ಸಂವಿಧಾನ ಉಲ್ಲಂಘಿಸಿದ ಸಿಜೆಐ: ನ್ಯಾ.ಅಂಜನಾ ಪ್ರಕಾಶ್ ವಾಗ್ದಾಳಿ

Update: 2024-10-22 11:38 GMT

ಅಯೋಧ್ಯೆ ರಾಮ ಮಂದಿರ ಕುರಿತ ತೀರ್ಪಿನ ಬಗ್ಗೆ ದೇಶದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರ ಹೇಳಿಕೆ ದೊಡ್ಡ ವಿವಾದಕ್ಕೆ ಕಾರಣವಾಗಿದೆ ಅಯೋಧ್ಯೆ ತೀರ್ಪಿನ ಪರಿಹಾರಕ್ಕಾಗಿ ನಾನು ದೇವರಲ್ಲಿ ಪ್ರಾರ್ಥಿಸಿದೆ ಎಂಬ ಸಿಜೆಐ ಅವರ ಹೇಳಿಕೆ ಬಗ್ಗೆ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ

ಈಗ ನಿವೃತ್ತ ನ್ಯಾಯಾಧೀಶರೊಬ್ಬರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

HW ನ್ಯೂಸ್‌ನಲ್ಲಿ ನೀಲು ವ್ಯಾಸ್ ಅವರ ಜೊತೆ ಮಾತನಾಡಿರುವ ಪಾಟ್ನಾ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶೆ ನ್ಯಾ.ಅಂಜನಾ ಪ್ರಕಾಶ್ ಭಾರತದ ಹಾಲಿ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ವಿರುದ್ಧ ಹರಿಹಾಯ್ದಿದ್ದಾರೆ.

ರಾಮ ಮಂದಿರ-ಬಾಬರಿ ಮಸೀದಿ ವಿವಾದದ ತೀರ್ಪಿನ ಕುರಿತು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಇತ್ತೀಚೆಗೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಅಂಜನಾ ಪ್ರಕಾಶ್, "ಸಂವಿಧಾನದ ಆಧಾರದಲ್ಲಿ ತೀರ್ಪು ನೀಡಬೇಕಾಗಿದ್ದ ಮುಖ್ಯ ನ್ಯಾಯಮೂರ್ತಿ ತಮ್ಮ ಪ್ರಮಾಣ ವಚನವನ್ನು ಉಲ್ಲಂಘಿಸಿದ್ದಾರೆ" ಎಂದು ಹೇಳಿದ್ದಾರೆ.

ನಮ್ಮಲ್ಲಿ ಆಗಾಗ್ಗ ಪ್ರಕರಣಗಳು ಬರುತ್ತವೆ. ಆದರೆ ನಾವು ಪರಿಹಾರಕ್ಕೆ ತಲುಪುವುದಿಲ್ಲ. ಅಯೋಧ್ಯೆ ವಿವಾದ ಸಂದರ್ಭದಲ್ಲಿ ಇದೇ ರೀತಿಯ ಘಟನೆ ಸಂಭವಿಸಿತ್ತು. ಮೂರು ತಿಂಗಳ ಕಾಲ ನಾನು ಕೇಸ್ ಆಲಿಸಿದೆ. ನಾನು ದೇವರ ಮುಂದೆ ಕುಳಿತು ಪರಿಹಾರಕ್ಕಾಗಿ ಪ್ರಾರ್ಥಿಸಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಮಹಾರಾಷ್ಟ್ರದ ಖೇಡ್ ತಾಲೂಕಿನ ಕನ್ಹರ್ಸರ್ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಹೇಳಿದ್ದರು. ಈ ಹೇಳಿಕೆಯು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.

ಈಗ ಇದಕ್ಕೆ ಪ್ರತಿಕ್ರಿಯಿಸಿರುವ ನ್ಯಾಯಮೂರ್ತಿ ಅಂಜನಾ ಪ್ರಕಾಶ್ ಸಿಜಿಐ ನಡವಳಿಕೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅವರ ಹೇಳಿಕೆಗಳನ್ನು ಕಟುವಾದ ಶಬ್ದಗಳಲ್ಲಿ ಟೀಕಿಸಿದ್ದಾರೆ. ಸಿಜೆಐ ಬುದ್ಧಿವಂತರಲ್ಲ ಮತ್ತು ಪ್ರಬುದ್ಧರಲ್ಲ ಎಂದು ನ್ಯಾಯಮೂರ್ತಿ ಅಂಜನಾ ಪ್ರಕಾಶ್ ಹೇಳಿದ್ದಾರೆ.

