ನಿಶಿಕಾಂತ್ ದುಬೆ ಗೆ ʼಅಚ್ಛೇದಿನ್ʼ | ಬಡ ಆದಿವಾಸಿ ಮತದಾರರೂ ಅವರ ಸಿರಿವಂತ ಬಿಜೆಪಿ ಸಂಸದರೂ...

Update: 2024-10-14 17:26 GMT

ದೇಶದ ಜನರಿಗೆ ಅಚ್ಛೆದಿನ್ ತರ್ತೀವಿ ಅಂತ ಮೋದೀಜಿ ಅಧಿಕಾರಕ್ಕೆ ಬಂದು ಹತ್ತು ವರ್ಷ ಕಳೆದಿದೆ. ಈ ದೇಶದ ಜನರಿಗೆ ಅದೆಷ್ಟು ಅಚ್ಚೇದಿನ್ ಬಂದಿದೆ ಎನ್ನುವ ವಿಚಾರ ದೇಶದೆದುರೇ ಇದೆ. ಮೋದಿ ಸರ್ಕಾರ ಬಂದು ಹತ್ತು ವರ್ಷಗಳ ನಂತರವೂ ಈ ದೇಶದ 80 ಕೋಟಿ ಜನ ಸರಕಾರ ಕೊಡುವ ತಿಂಗಳಿಗೆ 5 ಕೆಜಿ ಉಚಿತ ಪಡಿತರವನ್ನು ನೆಚ್ಚಿಕೊಂಡು ಬದುಕು ಸಾಗಿಸಬೇಕಾದ ಸ್ಥಿತಿಯಲ್ಲಿದೆ.

ಆದರೆ ದೇಶದಲ್ಲಿ ಯಾರಿಗೂ ಅಚ್ಚೇದಿನ್ ಬಂದೇ ಇಲ್ವಾ ? ಯಾರಿಗೂ ಬಂದಿಲ್ಲ ಅಚ್ಛೆದಿನ್ ಎಂದು ಹೇಳಿದರೆ ಅದು ಖಂಡಿತ ತಪ್ಪಾಗುತ್ತದೆ. ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರಿಗೆ ಅಚ್ಚೇದಿನ್ ಬಂದಿದೆ. ಅವರೂ ಈ ದೇಶದ ಪ್ರಜೆಯೇ. ಆದರೆ ಇವರು ಬರೀ ಪ್ರಜೆ ಮಾತ್ರ ಅಲ್ಲ ಮೋದಿಯವರ ಪಕ್ಷದ ಸಂಸದರು ಕೂಡ.

ಸಂಸದರು ಮಾತ್ರ ಅಲ್ಲ, ಇವರು ಸಂಸದರ ಪೈಕಿ ಕೂಡ ಟಾಪ್ ಲೆವೆಲ್ ನಲ್ಲಿರುವ ಸಂಸದರು. ಅಂದರೆ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗು ಅವರಿಬ್ಬರ ಅತ್ಯಾಪ್ತ ಅದಾನಿ ಇವರೆಲ್ಲರಿಗೂ ಅತ್ಯಾಪ್ತರು ಬಿಜೆಪಿ ಸಂಸದ ನಿಶಿಕಾಂತ್ ದುಬೆ.

ಈ ನಿಶಿಕಾಂತ್ ದುಬೆ ಅವರಿಗೆ ಅಚ್ಛೇ ದಿನ ಬಂದಿರುವುದು ಖಚಿತವಾಗಿದೆ. ತಿಂಗಳಿಗೆ ಐದು ಕೆಜಿ ಉಚಿತ ಪಡಿತರದಲ್ಲಿ ಬದುಕೋ 80 ಕೋಟಿ ಜನರಿರುವ ದೇಶದಲ್ಲಿ ಈ ನಿಶಿಕಾಂತ್ ದುಬೆ ಅವರು 2.5 ಕೋಟಿ ಬೆಲೆಯ ಕಾರು ಖರೀದಿಸಿ ಅದನ್ನು ತಂದು ತನ್ನನ್ನು ಆಯ್ಕೆ ಮಾಡಿದ ಜನರೆದುರು ನಿಲ್ಲಿಸಿದ್ದಾರೆ.

