹೇಗಿರಬೇಕೆಂದು ಅಡಿ-ಅಡಿಗೂ ಸಂಪ್ರದಾಯದ ಹೆಸರಿನಲ್ಲಿ ಕಟ್ಟುಪಾಡುಗಳನ್ನು ವಿಧಿಸಲಾಗುತ್ತದೆ. ಹೆಣ್ಣು ಕುಲಕ್ಕೆ ಮಾತ್ರ ಶಿಕ್ಷೆ ಯಾಕೆಂದರೆ ಇಡೀ ಪರಂಪರೆಯೊಳಗೆ ಹೆಣ್ಣು ಎಲ್ಲಿಯೂ ಮಾತನಾಡದ ಹಾಗೆ ನಿಯಂತ್ರಿಸಿದ್ದೇ ಇದಕ್ಕೆ ಕಾರಣ.

ಹೆಣ್ಣು ತನ್ನ ಬದುಕಿಗಾಗಿ ಸಮಾಜದ ವಿರುದ್ಧ ಸೆಟೆದುನಿಂತು ಧ್ವನಿ ಎತ್ತಿದರೆ ಅದು ಬಹುದೊಡ್ಡ ತಪ್ಪಾಗಿ ಕಾಣುತ್ತಿದೆ. ನಮ್ಮ ಶಾಲಾ-ಕಾಲೇಜುಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯಿಂದ ಹಿಡಿದು ರಾಷ್ಟ್ರೀಯ ಹಬ್ಬಗಳೆಂದು ಗುರುತಿಸಿರುವ ಎಲ್ಲ ಆಚರಣೆಗಳಲ್ಲಿ ಹೆಣ್ಣನ್ನು ಭಾರತಾಂಬೆಯಾಗಿ ಅಲಂಕರಿಸಿ ಮೆರವಣಿಗೆ ಮಾಡಲಾಗುತ್ತಿದೆ. ಆದರೆ, ದೇಶಕ್ಕೆ ಸ್ವಾತಂತ್ರ್ಯ ದೊರೆತು ಎಪ್ಪತ್ತೈದು ವರ್ಷಗಳು ಕಳೆದರೂ ಹೆಣ್ಣು ಬೀದಿಯಲ್ಲಿ ಬೆತ್ತಲಾಗಿಸಲ್ಪಡುತ್ತಿದ್ದಾಳೆ. ಹಾಗಾದರೆ ಸ್ವಾತಂತ್ರ್ಯ ಸಿಕ್ಕಿದ್ದು ಯಾರಿಗೆ? ಮಣಿಪುರದ ಮಹಿಳೆಯರ ಬೆತ್ತಲೆ ಮೆರವಣಿಗೆಯ ಘಟನೆಯಿಂದಾಗಿ ದೇಶದ ಪುರುಷರು ಜಾಗತಿಕ ಮಟ್ಟದಲ್ಲಿ ಬೆತ್ತಲಾಗುತ್ತಲೇ ಇದ್ದಾರೆ ಅನ್ನಿಸುವುದಿಲ್ಲವೇ?

ಕೆಲವು ಅನಾಗರಿಕರು ‘‘ಹೇ, ಇದೇನು ಮೊದಲಲ್ಲ ಬಿಡಿ, ರಾಜಸ್ಥಾನದಲ್ಲಿ, ಪಶ್ವಿಮ ಬಂಗಾಳದಲ್ಲಿ ಈ ಹಿಂದೆ ಈ ತರಹದ ಘಟನೆಗಳು ನಡೆದಿವೆ’’ ಎನ್ನುತ್ತಾರೆ. ಆದರೆ, ಮನುಷ್ಯತ್ವ ಇರುವವರಿಗೆ ಅನ್ನಿಸಬೇಕಾಗಿದ್ದು; ಯಾವುದೇ ಜಾಗದಲ್ಲಿಯೂ ಮನುಷ್ಯತ್ವದ ವಿರೋಧಿ ಘಟನೆಗಳು ನಡೆದರೆ ಅದನ್ನು ಖಂಡಿಸಿ, ಮುಂದೆ ಇಂತಹ ಹೇಯಕೃತ್ಯಗಳು ಮತ್ತೆ ಮರುಕಳಿಸದಂತೆ ಎಚ್ಚರವಹಿಸಬೇಕು ಎಂಬ ಅರಿವು. ಆದರೆ ಅದಾಗುತ್ತಿಲ್ಲವಲ್ಲ ಎಂಬುದೇ ದೇಶದ ಆತಂಕವಾಗಿದೆ.