Full View

ಸಿಜೆಐ ಮಾತುಗಳು ಚಲನಚಿತ್ರದಂತಿವೆ. ಕೇಳುವಾಗ ನಗು ಬರುತ್ತೆ. ದೇವರು ನ್ಯಾಯಮೂರ್ತಿಯೊಬ್ಬರ ಮಾರ್ಗದರ್ಶಿಯಾಗಲು ಹೇಗೆ ಸಾಧ್ಯ? ಸತ್ಯ ಮತ್ತು ಕಾನೂನಿನ ತತ್ವಗಳ ಮೇಲೆ ತೀರ್ಪು ನೀಡಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಇನ್ನು ಅಯೋಧ್ಯೆ ತೀರ್ಪು ಕುರಿತಾಗಿ ಮಾತನಾಡಿದ ನ್ಯಾಯಮೂರ್ತಿ ಅಂಜನಾ ಪ್ರಕಾಶ್, "ಅಯೋಧ್ಯೆ ತೀರ್ಪುನ್ನು ಯಾರು ಬರೆದಿದ್ದರು ಎಂಬುದು ಈವರೆಗೂ ತಿಳಿದಿರಲಿಲ್ಲ. ಸಿಜೆಐ ಮಾತು ಕೇಳಿದ ಬಳಿಕ ಬಹುಷಃ ಅವರೇ ಬರೆದ ಹಾಗೆ ಇದೆ ಎಂದು ಅವರು ಹೇಳಿದ್ದಾರೆ. ಹಾಗಿದ್ದಲ್ಲಿ ಇತರ ನಾಲ್ಕು ನ್ಯಾಯಾಧೀಶರೂ ಸಿಜೆಐಗೆ ಬಂದಿದೆ ಎನ್ನಲಾದ ದೇವಸಂದೇಶವನ್ನೇ ಒಪ್ಪಿಕೊಂಡರೆ ಎಂದು ಅವರು ಪ್ರಶ್ನಿಸಿದ್ದಾರೆ. ಇನ್ನು ಇಡೀ ತೀರ್ಪಿನಲ್ಲಿ ಎರಡೂ ಪಕ್ಷಗಳ ಹೆಸರುಲ್ಲೇಖಿಸುವುದು ಬಿಟ್ಟು ಹಿಂದೂ ಪಕ್ಷ ಮತ್ತು ಮುಸ್ಲಿಂ ಪಕ್ಷ ಎಂಬ ಪದ ಬಳಕೆ ಮಾಡಿರುವುದು ದೊಡ್ಡ ತಪ್ಪು ಎಂದು ಅವರು ಹೇಳಿದ್ದಾರೆ.

ಸಿಜೆಐ ಈ ರೀತಿ ಹೇಳಿಕೆ ನೀಡುವುದು ಬಹಳ ಬೇಜವಾಬ್ದಾರಿಯುತ ಎಂದು ನಿವೃತ ನ್ಯಾಯಮೂರ್ತಿ ಅಂಜನಾ ಪ್ರಕಾಶ್ ಹೇಳುತ್ತಾರೆ. ಬಹುಸಂಖ್ಯಾತರೊಂದಿಗೆ ದೇವರಿದ್ದಾರೆ ಎಂಬ ಸಂದೇಶ ನೀಡಿದಂತೆ ಇದು. ಚಂದ್ರಚೂಡ್ ಅವರು ನೀಡಿರುವಂತಹ ಹೇಳಿಕೆಯನ್ನು ಇತರ ಧರ್ಮದ ಯಾವುದಾದರೂ ನ್ಯಾಯಾಧೀಶರು ನೀಡಿದ್ದರೆ ದೇಶದ ಪ್ರತಿಕ್ರಿಯೆ ಹೇಗಿರುತ್ತಿತ್ತು ಎಂದು ಅವರು ಪ್ರಶ್ನಿಸಿದ್ದಾರೆ.

ಇತರ ಧರ್ಮದ ನ್ಯಾಯಾಧೀಶರು ಈ ರೀತಿ ಹೇಳಿ ತೀರ್ಪು ನೀಡುತ್ತಿದ್ದರೆ ನಾವು ಅದನ್ನು ಒಪ್ಪಿಕೊಳ್ಳಲು ಸಾಧ್ಯವಿತ್ತೆ ಎಂದು ಅವರು ಪ್ರಶ್ನಿಸಿದ್ದಾರೆ.

ಈ ರೀತಿ ಹೇಳಿಕೆಯಿಂದಾಗಿ ಮುಖ್ಯ ನ್ಯಾಯಾಧೀಶರು ತಮ್ಮ ಸ್ಥಾನದ ಗೌರವವನ್ನು ಕೆಳಗಿಳಿಸಿದ್ದಾರೆ. ಅವರ ನಿವೃತ್ತಿಯ ಕೆಲವೇ ದಿನಗಳಲ್ಲಿ ಅವರ ಉದ್ದೇಶವೇನು ಎಂಬುದು ಗೊತ್ತಾಗಬಹುದು ಎಂದು ಅವರು ಹೇಳಿದ್ದಾರೆ.

