ಇಂಜಿನಿಯರಿಂಗ್ ಪದವಿಗೆ ಬೇಡಿಕೆ ಕುಸಿತ; 13 ಸಾವಿರಕ್ಕೂ ಅಧಿಕ ಸೀಟುಗಳು ಖಾಲಿ
ಬೆಂಗಳೂರು: ಬಹಳ ಬೇಡಿಕೆಯಲ್ಲಿದ್ದ ಇಂಜಿನಿಯರಿಂಗ್ ಪದವಿ ಯಾರಿಗೂ ಬೇಡವಾಗಿದೆ. ದಶಕಗಳ ಹಿಂದಿನಿಂದಲೂ ಲಕ್ಷ ರೂಪಾಯಿ ಹಣ ನೀಡಿದರೂ ರಾಜ್ಯದಲ್ಲಿ ಇಂಜಿನಿಯರಿಂಗ್ ಸೀಟುಗಳು ಸಿಗುತ್ತಿರಲಿಲ್ಲ. ಆದರೆ, ಇದೀಗ ರಾಜ್ಯದಲ್ಲಿ 13 ಸಾವಿರಕ್ಕೂ ಅಧಿಕ ಸೀಟುಗಳು ಖಾಲಿ ಉಳಿದಿರುವುದು ತಿಳಿದುಬಂದಿದೆ.
ರಾಜ್ಯ ಸರಕಾರವು ಇಂಜಿನಿಯರಿಂಗ್ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಆದರೆ ಖಾಸಗಿ ಕಾಲೇಜುಗಳ ಶೇ.30, ಸರಕಾರಿ ಕಾಲೇಜುಗಳ ಶೇ.25ರಷ್ಟು ಸೀಟುಗಳು ಹಂಚಿಕೆಯಾಗದೇ ಹಾಗೆ ಉಳಿದಿದೆ. ಈ ನಡುವೆ ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿಯೂ ವಿದ್ಯಾರ್ಥಿಗಳ ಮೇಲೆ ಆರ್ಥಿಕ ಹೊರೆ ಹಾಕುತ್ತಿರುವುದು ಸೀಟುಗಳ ಭರ್ತಿಯಾಗದೇ ಉಳಿಯುತ್ತಿವೆ ಎಂದು ಕೆಲ ವಿದ್ಯಾರ್ಥಿ ಸಂಘಟನೆಗಳು ಆರೋಪಿಸುತ್ತಿವೆ.
ಪ್ರಸಕ್ತ ವರ್ಷ ಸರಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿ ಸೀಟುಗಳ ಸಂಖ್ಯೆಯನ್ನು ಹೆಚ್ಚಿ ಸಲಾಗಿದೆ. ಹಂಚಿಕೆಯಾಗದೇ ಉಳಿದ ಸೀಟುಗಳಲ್ಲಿ ಸಿವಿಲ್, ಇಲೆಕ್ಟ್ರಾನಿಕ್ಸ್ ಹಾಗೂ ಮೆಕಾನಿಕಲ್ ವಿಭಾಗ ಮೊದಲ ಮೂರು ಸ್ಥಾನದಲ್ಲಿದೆ. ಕಂಪ್ಯೂಟರ್ ಸೈನ್ಸ್ ಮತ್ತು ಇಲೆಕ್ಟ್ರಿಕಲ್ ವಿಭಾಗವು ಬೇಡಿಕೆಯನ್ನು ಉಳಿಸಿಕೊಂಡಿವೆ.
ರಾಜ್ಯದಲ್ಲಿ ಇಂಜಿನಿಯರಿಂಗ್ ಪದವಿಯ ಎಲ್ಲ ವಿಭಾಗದಲ್ಲಿ ಒಟ್ಟು 79,907 ಸೀಟುಗಳಿದ್ದು, ಈ ಪೈಕಿ 66,818 ಸೀಟುಗಳು ಮಾತ್ರ ಭರ್ತಿಯಾಗಿದ್ದು, 13,089 ಭರ್ತಿಯಾಗದೆ ಬಾಕಿ ಉಳಿದುಕೊಂಡಿವೆ. ಸಿವಿಲ್, ಮೆಕಾನಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದಲ್ಲಿ ಅತಿ ಹೆಚ್ಚು ಸೀಟುಗಳು ಹಂಚಿಕೆಯಾಗದೇ ಉಳಿದಿವೆ.
ಸಿವಿಲ್ ವಿಭಾಗದಲ್ಲಿ ಒಟ್ಟು 5,723 ಸೀಟುಗಳಿದ್ದು, ಪೈಕಿ 2,500ಕ್ಕೂ ಅಧಿಕ ಸೀಟು ಹಂಚಿಕೆಯಾಗದೆ, ಬಾಕಿ ಉಳಿದಿವೆ. ಮೆಕಾನಿಕಲ್ ವಿಭಾಗದಲ್ಲಿ 5,977 ಸೀಟುಗಳ ಪೈಕಿ 3 ಸಾವಿರಕ್ಕೂ ಅಧಿಕ ಸೀಟುಗಳನ್ನು ಯಾರೂ ತೆಗೆದುಕೊಳ್ಳದೇ ಇರುವುದು ತಿಳಿದು ಬಂದಿದೆ. ಆದರೆ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಒಟ್ಟು 18,794 ಸೀಟುಗಳು ಇದ್ದು, ಅದರಲ್ಲಿ ಸುಮಾರು 18,200 ಸೀಟುಗಳವರೆಗೆ ಹಂಚಿಕೆಯಾಗಿವೆ. ಇಲ್ಲೂ 500ಕ್ಕೂ ಅಧಿಕ ಸೀಟುಗಳನ್ನು ಯಾರೂ ತೆಗೆದುಕೊಂಡಿಲ್ಲ.