ವಾಸ್ತವವಾಗಿ ಮಣಿಪುರದ ಕುಕಿ ಮಹಿಳೆಯರ ಬೆತ್ತಲೆ ಮೆರವಣಿಗೆ ನಡೆದದ್ದು ಮೇ 4ರಂದು. ಈ ಘಟನೆ ಕುರಿತಾಗಿ ಮೇ 18ರಂದು ಆ ಕುಟುಂಬದವರೇ ಪೊಲೀಸ್ ಇಲಾಖೆಗೆ ದೂರು ಕೊಟ್ಟರು. ಆದರೂ ಅದು ಕಾರ್ಯರೂಪಕ್ಕೆ ಬರಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ರೂಪದಲ್ಲಿ ಹರಿದಾಡಿ ಜಗತ್ತಿನ ಗಮನಕ್ಕೆ ಬಂತು. ರಾಷ್ಟ್ರೀಯ ಮಹಿಳಾ ಆಯೋಗವು ಅಲ್ಲಿನ ಸರಕಾರಕ್ಕೆ ಪತ್ರಗಳ ಮೂಲಕ ಒತ್ತಾಯಿಸಿದರು. ಆದರೂ ಸರಕಾರದ ಕಡೆಯಿಂದ ಪ್ರತಿಕ್ರಿಯೆ ಇರಲಿಲ್ಲ. ಅಲ್ಲಿನ ಪೊಲೀಸ್ ಇಲಾಖೆಯ ನಿರ್ಲಕ್ಷ್ಯ, ಮೈತೈ ಪರವಾದ ಪ್ರಭುತ್ವವು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ತಪ್ಪಿತಸ್ಥರ ಬಂಧನವಾಗಬೇಕಾದರೆ, ಶಿಕ್ಷೆಗೆ ಒಳಪಡಬೇಕಾದರೆ, ಈ ದೇಶದಲ್ಲಿ ಎಷ್ಟೆಲ್ಲ ತೊಡಕುಗಳಿವೆ.!

 

ಈ ಘಟನೆ ಕುರಿತಾಗಿ ಪ್ರಭುತ್ವವು ನಡೆದುಕೊಳ್ಳುತ್ತಿರುವ ಬಗೆಗಳು ಇನ್ನಷ್ಟು ಆತಂಕ ಸೃಷ್ಟಿಸುತ್ತಿದೆ. ಮಣಿಪುರದ ಸಂತ್ರಸ್ತೆಯರನ್ನು ಆ ರಾಜ್ಯದ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರು ಕಾಟಾಚಾರ ಕ್ಕಾದರೂ ಭೇಟಿ ಮಾಡಿಲ್ಲ. ಈ ಹಿಂಸಾಚಾರ ಆರಂಭವಾಗಿ ಎರಡು ತಿಂಗಳಾದರೂ ಶಾಂತಿಯ ನೆಲೆಕಾಣುವ ಚಹರೆಗಳು ಕಾಣಿಸುತ್ತಿಲ್ಲ. ಪ್ರಭುತ್ವ ಒಂದೆಡೆ ಅರಾಜಕತೆಯ ಸೃಷ್ಟಿಗೆ ಕಾರಣವಾಗುತ್ತಿದ್ದರೆ, ಅಲ್ಲಿನ ಮಹಿಳಾ ಆಯೋಗವೂ ವೌನವಹಿಸಿದೆ, ಜೊತೆಗೆ ರಾಷ್ಟ್ರೀಯ ಮಹಿಳಾ ಆಯೋಗವೂ ನೆರವಿಗೆ ಧಾವಿಸಿಲ್ಲ. ಈ ದೇಶದ ಸಾಮಾಜಿಕ ವ್ಯವಸ್ಥೆಯನ್ನು ಸಾಕ್ಷ್ಯವಾಗಿಸಿಕೊಂಡು ಪ್ರಶ್ನಿಸುವುದಾದರೆ ಮಣಿಪುರದಲ್ಲಿ ಬೆತ್ತಲೆಗೆ, ಅತ್ಯಾಚಾರಕ್ಕೆ ತುತ್ತಾದವರು ತಳಸಮುದಾಯಕ್ಕೆ ಸೇರಿದವರು.

