ಗುಜರಾತ್ ನ ‘ಹೊಸ ಮಾದರಿ’!

ವರ್ಷಗಟ್ಟಲೆ ನಕಲಿ ಟೋಲ್ ನಡೆಯುತ್ತದೆ, ವರ್ಷಗಟ್ಟಲೆ ರಾಜಧಾನಿಯಲ್ಲೇ ನಕಲಿ ಕೋರ್ಟ್ ನಡೆಯುತ್ತದೆ, ಕಾಶ್ಮೀರದಂತಹ ಪ್ರದೇಶದಲ್ಲಿ ಒಬ್ಬನಿಗೆ ಝಡ್ ಕೆಟಗರಿ ಭದ್ರತೆ ಸಿಗುತ್ತದೆ ಅಂದರೆ ಇದು ಎಷ್ಟು ಭಯಾನಕ. ದೊಡ್ಡವರ, ಬಹಳ ಪ್ರಭಾವಿಗಳ, ಆಯಕಟ್ಟಿನ ಜಾಗದಲ್ಲಿ ಇರುವವರ ಆಶೀರ್ವಾದ ಇಲ್ಲದೆ ಇಷ್ಟೆಲ್ಲಾ ದೊಡ್ಡ ವಂಚನೆಗಳನ್ನು ಹೀಗೆ ವರ್ಷಗಟ್ಟಲೆ ನಡೆಸುವುದು ಸಾಧ್ಯವೇ?

Update: 2024-10-27 07:37 GMT

‘ಥಗ್ಸ್ ಆಫ್ ಹಿಂದೂಸ್ಥಾನ್’, ‘ಥಗ್ಸ್ ಆಫ್ ಅಮೆರಿಕ’ನಂತಹ ಸಿನೆಮಾಗಳು ಈಗಾಗಲೇ ಬಂದಿವೆ. ಆದರೆ ವೆಬ್ ಸೀರೀಸ್ ನಿರ್ದೇಶಕರಿಗೆ ‘ಥಗ್ಸ್ ಆಫ್ ಗುಜರಾತ್’ ಅನ್ನೋ ಐಡಿಯಾವನ್ನು ನಾನು ಕೊಡುತ್ತಿದ್ದೇನೆ ಎನ್ನುತ್ತಿದ್ದಾರೆ ಪತ್ರಕರ್ತ ಅಜಿತ್ ಅಂಜುಮ್. ಈ ಸೀರೀಸ್ ಅನ್ನು ಗುಜರಾತ್ನ ನಿಜ ಬದುಕಿನ ಕ್ರಿಮಿನಲ್ಗಳ ಮೇಲೆ ಮಾಡಬಹುದಾಗಿದೆ ಎಂತಲೂ ಅವರು ಹೇಳಿದ್ದಾರೆ.

ಅವರೊಂದು ಪಟ್ಟಿ ಕೊಡುತ್ತಾರೆ.

ಗುಜರಾತ್ನ ಗಾಂಧಿನಗರದಲ್ಲಿಯೇ 5 ವರ್ಷಗಳಿಂದಲೂ ತನ್ನದೇ ನಕಲಿ ಕೋರ್ಟ್ ನಡೆಸುತ್ತಿದ್ದ, 100 ಎಕರೆ ಜಮೀನನ್ನೂ ಗುಳುಂ ಮಾಡಿದ್ದ ನಕಲಿ ಜಡ್ಜ್ ಒಬ್ಬನ ಬಂಧನವಾಗಿದೆ.

ಪಿಎಂಒ ಅಂದರೆ ಪ್ರಧಾನಿ ಕಚೇರಿ ಅಧಿಕಾರಿ ಎಂದು ಹೇಳಿಕೊಂಡು ಕಾಶ್ಮೀರದಲ್ಲೆಲ್ಲ ಭದ್ರತಾ ಅಧಿಕಾರಿಗಳ ಸಭೆ ನಡೆಸಿ ಈಗಾಗಲೇ ಸಿಕ್ಕಿಬಿದ್ದಿದ್ದ ಕಿರಣ್ ಪಟೇಲ್ ಎಂಬ ವಂಚಕ ಜಮೀನು ಮಾರಾಟ ಡೀಲ್ನಲ್ಲಿ ವ್ಯಕ್ತಿಯೊಬ್ಬರಿಗೆ 80 ಲಕ್ಷ ರೂ. ವಂಚಿಸಿದ ಕೇಸ್ನಲ್ಲಿ ಸಿಕ್ಕಿಬಿದ್ದಿದ್ದಾನೆ.

ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಪಿಎ ಎಂದು ಹೇಳಿಕೊಂಡು ಶಾಸಕರನ್ನೇ ವಂಚಿಸಲು ನೋಡಿದ ಗುಜರಾತಿಯೊಬ್ಬನನ್ನು ನಾಗಪುರ ಪೊಲೀಸರು ಬಂಧಿಸಿದ್ದರು. ಐಎಎಸ್ ಅಧಿಕಾರಿ ಎಂದು ಹೇಳಿಕೊಂಡು ಭಯಂಕರ ದಂಧೆಗಳಲ್ಲಿ ತೊಡಗಿದ್ದವ ಕೂಡ ಗುಜರಾತ್ನಲ್ಲಿ ಸಿಕ್ಕಿಬಿದ್ದಿದ್ದ. ನಕಲಿ ಐಪಿಎಸ್ ಅಧಿಕಾರಿ, ನಕಲಿ ಐಎಎಸ್ ಅಧಿಕಾರಿ, ಪಿಎಂಒದ ನಕಲಿ ಅಧಿಕಾರಿ, ನಕಲಿ ನ್ಯಾಯಾಧೀಶ, ನಕಲಿ ಕೋರ್ಟ್, ನಕಲಿ ಪಿಎ ಇಷ್ಟೊಂದು ನಕಲಿಗಳು ಗುಜರಾತ್ನಲ್ಲಿಯೇ ಏಕಿದ್ದಾರೆ?

ಗುಜರಾತ್ನಲ್ಲಿ ಸಿಕ್ಕಿಬಿದ್ದಿರುವ ನಕಲಿಗಳೇ ಇಷ್ಟೊಂದಿದ್ದರೆ ಇನ್ನೂ ಸಿಕ್ಕಿಬೀಳದ ನಕಲಿಗಳು ಎಷ್ಟಿರಬಹುದು? ಒಂದೆಡೆ ಮೋದಿಯವರು ವಿಶ್ವಗುರು ಕಥೆ ಹೇಳುತ್ತಿದ್ದಾರೆ. ಆದರೆ ಅವರದೇ ಗುಜರಾತಿನ ನಕಲಿಗಳೆಲ್ಲ ದೇಶದ ಹೆಸರನ್ನೇ ಹಾಳು ಮಾಡಲು ನಿಂತುಬಿಟ್ಟಿದ್ದಾರೆ.

ಎಂಥೆಂಥ ನಕಲಿಗಳು ಸಿಕ್ಕಿಬಿದ್ದಿದ್ದಾರೆ ನೋಡಿ.

ಒಬ್ಬೊಬ್ಬರದೂ ಒಂದೊಂದು ಕಥೆ, ಒಬ್ಬೊಬ್ಬರದೂ ಒಂದೊಂದು ಭಯಾನಕ ಎಪಿಸೋಡ್. ಹಾಗಾಗಿಯೇ ವೆಬ್ ಸೀರೀಸ್ ಮಾಡಬಹುದು ಎಂದು ಅಜಿತ್ ಅಂಜುಮ್ ಹೇಳಿದ್ದು. ಇವೆರಲ್ಲ ಗುಜರಾತಿನಿಂದ ತಮ್ಮ ವಂಚನೆಯ ಆಟ ಶುರು ಮಾಡಿದವರು. ಆಮೇಲೆ ಗುಜರಾತ್ನಿಂದ ಆಚೆಗೂ ಆಟವಾಡಲು ನೋಡಿದವರು. ಡಿಜಿಟಲ್ ಅರೆಸ್ಟ್ ಎಂಬ ಸೈಬರ್ ವಂಚನೆಯ ಬೃಹತ್ ಹಗರಣ ಕೂಡ ಗುಜರಾತ್ನಲ್ಲಿ ಪತ್ತೆಯಾಗಿದೆ.

