ಯೋಗೇಶ್ವರ್ ಎಲ್ಲಿರುತ್ತಾರೋ, ನಾವೂ ಅಲ್ಲೇ ಎಂದ ಎಸ್‌ಸಿ-ಎಸ್‌ಟಿ ಮೋರ್ಚಾ ಪದಾಧಿಕಾರಿಗಳು

Update: 2024-10-28 11:25 GMT

ಬೆಂಗಳೂರು : ರಾಜ್ಯದ ಮೂರು ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆಯ ಕಾವೇರಿದೆ. ಪ್ರತಿಷ್ಠೆಯ ಕಣವಾಗಿ ಗುರುತಿಸಿಕೊಂಡ ಚನ್ನಪಟ್ಟಣ ಸೇರಿದಂತೆ ಮೂರೂ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ನಡೆಯುತ್ತಿದೆ. ಈ ನಡುವೆ ಬಿಜೆಪಿ ನಗರ, ಗ್ರಾಮಾಂತರ ಹಾಗೂ ಮಹಿಳಾ ಎಸ್‌ಸಿ-ಎಸ್‌ಟಿ ಮೋರ್ಚಾ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ಸಲ್ಲಿಸಿ ಯೋಗೇಶ್ವರ್ ಅವರನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ.

ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರು ಬಿಜೆಪಿ ತೊರೆದು ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ ಬಿಜೆಪಿ ಎಸ್‌ಸಿ-ಎಸ್‌ಟಿ ತಾಲೂಕು ಘಟಕದ ಎಲ್ಲ ಮೋರ್ಚಾಗಳ ಪದಾಧಿಕಾರಿಗಳು ತಮ್ಮ ಹುದ್ದೆಗಳಿಗೆ ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದು, ಯೋಗೇಶ್ವರ್ ಅವರನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಪಂ ಮಾಜಿ ಸದಸ್ಯ ಸದಾನಂದ, ಯೋಗೇಶ್ವರ್‌ ಎಲ್ಲಿರುತ್ತಾರೋ ನಾವು ಅಲ್ಲಿರುತ್ತೇವೆ. ಯೋಗೇಶ್ವರ್‌ರನ್ನು ಬೆಂಬಲಿಸಿ ಬಿಜೆಪಿ ಎಸ್‌ಸಿ-ಎಸ್‌ಟಿ ತಾಲೂಕು ಘಟಕದ ಎಲ್ಲ ಮೋರ್ಚಾಗಳ ಪದಾಧಿಕಾರಿಗಳು ರಾಜೀನಾಮೆ ಸಲ್ಲಿಸಿದ್ದಾರೆ. ಇನ್ನು ಮುಂದೆ ನಾವು ಯೋಗೇಶ್ವರ್ ಅವರನ್ನು ಬೆಂಬಲಿಸುತ್ತೇವೆ ಎಂದಿದ್ದಾರೆ.

ಇದೇ ವೇಳೆ, ಯೋಗೇಶ್ವರ್ ಜೊತೆ ಗುರುತಿಸಿಕೊಂಡವರು ಹಾಗೂ ಅವರೊಂದಿಗೆ ಕಾಂಗ್ರೆಸ್ ಗೆ ಹೋಗಿರುವ ಬಿಜೆಪಿ ಪದಾಧಿಕಾರಿಗಳನ್ನು ತಕ್ಷಣದಿಂದಲೇ ಉಚ್ಛಾಟಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎನ್. ಆನಂದಸ್ವಾಮಿ ಆದೇಶ ಹೊರಡಿಸಿದ್ದಾರೆ.