ಒಮ್ಮೆ ಅಂತರಂಗದಿಂದ ಆಲೋಚಿಸಿ ಬೆತ್ತಲೆಯಾಗಿ ನಡೆದ ಮಹಿಳೆಯರ ಜಾಗದಲ್ಲಿ, ಭಾರತೀಯರಾದ ನಾವು ನಮ್ಮ ನಮ್ಮ ಮನೆಯ ಮಕ್ಕಳನ್ನು ಇಟ್ಟು ನೋಡಬೇಕಾಗಿದೆ. ಆಗಲಾದರೂ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಇಂತಹ ಹೀನ ಕೃತ್ಯಗಳನ್ನು ಖಂಡಿಸಿ, ವಿರೋಧಿಸಿ, ಪ್ರತಿಭಟಿಸಿ ಹೆಣ್ಣುಕುಲವನ್ನು ರಕ್ಷಿಸುವ ಮನುಷ್ಯತ್ವವಾದರೂ ಹುಟ್ಟಬಹುದೇನೋ. ಸಂಸತ್ತಿನಲ್ಲಿ ಮಣಿಪುರದ ವಿಷಯದ ಬಗ್ಗೆ ವಿಸ್ತೃತ ಚರ್ಚೆ ಮಾಡಬೇಕೆಂದು ವಿರೋಧ ಪಕ್ಷಗಳು ಹಕ್ಕೊತ್ತಾಯ ಮಾಡುತ್ತಿವೆ. ಆದರೆ, ಇದನ್ನು ಎನ್ಡಿಎ ಸರಕಾರ ನಿರಾಕರಿಸುತ್ತಾ ಬರುತ್ತಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ. ಮಣಿಪುರದ ವಿಷಯ ಕುರಿತಾಗಿ ದೇಶದಾದ್ಯಂತ ತೀವ್ರವಾದ ಪ್ರತಿಭಟನೆಗಳು, ಹೋರಾಟಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ ನಮ್ಮ ಪ್ರಧಾನ ಮಂತ್ರಿ ದೇಶದೊಳಗೆ ಏನೂ ನಡೆಯುತ್ತಿಲ್ಲ ಎಂಬಂತೆ ವೌನವಾಗಿದ್ದಾರೆ.

ಗೃಹ ಸಚಿವ ಅಮಿತ್ ಶಾ, ಅಲ್ಲಿನ ಮುಖ್ಯಮಂತ್ರಿ ಬಿರೇನ್ ಸಿಂಗ್ ಕರ್ತವ್ಯಹೀನರಾಗಿದ್ದಾರೆ. ಆದರೆ, ವಿದೇಶ ಪ್ರವಾಸ ಕೈಗೊಂಡ ಸಂದರ್ಭಗಳಲ್ಲಿ ನಮ್ಮ ಪ್ರಧಾನಿಯವರು ಭಾರತದಲ್ಲಿ ಎಲ್ಲವೂ ಚೆನ್ನಾಗಿದೆ, ದೇಶದ ಜನರ ನರನಾಡಿಗಳಲ್ಲಿ ಪ್ರಜಾತಂತ್ರ ಪ್ರವಹಿಸುತ್ತಿದೆ ಎನ್ನುತ್ತಿದ್ದಾರೆ. ಇದನ್ನು ಹೇಗೆ ನಂಬಲಿ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News