ಬಹ್ರೈಚ್ ಘಟನೆಯ ಕುರಿತು ಸುಳ್ಳು ಸುದ್ದಿ ಹರಡಿದ ಬಲಪಂಥೀಯ ಮಾಧ್ಯಮಗಳು

Update: 2024-10-17 13:37 GMT

ಬಹ್ರೈಚ್ (ಉತ್ತರ ಪ್ರದೇಶ): ಬಹ್ರೈಚ್ ಜಿಲ್ಲೆಯಲ್ಲಿ ನಡೆದ ಘಟನೆಯ ಬಳಿಕ ಬಲಪಂಥೀಯ ಸುಳ್ಳು ಸುದ್ದಿ ತಾಣ ʼOpIndiaʼ, ಸೇರಿದಂತೆ ಸಾಮಾಜಿಕ ಜಾಲತಾಣಗಳು, ಟಿವಿ ಮಾಧ್ಯಮಗಳು ಸುಳ್ಳು ಸುದ್ದಿ ಹರಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಕೋಮುದ್ವೇಷ ಹರಡಲು ಕಾರಣವಾಯಿತು ಎನ್ನಲಾಗಿದೆ.

ಅಕ್ಟೋಬರ್ 13 ರಂದು ದುರ್ಗಾ ದೇವಿಯ ವಿಸರ್ಜನಾ ಮೆರವಣಿಗೆಯಲ್ಲಿ ಉಂಟಾದ ಗಲಭೆಯಲ್ಲಿ 22 ವರ್ಷದ ರಾಮ್ ಗೋಪಾಲ್ ಮಿಶ್ರಾ ಮೃತಪಟ್ಟಿದ್ದರು. ಈ ಘಟನೆಯು ಧಾರ್ಮಿಕ ದೃಷ್ಟಿಕೋನವನ್ನಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿಗಳೊಂದಿಗೆ ತ್ವರಿತವಾಗಿ ಹಂಚಿಕೆಯಾಯಿತು.

ಆರಂಭದಲ್ಲಿ ಹಂಚಿಕೆಯಾದ ಸುದ್ದಿಯ ಪ್ರಕಾರ ರಾಮ್ ಗೋಪಾಲ್ ಮಿಶ್ರಾ ದುರ್ಗಾ ದೇವಿಯ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆಯ ಮಧ್ಯೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆಯಿತು. ಬಳಿಕ ಕಲ್ಲು ತೂರಾಟ ಪ್ರಾರಂಭವಾಗಿದೆ. ರಾಮ್ ಗೋಪಾಲ್ ಅವರನ್ನು ಮನೆಯೊಳಗೆ ಎಳೆದೊಯ್ದು ಚಿತ್ರ ಹಿಂಸೆ ನೀಡಲಾಗಿದೆ. ಅವರ ದೇಹದಲ್ಲಿ ಗುಂಡೇಟಿನ ಗಾಯಗಳೂ ಪತ್ತೆಯಾಗಿದೆ. ಚಿತ್ರಹಿಂಸೆ ನೀಡಿರುವ ಕುರುಹೂ ಇದೆ ಎಂದು ವರದಿಗಳು ಹೇಳಿಕೊಂಡಿದ್ದವು. ಇದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಯಿತು. ಮುಸ್ಲಿಮರು ಚಿತ್ರಹಿಂಸೆ ನೀಡಿ ರಾಮ್ ಗೋಪಾಲ್ ಅವರನ್ನು ಹತ್ಯೆ ಮಾಡಿದ್ದಾರೆ ಎನ್ನುವ ರೀತಿಯಲ್ಲಿ ಸುದ್ದಿ ವೈರಲ್ ಆಯಿತು. ಜೊತೆಗೆ ಕೋಮು ಉದ್ವಿಗ್ನತೆ ಹೆಚ್ಚಿಸಿತು.

Full View

OpIndia ದಂತಹ ಬಲಪಂಥೀಯ ಜಾಲತಾಣಗಳು ಸೇರಿದಂತೆ ಸಾಮಾಜಿಕ ಜಾಲತಾಣಗಳು ಇದೇ ರೀತಿಯ ಸುಳ್ಳು ಸುದ್ದಿ ಹಂಚಿಕೊಂಡವು. ಆ ಮೂಲಕ ಅವು ಈ ಕೊಲೆಯನ್ನು ಕೋಮು ದಾಳಿ ಎಂದು ಬಿಂಬಿಸಿದವು. ಇದು ಬಹ್ರೈಚ್ ನಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವಿನ ಉದ್ವಿಗ್ನತೆಯನ್ನು ಇನ್ನಷ್ಟು ಹೆಚ್ಚಿಸಿತು.