ತನಗೆ ಬಂದಿರುವ ಅಚ್ಛೆದಿನ್ ಅನ್ನು ಅವರು ಜನರಿಗೂ ತೋರಿಸಿದ್ದಾರೆ. ನೋಡಿ ನನಗೆ ಅಚ್ಛೆದಿನ್ ಬಂದಿದೆ, ನಿಮಗೂ ಬಂದ ಹಾಗೇನೇ ಸಂಭ್ರಮಿಸಿಕೊಳ್ಳಿ. ನೋಡಿ ಕಣ್ತುಂಬಿಕೊಳ್ಳಿ. ನಿಮಗೆ ಇದನ್ನು ನೋಡೋದೇ ದೊಡ್ಡ ಭಾಗ್ಯ ಅನ್ನುವ ಹಾಗೆ ನಡೆದುಕೊಂಡಿದ್ದಾರೆ ಸಂಸದ ದುಬೆ.

ನಿಶಿಕಾಂತ್ ದುಬೆ ಜಾರ್ಖಂಡ್ನ ರಾಜನ ಹಾಗೆ. ಅವರ ಕಾಲು ತೊಳೆದು ನೀರು ಕುಡಿಯುವ ಪ್ರಜೆಗಳು ಅವರಿಗೆ ಸಿಕ್ಕಿದ್ದಾರೆ! ಅವರ ಎರಡೂವರೆ ಕೋಟಿಯ ಕಾರಿನ ಹಿಂದೆ ಓಡೋಡಿ ಹೋಗುವ ಪ್ರಜೆಗಳು. ಬಿಜೆಪಿ ಸಂಸದ ನಿಶಿಕಾಂತ್ ದುಬೆ ಜಾರ್ಖಂಡ್‌ನ ಹಿಂದುಳಿದ ಪ್ರದೇಶವಾದ ಗೊಡ್ಡಾದ ಬಿಜೆಪಿ ಸಂಸದ. ತೀರಾ ಹಿಂದುಳಿದ ಪ್ರದೇಶದ ಸಂಸದ ನಿಶಿಕಾಂತ್ ದುಬೆ ತಮ್ಮ ಕ್ಷೇತ್ರದ ಬಡಜನರ ಎದುರು ಎರಡೂವರೆ ಕೋಟಿಯ ಕಾರು ತೆಗೆದುಕೊಂಡು ಹೋಗಿ ನಿಲ್ಲಿಸುತ್ತಾರೆ. ಅದು ಪೋರ್ಷ್ ಕಾರು.

ದಿಲ್ಲಿ ಯೂನಿವರ್ಸಿಟಿಯ ನಕಲಿ ಡಿಗ್ರಿ ತೋರಿಸಿರುವ ಆರೋಪ ಹೊತ್ತಿರುವ ಈ ದುಬೆಯನ್ನು ಆರಿಸಿರುವ ಅಲ್ಲಿನ ಬಡ ಜನರಿಗೆ ಪಾಪ ಕೋಟಿ ಎಂದರೆ ಎಷ್ಟೆಂದೂ ಗೊತ್ತಿರಲು ಸಾಧ್ಯವಿಲ್ಲ. ಅಷ್ಟು ಹಸಿದ ಮಂದಿ, ಆ ಬಡ ಜನರು ಗೊಡ್ಡಾದ ಬಾಜಾರಿನಲ್ಲಿ ದುಬೆ ಕಾರು ಹೋಗಿ ನಿಂತಾಗ ದಂಡು ದಂಡಾಗಿ ಬಂದು ಕಾರು ನೋಡಲು ನೆರೆದಿದ್ದರೆಂಬುದು ವರದಿಯಾಗಿದೆ.

ಮೋದಿ ಸರ್ಕಾರದ ಉಚಿತ ಪಡಿತರದಲ್ಲಿ ಬದುಕುವ ದೇಶದ ಕೋಟ್ಯಂತರ ಬಡವರ ಹಾಗೆಯೆ ಇರುವ ಆ ಜನರಿಗೆ ದುಬೆ ಕಾರು ನೋಡಿಯೇ ಬಹುಶಃ ಹೊಟ್ಟೆ ತುಂಬಿರಬಹುದು. ಈ ದುಬೆಯ ರಾಜಕೀಯ ಎಂತದ್ದು ಎಂಬುದಕ್ಕೆ ಇನ್ನೊಂದು ಉದಾಹರಣೆ ಇಲ್ಲಿದೆ. ತನ್ನ ಕ್ಷೇತ್ರದ ಆದಿವಾಸಿ ಅಮಾಯಕನಿಂದ ತನ್ನ ಕೊಳಕು ಪಾದ ತೊಳೆಸಿಕೊಳ್ಳುವ ಆ ಮನುಷ್ಯ, ಆ ಕೊಳಕು ನೀರನ್ನು ಆ ಆದಿವಾಸಿ ತೀರ್ಥದಂತೆ ಕುಡಿಯುವುದನ್ನು ನೋಡಿ ಆನಂದಿಸುವುದನ್ನು ನೋಡಬೇಕು.