ಬಿಜೆಪಿ ಜಿಲ್ಲಾಧ್ಯಕ್ಷರ ಆದೇಶಕ್ಕೆ ಪ್ರತಿಕ್ರಿಯಿಸಿದ ಸದಾನಂದ, ನಾವು ಈಗಾಗಲೇ ವಾಟ್ಸ್ ಆ್ಯಪ್ ಮೂಲಕ ರಾಜೀನಾಮೆ ಸಲ್ಲಿಸಿದ್ದೇವೆ. ಇದನ್ನು ನೋಡಿ ಅವರು ಉಚ್ಚಾಟನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ನಾವೇ ಪಕ್ಷದಿಂದ ಹೊರಬಂದಿದ್ದೇವೆ, ಅವರೇನು ನಮ್ಮನ್ನು ಉಚ್ಚಾಟನೆ ಮಾಡುವುದು ಎಂದು ಪ್ರಶ್ನಿಸಿದ್ದಾರೆ

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಸ್ಪಾರ್ ವಾರ್ ಮಾತ್ರವಲ್ಲ. ರಾಜಕೀಯವಾಗಿ ಬದ್ಧವೈರಿಗಳಾಗಿರುವ ಎರಡು ಕುಟುಂಬಗಳ ನಡುವಿನ ಕದನವಾಗಿಯೂ ಮಾರ್ಪಟ್ಟಿದೆ. ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹುರಿಯಾಳಾಗಿರುವ ಸಿ.ಪಿ.ಯೋಗೇಶ್ವ‌ರ್ ಹಾಗೂ ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅಧಿಕೃತವಾಗಿ ಉಮೇದುವಾರಿಕೆ ಸಲ್ಲಿಸಿದ್ದು, ಇಬ್ಬರ ನಡುವಿನ ನೇರ ಹಣಾಹಣಿಗೆ ಚನ್ನಪಟ್ಟಣ ಅಖಾಡ ಸಿದ್ಧವಾಗಿದೆ.

5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಯೋಗೇಶ್ವರ್ 2018 ಮತ್ತು 2023ರ ಚುನಾವಣೆಯಲ್ಲಿ ಕುಮಾರಸ್ವಾಮಿ ಎದುರು ಸೋಲು ಕಂಡವರು. ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ 2019ರ ಮಂಡ್ಯ ಸಂಸತ್ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ, ನಟಿ ಸುಮಲತಾ ಅಂಬರೀಷ್, 2023ರ ರಾಮನಗರ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಕಾಂಗ್ರೆಸ್ ನ ಇಕ್ಬಾಲ್ ಹುಸೇನ್ ವಿರುದ್ಧ ಪರಾಭವಗೊಂಡವರು. ಈಗ ಇಬ್ಬರು ನಾಯಕರ ರಾಜಕೀಯ ಭವಿಷ್ಯವನ್ನು ಉಪಚುನಾವಣೆ ನಿರ್ಧರಿಸುವ ಕಾರಣ ಚನ್ನಪಟ್ಟಣ ಕಣ ಎಲ್ಲರ ಗಮನ ಸೆಳೆದಿದೆ.

ಯೋಗೇಶ್ವರ್ ಅವರು ಸ್ವತಃ ಚನ್ನಪಟ್ಟಣದಲ್ಲಿ ವರ್ಚಸ್ವಿ ನಾಯಕ. ಅವರು ಪ್ರತಿ ಬಾರಿ ಅಲ್ಲಿ ಸ್ಪರ್ಧಿಸಿದಾಗ ಯಾವ ಪಕ್ಷದಿಂದ ಸ್ಪರ್ಧಿಸಿದರೂ ಪಕ್ಷೇತರರಾಗಿ ಕಣಕ್ಕೆ ಇಳಿದ್ದಿದ್ದರೂ ಐವತ್ತು ಸಾವಿರಕ್ಕಿಂತ ಹೆಚ್ಚು ಮತ ಪಡೆದಿದ್ದಾರೆ. ಈಗ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಬಲ , ಡಿಕೆ ಸೋದರರ ಬೆಂಬಲ ಹಾಗೂ ಕ್ಷೇತ್ರದ ಅಲ್ಪಸಂಖ್ಯಾತರ ಬೆಂಬಲವೂ ಸೇರಿಕೊಂಡರೆ ಯೋಗೇಶ್ವರ್ ಅವರನ್ನು ಸೋಲಿಸುವುದು ಬಹಳ ಕಷ್ಟ.

ಅಂತಹ ಸಂದರ್ಭದಲ್ಲೇ ಸ್ಥಳೀಯ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರೂ ಅವರ ಜೊತೆಗೆ ಹೋದರೆ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪಾಲಿಗೆ ಸವಾಲು ಇನ್ನಷ್ಟು ಕಠಿಣವಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News