ನಿತ್ಯವೂ 10 ಕೋಟಿ ರೂ. ವಂಚಿಸುವ ಟಾರ್ಗೆಟ್ ಅನ್ನು ಆ ಜಾಲ ಹೊಂದಿತ್ತು ಎಂದು ವರದಿಗಳು ಹೇಳುತ್ತಿವೆ. ದೇಶಾದ್ಯಂತ ಇವರ ಮೇಲೆ 450 ಕೇಸ್ಗಳಿವೆ. ಗುಜರಾತಿನವರು ಎಂದರೆ ಸಾಕು, ಕ್ರಿಮಿನಲ್ಗಳೇ ಆಗಿದ್ದರೂ, ಅವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಬೇರೆ ರಾಜ್ಯಗಳ ಪೊಲೀಸರು ಕೂಡ ಹೆದರುತ್ತಾರೆ. ಯಾಕೆಂದರೆ ಅವರಿಗೆ ದೊಡ್ಡ ದೊಡ್ಡ ಜನರ ಸಂಪರ್ಕವಿದೆ ಎಂಬ ಭಯ. ಯಾರಿಗೆ ಗೊತ್ತು, ಯಾರು ಎಂಥೆಂಥ ದೊಡ್ಡ ಸಂಪರ್ಕ ಹೊಂದಿರಬಹುದು?

ಕೆಲ ದಿನಗಳ ಹಿಂದೆ 3,300 ಕೆಜಿ ಡ್ರಗ್ಸ್ ಅನ್ನು ಗುಜರಾತ್ ಕರಾವಳಿಯಲ್ಲಿ ನೇವಿ ಅಧಿಕಾರಿಗಳು ಸೀಝ್ ಮಾಡಿದರು. ಅದು ಅಲ್ಲಿಂದ ದೇಶದ ಬೇರೆ ಬೇರೆ ಭಾಗಗಳಿಗೆ ಸರಬರಾಜಾಗುತ್ತದೆ ಎಂಬ ವಿಚಾರವೂ ಬಯಲಾಯಿತು. ಗುಜರಾತ್ನ ಗಾಂಧಿನಗರದಲ್ಲಿ ನ್ಯಾಯಾಧೀಶನೆಂದು ಹೇಳಿಕೊಂಡು ನಕಲಿ ಕೋರ್ಟನ್ನೇ ನಡೆಸುತ್ತಿದ್ದ ಆಸಾಮಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮೊರಿಸ್ ಸ್ಯಾಮ್ಯುಯೆಲ್ ಕ್ರಿಶ್ಚಿಯನ್ ಬಂಧಿತ ನಕಲಿ ಜಡ್ಜ್. ಕಳೆದ 5 ವರ್ಷಗಳಿಂದ ಆತ ನಕಲಿ ಕೋರ್ಟ್ ಅನ್ನೇ ನಡೆಸುತ್ತಿದ್ದ. ಅವನು, ಅವನ ಕೋರ್ಟ್, ಕಡೆಗೆ ಆತನ ಸಿಬ್ಬಂದಿ ಕೂಡ ನಕಲಿಗಳೇ. ಪೊಲೀಸರ ಪ್ರಕಾರ ಸಿಟಿ ಸಿವಿಲ್ ಕೋರ್ಟ್ನಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದ ಬಾಕಿ ಪ್ರಕರಣ ಕಲೆ ಹಾಕುತ್ತಿದ್ದ ಆರೋಪಿ, ಸಂಬಂಧಿಸಿದವರಿಗೆ ಬಲೆ ಹಾಕುತ್ತಿದ್ದ. ನ್ಯಾಯಾಲಯದಿಂದ ನೇಮಿಸಲ್ಪಟ್ಟ ಅಧಿಕೃತ ಮಧ್ಯಸ್ಥಗಾರ ಎಂದು ಹೇಳಿಕೊಂಡು ಅವರನ್ನು ತನ್ನ ಕಚೇರಿಗೆ ಕರೆಸುತ್ತಿದ್ದ.