ರಾಮ್ ಗೋಪಾಲ್ ಸಾವಿನ ಕುರಿತ ಗ್ರಾಫಿಕ್ ನಿರೂಪಣೆಗಳು ಹೊರಹೊಮ್ಮಲು ಪ್ರಾರಂಭಿಸಿದವು. ಅವರ ಬೆರಳಿನ, ಕಾಲ್ಬೆರಳ ಉಗುರುಗಳನ್ನು ಕಿತ್ತುಹಾಕಲಾಗಿದೆ, ಗುಂಡಿಕ್ಕಿ ಕೊಲ್ಲುವ ಮೊದಲು ಅವರನ್ನು ಕ್ರೂರವಾಗಿ ಚಿತ್ರಹಿಂಸೆ ನೀಡಲಾಗಿದೆ ಎಂದೆಲ್ಲಾ ವರದಿಗಳು ಪ್ರಕಟಗೊಂಡವು. ಇಂತಹ ಪ್ರಚೋದನಕಾರಿ ವಿವರಗಳನ್ನು ವ್ಯಾಪಕವಾಗಿ ಹಂಚಿಕೊಂಡಿದ್ದು ಜನರಲ್ಲಿ ಆಕ್ರೋಶ ಹುಟ್ಟು ಹಾಕಿತು.

ಈ ಮಧ್ಯೆ, ಹರಡುತ್ತಿರುವ ಹೆಚ್ಚಿನ ಮಾಹಿತಿಯು ಸುಳ್ಳು. ಅವು ಸಮಾಜದ ದಾರಿ ತಪ್ಪಿಸುತ್ತಿದೆ ಎಂದು ಬಹ್ರೈಚ್ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ತಮ್ಮ X ಖಾತೆಯಲ್ಲಿ ಈ ಕುರಿತು ಅಧಿಕೃತ ಹೇಳಿಕೆ ನೀಡಿದ ಪೋಲೀಸ್ ಇಲಾಖೆಯು ಘಟನೆಯನ್ನು ಭೀಕರವಾಗಿ ಚಿತ್ರಿಸಿದ ವರದಿಗಳನ್ನು ನಿರಾಕರಿಸಿದೆ. ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ ಸಾವಿಗೆ ಗುಂಡೇಟು ಕಾರಣ. ಮೃತದೇಹದಲ್ಲಿ ಚಿತ್ರಹಿಂಸೆಯ ಯಾವುದೇ ಕುರುಹುಗಳಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಕೆಲವು ಸಾಮಾಜಿಕ ಮಾಧ್ಯಮ ಸುಳ್ಳು ವರದಿಗಳು ಹೇಳುವಂತೆ ಬೆರಳಿನ ಉಗುರುಗಳನ್ನು ಕಿತ್ತುಹಾಕುವುದು ಅಥವಾ ವಿದ್ಯುತ್ ಶಾಕ್ ನೀಡಿರುವ ಯಾವುದೇ ಘಟನೆಗಳು ನಡೆದಿಲ್ಲ. ಅಲ್ಲದೇ ಘಟನೆಯಲ್ಲಿ ರಾಮ್ ಗೋಪಾಲ್ ಹೊರತುಪಡಿಸಿ, ಬೇರೆ ಯಾರೂ ಸಾವನ್ನಪ್ಪಿಲ್ಲ. ಸಾಮಾಜಿಕ ಜಾಲತಾಣಗಳ ಮಾಹಿತಿಗಳಲ್ಲಿ ಸತ್ಯಾಂಶವಿಲ್ಲ. ವದಂತಿಗಳಿಗೆ ಕಿವಿ ಕೊಡಬೇಡಿ ಎಂದು ಬಹ್ರೈಚ್ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಯಾವುದೇ ಸಾಮಾಜಿಕ ಮಾಧ್ಯಮ ಖಾತೆಗಳು ತಪ್ಪುದಾರಿಗೆಳೆಯುವ ಅಥವಾ ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡುವುದು ಕಂಡುಬಂದರೆ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಪೊಲೀಸರು ಪುನರುಚ್ಚರಿಸಿದ್ದಾರೆ.

ಜಿಲ್ಲೆಯಲ್ಲಿ ಕೋಮು ಸೌಹಾರ್ದತೆ ಕಾಪಾಡುವುದು ಅತ್ಯಂತ ಮಹತ್ವದ್ದಾಗಿದ್ದು, ಸುಳ್ಳು ಸುದ್ದಿ ಹರಡುವ ಮೂಲಕ ಶಾಂತಿ ಕದಡುವ ಯಾವುದೇ ಪ್ರಯತ್ನಗಳನ್ನು ಸಹಿಸಲಾಗುವುದಿಲ್ಲ ಎಂದು ಪೊಲೀಸ್ ಹೇಳಿಕೆಯಲ್ಲಿ ಎಚ್ಚರಿಕೆ ನೀಡಲಾಗಿದೆ. ಪೊಲೀಸರ ಈ ಪ್ರಕಟಣೆಯನ್ನು ಪತ್ರಕರ್ತ ಮುಹಮ್ಮದ್ ಝುಬೇರ್ ಎಕ್ಸ್ ನಲ್ಲಿ ಹಂಚಿಕೊಂಡಿದ್ಧಾರೆ.