ಇದು ನಮ್ಮ ಸಂಸ್ಕೃತಿ, ಪರಂಪರೆಯ ಭಾಗ ಎನ್ನುವ ದುಬೆ ತಾನು ಅ ಆದಿವಾಸಿಯ ಪಾದ ತೊಳೆದು ನೀರು ಕುಡಿಯಬಲ್ಲರೆ? ಆ ಬಡವರ ಪಾಲಿಗಾದರೆ ಇದೆಲ್ಲ ಸಂಸ್ಕೃತಿ ಮತ್ತು ಪರಂಪರೆ. ಆದರೆ ಅದೇ ಇವರಿಗಾದರೆ?

ಈ ದೇಶದಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಅಚ್ಛೆದಿನ್ ಬರುತ್ತೆ ಅಂತ ಮೋದಿಯವರು ಹೇಳಲೇ ಇಲ್ಲ ನೋಡಿ. ಬಿಜೆಪಿ ಸಂಸದ, ಮೋದಿಜಿ, ಅಮಿತ್ ಷಾ ಹಾಗು ಅದಾನಿ ಅವರ ಆಪ್ತ ದುಬೆಗೆ ಎರಡೂವರೆ ಕೋಟಿಯ ಕಾರಿನ ರೂಪದಲ್ಲಿ ಅಚ್ಛೆದಿನ್ ಬಂದರೆ ಅವರ ಮತದಾರರಿಗೆ ಅವರ ಕೊಳಕು ಕಾಲು ತೊಳೆದು ಆ ಕೊಳಕು ನೀರು ಕುಡಿಯುವ ರೂಪದಲ್ಲಿ ಇಲ್ಲಿ ಅಚ್ಛೆದಿನ್ ಬಂದಿದೆ.

ನಿಶಿಕಾಂತ್ ದುಬೆ ಬಿಜೆಪಿಯ, ಆರೆಸ್ಸೆಸ್ನ ದ್ವೇಷ ಹಬ್ಬಿಸುವ ನಾಯಕರ ಸಾಲಿನಲ್ಲಿ ಮುಂಚೂಣಿಯಲ್ಲಿರುವರು. ಭ್ರಷ್ಟಾಚಾರಿಗಳನ್ನು ಸಹಿಸದ ಮೋದಿಯವರದೇ ಪಕ್ಷದಲ್ಲಿ ಭ್ರಷ್ಟಾಚಾರ ಕೊಳದ ದೊಡ್ಡ ಶಾರ್ಕ್ ಎಂದೇ ಆರೋಪವಿರುವ, ಭ್ರಷ್ಟಾಚಾರದಿಂದ ಕೋಟ್ಯಂತರ ಸಂಪಾದಿಸುತ್ತಾರೆಂಬ ಆರೋಪವಿರುವ ದುಬೆ ಎರಡೂವರೆ ಕೋಟಿಯ ಕಾರು ತಂದರೆ ಮತ್ತದೇ ಅಮಾಯಕ ಜನರಿಗೆ ಸಂಭ್ರಮವೋ ಸಂಭ್ರಮ.

ಅವರ 2.5 ಕೋಟಿ ಮೌಲ್ಯದ ಪೋರ್ಷೆ ಕಾರನ್ನು ಕಂಡು ಆ ಪ್ರದೇಶದ ಜನರು ಹೆಮ್ಮೆಪಡುತ್ತಾರೆ. ಮೋದಿ ದರ್ಬಾರಿನಲ್ಲಿ ಪ್ರಜೆಗಳೇ ಆರಿಸಿದ ರಾಜನ ದೌಲತ್ತು ಎಂಥದು ನೋಡಿ. ಅವರ ಮಗ ಲಂಡನ್ ನಲ್ಲಿ ಓದಿರುವುದು. ಅಲ್ಲಿಯೇ ಉದ್ಯೋಗ. ಅವರ ಮಗ ಕನಿಷ್ಕ್, ಎಡಿನ್ಬರ್ಗ್ ವಿವಿಯಲ್ಲಿ ಪದವಿ. ಲಂಡನ್ ಬ್ಯಾಂಕ್ನಲ್ಲಿ ನೌಕರಿ.