ಜನ ಸಿಜೆಐ ಅವರನ್ನು ಹೀರೋ ಎಂಬಂತೆ ಬಿಂಬಿಸಿದರು. ತಂದೆ ನ್ಯಾಯಾಧೀಶರು, ವಿದೇಶದಲ್ಲಿ ಅಧ್ಯಯನ, ವಿದ್ಯಾವಂತರು ಈ ಎಲ್ಲಾ ಕಾರಣಗಳಿಂದ ನಾವು ಅವರನ್ನು ಹೀರೊ ತರ ಮಾಡಿದೆವು. ಮುಖ್ಯನ್ಯಾಯಾಧೀಶರು ಈ ಎಲ್ಲಾ ಕಾರಣಗಳಿಂದಾಗಿ ಬುದ್ಧಿವಂತರಾಗಿರಬೇಕು ಮತ್ತು ಪ್ರಬುದ್ಧರಾಗಿರಬೇಕೆಂದು ಯೋಚಿಸಿದರು. ಆದರೆ ಅವರು ಬುದ್ಧಿವಂತರೂ ಅಲ್ಲ, ಪ್ರಬುದ್ಧರೂ ಅಲ್ಲ. ನಾವು ಅವರ ಕುರಿತಾಗಿ ಸುಳ್ಳು ಚಿತ್ರಗಳನ್ನು ಸೃಷ್ಟಿಸುತ್ತಿದ್ದೇವೆ. ಅವರು ಪ್ರಬುದ್ಧರಲ್ಲ. ಅವರು ತಮ್ಮ ಹುದ್ದೆಗೆ ಜವಾಬ್ದಾರರಾಗಿಲ್ಲ ಎಂದು ನ್ಯಾಯಮೂರ್ತಿ ಅಂಜನಾ ಪ್ರಕಾಶ್ ಹೇಳಿದ್ದಾರೆ.

ರಾಜಕೀಯ ಮಹತ್ವಾಕಾಂಕ್ಷೆಗಳಿಂದ ಸಿಜೆಐ ಈ ರೀತಿ ಧಾರ್ಮಿಕ ಒಲವು ತೋರುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿಜೆಐ ಇನ್ನೇನು ಸಾಧಿಸಲು ಬಯಸುತ್ತಾರೆ , ಅತೀ ಕಿರಿಯ ವಯಸ್ಸಿನಲ್ಲಿ ಹೈಕೋರ್ಟ್ ನ್ಯಾಯಾಧೀಶ ಆದವರು. ಭಾರತದ ಸಿಜೆಐ ಆದವರು. ಅವರಿಗೆ ಇನ್ನೇನು ಬೇಕು. ಇದೆಲ್ಲಾ ಅವರೊಳಗೆ ಇರುವ ಅಭದ್ರತೆಯನ್ನು ತೋರಿಸುತ್ತದೆ ಎಂದು ನ್ಯಾಯಮೂರ್ತಿ ಅಂಜನಾ ಪ್ರಕಾಶ್ ಹೇಳಿದ್ದಾರೆ.

ಇತಿಹಾಸವು ನನ್ನನ್ನು ಹೇಗೆ ನಿರ್ಣಯಿಸುತ್ತದೆ ಎಂದು ಸಿಜಿಐ ಕೇಳುತ್ತಾರೆ. ಈ ರೀತಿ ಪ್ರಶ್ನೆಯ ಅವಶ್ಯಕತೆ ಇಲ್ಲ. ಉತ್ತರ ಸ್ಪಷ್ಟ. ಅವರ ಕೆಲಸಗಳಿಂದ ಅವರು ಹೇಗಿದ್ದರು ಎಂಬುದನ್ನು ಇತಿಹಾಸ ನಿರ್ಣಯಿಸುತ್ತದೆ ಎಂದು ಅಂಜನಾ ಪ್ರಕಾಶ್ ಹೇಳಿದ್ದಾರೆ.

ನ್ಯಾಯ ದೇವತೆಯ ಪ್ರತಿಮೆ ಬದಲಾವಣೆ ಮತ್ತೊಂದು ತಮಾಷೆಯಾಗಿದೆ. ದಯವಿಟ್ಟು ಪ್ರಾಮಾಣಿಕವಾಗಿರಿ. ನೀವು ಹೇಳುವುದನ್ನು ಮಾಡಿ. ಒಂದು ಮಾತು ಹೇಳಿ ಇನ್ನೊಂದು ಮಾಡಬೇಡಿ. ನೀವು ಯಾರನ್ನು ಮೋಸಗೊಳಿಸಲು ಪ್ರಯತ್ನಿಸುತ್ತಿದ್ದೀರಿ ಎಂದು ನ್ಯಾಯಮೂರ್ತಿ ಅಂಜನಾ ಪ್ರಕಾಶ್ ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News