ಅತ್ಲೆಟಿಕ್ಸ್ ಅಸೋಸಿಯೇಶನ್ ಪ್ರವೇಶ ಶುಲ್ಕ ಬೇನಾಮಿ ಖಾತೆಗಳಿಗೆ ಜಮೆ

Update: 2024-10-16 06:26 GMT

ಬೆಂಗಳೂರು, ಅ.15: ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಅಧ್ಯಕ್ಷರಾಗಿರುವ ಕರ್ನಾಟಕ ಅತ್ಲೆಟಿಕ್ಸ್ ಅಸೋಸಿಯೇಷನ್, ವಿವಿಧ ಕ್ರೀಡೆಗಳ ಸ್ಪರ್ಧೆ ಹೆಸರಿನಲ್ಲಿ ಸಂಗ್ರಹಿಸುತ್ತಿರುವ ಲಕ್ಷಾಂತರ ರೂ. ಮೊತ್ತದ ಪ್ರವೇಶ ಶುಲ್ಕವನ್ನು ಬೇನಾಮಿ ಖಾತೆಗಳಿಗೆ ಜಮೆ ಮಾಡುತ್ತಿದೆ ಎಂಬ ಬಲವಾದ ಆರೋಪ ಕೇಳಿ ಬಂದಿದೆ.

ಅತ್ಲೆಟಿಕ್ ತರಬೇತುದಾರ ಮತ್ತು ಮಾಜಿ ಸೈನಿಕರೂ ಆಗಿರುವ ಯತೀಶ್ ಕುಮಾರ್ ಎಂಬವರು ಈ ಸಂಬಂಧ ಮುಖ್ಯಮಂತ್ರಿ, ಸಂಘದ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಮುಖ್ಯ ಕಾರ್ಯದರ್ಶಿ ಸೇರಿದಂತೆ ಸಕ್ಷಮ ಪ್ರಾಧಿಕಾರಗಳಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಅಲ್ಲದೆ ಬೇನಾಮಿ ಖಾತೆಗಳಿಗೆ ಜಮೆ ಮಾಡುತ್ತಿರುವ ಕುರಿತಾದ ಸಾಕ್ಷ್ಯ, ಪುರಾವೆಗಳನ್ನೂ ಒದಗಿಸಿದ್ದಾರೆ. ಈ ಎಲ್ಲಾ ದಾಖಲೆಗಳು ‘the-file.in’ಗೆ ಲಭ್ಯವಾಗಿವೆ.

ಅತ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾದೊಂದಿಗೆ ಸಂಯೋಜಿತವಾಗಿರುವ ಕರ್ನಾಟಕ ಅತ್ಲೆಟಿಕ್ ಅಸೋಸಿಯೇಷ್‌ನಲ್ಲಿ ಹಣಕಾಸು ವ್ಯವಹಾರಗಳು ಪಾರದರ್ಶಕವಾಗಿಲ್ಲ. ನಿಯಮಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಇದರಿಂದ ಅಸೋಸಿಯೇಷನ್‌ಗೆ ಆರ್ಥಿಕ ನಷ್ಟವಾಗುತ್ತಿದೆ. ಅಲ್ಲದೆ ಕ್ರೀಡಾ ಸ್ಪರ್ಧಾಳುಗಳಿಂದ ಸಂಗ್ರಹಿಸುತ್ತಿರುವ ಶುಲ್ಕವನ್ನು ಅಸೋಸಿಯೇಷನ್‌ಗೆ ಜಮೆ ಮಾಡುತ್ತಿಲ್ಲ. ಬದಲಿಗೆ ಬೇನಾಮಿ ಖಾತೆಗಳಿಗೆ ಜಮೆ ಮಾಡುತ್ತಿದೆ ಎಂದು ಯತೀಶ್ ಕುಮಾರ್ ಅವರು ದೂರಿನಲ್ಲಿ ವಿವರಿಸಿದ್ದಾರೆ.

ಕರ್ನಾಟಕ ಅತ್ಲೆಟಿಕ್ ಅಸೋಸಿಯೇಷನ್ 2023ರ ಜುಲೈನಿಂದ 2024ರ ಇದುವರೆಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದೆ. ಈ ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಪ್ರತೀ ಸ್ಪರ್ಧಾಳುವಿನಿಂದ ತಲಾ 200 ರೂ. ವಸೂಲಿ ಮಾಡಿದೆ. ಈ ರೀತಿ ವಸೂಲಿ ಮಾಡಿರುವ ಹಣವು ಅಸೋಸಿಯೇಷನ್‌ನ ಅಧಿಕೃತ ಖಾತೆಗೆ ಜಮಾ ಆಗುತ್ತಿಲ್ಲ. ಬದಲಿಗೆ ಖಾಸಗಿ ವ್ಯಕ್ತಿಗಳ ಹೆಸರಿನ ಖಾತೆಗಳಿಗೆ ಜಮೆ ಆಗುತ್ತಿದೆ ಎಂದು ಯತೀಶ್ ಕುಮಾರ್ ಅವರು ದೂರಿನಲ್ಲಿ ತಿಳಿಸಿದ್ದಾರೆ.