ಗುಜರಾತಿನ ರಾಜಧಾನಿ ಗಾಂಧಿನಗರದಲ್ಲಿಯೇ ತನ್ನ ಕಚೇರಿಯನ್ನು ಕೋರ್ಟ್ನ ಕೊಠಡಿಯಂತೆ ವಿನ್ಯಾಸಗೊಳಿಸಿದ್ದ. ನ್ಯಾಯಾಧೀಶನಂತೆ ಪೋಸ್ ಕೊಡುತ್ತಿದ್ದ. ಅಲ್ಲಿ ಸಿಬ್ಬಂದಿ, ನಕಲಿ ವಕೀಲರನ್ನೂ ಇಟ್ಟುಕೊಂಡಿದ್ದ ಸ್ಯಾಮ್ಯುಯೆಲ್, ಅವರ ಮೂಲಕ ಜನರನ್ನು ಯಾಮಾರಿಸುತ್ತಿದ್ದ.

ಒಂದೊಂದು ಪ್ರಕರಣಗಳಿಗೆ ನಿಗದಿತ ಶುಲ್ಕ ಕೂಡ ಪಡೆಯುತ್ತಿದ್ದನಲ್ಲದೆ, ದುಡ್ಡು ಹೆಚ್ಚು ಕೊಟ್ಟವರ ಪರ ಆದೇಶ ನೀಡುತ್ತಿದ್ದ ಎನ್ನಲಾಗಿದೆ. ನಕಲಿ ನಾಟಕದ ಮೂಲಕವೇ 100 ಎಕರೆ ಭೂಮಿಯನ್ನು ತನ್ನ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದ ಆ ಭೂಪ ಎಂಬುದೂ ಬಯಲಾಗಿದೆ. ಈ ನಕಲಿ ಜಡ್ಜ್ ಕಥೆ ಹೊಸದು. ಆದರೆ ಕಳೆದ ವರ್ಷದ ಒಂದು ಕಥೆ ಇನ್ನೂ ಕುತೂಹಲಕಾರಿ.

ಆ ಗುಜರಾತಿ, ತನ್ನನ್ನು ತಾನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಪಿಎ ಎಂದೇ ಪರಿಚಯಿಸಿಕೊಂಡು ಮಹಾರಾಷ್ಟ್ರದ 6 ಬಿಜೆಪಿ ನಾಯಕರನ್ನು ಸಂಪರ್ಕಿಸಿ, ಸಚಿವ ಸ್ಥಾನ ಕೊಡುತ್ತೇನೆಂದು ಹೇಳಿ ಹಣ ವಸೂಲಿಗೆ ಯತ್ನಿಸಿ ಸಿಕ್ಕಿಬಿದ್ದಿದ್ದ. ನಾಗಪುರ ಪೊಲೀಸರು ಆತನನ್ನು ಬಂಧಿಸಿದ್ದರು.

ಆತ ಗುಜರಾತಿನ ಮೊರ್ಬಿ ಜಿಲ್ಲೆಯ ನೀರಜ್ ಸಿಂಗ್ ರಾಥೋಡ್. ಮಹಾರಾಷ್ಟ್ರದ ಏಕನಾಥ್ ಶಿಂದೆ ಸರಕಾರದಲ್ಲಿ ಸಚಿವ ಸ್ಥಾನ ಕೊಡಿಸುತ್ತೇನೆ ಎಂದು ಹೇಳಿ ಶಾಸಕರ ಬಳಿ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದ. ಮತ್ತೆ ಮತ್ತೆ ಫೋನ್ ಬರುತ್ತಿದ್ದುದರಿಂದ ಅನುಮಾನಗೊಂಡ ಶಾಸಕರು ನಾಗಪುರ ಪೊಲೀಸರಿಗೆ ದೂರು ಕೊಟ್ಟಿದ್ದರು.ತನಿಖೆ ನಡೆದಾಗ ನೀರಜ್ ಸಿಂಗ್ ರಾಥೋಡ್ ಆಟ ಬಯಲಾಗಿತ್ತು. ನಡ್ಡಾ ನಕಲಿ ಪಿಎ ಅರೆಸ್ಟ್ ಆಗಿದ್ದ.