ಸುಳ್ಳು ಸುದ್ದಿಗೇ ಕುಖ್ಯಾತಿ ಹೊಂದಿರುವ OpIndia ದಂತಹ ಮಾಧ್ಯಮಗಳು ಕೋಮುವಾದಿ ಅಜೆಂಡಾವನ್ನು ಮುನ್ನೆಲೆಗೆ ತರುವಲ್ಲಿ ತಮ್ಮ ಕೊಡುಗೆ ನೀಡುತ್ತಿರುವುದು ಇದೇ ಮೊದಲ್ಲ ಎಂದು ಟೀಕೆ ವ್ಯಕ್ತವಾಗಿದೆ. ಪ್ರಧಾನಿ ಮೋದಿಯನ್ನು ಮೆಚ್ಚಿಸುವುದಕ್ಕೊ, ಸಂಘಪರಿವಾರವನ್ನು ಮೆಚ್ಚಿಸುವುದಕ್ಕೊ ಬಲಪಂಥೀಯ ಮಾಧ್ಯಮಗಳು ಹೇಳುವ ಹಸಿ ಹಸೀ ಸುಳ್ಳುಗಳು ಇಡೀ ಸಮಾಜಕ್ಕೇ ಬೆಂಕಿ ಹಚ್ಚುವಂತಿರುವುದು, ದ್ವೇಷವನ್ನೇ ಹಬ್ಬಿಸುವುದು ನಿಜಕ್ಕೂ ಕಳವಳಕಾರಿ.

ಕೇವಲ ಸಾಮಾಜಿಕ ಜಾಲತಾಣಗಳು ಮಾತ್ರವಲ್ಲ, ದೇಶದ ಹೆಸರಾಂತ ನ್ಯೂಸ್ ಚಾನಲ್ ಗಳಲ್ಲಿ, ವೆಬ್ ಸೈಟ್ ಗಳಲ್ಲಿ ಇದೇ ರೀತಿ ತೀರಾ ಪ್ರಚೋದನಕಾರಿಯಾಗಿ ಸುಳ್ಳು ಸುದ್ದಿ ಮಾಡಲಾಗಿದೆ. ದೇಶಾದ್ಯಂತ ಜನ ಇವುಗಳನ್ನೇ ನೋಡಿ ನಿಜ ಎಂದುಕೊಂಡಿದ್ದಾರೆ.

ಅಮಿತಾಬ್ ಅಗ್ನಿಹೋತ್ರಿ, ಸುಧೀರ್ ಚೌಧರಿ ಎಂಬ ಟಿವಿ ಪತ್ರಕರ್ತರು ಪ್ರೈಮ್ ಟೈಮ್ ನಲ್ಲಿ ಟಿವಿ ಪರದೆಯ ಮುಂದೆ ಕುಳಿತು ಇದೇ ಸುಳ್ಳನ್ನು ಹಂಚಿದ್ದಾರೆ.

ವಾಟ್ಸ್ ಆಪ್ ನಲ್ಲಿ ಬರೋದನ್ನೆಲ್ಲ ನಂಬಬೇಡಿ ಎಂದು ಜನರನ್ನು ಆಗಾಗ ಎಚ್ಚರಿಸಲಾಗುತ್ತದೆ. ಆದರೆ ಈ ದೇಶದ ಪ್ರಮುಖ ನ್ಯೂಸ್ ಚಾನಲ್ ಗಳಲ್ಲಿ, ನ್ಯೂಸ್ ವೆಬ್ ಸೈಟ್ ಗಳಲ್ಲಿ ಬರುವ ಸುದ್ದಿಗಳನ್ನು ತಕ್ಷಣ ನಂಬಿ ಬಿಡಬೇಡಿ ಎಂದು ಜನರಲ್ಲಿ ವ್ಯಾಪಕ ಜಾಗೃತಿ ತರಬೇಕಾದ ಅನಿವಾರ್ಯತೆ ಈಗ ಸೃಷ್ಟಿಯಾಗಿದೆ. ಅವುಗಳಿಗೂ ಐಟಿ ಸೆಲ್ ನ ದ್ವೇಶಕೋರ ವಾಟ್ಸ್ ಆಪ್ ಪಡೆಗೂ ವ್ಯತ್ಯಾಸವೇ ಇಲ್ಲವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News