ನಿದರ್ಶನ, ಎನ್ ಸ್ಪೋರ್ಟ್ಸ್, ಸುನೀಲ್ ಕೆ.ಜಿ. ಮತ್ತು ರೋಚಿಸ್ ಎಂಟರ್‌ಪ್ರೈಸಸ್ ಹೆಸರಿನ ಖಾತೆಗಳಿಗೆ ಹಣ ಜಮೆ ಆಗುತ್ತಿರುವ ಕುರಿತು ಯತೀಶ್ ಕುಮಾರ್ ಅವರು ಒದಗಿಸಿರುವ ಪುರಾವೆಗಳಿಂದ ಗೊತ್ತಾಗಿದೆ.

ವಿವಿಧ ವಯೋಮಾನದ ಬಾಲಕ ಮತ್ತು ಬಾಲಕಿಯರಿಗೆ ಲಾಂಗ್ ಜಂಪ್, ಹೈ ಜಂಪ್, ಶಾಟ್‌ಪುಟ್, 100 ಮೀ. ಓಟ, 1,000 ಮೀ. ಓಟ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸುತ್ತಿದೆ.

ಕರ್ನಾಟಕ ಅತ್ಲೆಟಿಕ್ ಅಸೋಸಿಯೇಷನ್ ಕರ್ನಾಟಕದಲ್ಲಿ ಅತ್ಲೆಟಿಕ್ಸ್ ನಡೆಸುವ ಮತ್ತು ಈ ಚಟುವಟಿಕೆಗಳನ್ನು ನಿರ್ವಹಿಸುವ ಅಧಿಕೃತ ಸಂಸ್ಥೆಯಾಗಿದೆ ಮತ್ತು ಅತ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾದೊಂದಿಗೆ ಸಂಯೋಜಿತವಾಗಿದೆ. ರಾಜ್ಯ ಚಾಂಪಿಯನ್‌ಶಿಪನ್ನು ಆಯೋಜಿಸುವ ಈ ಸಂಘವು ಭಾರತದಾದ್ಯಂತ ನಡೆಯುವ ವಿವಿಧ ರಾಷ್ಟ್ರೀಯ ಸ್ಪರ್ಧೆಗಳಿಗೆ ಕ್ರೀಡಾಪಟುಗಳಿಗೆ ತರಬೇತಿ ನೀಡುತ್ತದೆ.

ಕೆಎಎಯು ವಿವಿಧ ರಾಷ್ಟ್ರೀಯ ಸ್ಪರ್ಧೆಗಳಿಗೆ ರಾಜ್ಯ ಅತ್ಲೆಟಿಕ್ಸ್ ತಂಡಗಳನ್ನು ಆಯ್ಕೆ ಮಾಡುತ್ತದೆ ಮತ್ತು ವಿವಿಧ ವಯಸ್ಸಿನ ವಿಭಾಗಗಳಿಗೆ ರಾಜ್ಯ ಚಾಂಪಿಯನ್‌ಶಿಪ್‌ಗಳನ್ನು ನಡೆಸುತ್ತದೆ. ಇದು ವಿವಿಧ ರಾಷ್ಟ್ರೀಯ ಮಟ್ಟದ ಚಾಂಪಿಯನ್‌ಶಿಪ್‌ಗಳನ್ನು ನಡೆಸಿದೆ. ಜೊತೆಗೆ, ಕ್ರೀಡೆಯನ್ನು ಉತ್ತೇಜಿಸಲು ಮತ್ತು ಜನರಲ್ಲಿ ಅದನ್ನು ಜನಪ್ರಿಯಗೊಳಿಸಲು ಮತ್ತು ಕ್ರೀಡಾಪಟು ಮತ್ತು ಕ್ರೀಡೆಯ ಮತ್ತಷ್ಟು ಬೆಳವಣಿಗೆಗಾಗಿ ಅತ್ಲೆಟಿಕ್ಸನ್ನು ವಾಣಿಜ್ಯಿಕವಾಗಿ ಆಕರ್ಷಕವಾಗಿಸಲು ವಿವಿಧ ಸಭೆಗಳನ್ನು ನಡೆಸುತ್ತಿದೆ.

ಆದರೂ ಈ ಸಂಘವು ಮಾಹಿತಿ ಹಕ್ಕಿನಡಿಯಲ್ಲಿ ಸಲ್ಲಿಸುವ ಯಾವುದೇ ಅರ್ಜಿಗಳಿಗೆ ಮಾಹಿತಿಯನ್ನೇ ನೀಡುವುದಿಲ್ಲ ಎಂದು ಯತೀಶ್ ಕುಮಾರ್ ಅವರು ದೂರಿನಲ್ಲಿ ಆಪಾದಿಸಿದ್ದಾರೆ. ಕರ್ನಾಟಕ ಅತ್ಲೆಟಿಕ್ ಅಸೋಸಿಯೇಷನ್ ಸಂಸ್ಥೆಗೆ ಕರ್ನಾಟಕ ಕ್ರೀಡಾ ಪ್ರಾಧಿಕಾರವು ಮಾನ್ಯತೆ ಮತ್ತು ಧನ ಸಹಾಯ ನೀಡುತ್ತಿದೆ. ಆದರೂ ಈ ಸಂಸ್ಥೆಯು ಮಾಹಿತಿ ಹಕ್ಕು ಅಧಿನಿಯಮ 2005ರ ವ್ಯಾಪ್ತಿಗೆ ಒಳಪಟ್ಟಿಲ್ಲ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಜಿ.ಮಹಾಂತೇಶ್

contributor

Similar News