16,004 ಸೀಟು ಖಾಲಿ
ಇಂಜಿನಿಯರಿಂಗ್ ಪದವಿಯ ವಿವಿಧ ವಿಭಾಗಗಳಲ್ಲಿ 13,089 ಸೀಟು ಬಾಕಿ ಉಳಿದರೆ, ಆರ್ಕಿಟೆಕ್ಚರ್ ಪದವಿ ಕೋರ್ಸ್ ನಲ್ಲಿ 569 ಸೀಟು ಭರ್ತಿಯಾಗಿಲ್ಲ. ಎರಡು ಪದವಿಗಳಿಗೆ ಸಂಬಂಧಿಸಿದಂತೆ ಒಟ್ಟು 2,208 ಮಂದಿಗೆ ವಿವಿಧ ಕಾಲೇಜುಗಳಲ್ಲಿ ಸೀಟು ಹಂಚಿಕೆಯಾಗಿದ್ದರೂ ಶುಲ್ಕ ಪಾವತಿಸಿಲ್ಲ. 95 ಮಂದಿ ಶುಲ್ಕ ಪಾವತಿಸಿದ್ದರೂ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡು ಕಾಲೇಜುಗಳಿಗೆ ಹೋಗಿಲ್ಲ. 45 ಮಂದಿ ಅಲ್ಪ-ಸ್ವಲ್ಪಶುಲ್ಕ ಪಾವತಿಸಿದ್ದಾರೆ. ಹೀಗಾಗಿ ಎರಡು ಪದವಿಗಳಲ್ಲಿ 16,004 ಸೀಟುಗಳು ಭರ್ತಿಯಾಗದೆ ಉಳಿದಿವೆ ಎಂದು ಕೆಇಎ ತಿಳಿಸಿದೆ.
ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸರಕಾರಿ ಶುಲ್ಕ 48 ಸಾವಿರ ರೂ.ಗೆ ಹೆಚ್ಚಿಸಲಾಗಿದೆ. ಜತೆಗೆ ಕೆಲವು ಕಾಲೇಜುಗಳಲ್ಲಿ ಕಾಲೇಜು ಶುಲ್ಕ ಎಂದು 10ರಿಂದ 12 ಸಾವಿರ ರೂ.ತೆಗೆದುಕೊಳ್ಳಲಾಗುತ್ತಿದೆ. ಇದರಿಂದ ಇಂಜಿನಿಯರಿಂಗ್ ಪದವಿ ಓದುವ ವಿದ್ಯಾರ್ಥಿಗಳಿಗೆ ದೊಡ್ಡ ಹೊಡೆತ ಬಿದ್ದಿದೆ. ಗ್ರಾಮೀಣ ಭಾಗಗಳಿಂದ ಬರುತ್ತಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ರೈತರು, ಕಾರ್ಮಿಕರ ಮಕ್ಕಳೇ ಹೆಚ್ಚಾಗಿದ್ದರು. ಅವರಿಗೆ ಹೆಚ್ಚು ಶುಲ್ಕ ನೀಡಲು ಹೇಗೆ ಸಾಧ್ಯ. ಅದಕ್ಕಾಗಿ ಆ ವಿದ್ಯಾರ್ಥಿಗಳು ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಓದುವ ಸ್ಥಿತಿ ನಿರ್ಮಾಣವಾಗಿದೆ.
-ಅಪೂರ್ವಾ ಸಿ.ಎಂ., ಎಐಡಿಎಸ್‌ಒ ಜಿಲ್ಲಾಧ್ಯಕ್ಷೆ
ಯುಜಿಸಿಇಟಿ ಎರಡನೇ ಮುಂದುವರಿದ ಸುತ್ತಿನ ಪ್ರವೇಶ ಪ್ರಕ್ರಿಯೆ ನಂತರ ಒಟ್ಟು 16,004 ಸೀಟುಗಳು ಭರ್ತಿಯಾಗದೇ ಖಾಲಿ ಉಳಿದಿದ್ದು, ಸರಕಾರ ಮತ್ತು ಕರ್ನಾಟಕ ಅನುದಾನ ರಹಿತ ಇಂಜಿನಿಯರಿಂಗ್ ಕಾಲೇಜುಗಳ ಸಂಘದ ನಡುವಿನ ಒಪ್ಪಂದದ ಪ್ರಕಾರ ಪ್ರವೇಶ ಪ್ರಕ್ರಿಯೆ ನಂತರ ಬಾಕಿ ಉಳಿದ ಸೀಟುಗಳನ್ನು ಕಾಲೇಜುಗಳಿಗೆ ಬಿಟ್ಟು ಕೊಡಬೇಕು. ಆ ಪ್ರಕಾರ ಖಾಲಿ ಸೀಟುಗಳ ವಿವರಗಳನ್ನು (ಕಾಲೇಜು ಮತ್ತು ಕೋರ್ಸ್‌ವಾರು) ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
-ಎಚ್. ಪ್ರಸನ್ನ, ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