ಆದರೆ ಜಾರ್ಖಂಡ್ನ ಆದಿವಾಸಿಗಳು, ದಲಿತರು, ಹಿಂದುಳಿದವರು ಮತ್ತು ಬಡವರ ಪಾಲಿಗೆ ಏನಿದೆ? ಜಾರ್ಖಂಡ್ ನ ಆದಿವಾಸಿಗಳು ದಲಿತರು, ಹಿಂದುಳಿದವರು ಮತ್ತು ಬಡವರೆಲ್ಲ ಇವರ ಕೊಳಕು ಕಾಲು ತೊಳೆದು ಆ ಕೊಳಕು ನೀರು ಕುಡಿಯಬೇಕು. ಇವರ ಈ ಸಂಸ್ಕೃತಿ ಮತ್ತು ಪರಂಪರೆಯನ್ನು ಆ ಬಡವರು ಕಾಯಬೇಕು. ಅವರ ಎರಡೂವರೆ ಕೋಟಿ ಕಾರು ಬಂದರೆ ಅದರ ಹಿಂದೆ ಹಿಂದೆ ಓಡಬೇಕು.

ಇದೇ ದುಬೆ ಮೋದಿ ಸರ್ಕಾರದಲ್ಲಿ ಸಿಕ್ಕಾಪಟ್ಟೆ ಉದ್ಯೋಗಗಳು ಸೃಷ್ಟಿಯಾಗಿರುವುದಾಗಿಯೂ, ವಿದೇಶಗಳಿಂದಲೂ ಭಾರತಕ್ಕೆ ಕೆಲಸಕ್ಕಾಗಿ ಜನ ಬರುತ್ತಿದ್ದಾರೆ ಎಂತಲೂ ಕಥೆ ಹೊಡೆಯುತ್ತಾರೆ. ಸಂಸತ್ತಲ್ಲಿ ನಿಂತು ಅದಾನಿಯನ್ನು ಸಮರ್ಥಿಸಿಕೊಳ್ಳುತ್ತಾರೆ. ಅದಾನಿ ಬಗ್ಗೆ ಪ್ರಶ್ನೆ ಕೇಳಿದ ಸಂಸದೆ ಮಹುಆ ವಿರುದ್ಧ ಸುಳ್ಳು ದೂರು ನೀಡುತ್ತಾರೆ.

ತಮ್ಮ ಕ್ಷೇತ್ರದಲ್ಲಿ ಎಲ್ಲ ನೀತಿ ನಿಯಮಗಳನ್ನು ಮೀರಿ, ನೈಸರ್ಗಿಕ ಸಂಪನ್ಮೂಲವನ್ನು ಹಾಳು ಮಾಡಿ, ಸ್ಥಳೀಯರ ಬದುಕು ಹಾಗು ಆರೋಗ್ಯವನ್ನೂ ನಾಶ ಮಾಡಿ ವಿದ್ಯುತ್ ಉತ್ಪಾದಿಸುವ ಅದಾನಿ ಸ್ಥಾವರಕ್ಕಾಗಿ ಹಗಲು ರಾತ್ರಿ ದುಡಿಯುತ್ತಾರೆ. ಹಾಗಾಗಿ ಎರಡೂವರೆ ಕೋಟಿ ಕಾರಿನ ಅಚ್ಛೆದಿನ್ ಪಡೆಯುತ್ತಾರೆ.

ದುಬೆ ಹೇಳಿದ ಹಾಗೇ ಭಾರತದಲ್ಲಿ ಮೋದಿಜಿಯಿಂದ ಉದ್ಯೋಗ ಸೃಷ್ಟಿಯಾಗಿದ್ದರೆ ಇವರ ಮಗ ಯಾಕೆ ಇಲ್ಲೇ ಕೆಲಸ ಮಾಡಲು ಬರಲಿಲ್ಲ? ಇವರ ಮಗ ಏಕೆ ಭಾರತದಲ್ಲೇ ಓದಲಿಲ್ಲ? ಇಲ್ಲೇ ಬಂದು ಆತ ನೌಕರಿ ಮಾಡುವುದು ಯಾವಾಗ? ದೇಶದ ಜನರನ್ನು ಮೂರ್ಖರು ಎಂದೇ ನಿಶಿಕಾಂತ್ ದುಬೆ ಥರದ ಮಂದಿ ಭಾವಿಸುತ್ತಾರೆ ಎಂಬುದು ನಿಜ. ಮತ್ತು ಜನ ಎಚ್ಚೆತ್ತುಕೊಳ್ಳುವವರೆಗೂ, ಪ್ರಶ್ನಿಸುವ ವರೆಗೂ, ಪ್ರತಿಭಟಿಸುವವರೆಗೂ ಅವರು ಜನರನ್ನು ಮೂರ್ಖರನ್ನಾಗಿಸುತ್ತಲೇ ಇರುತ್ತಾರೆ.

Full View

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News