ಮಹಾರಾಷ್ಟ್ರ ಮಾತ್ರವಲ್ಲ, ದೇಶದ ವಿವಿಧ ರಾಜ್ಯಗಳ 28 ಬಿಜೆಪಿ ಶಾಸಕರನ್ನು ಸಂಪರ್ಕಿಸಿ ವಂಚಿಸಲು ನೋಡಿದ್ದ. ಆದರೆ ಆತ ಎಷ್ಟು ಜನರಿಗೆ ಹೀಗೆ ನಿಜವಾಗಿಯೂ ಯಾಮಾರಿಸಿದ್ದಿರಬಹುದು ಎಂಬುದು ತಿಳಿದಿಲ್ಲ. ದೇಶದ ಆಡಳಿತಾರೂಢ ಪಕ್ಷದ ಅಧ್ಯಕ್ಷರ ಪಿಎ ಹೆಸರಿನಲ್ಲೇ ವಂಚನೆ. ಅದೂ ಗುಜರಾತಿನವನು.

ಇನ್ನು ಕಿರಣ್ ಪಟೇಲ್ ಎಂಬ ಮತ್ತೊಬ್ಬ ಗುಜರಾತಿಯಂತೂ ಪಿಎಂಒ ಅಧಿಕಾರಿ ಎಂದು ಹೇಳಿಕೊಂಡು ವಂಚಿಸಿದವನು. ಪಿಎಂಒ ಅಧಿಕಾರಿ ಎಂದು ಪೋಸು ಕೊಟ್ಟು ಕಾಶ್ಮೀರದಲ್ಲಿ ಝಡ್ ಪ್ಲಸ್ ಭದ್ರತೆಯನ್ನೂ ಪಡೆದು ಓಡಾಡಿಕೊಂಡಿದ್ದ ಗುಜರಾತ್ ಮೂಲದ ವಂಚಕ ಕಿರಣ್ ಪಟೇಲ್. ಪ್ರಧಾನಮಂತ್ರಿ ಕಾರ್ಯಾಲಯದಲ್ಲಿ ಉನ್ನತ ಅಧಿಕಾರದಲ್ಲಿರುವ ವ್ಯಕ್ತಿ ಎಂದು ಹೇಳಿಕೊಂಡು ಜಮ್ಮು- ಕಾಶ್ಮೀರದಂಥ ಸೂಕ್ಷ್ಮ ಪ್ರದೇಶಕ್ಕೆ ಹಲವು ಬಾರಿ ಭೇಟಿ ನೀಡಿದ್ದ.

ಝಡ್ ಪ್ಲಸ್ ಭದ್ರತೆ, ಬುಲೆಟ್ ಪ್ರೂಫ್ ಮಹೀಂದ್ರಾ ಸ್ಕಾರ್ಪಿಯೋ ಎಸ್ಯುವಿ, ಪಂಚತಾರಾ ಹೋಟೆಲ್ ವಾಸ್ತವ್ಯ ಸೇರಿದಂತೆ ಹಲವು ಸೌಲಭ್ಯಗಳನ್ನು ಅನುಭವಿಸುತ್ತ ವಿಲಾಸಿ ಬದುಕು ಅನುಭವಿಸುತ್ತಿದ್ದ. ಸರಕಾರಿ ಅಧಿಕಾರಿಗಳ ಕೆಲ ಸಭೆಗಳಲ್ಲೂ ಪಾಲ್ಗೊಂಡಿದ್ದ ಎಂಬುದು ಬಯಲಾಗಿತ್ತು. ಎಲ್ಒಸಿಯ ಬಳಿಯ ಪ್ರದೇಶಕ್ಕೂ ಹೋಗಿ ವೀಕ್ಷಣೆ ಮಾಡಿದ್ದ.

ಈ ವೇಳೆ ಜಮ್ಮು-ಕಾಶ್ಮೀರ ಪೊಲೀಸ್ ಹಾಗೂ ಸೈನಿಕರು ಆತನಿಗೆ ಭದ್ರತೆ ನೀಡಿರುವ ವೀಡಿಯೊ ಕೂಡ ಬಿತ್ತರವಾಗಿತ್ತು. ಎರಡು ದಿನಗಳ ಕಾಲ ಶ್ರೀನಗರ ಪ್ರವಾಸ ಮಾಡಿದ್ದ ಈ ವಂಚಕನಿಗೆ ಜಮ್ಮು-ಕಾಶ್ಮೀರ ಪೊಲೀಸ್ ಪ್ರೊಟೋಕಾಲ್ನ ಅನ್ವಯ ಭದ್ರತೆ ಹಾಗೂ ಇತರ ವ್ಯವಸ್ಥೆಗಳನ್ನು ಮಾಡಲಾಗಿತ್ತು.

ಇಷ್ಟು ಮಾತ್ರವಲ್ಲದೆ ಈ ವ್ಯಕ್ತಿ ಸರಕಾರಿ ಅಧಿಕಾರಿಗಳೊಂದಿಗೆ ಕೆಲ ಅಧಿಕೃತ ಸಭೆಗಳಲ್ಲೂ ಭಾಗವಹಿಸಿದ್ದ ಎನ್ನುವುದು ಬಹಿರಂಗವಾಗಿತ್ತು. ಪ್ರಧಾನಿ ಕಚೇರಿಯ ಹೆಚ್ಚುವರಿ ನಿರ್ದೇಶಕ ಎಂದು ಹೇಳಿಕೊಂಡಿದ್ದ ಆತ, 2022ರ ಅಕ್ಟೋಬರ್ನಿಂದ ಹಲವು ಬಾರಿ ಕಾಶ್ಮೀರ ಕಣಿವೆಗೆ ನಿರಂತರವಾಗಿ ಭೇಟಿ ನೀಡಿದ್ದ. ಕಡೆಗೂ ಕಳೆದ ವರ್ಷದ ಮಾರ್ಚ್ನಲ್ಲಿ ಈ ವಂಚಕನನ್ನು ಬಂಧಿಸಲಾಯಿತು.

ನಕಲಿ ಐಪಿಎಸ್, ನಕಲಿ ಐಎಎಸ್ ಹೀಗೆ ಗುಜರಾತಿನ ಈ ನಕಲಿಗಳದ್ದೇ ಒಂದು ಕಥೆಯಾದರೆ, ನಿಜವಾದ ಐಎಎಸ್ಗಳ ವಂಚನೆಯೂ ಕಡಿಮೆಯೇನಿಲ್ಲ.

ಇನ್ನು ಗುಜರಾತ್ನ 20 ಸಾವಿರ ಕೋಟಿ ರೂ. ವಂಚನೆ ಬಗ್ಗೆ ಹೇಳಲೇಬೇಕು.

ಗುಜರಾತಿನ ಗಾಂಧಿನಗರದಲ್ಲಿಯೇ 20 ಸಾವಿರ ಕೋಟಿ ರೂ. ಭೂಹಗರಣ ಬೆಳಕಿಗೆ ಬಂದಿತ್ತು. ಹೇಗೆ ಬಿಲ್ಡರ್ಗಳು, ರಾಜಕಾರಣಿಗಳು ಮತ್ತು ಅಧಿಕಾರಿಗಳು ಸೇರಿ ಗೋಮಾಳವನ್ನೇ ಗುಳುಂ ಮಾಡಿದ್ದರು ಎಂಬುದು ಬಯಲಾಗಿತ್ತು ಮತ್ತು ಜಿಲ್ಲಾಧಿಕಾರಿಯೇ ಇಡೀ ಹಗರಣದ ಮುಖ್ಯ ಪಾತ್ರಧಾರಿಯಾಗಿದ್ದುದು ಆಘಾತ ಉಂಟುಮಾಡಿತ್ತು. ಗಾಂಧಿನಗರದ ಜಿಲ್ಲಾಧಿಕಾರಿಯಾಗಿದ್ದ ಎಸ್.ಕೆ. ಲಾಂಗಾ ಈ ಭ್ರಷ್ಟಾಚಾರ ಹಗರಣದಲ್ಲಿ ಬಂಧನಕ್ಕೆ ಒಳಗಾಗುವಂತಾಯಿತು.

ಯಾರೋ ಸಜ್ಜನರು ಗೋಮಾಳಕ್ಕೆಂದು ದಾನ ಮಾಡಿದ್ದನ್ನೇ ಕಡು ಭ್ರಷ್ಟರೆಲ್ಲ ಸೇರಿ ಕಬ್ಜಾ ಮಾಡಲು ನೋಡಿದ್ದರು. ಸರಕಾರಿ ದಾಖಲೆಗಳಲ್ಲಿ ಅದನ್ನು ಕೃಷಿ ಭೂಮಿ ಎಂದು ನಕಲಿ ಪತ್ರಗಳ ಮೂಲಕ ತೋರಿಸಿ ಮಾರಾಟ ಮಾಡುವ ಹುನ್ನಾರ ನಡೆದಿತ್ತು. ಗುಜರಾತಿನಿಂದ ದಿಲ್ಲಿಯತನಕವೂ ಇದ್ದ ಪ್ರಭಾವಿಗಳು ಈ ಹಗರಣದಲ್ಲಿದ್ದರು ಮತ್ತು ಅದೇ ಕಾರಣದಿಂದ ಭ್ರಷ್ಟ ತಿಮಿಂಗಿಲಗಳು ಬಚಾವಾಗಿದ್ದವು.

ಈ ಗುಜರಾತಿ ಕ್ರಿಮಿನಲ್ ಪಡೆಯ ಕಾರುಬಾರು ಭಾರತಕ್ಕೆ ಮಾತ್ರವೇ ಸೀಮಿತವಲ್ಲ. ವಿದೇಶದಲ್ಲೂ ಆಟವಾಡಬಲ್ಲರು ಎಂಬುದಕ್ಕೆ ಒಂದು ಉದಾಹರಣೆ, ನಕಲಿ ಗ್ರೀನ್ ಕಾರ್ಡ್ ಹಗರಣ. ಅಮೆರಿಕದ ಖಾಯಂ ನಿವಾಸಿಗಳಿಗೆ ಅಲ್ಲಿನ ಸರಕಾರ ನೀಡುವ ಗ್ರೀನ್ ಕಾರ್ಡ್ ಅನ್ನು ಗುಜರಾತಿನ ಕ್ರಿಮಿನಲ್ಗಳು ಅನಾಯಾಸವಾಗಿ ಸೃಷ್ಟಿಸಿಬಿಟ್ಟಿದ್ದರು.

ನಕಲಿ ಗ್ರೀನ್ ಕಾರ್ಡ್ ಪೂರೈಕೆ ಆರೋಪದ ಮೇಲೆ 33 ವರ್ಷದ ಗುಜರಾತಿಯೊಬ್ಬನನ್ನು ಅಮೆರಿಕದಲ್ಲಿ ತನಿಖೆಗೆ ಒಳಪಡಿಸಲಾಗಿತ್ತು. ಅಮೆರಿಕದ ರಾಯಭಾರ ಕಚೇರಿಯಲ್ಲಿ ಅಧಿಕಾರಿ ಎಂದು ಹೇಳಿಕೊಂಡು ಆತ ಗ್ರೀನ್ ಕಾರ್ಡ್ಗಾಗಿ ಹಾತೊರೆಯುತ್ತಿರುವ ಜನರಿಂದ ಹಣ ದೋಚಿದ್ದ.

ಇನ್ನು ಅಮೆರಿಕದಲ್ಲಿ ನೆಲೆಸಿದ್ದ ಗುಜರಾತಿನ ಎನ್ಆರ್ಐ ಮಹಿಳೆ ಶ್ವೇತಾ ಪಾಟೀಲ್ ಅಂತರ್ರಾಜ್ಯ ಚಿನ್ನದ ಬಾರ್ ಹಗರಣದಲ್ಲಿ ಭಾಗಿಯಾಗಿ, ಅಮೆರಿಕದ ಪುರುಷನ ವೇಷ ಧರಿಸಿ ವಂಚಿಸುವವರೆಗೂ ಹೋಗಿದ್ದುದು ಅಚ್ಚರಿ ಉಂಟುಮಾಡುವ ಹಾಗಿತ್ತು.

ಕಡೆಗೆ ಆಕೆಯನ್ನು ಪೊಲೀಸರು ಬಂಧಿಸಿದ್ದರು.

ನಕಲಿ ಅಧಿಕಾರಿಗಳು, ನಕಲಿ ಸರಕಾರಿ ಕಚೇರಿಗಳು, ನಕಲಿ ಶಾಲೆಗಳು ಇವೆಲ್ಲವುಗಳ ಬಳಿಕ ಗುಜರಾತ್ನ ಸೌರಾಷ್ಟ್ರದಲ್ಲಿ ನಕಲಿ ಟೋಲ್ ಪ್ಲಾಝಾವನ್ನೇ ತೆರೆದು ರಾಜಾರೋಷವಾಗಿ ವಸೂಲಿಗೆ ನಿಲ್ಲಲಾಗಿತ್ತು ಎಂದರೆ ಹೇಗಿರಬಹುದು ಪರಿಸ್ಥಿತಿ?

ಈ ನಕಲಿ ಟೋಲ್ ಪ್ಲಾಝಾ ಮೂಲಕ ರೂ. 75 ಕೋಟಿಗೂ ಹೆಚ್ಚು ಮೊತ್ತವನ್ನು ವಾಹನಗಳಿಂದ ವಸೂಲಿ ಮಾಡಿರುವ ಪ್ರಕರಣವು ಗುಜರಾತ್ ಸರಕಾರವನ್ನು ಮುಜುಗರಕ್ಕೀಡು ಮಾಡಿತ್ತು. ಗುಜರಾತಿನಲ್ಲಿ ಏನೂ ಆಗಬಹುದು ಎನ್ನುವುದಕ್ಕೆ ಇದೊಂದು ಉದಾಹರಣೆ.

ಬೇರೆ ರಾಜ್ಯಗಳಲ್ಲಿ ವಂಚನೆ ಆಗುವುದಿಲ್ಲ ಎನ್ನಲಾಗುವುದಿಲ್ಲ. ಆದರೆ ಇಡೀ ದೇಶಕ್ಕೇ ಮಾಡೆಲ್ ಎಂದು ಘೋಷಣೆಯಾಗಿ ಹತ್ತು ವರ್ಷಕ್ಕೂ ಹೆಚ್ಚು ಕಾಲ ಆಗಿರುವ ಗುಜರಾತ್ನಲ್ಲಿ ವರದಿಯಾಗುತ್ತಿರುವ ಗಂಭೀರ ಅಪರಾಧ ಪ್ರಕರಣಗಳನ್ನು ನೋಡಿದರೆ ಬೆಚ್ಚಿ ಬೀಳುವ ಪರಿಸ್ಥಿತಿ.

ವರ್ಷಗಟ್ಟಲೆ ನಕಲಿ ಟೋಲ್ ನಡೆಯುತ್ತದೆ, ವರ್ಷಗಟ್ಟಲೆ ರಾಜಧಾನಿಯಲ್ಲೇ ನಕಲಿ ಕೋರ್ಟ್ ನಡೆಯುತ್ತದೆ, ಕಾಶ್ಮೀರದಂತಹ ಪ್ರದೇಶದಲ್ಲಿ ಒಬ್ಬನಿಗೆ ಝಡ್ ಕೆಟಗರಿ ಭದ್ರತೆ ಸಿಗುತ್ತದೆ ಅಂದರೆ ಇದು ಎಷ್ಟು ಭಯಾನಕ.

ದೊಡ್ಡವರ, ಬಹಳ ಪ್ರಭಾವಿಗಳ, ಆಯಕಟ್ಟಿನ ಜಾಗದಲ್ಲಿ ಇರುವವರ ಆಶೀರ್ವಾದ ಇಲ್ಲದೆ ಇಷ್ಟೆಲ್ಲಾ ದೊಡ್ಡ ವಂಚನೆಗಳನ್ನು ಹೀಗೆ ವರ್ಷಗಟ್ಟಲೆ ನಡೆಸುವುದು ಸಾಧ್ಯವೇ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಎಸ್. ಸುದರ್ಶನ್

contributor

Similar News